ಭಾರತದ ಬಹುತೇಕ ಭಾಗಗಳಿಗೆ ಹೋಲಿಕೆ ಮಾಡಿದರೆ ಈಶಾನ್ಯ ಭಾರತ ಅತ್ಯಂತ ಸಂಕೀರ್ಣವಾದ ರಾಜಕೀಯ, ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನವಾದ ಪ್ರದೇಶ. ವಿಭಿನ್ನ ಆಚಾರ-ವಿಚಾರ ಹೊಂದಿರುವ ಬುಡಕಟ್ಟು ಸಮುದಾಯಗಳಿಗೆ ನೆಲೆಯಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ಮಣಿಫುರ, ಮೇಘಾಲಯ, ಸಿಕ್ಕಿಂ ಮತ್ತು ನಾಗಾಲ್ಯಾಂಡ್ ರಾಜ್ಯಗಳನ್ನೊಳಗೊಂಡ ‘ಸಪ್ತ ಸಹೋದರಿಯರ ನಾಡಿನಲ್ಲಿ’ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ಏಳೂ ರಾಜ್ಯಗಳ ಪೈಕಿ ಅತ್ಯಂತ ದೊಡ್ಡ ನಗರವಾದ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೆ ಘರ್ಷಣೆ ನಡೆದಿದೆ.
ಈ ತಿಕ್ಕಾಟದಲ್ಲಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗೆ ನಿರ್ಬಂಧಿಸಿರುವ ಗೃಹ ಸಚಿವ ಅಮಿತ್ ಶಾ ಅದೇ ತಂತ್ರವನ್ನು ಅಸ್ಸಾಂಗೆ ವಿಸ್ತರಿಸಿದ್ದಾರೆ. ಅಪಾರ ಪ್ರಮಾಣದ ಸೇನೆಯನ್ನು ಭದ್ರತೆಗೆ ನಿಯೋಜಿಸುವ ಮೂಲಕ ರಾಜ್ಯದಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಮುಸ್ಲಿಮರಲ್ಲ! ಎಂಬುದು ಮಹತ್ವದ ವಿಚಾರ.
ಸರ್ಕಾರ ಹೇಳುವಂತೆ ನೆರೆಯ ಮೂರು ಇಸ್ಲಾಮಿಕ್ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಅನ್ಯಾಯಕ್ಕೊಳಗಾದ ಪಾರ್ಸಿ, ಜೈನ್, ಹಿಂದೂ ಸೇರಿದಂತೆ ಆರು ಸಮುದಾಯಗಳಿಗೆ ಪೌರತ್ವ ಕಲ್ಪಿಸುವ ಕಾನೂನೊಂದು ಈ ನೆಲೆದ ಶಾಂತಿಯನ್ನೇ ಕದಡುತ್ತಿರುವುದು ನಮ್ಮ ಆಡಳಿತಗಾರರ ದೃಷ್ಟಿಕೋನ ಎಷ್ಟು ಸಂಕುಚಿತವಾಗಿದೆ ಎಂಬುದಕ್ಕೆ ಅಸ್ಸಾಂ ಹಿಂಸಾಚಾರ ಕಣ್ಮುಂದಿನ ಉದಾಹರಣೆ.
