ಗಣರಾಜ್ಯೋತ್ಸವ ದಿನದಂದು ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯವೊಂದರ ಉಪಕುಲಪತಿ ಸಂವಿಧಾನದ ಬಗ್ಗೆ ವಿವಾದಾಸ್ಪದ ಭಾಷಣ ಮಾಡಿದ್ದನ್ನು ವಿಡಿಯೋ ಮಾಡಿ ವೈರಲ್ ಮಾಡಿದ ವಿದ್ಯಾರ್ಥಿಯೊಬ್ಬನನ್ನು ಹಾಸ್ಟೆಲ್ ನಿಂದಲೇ ಹೊರ ಹಾಕಲಾಗಿದೆ.
ವಿಶ್ವ ಭಾರತಿ ವಿಶ್ವವಿದ್ಯಾಲಯದ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರು ಸಂವಿಧಾನವನ್ನು ಬಹುಮತದಿಂದ ಒಪ್ಪಿಲ್ಲ. ಅಲ್ಪಮತಗಳಿಂದ ಒಪ್ಪಿಕೊಳ್ಳಲಾಗಿತ್ತು ಎಂದು ಭಾಷಣ ಮಾಡಿದ್ದರು.
ಇಷ್ಟೇ ಅಲ್ಲ, ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದನ್ನೂ ವಿರೋಧಿಸಿ ಹೇಳಿಕೆಗಳನ್ನು ನೀಡಿದ್ದರು.
ಇಂದು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಕೇವಲ ಸಂವಿಧಾನದ ಪ್ರಸ್ತಾವನೆಯನ್ನು ಓದಿಕೊಂಡಿದ್ದಾರೆ. ಆದರೆ, ಈ ಸಂವಿಧಾನವನ್ನು ಅಲ್ಪ ಮತಗಳಿಂದ ರಚನೆ ಮಾಡಲಾಗಿದೆ. ಈ ಸಂವಿಧಾನ ರಚನೆ ಕುರಿತು ಕೇವಲ 293 ಶಾಸಕರನ್ನು ಭೇಟಿ ಮಾಡಿ ರಚಿಸಲಾಗಿದೆ. ಅಂದರೆ ಇದು ಪೂರ್ಣ ಪ್ರಮಾಣದಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿ ರಚನೆ ಮಾಡಿದ್ದಲ್ಲ ಎಂದು ಪರೋಕ್ಷವಾಗಿ ಚಕ್ರವರ್ತಿ ಹೇಳಿದ್ದರು.
ಸಂವಿಧಾನ ಹೇಗೆ ರಚನೆಯಾಯ್ತು ಎಂಬುದನ್ನು ಆ ಸಂದರ್ಭದಲ್ಲಿ ಪ್ರಕಟವಾಗಿದ್ದ ಪತ್ರಿಕಾ ವರದಿಗಳನ್ನು ಓದಿದರೆ ನಿಮಗೆ ಗೊತ್ತಾಗುತ್ತದೆ. ಆ ಸಂದರ್ಭದಲ್ಲಿ ಈ ಸಂವಿಧಾನವನ್ನೇ ಹಲವಾರು ಮಂದಿ ವಿರೋಧಿಸಿದ್ದರು. ಆದರೆ, ಈಗ ಅದೇ ಸಂವಿಧಾನ ನಮಗೆಲ್ಲರಿಗೂ ವೇದವಾಗಿ ಪರಿಗಣಿತವಾಗಿದೆ. ಸಂವಿಧಾನದ ಪ್ರಸ್ತಾವನೆ ನಮಗೆ ವೇದವಾಕ್ಯದಂತಿದೆ. ಆದರೆ, ಪ್ರಸ್ತಾವನೆಯನ್ನು ನಾವು ಒಪ್ಪದಿದ್ದರೆ, ಮತದಾರರಾದ ನಾವು ಬದಲಿಸಬಹುದು ಎಂದಿದ್ದರು.
ಉಪಕುಲಪತಿಗಳು ತಮ್ಮ ಭಾಷಣದಲ್ಲಿ ಸಂವಿಧಾನ ಮತ್ತು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಬಗ್ಗೆ ಟೀಕೆ ಮಾಡಿದ್ದರ ಬಗ್ಗೆ ಅರಿವಾದ ನಂತರ ವಿಶ್ವವಿದ್ಯಾಲಯದ ಭದ್ರತಾ ವಿಭಾಗದ ಅಧಿಕಾರಿಗಳು ಭಾಷಣವನ್ನು ಯಾರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಶುರು ಮಾಡಿದರು. ಹೀಗೆ ಸಿಸಿಟಿವಿಯಲ್ಲಿ ಇತಿಹಾಸ ವಿಭಾಗದ ಪದವಿ ವಿದ್ಯಾರ್ಥಿಯೊಬ್ಬ ಚಕ್ರವರ್ತಿಯವರ ಭಾಷಣವನ್ನು ರೆಕಾರ್ಡ್ ಮಾಡುತ್ತಿದ್ದುದು ಗೊತ್ತಾಗಿದೆ.
