ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT) ಅಥವ ಹಸಿರು ಪೀಠ ನ್ಯಾಯಾಧೀಶರು ಮತ್ತು ಪರಿಸರ ತಜ್ಞ ಸದಸ್ಯರ ಕೊರತೆಯಿಂದ ಪ್ರಾಧಿಕಾರದ ಮುಖ್ಯ ಉದ್ದೇಶಕ್ಕೆ ಹಿನ್ನಡೆಯಾಗಿದೆ. ಪರಿಸರ ಸಂಬಂಧಿಸಿದ ವ್ಯಾಜ್ಯಗಳನ್ನು ಆರು ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂಬ ಉದ್ದೇಶದಿಂದ 2011ರಲ್ಲಿ NGTಯನ್ನು ಸ್ಥಾಪಿಸಲಾಗಿತ್ತು.
ಕಳೆದ ಎಂಟು ವರ್ಷಗಳಲ್ಲಿ ನ್ಯಾಯಾಧೀಕರಣದ ವಲಯ ಪೀಠಗಳಾದ ಚೆನ್ನೈ, ಭೋಪಾಲ, ಕೊಲ್ಕತ್ತಾ ಮತ್ತು ಪುಣೆಯಲ್ಲಿ ನ್ಯಾಯಾಧೀಶರೇ ಇರುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಇವೆಲ್ಲ ವಲಯ ಪೀಠಗಳಲ್ಲಿ ನ್ಯಾಯಾಧೀಶರ ಹುದ್ದೆ ಖಾಲಿ ಬಿದ್ದಿದೆ. 2010ರ ಎನ್ ಜಿ ಟಿ ಕಾಯಿದೆ ಪ್ರಕಾರ ನ್ಯಾಯಾಧೀಕರಣವು ಒಬ್ಬ ಪೂರ್ಣಕಾಲಿಕ ಅಧ್ಯಕ್ಷರನ್ನು ತಲಾ 20 ಮಂದಿ ನ್ಯಾಯಾಧೀಶರು ಮತ್ತು ತಜ್ಞ ಸದಸ್ಯರನ್ನು ಹೊಂದಿರಬೇಕು. ಕಾಯಿದೆ ಪ್ರಕಾರ, ಹತ್ತಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರಬಾರದು. ಸದ್ಯ ಒಬ್ಬ ಅಧ್ಯಕ್ಷ ತಲಾ ನಾಲ್ಕು ಮಂದಿ ನ್ಯಾಯಾಧೀಶರು ಮತ್ತು ತಜ್ಞರನ್ನು ಮಾತ್ರ ಹೊಂದಿದೆ.
ಇಬ್ಬರು ತಜ್ಞರನ್ನು ಕಳೆದ ತಿಂಗಳಷ್ಟೇ ನೇಮಕ ಮಾಡಲಾಗಿತ್ತು. ಆದರೆ, ಅವರು ಕೆಲಸ ಆರಂಭಿಸಬೇಕಾದರೆ ಅಧಿಸೂಚನೆ ಹೊರಡಿಸಬೇಕಾಗಿದೆ. ಗಜೆಟ್ ನೊಟೀಫಿಕೇಶನಿಗಾಗಿ ಅವರು ಕಾಯುತ್ತಿದ್ದಾರೆ. 2017 ಡಿಸೆಂಬರ್ ಅಂತ್ಯಕ್ಕೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ಅವಧಿ ಮುಕ್ತಾಯವಾದ ಏಳು ತಿಂಗಳ ಅನಂತರ ಈಗಿರುವ ಎನ್ ಜಿ ಟಿ ಅಧ್ಯಕ್ಷರಾದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ಅವರನ್ನು ನೇಮಕ ಮಾಡಲಾಗಿತ್ತು.
ನ್ಯಾಯಮೂರ್ತಿ ಎಸ್ ಪಿ ಸಿಂಗ್, ನ್ಯಾಯಮೂರ್ತಿ ರಘುವೇಂದ್ರ ಸಿಂಗ್ ರಾಥೋಡ್ ಮತ್ತು ನ್ಯಾಯಮೂರ್ತಿ ಕೆ. ರಾಮಕೃಷ್ಣ ಅವರು ನ್ಯಾಯಾಧೀಶ ಸದಸ್ಯರಾಗಿದ್ದು, ಸತ್ಯವಾನ್ ಸಿಂಗ್ ಗರ್ಬ್ಯಾಲ್, ನಗೀನ್ ನಂದ, ಸಿದ್ಧಾಂತ ದಾಸ್ ಮತ್ತು ಸೈಬಾಲ್ ದಾಸಗುಪ್ತ ಅವರು ತಜ್ಞ ಸದಸ್ಯರಾಗಿದ್ದಾರೆ. ಎಲ್ಲ ನಾಲ್ಕು ಮಂದಿ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಕೇಡರ್ ಅಧಿಕಾರಿಗಳು. ಎನ್ ಜಿ ಟಿ ದೆಹಲಿಯಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರಧಾನ ಪೀಠ ಮತ್ತು ಎರಡು ರೆಗ್ಯುಲರ್ ಪೀಠಗಳು (ಉತ್ತರ ವಲಯ) ಮತ್ತು ದಕ್ಷಿಣ (ಚೆನ್ನೈ), ಕೇಂದ್ರ (ಭೋಪಾಲ), ಪೂರ್ವ (ಕೋಲ್ಕತ್ತಾ) ಹಾಗೂ ಪಶ್ಚಿಮ (ಪುಣೆ) ಹೀಗೆ ನಾಲ್ಕು ವಲಯ ಪೀಠಗಳನ್ನು ಹೊಂದಿದೆ.