ಅಸ್ಸಾಂನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಲು ಹಾಗೂ ಅಲ್ಲಿನ ಇಂದಿನ ಸ್ಥಿತಿಗೆ ಬಹುಮುಖ್ಯ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಸ್ಥಳೀಯ ಸಂಸ್ಕೃತಿ ಮತ್ತು ಭೂಪ್ರದೇಶದ ಮೇಲೆ ಆಕ್ರಮಣ ಆರಂಭಿಸಲಾಗಿದೆ ಎಂದು ಅಲ್ಲಿನ ಜನ ನಂಬಿರುವುದು. ತಮ್ಮ ಹಿತಾಸಕ್ತಿಗೆ ಧಕ್ಕೆ ತರಲು ಮೋದಿ ಸರ್ಕಾರ ಮುಂದಾಗಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಿರುವ ಜನತೆ ಬೀದಿಗಿಳಿದಿದ್ದಾರೆ. ದೇಶದ ಬೇರೆಲ್ಲಾ ಭಾಗಗಳಿಗೆ ಹೋಲಿಕೆ ಮಾಡಿದರೆ ವಿಭಿನ್ನವಾದ ಈಶಾನ್ಯ ರಾಜ್ಯಗಳನ್ನು ಅರ್ಥಮಾಡಿಕೊಳ್ಳಲು ಬಿಜೆಪಿ ಸೋತಿದೆ ಎಂಬುದನ್ನು ಅಸ್ಸಾಂ ಗಲಭೆ ಸೂಚ್ಯವಾಗಿ ಹೇಳಲಾರಂಭಿಸಿದೆ. ಒಂದು ಭಾಷೆ, ಒಂದು ತೆರಿಗೆ, ಒಂದು ಚುನಾವಣೆ.. ಹೀಗೆ ಎಲ್ಲದರಲ್ಲೂ ಒಂದನ್ನೇ ಹುಡುಕುವ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ಧಾಂತ ಎಷ್ಟು ದುರ್ಬಲ ಎಂಬುದು ಅಸ್ಸಾಂ ಹಿಂಸಾಚಾರದಲ್ಲಿ ವ್ಯಕ್ತವಾಗಲಾರಂಭಿಸಿದೆ.
2016 ರಲ್ಲಿ ಅಸ್ಸಾಂ ಗೆದ್ದು ಝಂಡಾ ಹಾರಿಸಿದ ಬಿಜೆಪಿಯು ಉಳಿದ ಈಶಾನ್ಯ ರಾಜ್ಯಗಳಲ್ಲಿ ಶರವೇಗದಲ್ಲಿ ರಾಜಕೀಯ ತಂತ್ರ-ಕುತಂತ್ರದ ಮೂಲಕ ಅಧಿಕಾರ ಹಿಡಿದು ಬೀಗಿತ್ತು. ಈಗ ಅಷ್ಟೇ ಶರವೇಗದಲ್ಲಿ ಪತನದ ಹಾದಿ ಹಿಡಿದಿರುವುದು ಐತಿಹಾಸಿಕ ದುರಂತವೇ ಸರಿ. ಭದ್ರ ಬುನಾದಿಯಿಲ್ಲದ ಯಶಸ್ಸು ಎಷ್ಟು ಕ್ಷಣಿಕ ಎಂಬ ಸತ್ಯ ಬಿಜೆಪಿಯ ಪ್ರಚಂಡರಾದ ಮೋದಿ-ಶಾ ಗೆ ಇಷ್ಟು ಬೇಗ ಅರ್ಥವಾಗಲಾಗದು. ದ್ವೇಷ, ಹಿಂಸೆಯ ಮೇಲೆ ಕಟ್ಟುವ ಸೌಧಗಳು ಗಾಳಿಗೋಪುರಗಳಂತೆ ಎಂಬ ಸತ್ಯವನ್ನು ಮೋದಿ-ಶಾ ಜೋಡಿಗೆ ಅಸ್ಸಾಂ ಹಿಂಸಾಚಾರ ಸೂಚ್ಯವಾಗಿ ರವಾನಿಸಿದೆ.
