ಸದೃಢ ದೇಶ ಸ್ಥಾಪಿಸಬೇಕಿದ್ದ ಯುವ ಜನತೆ ಎತ್ತ ಸಾಗುತ್ತಿದೆ?

ಮಾನವ ಸಂಪನ್ಮೂಲ ಯಾವುದೇ ಒಂದು ದೇಶದ ಅತಿ ದೊಡ್ಡ ಶಕ್ತಿ. ಅದನ್ನು ಸದ್ವಿನಿಯೋಗಿಸಿಕೊಂಡರೆ, ಸಕಾರಾತ್ಮಕವಾಗಿ ಬೆಳೆಸಿದರೆ, ಸರಿ ದಿಕ್ಕಿನಲ್ಲಿ ನಡೆಯುವಂತೆ ಪ್ರೇರೇಪಿಸಿದರೆ ಸಹಜವಾಗಿಯೇ ದೇಶವನ್ನು ಆಂತರಿಕವಾಗಿ ಬಲಪಡಿಸಬಹುದು. ಅದರಲ್ಲೂ ಯುವಶಕ್ತಿಯ ಮನಸ್ಥಿತಿ, ವರ್ತನೆ, ಆಲೋಚನಾ ಕ್ರಮ ದೇಶದ ಭವಿಷ್ಯಕ್ಕೆ ಮುನ್ನುಡಿ ಇದ್ದಂತೆ. ಒಂದುವೇಳೆ ಈ ಶಕ್ತಿಯೇ ಸಮಾಜದ ಸಾಮರಸ್ಯ ತತ್ವಕ್ಕೆ ವಿರುದ್ಧವಾಗಿ ಚಲಿಸಿದರೆ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸುತ್ತದೆ.

ಇಂದು ಭಾರತದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಯುವ ಸಮೂಹದ ಮನಸ್ಥಿತಿ, ವರ್ತನೆಗಳನ್ನು ನೋಡಿದಾಗ ನಮ್ಮ ದೇಶದ ಬಹುಮುಖ್ಯ ಸಂಪನ್ಮೂಲವೇ ಪೋಲಾಗುತ್ತಿರುವಂತೆ ಕಾಣುತ್ತದೆ. ಗಲಭೆ, ಹಿಂಸಾಚಾರ, ಕೋಮು ಸಂಘರ್ಷಗಳಲ್ಲಿ ಎದ್ದು ಕಾಣುವ ಯುವಕರ ಆಕ್ರೋಶ ಭರಿತ ಮುಖಗಳು ವರ್ತಮಾನದ ದುರಂತ ಕತೆಗಳನ್ನು ಹೇಳುತ್ತಿವೆ. ಪ್ರಸ್ತುತ ರಾಜಕೀಯ ವ್ಯವಸ್ಥೆ, ಸಮಾಜದ ಹಿತಕ್ಕಿಂತ ಸ್ವಹಿತವೇ ಮುಖ್ಯವೆಂದುಕೊಂಡ ರಾಜಕಾರಣಿಗಳ ದಂಡು, ಧರ್ಮದ ಅಮಲನ್ನು ನೆತ್ತಿಗೇರಿಸಿಕೊಂಡ ಸಂಘಟನೆಗಳು, ಜನಪ್ರಿಯತೆಗಾಗಿ ಹಪಹಪಿಸುವ ನಾಯಕರು.. ಹೀಗೆ ಸಮಾಜಕ್ಕೆ ಹೊರೆಯೇ ಆಗಿರುವ ಈ ಗುಂಪಿನೊಳಗೆ ಗೊತ್ತೋ, ಗೊತ್ತಿಲ್ಲದೆಯೋ ಸೇರಿಕೊಂಡಿರುವವರಲ್ಲಿ ಯುವ ಸಮೂಹದ ಪಾಲು ದೊಡ್ಡದಿದೆ. ಯುವಜನರನ್ನು ತಮ್ಮ ಕಾರ್ಯಕರ್ತರುಗಳನ್ನಾಗಿ, ಪ್ರಚಾರಕರನ್ನಾಗಿ, ಗುರಾಣಿಗಳನ್ನಾಗಿ ಬಳಸಿಕೊಳ್ಳುವ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳು ಹೊಸಬರೇನಲ್ಲ. ಇತಿಹಾಸದುದ್ದಕ್ಕೂ ತಮ್ಮ ರಕ್ಷಣೆಗಾಗಿ ಹೀಗೆ ಸಶಕ್ತ ಪಡೆಯನ್ನು ಸುತ್ತಲೂ ಇಟ್ಟಕೊಂಡು, ಕೊನೆಗೆ ಅವರನ್ನೇ ಬಲಿಪಶುಗಳನ್ನಾಗಿಸಿದ ಹಲವು ಕತೆಗಳಿವೆ. ರಾಜಕೀಯ, ಧಾರ್ಮಿಕ, ಸೈದ್ಧಾಂತಿಕ ಕಾರಣಗಳಿಗಾಗಿ ಕಿತ್ತಾಡುವ ಅದೆಷ್ಟೋ ವಿದ್ಯಾರ್ಥಿಗಳು ಹೀಗೆ ಯಾರದೋ ಹಿತಾಸಕ್ತಿಗಾಗಿ ಬಲಿಯಾಗುತ್ತಲೇ ಇದ್ದಾರೆ.