ಕಳೆದ ಎರಡು ವರ್ಷಗಳಿಂದ ವಲಯ ಪೀಠಗಳಲ್ಲಿ ನ್ಯಾಯಾಧೀಶರು ಇಲ್ಲದಿರುವ ಪರಿಣಾಮ ದೆಹಲಿಯಿಂದ ವಿಡಿಯೊ ಕಾನ್ಫೆರೆನ್ಸ್ ಮೂಲಕ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತಿತ್ತು. ಇದರಿಂದಾಗಿ ವಿಳಂಬ ಆಗುತ್ತಿದೆ ಮತ್ತು ಪ್ರಕರಣಗಳಿಗೆ ಮುಂದಿನ ವಿಚಾರಣಾ ದಿನಾಂಕ ನೀಡಲಾಗುತ್ತಿದೆ. 2016 ರ ಮುನ್ನ ಇವೆಲ್ಲ ನಾಲ್ಕು ವಲಯ ಪೀಠಗಳು ಬೆಳಗ್ಗೆ 10.30ರಿಂದ 4.30ರ ತನಕ ಕಾರ್ಯನಿರ್ವಹಿಸುತ್ತಿದ್ದವು. ಈಗ ವಿಡಿಯೊ ಕಾನ್ಫೆರೆನ್ಸ್ ಮೂಲಕ ವಾರಕ್ಕೆ ಕೆಲವು ಗಂಟೆಗಳ ಮಾತ್ರ ವಿಚಾರಣೆ ನಡೆಯುತ್ತಿದೆ. ಆದುದರಿಂದ, ಪ್ರಕರಣ ವಿಲೇವಾರಿ ವಿಳಂಬ ಆಗುತ್ತಿದೆ ಎನ್ನುತ್ತಾರೆ ವಕೀಲರು.
ಅರವಳಿ ರೇಂಜ್, ದೆಹಲಿಯ ಚಿರತೆ ಉದ್ಯಾನವನ ಕಾರಿಡಾರ್ ಒತ್ತುವರಿ ಹಾಗೂ ಕಾನೂನು ಬಾಹಿರ ಮರಳುಗಾರಿಕೆ ಇತ್ಯಾದಿ ಗಂಭೀರ ಪ್ರಕರಣಗಳು ನ್ಯಾಯಾಧೀಕರಣದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. 2011ರಲ್ಲಿ ಹಸಿರು ಪೀಠವನ್ನು ಸ್ಥಾಪನೆ ಮಾಡಿದಾಗ ಎಲ್ಲಾ ಪರಿಸರ ಸಂಬಂಧಿ ಪ್ರಕರಣಗಳನ್ನು ಪರಿಸರ ತಜ್ಞರೇ ಇರುವ ನ್ಯಾಯಾಲಯವು ವಿಚಾರಣೆ ಮಾಡುವಂತಾಗಬೇಕು ಎಂಬ ಉದ್ದೇಶ ಹೊಂದಲಾಗಿತ್ತು. ಆದರೆ, 2014ರಲ್ಲಿ, ಐಎಫ್ಎಸ್ ಅಧಿಕಾರಿಗಳನ್ನು ತಜ್ಞರ ಜಾಗದಲ್ಲಿ ನೇಮಕ ಮಾಡಲಾಯಿತು. ಹಸಿರು ಪೀಠವು ಅರಣ್ಯ ಸಂಬಂಧಿಸಿದ ಪ್ರಕರಣಕ್ಕಿಂತಲೂ ಹೆಚ್ಚು ಜಲ, ವಾಯು, ಶಬ್ದ, ಮಾರಕ ವಸ್ತುಗಳು ಮತ್ತಿತರ ಪರಿಸರ ಸಂಬಂಧಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ.
ಹಸಿರು ಪೀಠದಲ್ಲಿ ಪರಿಸರ ತಜ್ಞರು ಇಲ್ಲದಿರುವ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗಿದೆ. ಗೋವಾ ಮೋಪಾ ವಿಮಾನ ನಿಲ್ದಾಣಕ್ಕೆ ಹಸಿರು ಪೀಠ ಪರಿಸರ ಅನುಮತಿ ನೀಡಿರುವುದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರು ಹಸಿರು ಪೀಠದಲ್ಲಿ ಪರಿಸರ ತಜ್ಞರು ಇಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಸಿರು ಪೀಠದ ವಲಯ ಪೀಠಗಳು ಕೆಲಸ ಮಾಡದಿರುವುದು ಕೂಡ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗಮನಕ್ಕೆ ಬಂದಿದೆ. ಕೊಲ್ಕತ್ತಾದ ವಕೀಲರು ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೊಟೀಸು ಜಾರಿ ಮಾಡಿತ್ತು. ಹಸಿರು ಪೀಠದ ಪೂರ್ವ ವಲಯ ಕಚೇರಿಗೆ ಸದಸ್ಯರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಲಾಗಿತ್ತು.
ಕೇಂದ್ರ ಸರಕಾರ ಇದೀಗ ಹಸಿರು ಪೀಠದ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಾಶ ಮಾಡಲು ಹವಣಿಸುತ್ತಿದೆ. ಅದಕ್ಕಾಗಿ ಐಎಫ್ಎಸ್ ಅಧಿಕಾರಿಗಳ ನೇಮಕ, ವಲಯ ಕಚೇರಿಗಳಿಗೆ ಸದಸ್ಯರ ನೇಮಕ ಮಾಡದಿರುವುದು ಇತ್ಯಾದಿ ಮಾಡುತ್ತಿದೆ ಎಂಬ ಆರೋಪ ಈಗಾಗಲೇ ಕೇಳಿಬಂದಿದೆ.