ಅಸ್ಸಾಂನ ಮೂಲ ವಿಚಾರಕ್ಕೆ ಮರಳುವುದಾದರೆ 3.2 ಕೋಟಿ ಜನಸಂಖ್ಯೆ ಹೊಂದಿರುವ ಈ ರಾಜ್ಯದಲ್ಲಿ ಅರ್ಧದಷ್ಟು ಅಸ್ಸಾಮಿಗಳು, ಬಂಗಾಳಿ ಮಾತನಾಡುವ ಹಿಂದೂಗಳಿದ್ದಾರೆ. ರಾಜ್ಯದ ಒಟ್ಡಾರೆ ಜನಸಂಖ್ಯೆಯಲ್ಲಿ ಮೂವರಿಗೆ ಒಬ್ಬರು ಮುಸ್ಲಿಮರಿದ್ದಾರೆ. ಮೂರು ವಿಭಿನ್ನವಾದ ಬುಡಕಟ್ಟು ಸಮುದಾಯಗಳ ನೆಲೆವೀಡು ‘ಟೀ’ ಗೆ ಹೆಸರಾದ ಅಸ್ಸಾಂ. ಈ ಸಮುದಾಯಗಳೂ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿವೆ. ಈಗಾಗಲೇ ಇದೇ ರಾಜ್ಯವನ್ನು ವಿಭಜಿಸಿ ನಾಲ್ಕು ಹೊಸರಾಜ್ಯಗಳನ್ನು ಸೃಷ್ಟಿಸಲಾಗಿದೆ. ಆಂತರಿಕ ಹಾಗೂ ಬಾಹ್ಯವಾಗಿ ಹಲವು ರೀತಿಯ ಕ್ಷೋಭೆಗಳಿಗೆ ಮುಖಾಮುಖಿಯಾಗಿರುವ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಎಲ್ಲ ಆಕ್ರೋಶದ ಕಿಡಿಗಳು ಒಮ್ಮೆಲೇ ಸ್ಫೋಟಿಸುವ ಬಿಂದುವಾಗಿ ಪರಿವರ್ತನೆಯಾಗಿದೆ.
ಭಾಷಾ ಅಸ್ಮಿತೆ ಮತ್ತು ಪೌರತ್ವಕ್ಕಾಗಿ ಗಲಭೆಗಳು ನಡೆದಿರುವ ಅಸ್ಸಾಂನಲ್ಲಿ ಸಂಪನ್ಮೂಲ ಮತ್ತು ಉದ್ಯೋಗಕ್ಕಾಗಿ ಅಸ್ಸಾಮಿಗಳು ಹಾಗೂ ಬಂಗಾಳಿ ಹಿಂದೂಗಳ ನಡುವೆ ತೀವ್ರ ಪೈಪೋಟಿ ಇದೆ. ಇದು ಇಷ್ಟರಮಟ್ಟಿಗೆ ಎಂದರೆ ಈ ನೆಲೆದಲ್ಲಿ ಸಾವಿರಾರು ವರ್ಷಗಳಿಂದ ಗುರುತಿಸಿಕೊಂಡಿರುವ, ಮೂಲ ನಿವಾಸಿಗಳಾದ ಬುಡಕಟ್ಟು ಜನರ ಆಶೋತ್ತರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದೆಲ್ಲದರ ಮಧ್ಯೆ ನೆರೆಯ ಬಾಂಗ್ಲಾದೇಶದ ಜೊತೆ ಸುಮಾರು 900 ಕಿ.ಮೀ. ಗಡಿಯನ್ನು ಹೊಂದಿರುವ ಅಸ್ಸಾಂಗೆ ಅಕ್ರಮ ವಲಸಿಗರ ದೊಡ್ಡ ಆತಂಕ ಇದ್ದೇ ಇದೆ. ಧಾರ್ಮಿಕ ಕಿರುಕುಳ ಮತ್ತು ಉದ್ಯೋಗಕ್ಕಾಗಿ ಬಾಂಗ್ಲಾ ಮತ್ತು ಭಾರತಕ್ಕೆ ವಲಸೆ ಬರುವವರ ಸಂಖ್ಯೆ 4-10 ಲಕ್ಷದವರೆಗೆ ಇದೆ ಎಂಬ ಅಂದಾಜಿದೆ.
