ಪೌರತ್ವ ತಿದ್ದುಪಡಿ ಕಾನೂನಿಗೆ (ಸಿಎಎ) ವಿರೋಧ ವ್ಯಕ್ತಪಡಿಸುತ್ತಿರುವವರ ಪೈಕಿ ಮುಸ್ಲಿಮರನ್ನು ಗುರಿಯಾಗಿಸಿ ಬಹಿರಂಗವಾಗಿ ಬಿಜೆಪಿ ನಾಯಕರು ದಾಳಿ ನಡೆಸಲು ಆರಂಭಿಸಿದ್ದಾರೆ. ಸಿಎಎ ಜಾರಿಯ ಉದ್ದೇಶವೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕ ಹಾಗೂ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಹೋದರ ಜನಾರ್ದನ ರೆಡ್ಡಿ ಜೊತೆ ಜೈಲು ಸೇರಿದ್ದ ಸೋಮಶೇಖರ ರೆಡ್ಡಿ ಬಹಿರಂಗವಾಗಿ ಮುಸ್ಲಿಂ ಸಮುದಾಯಕ್ಕೆ ಒಡ್ಡಿರುವ ಬೆದರಿಕೆ ಇದಕ್ಕೆ ಸ್ಪಷ್ಟ ಹಾಗೂ ತಾಜಾ ಉದಾಹರಣೆ. ನಾಡಿನ ಗಣಿ ಸಂಪತ್ತು ಲೂಟಿ ಹೊಡೆದು ಸ್ಥಳೀಯರಿಗೆ ಅನ್ಯಾಯ ಮಾಡಿ, ಬಳ್ಳಾರಿಗೆ ದೇಶದಲ್ಲಿಯೇ ಅಪಖ್ಯಾತಿ ತಂದು ಜೈಲು ಸೇರಿದ್ದ ರೆಡ್ಡಿ, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಆಡಿರುವ ಮಾತುಗಳು ನಾಗರಿಕ ಸಮಾಜ ತಲೆತಗ್ಗಿಸುವಂಥವು. ರಾಜಕೀಯವಾಗಿ ಅತಂತ್ರವಾಗಿರುವ ರೆಡ್ಡಿ ಬಳಗವು ಗಾಡ್ ಫಾದರ್ ಗಳ ಕೊರತೆಯಿಂದ ರಾಜ್ಯ ರಾಜಕೀಯದಲ್ಲಿ ಪ್ರಾತಿನಿಧ್ಯ ಕಳೆದುಕೊಂಡಿದೆ. ಹೀಗಿರುವಾಗ ಸರ್ವಶಕ್ತವಾದ ಬಿಜೆಪಿ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಸಂತೈಸಬೇಕು ಎಂದರಿತು ಜೂನಿಯರ್ ರೆಡ್ಡಿ, ಮುಸ್ಲಿಂ ಸಮುದಾಯದ ವಿರುದ್ಧ ಪ್ರಹಾರ ನಡೆಸಿದ್ದಾರೆ. “ನಾವು 70%ರಷ್ಟು (ಹಿಂದೂಗಳು) ಇದ್ದೇವೆ. ನೀವು ಶೇ.17ರಷ್ಟಿದ್ದೀರಾ (ಮುಸ್ಲಿಮರು). ನಾವು ಮಚ್ಚು ಹಿಡಿದು ಬಂದರೆ ನಿಮ್ಮ ಕತೆ ಮುಗಿಯುತ್ತದೆ” ಎಂದು ಘಂಟಾಘೋಷವಾಗಿ ಹೇಳಿರುವ ಮತಾಂಧ ಸೋಮಶೇಖರ ರೆಡ್ಡಿಗೆ ಈ ದೇಶದ ಸಂವಿಧಾನದ ಬಗ್ಗೆ ಅರಿವಿದೆಯೇ? ತಾನು ಮುಸ್ಲಿಮರ ಮೇಲೆರಗಿದರೆ ಸ್ಥಾನಮಾನ ಖಚಿತ ಎಂದರಿತಿರುವ ರೆಡ್ಡಿಯು ವಿಜಯಪುರ ಶಾಸಕ ಹಾಗೂ ಪ್ರಖರ ಮುಸ್ಲಿಂ ದ್ವೇಷಿ ಬಸವರಾಜ್ ಯತ್ನಾಳ್ ಸ್ಥಿತಿಯತ್ತ ನೋಡಬೇಕಿದೆ.
ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಯತ್ನಾಳ್ ಅವರನ್ನು ಬಿಜೆಪಿಯಲ್ಲಿ ಇಂದು ಕೇಳುವವರೇ ಇಲ್ಲವಾಗಿದ್ದಾರೆ. ದಿವಂಗತ ಸುಷ್ಮಾ ಸ್ವರಾಜ್ ಬಳಿಕ ಬಿಜೆಪಿಯ ಪ್ರಮುಖರ ಜೊತೆ ನಿಕಟ ಸಂಪರ್ಕ ಸಾಧಿಸಲು ರೆಡ್ಡಿ ಸಹೋದರರಿಗೆ ಸಾಧ್ಯವಾಗಿಲ್ಲ. ಗಣಿ ಲೂಟಿ ಆರೋಪಗಳೂ ಅವರನ್ನು ರಾಜಕಾರಣದ ಅವನತಿಗೆ ಕೊಂಡೊಯ್ದು ಬಿಟ್ಟಿವೆ. ಈಗ ಶತಾಯಗತಾಯ ರಾಜಕಾರಣದ ಕೇಂದ್ರ ಸ್ಥಾನಕ್ಕೆ ಮರಳು ರೆಡ್ಡಿ ಸಹೋದರರು ಹಲವು ದಾಳಗಳನ್ನು ಪ್ರಯೋಗಿಸುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನು ಮುಂದಿಟ್ಟು ಆಟವಾಡುವ ಪ್ರಯತ್ನ ನಿರೀಕ್ಷಿತ ಫಲ ನೀಡಿಲ್ಲ. ಆರ್ ಎಸ್ ಎಸ್ ಕಪಿಮುಷ್ಟಿಗೆ ಸಿಲುಕಿರುವ ಬಿಜೆಪಿಯಲ್ಲಿ ಸ್ಥಾನಮಾನಗಿಸಬೇಕಾದರೆ ಸಂಘದ ಗಮನಸೆಳೆಯುವುದು ಅನಿವಾರ್ಯ. ಇದಕ್ಕೆ ಇರುವ ಮಾರ್ಗ ಮುಸ್ಲಿಂ ದ್ವೇಷವಷ್ಟೆ. ಸಮಕಾಲೀನ ಸ್ಥಿತಿಯೂ ಮತಾಂಧತೆ ಬಯಸುತ್ತಿದೆ ಎಂದರಿತ ರೆಡ್ಡಿ ಸಂಘಕ್ಕೆ ಸಮೀಪವಾಗಲು ಧರ್ಮದ ನಂಜೇರಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅವರ ಆಪ್ತರು.
ಇನ್ನು ಕೇಂದ್ರದ ಬಿಜೆಪಿ ನಾಯಕತ್ವವೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದಾಳಿ, ಪ್ರಚೋದನೆ, ಹಿಂಸೆಯನ್ನು ಸಮರ್ಥಿಸುತ್ತಿರುವಾಗ ಸೋಮಶೇಖರ್ ರೆಡ್ಡಿ ಆಡುತ್ತಿರುವ ಮಾತುಗಳಲ್ಲಿ ಹೊಸತು ಗುರುತಿಸುವ ಅಗತ್ಯವೇನಿದೆ ಎಂಬ ವಾದದಲ್ಲಿ ಸತ್ಯವಿದೆ. ಆದರೆ, ರೆಡ್ಡಿಯ ಮಾತುಗಳು ಮುಂದಿನ ದಿನಗಳು ತಂದೊಡ್ಡಲಿರುವ ಅಪಾಯಗಳ ಮುನ್ಸೂಚನೆಯನ್ನು ಸ್ಪಷ್ಟವಾಗಿ ನೀಡುತ್ತಿವೆ. ಚುನಾಯಿತ ಜನಪ್ರತಿನಿಧಿಯೊಬ್ಬನ ಆತ್ಮದಲ್ಲಿ ಒಂದು ಸಮುದಾಯದ ಬಗ್ಗೆ ಇರುವ ಅಸಹನೆ, ಸಿಟ್ಟು, ಆಕ್ರೋಶವೇ ಇಷ್ಟಿರಬೇಕಾದರೆ ಆತನ ಬೆಂಬಲಿಗರಲ್ಲಿ ಎಷ್ಟರಮಟ್ಟಿನ ಕೋಮು ಕ್ರೌರ್ಯ ಮಡುಗಟ್ಟಿರಬೇಕು? ಒಂದೊಮ್ಮೆ ಈ ಅಸಹನೆಯ ಕಟ್ಟೆ ಹೊಡೆದರೆ ಏನಾಗಬಹುದು ಎಂದು ಊಹಿಸುವುದೂ ಕಷ್ಟ. ಒಂದೊತ್ತು ಊಟಕ್ಕೂ ಕಷ್ಟಪಡುತ್ತಿರುವ ಅಸಂಖ್ಯಾತ ಜನರು ನಮ್ಮ ದೇಶದಲ್ಲಿದ್ದಾರೆ. ಅವರ ಬದುಕನ್ನು ಸಹ್ಯಗೊಳಿಸುವ ಹೆಸರಿನಲ್ಲಿ ಅಧಿಕಾರ ಹಿಡಿದ ಮೋದಿಯವರ ಸರ್ಕಾರವು ಎಂಥೆಂಥವರನ್ನು ನಾಯಕರನ್ನಾಗಿ ಸೃಷ್ಟಿಸುತ್ತಿದೆ? ಶಾಂತಿ, ಸುವ್ಯವಸ್ಥೆಗೆ ಹೆಸರಾದ ಕರ್ನಾಟಕದಲ್ಲಿ ರೆಡ್ಡಿಯಂಥ ಅಯೋಗ್ಯರು ನೀಡುತ್ತಿರುವ ಹೇಳಿಕೆಗಳು ಸಾಮರಸ್ಯ ಮಾಡುವುದಕ್ಕೆ ಎಲ್ಲಿ ಅವಕಾಶ ಮಾಡಿಕೊಡುತ್ತವೆ?
