ಕೊಪ್ಪಳ ಜಿಲ್ಲೆಯ ಹಲವು ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕೆಂದು ಹಾಗೂ ಅಧಿಕ ಹಾರ್ಸ್ ಪವರ್ ಶಕ್ತಿ ಯಂತ್ರಗಳ ಮೂಲಕ ನೂರಾರು ಕಿ.ಮೀಗಳಷ್ಟು ದೂರ ಇರುವ 13 ಕೆರೆಗಳನ್ನು ತುಂಬಿ ಅಂರ್ತಜಲ ಹೆಚ್ಚಿಸುವ ಉದ್ದೇಶದಿಂದ ಗಂಗಮ್ಮನ ಮಡುಗು ಎಂಬ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಸದರಿ ಕಾಮಗಾರಿಯು ಈ ಗಂಗಮ್ಮನ ಮಡುಗು ಜಲಾಯನ ಪ್ರದೇಶದಲ್ಲಿ ಜಾರಿಯಾದರೆ ಹಲವು ಜಲಚರಗಳಿಗೆ ಹಾನಿಯಾಗುತ್ತದೆ ಎಂದು ಅದೇ ಪ್ರದೇಶದಲ್ಲಿ ವನ್ಯ ಜೀವಿ ಪ್ರೇಮಿಗಳು ನಿಂತು ಮೌನ ಪ್ರತಿಭಟನೆ ಮಾಡುತ್ತಿದ್ದಾರೆ.
ಅವರ ಪ್ರಕಾರ ಈ ಜಾಕ್ ವೆಲ್ ಅಪರೂಪದ ವನ್ಯ ಜೀವಿ ಸಂಕುಲಕ್ಕೆ ಕಂಟಕ ಪ್ರಾಯವಾಗಲಿದೆ. ಈ ಕಾಮಗಾರಿಯನ್ನು ಇಲ್ಲಿ ಸ್ಥಗಿತಗೊಳಿಸಿ ಬೇರೆ ಪ್ರದೇಶದಲ್ಲಿ ಆರಂಭಿಸಬಹುದು ಎಂಬುದು ನಿಸರ್ಗ ಪ್ರೇಮಿಗಳ ಆಶಯ.
ಯಾಕೆ? ಇಲ್ಲಿ ಏಕೆ ಬೇಡ?
ತುಂಗಭದ್ರಾ ನದಿ ತೀರದ ಇದೇ ಭಾಗದಲ್ಲಿ ಬರುವ ಕೆಲವು ಪ್ರದೇಶಗಳನ್ನು ನೀರು ನಾಯಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ವನ್ಯ ಜೀವಿ ಮಂಡಳಿಯಿಂದ ಆಕ್ರಮವಾಗಿ ಕಾಮಗಾರಿ ಕೈಗೊಂಡಿದ್ದು ಇದು 1972 ರ ವನ್ಯ ಜೀವಿ ಕಾಯ್ದೆಯ ಉಲ್ಲಂಘನೆಯಾಗಿದ್ದು ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಬೇಕು.
ಈ ಜಲಾಯನ ಪ್ರದೇಶದಲ್ಲಿ ಏನೇನಿವೆ?
ಈ ಜಲಾಯನ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಮೊಸಳೆಗಳು, ನೀರು ನಾಯಿಗಳು, ಆಮೆಗಳು ಹಾಗೂ ವಿವಿಧ ಪ್ರಭೇದದ ಮೀನುಗಳು ವಾಸಿಸುತ್ತಿವೆ ಹಾಗೂ ಸಂತಾನೋತ್ಪತ್ತಿ ಮಾಡುತ್ತಿವೆ. ಇಲ್ಲಿ ವಿವಿಧ ಬಗೆಯ ಏಡಿಗಳಿವೆ. ಇಂತಹ ಪ್ರದೇಶದಲ್ಲಿ ಜಾಕ್ ವೆಲ್ ನಿರ್ಮಾಣ ಮಾಡುವುದರಿಂದ ಈ ಜಲಚರಗಳು ನಶಿಸಿಹೋಗುತ್ತವೆ. ಇವುಗಳನ್ನೆಲ್ಲ ಕಾಪಾಡುವುದು ವನ್ಯಜೀವಿ ಪ್ರೇಮಿಗಳಷ್ಟೇ ಅಲ್ಲ, ಎಲ್ಲ ಸಾರ್ವಜನಿಕರ ಕರ್ತವ್ಯವೂ ಆಗಿದೆ.
