ಒಂದು ಕಡೆ 144 ಮತ್ತು ಕರ್ಫ್ಯೂ ಹೇರುವ ಮೂಲಕ ಪ್ರತಿಭಟನಾಕಾರರಿಗೆ ದಿಗ್ಬಂಧನ ಹಾಕುತ್ತಿರುವ ಬಿಜೆಪಿ ಸರ್ಕಾರ, ಇನ್ನೊಂದೆಡೆ, ಗಲಭೆ ಪೀಡಿತ ಮಂಗಳೂರಿಗೆ ತೆರಳಿ ಗೋಲಿಬಾರ್ ನಲ್ಲಿ ಸಾವನ್ನಪ್ಪಿರುವ ಇಬ್ಬರು ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟ ಪ್ರತಿಪಕ್ಷದ ನಾಯಕರನ್ನು ಹತ್ತಿಕ್ಕುವ ದುಸ್ಸಾಹಸಕ್ಕೆ ಕೈ ಹಾಕಿದೆ.
ನಿನ್ನೆ ಮಂಗಳೂರಿನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಕ್ಷಣಕ್ಷಣಕ್ಕೂ ಕಾವೇರಿದ ಪರಿಣಾಮ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಗೋಲಿಬಾರ್ ಮಾಡಿದ್ದರಿಂದ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗ ಇಂದು ಮಂಗಳೂರಿಗೆ ತೆರಳಿ ಮೃತ ಯುವಕರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕಾರ್ಯಕ್ರಮವನ್ನು ಹಾಕಿಕೊಂಡಿತ್ತು.
ನಿನ್ನೆಯ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಕಂಡಲ್ಲಿ ಗುಂಡಿಡಲು ಆದೇಶಿಸಲಾಗಿದೆ. ಈ ಮಧ್ಯೆ, ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಲು ಅಣಿಯಾಗಿದ್ದರು. ಆದರೆ, ಪೊಲೀಸರು ಮಂಗಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದು ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವುದರಿಂದ ನಿಮ್ಮ ವಿಮಾನ ಲ್ಯಾಂಡಿಂಗ್ ಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಸಿದ್ದರಾಮಯ್ಯ ಅವರಿಗೆ ರವಾನೆ ಮಾಡಿದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಉದ್ದೇಶಿತ ಮಂಗಳೂರು ಭೇಟಿಯನ್ನು ರದ್ದು ಮಾಡಬೇಕಾಯಿತು ಮತ್ತು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಬೆಂಗಳೂರಿನಿಂದ ಇಂದು ಬೆಳಗ್ಗೆ ವಿಮಾನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಹಲವು ನಾಯಕರು ಮಂಗಳೂರು ವಿಮಾನನಿಲ್ದಾಣದಲ್ಲಿ ಬಂದಿಳಿದರು. ಆದರೆ, ಮಂಗಳೂರಿನಾದ್ಯಂತ ಕರ್ಫ್ಯೂ ಜಾರಿಯಲ್ಲಿರುವುದರಿಂದ ನಗರಕ್ಕೆ ಪ್ರವೇಶ ನೀಡಲು ಸ್ಥಳೀಯ ಪೊಲೀಸರು ನಿರಾಕರಿಸಿದರು.