ಕಾಲೇಜು ಮಟ್ಟದಲ್ಲಿರುವ ವಿದ್ಯಾರ್ಥಿ ಸಂಘಟನೆಗಳಿಗೂ ಜಾತಿ, ಧರ್ಮ, ಸಿದ್ಧಾಂತ, ರಾಜಕೀಯ ವಿಚಾರಗಳ ಲೇಪನ ಮಾಡಿರುವುದರಿಂದ, ಅಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ಹೊರ ಜಗತ್ತಿನ ಪ್ರಭಾವದಿಂದಲೇ ನಡೆಯುತ್ತಿರುತ್ತವೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳು ಅದಕ್ಕೆ ತಾಜಾ ಉದಾಹರಣೆಯಂತಿವೆ. “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ, “ಫ್ರೀ ಕಾಶ್ಮೀರ್” ಕೂಗು, ಪ್ರತಿಭಟನೆ ವೇಳೆಯಲ್ಲಿ ಬಂದೂಕು ಹಿಡಿದ ಯುವಕರು, ಕಲ್ಲು ತೂರಾಟ ನಡೆಸಿದವರು, ಧಾರ್ಮಿಕ ಕಟ್ಟಡಗಳ ಮೇಲೇರಿ ಸ್ವಾಸ್ಥ್ಯ ಕದಡಿದ ಹುಡುಗರ ಬೆನ್ನೆಲುಬಿನ ಮೂಲ ಹುಡುಕಿ ಹೊರಟರೆ ಮತ್ತದೇ ಸ್ವಹಿತಾಸಕ್ತರ ನೆರಳು ಕಾಣುತ್ತದೆ. ಇತ್ತೀಚೆಗೆ ಕೇರಳದ ಶಾಲಾ – ಕಾಲೇಜುಗಳ ಆಡಳಿತ ಮಂಡಳಿಗಳು “ಚಳವಳಿಗಳಿಂದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗುತ್ತಿದೆ” ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಅದನ್ನು ಪುರಸ್ಕರಿಸಿದ ಹೈಕೋರ್ಟ್, ಶಾಲಾ – ಕಾಲೇಜುಗಳಲ್ಲಿ ನಡೆಸುವ ಎಲ್ಲಾ ರೀತಿಯ ಚಳವಳಿಗಳಿಗೆ ನಿಷೇಧ ಹೇರಿದೆ. ಶಿಕ್ಷಣ ಸಂಸ್ಥೆಗಳ ವಾತಾವರಣ ಕೆಡಿಸುವ, ಕಾರ್ಯಕ್ಕೆ ಅಡ್ಡಪಡಿಸುವ ಪ್ರತಿಭಟನೆಗಳಿಗೆ ಅವಕಾಶವಿಲ್ಲವೆಂದೂ, ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಯಾರೂ ಪ್ರೇರೇಪಿಸುವಂತಿಲ್ಲವೆAದೂ ಆದೇಶ ಹೊರಡಿಸಿದೆ.