ಅಷ್ಟರ ವೇಳೆಗೆ ಆ ವಿದ್ಯಾರ್ಥಿ ಭಾಷಣದ ವಿವಾದಿತ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿ ಅದು ವೈರಲ್ ಸಹ ಆಗಿತ್ತು. ಕೂಡಲೇ ಕಚೇರಿಗೆ ಕರೆಯಿಸಿಕೊಂಡ ಭದ್ರತಾ ಅಧಿಕಾರಿಗಳು ಆತನನ್ನು ಸೋಮವಾರ ರಾತ್ರಿ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ತಾನು ಉಳಿದುಕೊಂಡಿದ್ದ ವಿಶ್ವವಿದ್ಯಾಲಯದ ಹಾಸ್ಟೆಲ್ ನಿಂದ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿ ನನ್ನನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ವಿಚಾರಣೆ ಮಾಡಿ ಹಾಸ್ಟೆಲ್ ಬಿಡುವಂತೆ ಸೂಚಿಸಿದ್ದರಿಂದ ನಾನು ನನ್ನ ಹಳ್ಳಿಗೆ ವಾಪಸಾಗಿದ್ದೇನೆ. ಈ ಬಗ್ಗೆ ಬೇರೆ ಏನನ್ನೂ ಕೇಳಬೇಡಿ. ಇದನ್ನು ಹೆಚ್ಚು ವಿವಾದ ಮಾಡುವುದು ಬೇಡ. ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಆತಂಕದಿಂದಲೇ ಹೇಳಿಕೆ ನೀಡಿದ್ದಾನೆ.
ಆದರೆ, ವಿಶ್ವಭಾರತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿರ್ಬನ್ ಸಿರ್ಕರ್ ಅವರು, ವಿದ್ಯಾರ್ಥಿ ತಪ್ಪು ಮಾಡಿದ್ದಾನೆ. ಹಾಸ್ಟೆಲ್ ನ ನಿಯಮಾವಳಿ ಪ್ರಕಾರ ಆತನನ್ನು ಹೊರಹಾಕಲಾಗಿದೆ ಎಂದಷ್ಟೇ ಹೇಳಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಹಾಸ್ಟೆಲ್ ನಿಯಮಾವಳಿ ಏನು ಹೇಳುತ್ತದೆ ಎಂಬುದರ ಬಗ್ಗೆ ಹೆಚ್ಚಿನ ವಿವರಣೆ ನೀಡುವುದರಿಂದ ನುಣುಚಿಕೊಂಡಿದ್ದಾರೆ.
ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ ವಿದ್ಯಾರ್ಥಿಯು ಮಾನಹಾನಿ ಆಗುವ ರೀತಿಯಲ್ಲಿ ವರ್ತಿಸಿದ್ದಾನೆ ಎಂಬ ಆರೋಪ ಹೊರಿಸಲಾಗಿದೆ.
ಈ ವಿದ್ಯಾರ್ಥಿಗೆ ಕೊಟ್ಟಿರುವ ನೊಟೀಸ್ ನಲ್ಲಿ ಗಣರಾಜ್ಯೋತ್ಸವ ದಿನದಂದು ಉಪಕುಲಪತಿಗಳು ಮಾಡಿದ ಭಾಷಣವನ್ನು ರೆಕಾರ್ಡ್ ಮಾಡಿ, ಅದನ್ನು ಶೇರ್ ಮಾಡಿರುವುದನ್ನು ನೀವು ಒಪ್ಪಿಕೊಂಡಿದ್ದೀರಿ. ಹೀಗೆ ವಿಡಿಯೋವನ್ನು ಶೇರ್ ಮಾಡಿರುವುದರಿಂದ ಉಪಕುಲಪತಿಗಳ ಮಾನಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ನೀವು ತಕ್ಷಣವೇ ಹಾಸ್ಟೆಲ್ ಕೊಠಡಿಯಿಂದ ನಿರ್ಗಮಿಸಬೇಕೆಂದು ಆದೇಶ ನೀಡಿತ್ತು.