ಇದನ್ನು ಲೆಕ್ಕಿಸದೇ ರಮೇಶ್ ಕುಮಾರ್, ಎಸ್.ಆರ್.ಪಾಟೀಲ್, ಉಗ್ರಪ್ಪ ಮತ್ತಿತರರು ವಿಮಾನನಿಲ್ದಾಣದಿಂದ ಹೊರಹೋಗಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಕ್ರಮದ ವಿರುದ್ಧ ಉಗ್ರಾವತಾರ ತಾಳಿದ ಉಗ್ರಪ್ಪ ಅವರು, ಅಮಾಯಕರನ್ನು ಬಲಿ ತೆಗೆದುಕೊಂಡಿದ್ದೀರಿ. ದೇಶವನ್ನು ಏನು ಮಾಡಲು ಹೊರಟಿದ್ದೀರಿ ನೀವು? ಎಂದು ಏರುದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ಕುಮಾರ್ ಅವರು ಅಡ್ಡಿಪಡಿಸಿದ ಪೊಲೀಸರನ್ನು ತಳ್ಳುತ್ತಾ ಮುಂದೆ ಸಾಗಲು ಯತ್ನಿಸಿದರಾದರೂ ಅಂತಿಮವಾಗಿ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
ಸಿದ್ದರಾಮಯ್ಯ ಕೆಂಡಾಮಂಡಲ
ರಾಜ್ಯದಲ್ಲಿ ಅಮಾನವೀಯವಾದ ಅಹಿತಕರ ಘಟನೆ. ಮಂಗಳೂರಿನಲ್ಲಿ ಪೊಲೀಸರ ದೌರ್ಜನ್ಯದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ವಿನಾ ಕಾರಣ ಗುಂಡು ಹಾರಿಸಿ ಇಬ್ಬರು ಅಮಾಯಕರನ್ನು ಕೊಲೆ ಮಾಡಿದ್ದಾರೆ. ಇಡೀ ದೇಶದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಜನರು ಧರ್ಮಾತೀತವಾಗಿ, ಜಾತ್ಯತೀತವಾಗಿ ತಮ್ಮ ವಿರೋಧವನ್ನು ವ್ಯಕ್ತ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಇರಬೇಕಾದರೆ ಜನರು ಸರ್ಕಾರದ ನೀತಿಗಳ ವಿರುದ್ಧವಾಗಿ ಅದು ಜನ ವಿರೋಧಿ, ಸಂವಿಧಾನ ವಿರೋಧಿಯಾಗಿದ್ದರೆ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶವಿದೆ. ಈ ಅವಕಾಶವನ್ನು ಸಂವಿಧಾನ ಮಾಡಿಕೊಟ್ಟಿದೆ.
ಅನೇಕ ರಾಜ್ಯಗಳಲ್ಲಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ 144 ಸೆಕ್ಷನ್ ಹಾಕುವ ಅಗತ್ಯವಿರಲಿಲ್ಲ. ಅಂತಹ ವಾತಾವರಣವೂ ರಾಜ್ಯದಲ್ಲಿರಲಿಲ್ಲ. ಸರ್ಕಾರ ಮತ್ತು ಪೊಲೀಸರು ಊಹೆ ಮಾಡಿಕೊಂಡು ಉದ್ದೇಶಪೂರ್ವಕವಾಗಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ದುರುದ್ದೇಶದ ಕ್ರಮವನ್ನು ಮಾಡಿದ್ದಾರೆ. ಇದು ಸಂವಿಧಾನ ಬಾಹಿರ, ಪ್ರಜಾಪ್ರಭುತ್ವ ವಿರೋಧಿ ನೀತಿ.
ಹಿಟ್ಲರ್ ಆಡಳಿತದಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ. ಹಿಂದೆಂದೂ ಈ ರೀತಿ ನಡೆದಿರಲಿಲ್ಲ. ಇದು ಒಂದು ರೀತಿಯಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಂತಿದೆ.
ಮಂಗಳೂರಿನಲ್ಲಿ ಪೊಲೀಸರೇ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿರುವಂತೆ ಕಾಣುತ್ತಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಅದನ್ನು ತಡೆಯಲು ಪೊಲೀಸರಿಗೆ ಹಲವಾರು ಮಾರ್ಗಗಳಿವೆ. ಆದರೆ, ಇದಾವುದನ್ನೂ ಮಾಡದ ಪೊಲೀಸರು ಗೋಲಿಬಾರ್ ನಡೆಸಿ ಅಮಾಯಕರನ್ನು ಕೊಂದಿದ್ದಾರೆ. ಇದನ್ನು ಖಂಡಿಸುತ್ತೇವೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಮೂಲಕ ಬಿಜೆಪಿ ಎರಡು ಕೋಮುಗಳ ನಡುವೆ ದ್ವೇಷವನ್ನು ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನ್ಯಾಯಾಂಗ ತನಿಖೆಗೆ ಆಗ್ರಹ
ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಹೈಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.