ಮೇಲ್ನೋಟಕ್ಕೆ ಇಂತಹ ಆದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವೆಂಬAತೆ ಕಂಡರೂ ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಯುವಸಮುದಾಯದ ಮನಸ್ಸು ಕಲುಷಿತಗೊಳ್ಳುತ್ತಿರುವುದನ್ನು ತಪ್ಪಿಸಲು ಈ ರೀತಿಯ ನಿರ್ಧಾರ ಅನಿವಾರ್ಯವೆಂದೂ ಅನ್ನಿಸುತ್ತದೆ. ವಿದ್ಯಾರ್ಥಿಗಳಲ್ಲಿ ದ್ವೇಷ ಮನೋಭಾವವನ್ನು ಬಿತ್ತುವ, ಸೈದ್ಧಾಂತಿಕ, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ದಾಳವಾಗಿಸಿಕೊಂಡು ಸಂಘರ್ಷಕ್ಕೆ ಪ್ರೇರೇಪಿಸುವ ಕುತಂತ್ರಗಳು ಹೆಚ್ಚುತ್ತಿರುವಾಗ ಅವುಗಳನ್ನು ಹಾಗೆಯೇ ಬಿಟ್ಟರೆ ಒಂದಿಡೀ ಪೀಳಿಗೆಯ ಮನಸ್ಥಿತಿ ಕಲುಷಿತಗೊಳ್ಳುವುದು ನಿಶ್ಚಿತ. ಈ ದೃಷ್ಟಿಯಿಂದ ನೋಡಿದಾಗ ಇಂತಹ ಅನಾಹುತಗಳನ್ನು ತಪ್ಪಿಸಲು ಕೆಲ ಕಟು ನಿರ್ಧಾರಗಳನ್ನು ಕೈಗೊಳ್ಳಲೇಬೇಕು. ಅಂತೆಯೇ, ಬೇರೆ ಬೇರೆ ನೆಲೆಗಳಲ್ಲಿ ಆಗುತ್ತಿರುವ ಗಲಭೆ, ಹಿಂಸಾಚಾರಗಳಿಗೆ ಕಡಿವಾಣ ಹಾಕಲು, ಯುವಸಮೂಹ ದಿಕ್ಕು ತಪ್ಪದಂತೆ ಜಾಗೃತೆ ವಹಿಸಲು ಸರ್ಕಾರ ಮುಂದಾಗಲೇಬೇಕು. ಶಿಕ್ಷಣ ಸಂಸ್ಥೆಗಳಿAದ ದ್ವೇಷ ರಾಜಕಾರಣವನ್ನು ದೂರವಿಡುವುದು ಈ ಕ್ಷಣದ ತುರ್ತು. ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಧರ್ಮಾಧಾರಿತ, ಸಿದ್ಧಾಂತ ಆಧಾರಿತ ಗುಂಪುಗಳಾದರೆ ಮುಂದೆ ಇಡೀ ಸಮಾಜವೇ ಈ ತಪ್ಪಿಗಾಗಿ ಪರಿತಪಿಸಬೇಕಾಗುತ್ತದೆ.

ಪ್ರಜಾಪ್ರಭುತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಸಾಂವಿಧಾನಿಕವಾಗಿ ಪ್ರತಿಭಟಿಸುವ ಹಕ್ಕಿದೆಯೇ ವಿನಃ ಸಾರ್ವಜನಿಕ ಆಸ್ತಿಯನ್ನು ಹಾನಿಗೆಡವುವ ಹಕ್ಕಾಗಲೀ, ಕೊಲ್ಲುವ ಹಕ್ಕಾಗಲೀ ಇಲ್ಲ. ರಾಜಕಾರಣಿಗಳು ತಮ್ಮ ತೋಳ್ಬಲದ ಪ್ರದರ್ಶನಕ್ಕಾಗಿ, ಪ್ರತಿಷ್ಠೆಗಾಗಿ ಈ ಕ್ಷಣಕ್ಕೆ ಇಂತಹ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಾದರೆ, ತಮ್ಮ ಸ್ವಾರ್ಥಕ್ಕಾಗಿ ಒಂದು ತಲೆಮಾರನ್ನೇ ಕೆಡಿಸಿದ ಪಾಪ ಅವರಿಗಂಟಲಿ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...