ಅಂದಹಾಗೆ, ಮುಸ್ಲಿಂ ಸಮುದಾಯದ ವಿರುದ್ಧ ಕ್ರೌರ್ಯದ ಕಿಡಿನುಡಿ ಆಡುತ್ತಿರುವ ಬಿಜೆಪಿ ನಾಯಕರ ಪಟ್ಟಿಯಲ್ಲಿ ಸೋಮಶೇಖರ ರೆಡ್ಡಿ ಮೊದಲಿಗರೇನಲ್ಲ. ನಡೆ-ನುಡಿಗೆ ಹೊಂದಾಣಿಕೆಯಿಲ್ಲದ ಸಂಸದೆ ಶೋಭಾ ಕರಂದ್ಲಾಜೆ, ಸಂವಿಧಾನ ಬದಲಾಯಿಸಲೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳಿದ್ದ ಅನಂತ್ ಕುಮಾರ್ ಹೆಗಡೆ ಅವರು ಮುಸ್ಲಿಂ ಸಮುದಾಯದ ವಿರುದ್ಧ ಕೆಂಡಕಾರುವ ಬಿಜೆಪಿಯ ಅಗ್ರಜರು.
ಇತ್ತೀಚೆಗೆ ರಾಜ್ಯದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರು “ಬಹುಸಂಖ್ಯಾತರು ಸೆಟೆದು ನಿಂತರೆ ಏನಾಗುತ್ತದೆ ಎಂಬುದನ್ನು ಗುಜರಾತಿನಲ್ಲಿ 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ನೆನಪಿಸಿಕೊಳ್ಳಿ” ಎಂದು ಹೇಳಿದ್ದರು. ನರೇಂದ್ರ ಮೋದಿಯವರು ಗೋಧ್ರಾ ಹತ್ಯಾಕಾಂಡದ ತನಿಖೆಗೆ ನ್ಯಾ. ನಾನಾವತಿ ಆಯೋಗ ರಚಿಸಿದ್ದರು. ಅದು ಹತ್ಯಾಕಾಂಡದಲ್ಲಿ ಮೋದಿ ಸರ್ಕಾರದ ಪಾತ್ರವಿಲ್ಲ ಎಂದಿತ್ತು. ಆದರೆ, ಆಡಳಿತ ಪಕ್ಷ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳಲಾಗುತ್ತದೆಯೇ? ಇದನ್ನು ಮರೆತಿದ್ದ ರವಿಯವರು ಗೋಧ್ರಾ ಹಿಂಸೆಯನ್ನು ನೆನಪಿಸುವ ಮೂಲಕ ಗುಜರಾತ್ ರಕ್ತ ಚರಿತ್ರೆಯಲ್ಲಿ ಅಂದಿನ ಗುಜರಾತ್ ನೇತೃತ್ವ ವಹಿಸಿದ್ದ ಮೋದಿಯವರ ಪಾತ್ರ ಇತ್ತು ಎಂಬ ವಾದವನ್ನು ಅನುಮೋದಿಸಿದ್ದಾರೆ. ಸತ್ಯವನ್ನು ಬಚ್ಚಿಡಲಾಗದು ಎಂಬುದಕ್ಕೆ ರವಿ ಆಡಿದ್ದ ಮಾತುಗಳು ತಾಜಾ ಉದಾಹರಣೆ.