1980ರ ದಶಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಅಸ್ಸಾಂನಲ್ಲಿ ಆರು ವರ್ಷಗಳ ಸತತ ಹೋರಾಟ ನಡೆದು ಸಾವಿರಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದಿನ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ 1985ರಲ್ಲಿ ಒಂದು ಒಪ್ಪಂದ ಏರ್ಪಟ್ಟಿತ್ತು. ಇದರ ಪ್ರಕಾರ 1971ರ ಮಾರ್ಚ್ 23ರ ನಂತರ ಅಸ್ಸಾಂ ಪ್ರವೇಶಿಸಿದ ಸೂಕ್ತ ದಾಖಲೆ ಹೊಂದದ ಅಕ್ರಮ ನಿವಾಸಿಗಳಿಗೆ ಪೌರತ್ವ ನಿರಾಕರಿಸಿ, ಅವರನ್ನು ಹೊರಹಾಕಲು ನಿರ್ಧರಿಸಲಾಗಿತ್ತು. ಆದರೆ, ಆನಂತರದ ಮೂರು ದಶಕಗಳಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, 1951 ಅಸ್ಸಾಂ ಕೇಂದ್ರಿತವಾಗಿ ಜಾರಿಯಾಗಿದ್ದ ರಾಷ್ಟ್ರೀಯ ಪೌರತ್ವ ಪಟ್ಟಿಯನ್ನು (NRC) ನವೀಕರಿಸಲು ಆದೇಶಿಸುವ ಮೂಲಕ ಅಸ್ಸಾಂನ ನೈಜ ಪ್ರಜೆಗಳನ್ನು ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಆದರೆ, ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾದ NRCಯಲ್ಲಿ ಸುಮಾರು 20 ಲಕ್ಷ ಮಂದಿ ಪೌರತ್ವ ಕಳೆದುಕೊಂಡಿದ್ದರು.
ಮೊದಲಿಗೆ NRC ಗೆ ಭಾರಿ ಬೆಂಬಲ ನೀಡಿದ ಮೋದಿ ಸರ್ಕಾರವು 20 ಲಕ್ಷ ಮಂದಿಯ ಪೈಕಿ ಬಹುತೇಕರು ಹಿಂದೂಗಳು ಪೌರತ್ವ ಕಳೆದುಕೊಳ್ಳುತ್ತಾರೆ ಎಂಬ ಸುದ್ದಿ ಹೊರಬೀಳುವುದಕ್ಕೂ ಮುನ್ನವೇ NRCಗೆ ಉಲ್ಟಾ ಹೊಡೆಯಲಾರಂಭಿಸಿತು. ಬಿಜೆಪಿಯನ್ನು ಬಹುವಾಗಿ ಬೆಂಬಲಿಸಿದ ಬಂಗಾಳಿ ಹಿಂದೂಗಳು ಪೌರತ್ವ ಕಳೆದುಕೊಂಡು, ಅಕ್ರಮ ನಿವಾಸಿಗಳ ಪಟ್ಟಿ ಸೇರುವುದು ಖಚಿತ ಎಂಬುದನ್ನು ತಿಳಿದ ಬಿಜೆಪಿ NRCಯಲ್ಲಿ ಸಾಕಷ್ಟು ಲೋಪವಾಗಿದೆ ಎಂದು ಹೇಳಲಾರಂಭಿಸಿತು. ಈಗ ಇದನ್ನು ಸರಿಪಡಿಸಲು ಎರಡನೇ ಬಾರಿಗೆ ಪಟ್ಟಿ ತಯಾರಿಸಲು ಸರ್ಕಾರ ಸಿದ್ಧವಾಗಿದೆ.