ವಿದ್ಯಾರ್ಥಿಯನ್ನು ಹಾಸ್ಟೆಲ್ ನಿಂದ ಹೊರ ಹಾಕಿರುವ ವಿಶ್ವವಿದ್ಯಾಲಯದ ಈ ಕ್ರಮವನ್ನು ವಿವಿಯ ಬೋಧಕ ಸಿಬ್ಬಂದಿ ಸಂಘವು ತೀವ್ರವಾಗಿ ಖಂಡಿಸಿದೆ. ಇದು ಅಭಿವ್ಯಕ್ತ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗಿದೆ. ಅಷ್ಟಕ್ಕೂ ಉಪಕುಲಪತಿಗಳು ಭಾಷಣ ಮಾಡಿರುವುದು ಖಾಸಗಿ ಕಾರ್ಯಕ್ರಮದಲ್ಲಿ ಅಲ್ಲ, ಅದು ಸಾರ್ವಜನಿಕ ಭಾಷಣವಾಗಿತ್ತು. ಹೀಗಾಗಿ ಭಾಷಣವನ್ನು ಬಿತ್ತರ ಮಾಡಲು ಅಡ್ಡಿಯೇನಿಲ್ಲ. ಈ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಹಾಸ್ಟೆಲ್ ನಿಂದಲೇ ಹೊರ ಹಾಕಿರುವುದನ್ನು ನಮ್ಮ ಸಂಘ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಸುದಿಪ್ತ ಭಟ್ಟಾಚಾರ್ಯ ಹೇಳಿದ್ದಾರೆ.
ಇಲ್ಲಿ ವಿಶ್ವವಿದ್ಯಾಲಯದ ಕಾನೂನು ಅಧಿಕಾರಿಗಳು ಉಪಕುಲಪತಿಗಳ ಒತ್ತಡಕ್ಕೆ ಮಣಿದಿರುವಂತೆ ಕಾಣುತ್ತಿದೆ. ತರಾತುರಿಯಲ್ಲಿ ವಿದ್ಯಾರ್ಥಿಗೆ ನೊಟೀಸ್ ಕೊಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಏಕೆಂದರೆ, ನೊಟೀಸ್ ಅನ್ನು ಯಾವುದೇ ಲೆಟರ್ ಹೆಡ್ ನಲ್ಲಿ ನೀಡುವ ಬದಲು ಕೈಬರಹದಲ್ಲಿ ಬರೆದು ನೀಡಲಾಗಿದೆ. ಇದಕ್ಕೆ ಅಧಿಕೃತವಾದ ಯಾವುದೇ ಸೀಲು ಸಹ ಇಲ್ಲ ಮತ್ತು ಮೇಲಧಿಕಾರಿಗಳೂ ಸಹ ಅನುಮತಿ ನೀಡಿ ಸಹಿ ಹಾಕಿಲ್ಲ. ಈ ವಿಡಿಯೋದಲ್ಲಿ ಉಪಕುಲಪತಿಗಳ ಭಾಷಣ ಹೊರತಾಗಿ ಬೇರೆ ಏನೂ ಇಲ್ಲ ಮತ್ತು ಯಾವುದೇ ಪ್ರತಿಕ್ರಿಯೆಯನ್ನೂ ಪ್ರತ್ಯೇಕವಾಗಿ ನೀಡಿಲ್ಲ. ಹೀಗಾಗಿ ಇದರಲ್ಲಿ ಮಾನಹಾನಿ ಆಗುವಂತಹ ವಿಚಾರ ಏನಿದೆ ಎಂದು ಪ್ರಶ್ನಿಸಿರುವ ಭಟ್ಟಾಚಾರ್ಯ, ಇಂತಹ ಭಾಷಣ ಮಾಡಿದ್ದಕ್ಕೆ ಉಪಕುಲಪತಿಯೇ ನೇರ ಹೊಣೆಯಾಗುತ್ತಾರೆ ಎಂದು ಕಿಡಿಕಾರಿದ್ದಾರೆ.
ಉಪಕುಲಪತಿ ಸಂವಿಧಾನದ ಬಗ್ಗೆ ಟೀಕೆ ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿಯನ್ನು ಹಾಸ್ಟೆಲ್ ನಿಂದ ಹೊರ ಹಾಕುವ ಮೂಲಕ ಮತ್ತೊಂದು ಭಾರೀ ತಪ್ಪು ಮಾಡಿದಂತಾಗಿದೆ. ಈಗಾಗಲೇ ದೇಶದ ಹೆಸರಾಂತ ವಿಶ್ವವಿದ್ಯಾಲಯಗಳಾದ ಜೆಎನ್ ಯು, ಜಾಮಿಯಾ ಮಿಲಿಯಾ ಸೇರಿದಂತೆ ಹಲವು ವಿವಿಗಳಲ್ಲಿ ವಿದ್ಯಾರ್ಥಿ ಆಂದೋಲನಗಳು ಪ್ರಖರವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಹಾಸ್ಟೆಲ್ ನಿಂದ ಹೊರ ಹಾಕಿರುವುದು ಈ ವಿವಿಯಲ್ಲಿಯೂ ವಿದ್ಯಾರ್ಥಿ ಚಳವಳಿಗೆ ನಾಂದಿ ಹಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.