ಸಚಿವ ರವಿ ವಿವಾದದ ನಂತರ ಮೈಸೂರಿನ ಬಿಜೆಪಿ ಸಂಸದ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕ್ಷೇತ್ರದ ನಾಯಕ ಪ್ರತಾಪ್ ಸಿಂಹ, “ಮಂಗಳೂರಿನಲ್ಲಿ ನಡೆದ ಘಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೃಷ್ಟಿಸಿದ ಮರಿ ಟಿಪ್ಪುಗಳು ಕಾರಣ” ಎಂದಿದ್ದರು. ಇದೂ ಸಹ ಮುಸ್ಲಿಂ ಸಮುದಾಯವನ್ನು ಹೀಗಳೆಯುವ ಉದ್ದೇಶದಿಂದ ಬಳಸಲ್ಪಟ್ಟ ಕೋಮು ಸಾಮರಸ್ಯ ಹಾಳುಮಾಡಬಲ್ಲ ಪದವಾಗಿತ್ತು.
ಇದರ ಬೆನ್ನಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಡಿದ ಮಾತುಗಳಂಥೂ ಜನಪ್ರತಿನಿಧಿಯೊಬ್ಬ ಎಷ್ಟು ನೀಚ ಮಟ್ಟಕ್ಕೆ ಇಳಿದು ಮಾತನಾಡಬಹುದು ಎಂಬುದನ್ನು ಪರಿಚಯಿಸಿದ್ದರು. “ಎದೆ ಸೀಳಿದರೆ ಎರಡು ಅಕ್ಷರವಿಲ್ಲದ, ಪಂಚರ್ ಹಾಕುವವರು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಜರಿಯುವ ಮೂಲಕ ತಮ್ಮೊಳಗಿನ ಮತಾಂಧನನ್ನು ಹೊರಗೆಡವಿದ್ದರು.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಹಲವು ಮುಸ್ಲಿಮ್ ಕುಟುಂಬಗಳ ಮನೆಗಳನ್ನು ಧ್ವಂಸ ಮಾಡಲಾಗಿದೆ. ಯುವಕರನ್ನು ಮನೆಗೆ ನುಗ್ಗಿ ಎಳೆದು ಬಡಿಯಲಾಗಿದೆ. ಕೆಲವರನ್ನು ನಿರ್ದಯವಾಗಿ ಕೊಲ್ಲಲಾಗಿದೆ. ಇನ್ನೂ ಹಲವರ ಮೇಲೆ ವಿವಿಧ ಕಲಂಗಳ ಅಡಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಮುಸ್ಲಿಮ್ ಹೆಸರು ಹೊಂದಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲಾಗಿದೆ. ಹಲವರನ್ನು ಗಂಭೀರವಾಗಿ ಗಾಯಗೊಳಿಸಲಾಗಿದೆ.
ಪಶ್ಚಿಮ ಬಂಗಾಳದ ಬಿಜೆಪಿ ಸಂಸದ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಮುಸ್ಲಿಂ ಯುವಕನನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಉತ್ತರ ಪ್ರದೇಶದ ಹಲವೆಡೆ ಪೊಲೀಸರೇ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಮಾತುಗಳನ್ನಾಡಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರು ಮಾತೆತ್ತಿದರೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಬೆಂಬಲಿಗರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಕಣ್ಮುಂದೆ ನಡೆಯುತ್ತಿರುವಾಗ ಇನ್ನೇನು ಸಾಕ್ಷ್ಯ ಒದಗಿಸಲು ಸಾಧ್ಯ? ಪೌರತ್ವ ಕಾನೂನು ನೆಪವಷ್ಟೆ. ಆಳದಲ್ಲಿ ಬಿಜೆಪಿಯ ಅಜೆಂಡಾವಾದ ಬಹುಸಂಖ್ಯಾತರ ಬಲದ ಮುಂದೆ ಅಲ್ಪಸಂಖ್ಯಾತರು ದ್ವಿತೀಯ ದರ್ಜೆ ಪ್ರಜೆಗಳಂತಿರಬೇಕು ಎಂಬ ಸ್ಪಷ್ಟ ಸಂದೇಶ ರವಾನಿಸುವುದಾಗಿದೆ. ಈ ಮೂಲಕ ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನಕ್ಕೆ ಗೌರವ ನೀಡುವುದಿಲ್ಲ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಬಿಜೆಪಿ ನಾಯಕರು ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚೋದನೆ, ಹಿಂಸೆ ಸಾಮಾನ್ಯವಾದರೆ ಆಶ್ಚರ್ಯವಿಲ್ಲ. ಕೋಮು ಧ್ರುವೀಕರಣವನ್ನು ವ್ಯಾಪಕವಾಗಿಸುವ ಯೋಜನೆಯ ಭಾಗವಾಗಿ ರೆಡ್ಡಿ, ರವಿ, ಸೂರ್ಯ ಹಾಗೂ ಸಿಂಹ ಮಾತನಾಡಿದ್ದಾರೆ. ಇದು ಇಷ್ಟಕ್ಕೆ ಖಂಡಿತಾ ನಿಲ್ಲುವಂಥದ್ದಲ್ಲ.