NRC ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆಯು ಅಲ್ಲಿನ ಮತ್ತಷ್ಟು ಬಿರುಕುಗಳಿಗೆ ದರ್ಪಣವಾಗಿದೆ. ಅಧಿಕಾರಕ್ಕೆ ಬರುವ ಮುನ್ನ ಅಸ್ಸಾಂನಲ್ಲಿ ಅರ್ಧಕ್ಕೂ ಹೆಚ್ಚಿರುವ ಅಸ್ಸಾಮಿಗಳಿಗೆ ಅಕ್ರಮ ನಿವಾಸಿಗಳನ್ನು ಓಡಿಸುವ ಭರವಸೆಯನ್ನು ಬಿಜೆಪಿ ನೀಡಿತ್ತು. ಇದು ಸಾಧ್ಯವಾಗದೇ ಅಸ್ಸಾಮಿ ಮಂದಿ ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC ಮೂಲಕ ಮುಸ್ಲಿಮರನ್ನೇ ಗುರಿಯಾಗಿಸಲಾಗಿದೆ ಎನ್ನುವ ಆತಂಕ ಆ ಸಮುದಾಯದಲ್ಲಿ ಮೂಡಿದೆ. ಇನ್ನು ಬಂಗಾಳಿ ಮಾತನಾಡುವ ಹಿಂದೂಗಳಿಗೆ NRCಯಲ್ಲಿ ಮುಸ್ಲಿಮರಿಗಿಂತ ಬಂಗಾಳಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಸರಿಪಡಿಸಲು ಬಿಜೆಪಿಗೆ ಆಗಲಿಲ್ಲ ಎಂಬ ಆಕ್ರೋಶವಿದೆ. ಇದರ ಜೊತೆಗೆ ಕಾನೂನಿನಲ್ಲಿ ರಾಜ್ಯದ ಬುಡಕಟ್ಟು ಸಮುದಾಯಗಳ ಪ್ರಾಬಲ್ಯ ಇರುವ ಕಡೆ ಯಾವುದೇ ಅಕ್ರಮ ನಿವಾಸಿ ಹೋಗಿ ನೆಲೆಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ.
ಇಡೀ ರಾಜ್ಯಕ್ಕೆ ಈ ವಿಶೇಷ ನಿಯಮ ಅನ್ವಯವಾಗದೇ ಇರುವುದರಿಂದ ನಿರ್ಬಂಧಿತ ಪ್ರದೇಶದ ಮುಸ್ಲಿಮೇತರ ಸಮುದಾಯದವರು ಅಸ್ಸಾಂನ ಯಾವುದೇ ಭಾಗದಲ್ಲಿ ಹೋಗಿ ನೆಲೆಸಲು ಆಗುವುದಿಲ್ಲ. ಈ ತಾರತಮ್ಯ ಸರಿಯಲ್ಲ ಎಂಬ ಭಾವನೆಯೂ ಬಹುತೇಕರಲ್ಲಿ ಮನೆ ಮಾಡಿದೆ. ಭಾರತದ ವಿಭಿನ್ನತೆ ಹಾಗೂ ಪ್ರಾದೇಶಿಕ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳಲು ಸತತವಾಗಿ ಸೋಲುತ್ತಿರುವ ಬಿಜೆಪಿಯು NRC ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗೆ ಈ ಮಟ್ಟದ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಪ್ರತಿಯೊಂದು ನೀತಿ, ನಿಯಮದಲ್ಲೂ ಹಿಂದೂ-ಮುಸ್ಲಿಂ ಸಂಕಥನವನ್ನು ಪ್ರಜ್ಞಾಪೂರ್ವಕವಾಗಿ ಕಟ್ಟುವ ಬಿಜೆಪಿಯು ತನ್ನ ಗಾಯವನ್ನು ನೆಕ್ಕಲಾರಂಭಿಸಿದೆ. ಗಾಯದ ಭಾಗ ಕೊಳೆಯದಂತೆ ತಡೆಯಲು ಬಿಜೆಪಿಯ ಮಾತೃಸಂಸ್ಥೆಯು ಯಾವ ‘ಸ್ವದೇಶಿ’ ಮುಲಾಮು ತಯಾರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.