ಈ ಪ್ರತಿಭಟನೆಯ ಸುದ್ದಿ ತಿಳಿದ ತಕ್ಷಣ ಬಳ್ಳಾರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಂಗಳವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ವನ್ಯಜೀವಿ ಪ್ರೇಮಿಗಳಿಂದ ಮನವಿ ಸ್ವೀಕರಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ವನ್ಯ ಜೀವಿ ಸಂಶೋಧಕ ಡಾ ಸಮದ್ ಕೊಟ್ಟೂರ ಇದು ವಿವಿಧ ಬಗೆಯ ಜಲಚರಗಳು ವಾಸಿಸುವ ಅದ್ಭುತ ಪ್ರದೇಶ. ಇಲ್ಲಿರುವ ಜಲಚರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕೆಲಸ. ವನ್ಯ ಜೀವಿಗಳನ್ನು ನಾಶಪಡಿಸಿ ಯೋಜನೆ ಪ್ರಾರಂಭಿಸುವ ಅಗತ್ಯವಾದರೂ ಏನಿದೆ. ಮೊದಲು ಜಲಚರಗಳ ರಕ್ಷಣೆ ಮುಖ್ಯ. ಈ ಕಾರ್ಯವನ್ನು ಶಿವಪುರ ಆಣೆಕಟ್ಟಿನಿಂದ ಮಾಡಿದರೆ ಯಾವುದೇ ತೊಂದರೆಗಳು ಇರುವುದಿಲ್ಲ”.
ಎಲ್ಲಿದೆ ಇದು?
ನೀರು ನಾಯಿ ಸಂರಕ್ಷಿತ ಪ್ರದೇಶವು ಮುದ್ಲಾಪುರ ಗ್ರಾಮದಿಂದ ಬಳ್ಳಾರಿಯ ಕಂಪ್ಲಿವರೆಗೂ 34 ಕಿ.ಮೀಗಳಷ್ಟು ಉದ್ದ ಜಲಾಯನ ಪ್ರದೇಶ. ಇದು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಇದೆ. ಈ ಪ್ರದೇಶದಲ್ಲಿ ಕಂಡು ಬರುವ ನೀರು ನಾಯಿಗಳನ್ನು ರಕ್ಷಿಸುವ ಉದ್ದೇಶದಿಂದ ಇದನ್ನು ಸಂರಕ್ಷಿತ ಪ್ರದೇಶದ ಪಟ್ಟಿಗೆ ಸೇರಿಸಲಾಯಿತು. ಇಲ್ಲಿ ಮೀನುಗಾರರು ಮೀನು ಹಿಡಿಯುವುದಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಜಲಾಯನದ ಪ್ರದೇಶ ಉದ್ದವಾಗಿರುವುದರಿಂದ ಇಲ್ಲಿ ಮೀನು ಹಿಡಿಯುವವರನ್ನು ತಡೆಯುವುದೇ ಅರಣ್ಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೂ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಾರ್ವಜನಿಕರ ಸಹಯೋಗದಿಂದ ಅರಣ್ಯ ಸಿಬ್ಬಂದಿಗಳು ಜಲಚರಗಳನ್ನು ರಕ್ಷಿಸುತ್ತ ಬಂದಿರುವುದು ಸ್ವಾಗತಾರ್ಹ.
ಕೊಪ್ಪಳದ ಅರಣ್ಯಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳುವ ಪ್ರಕಾರ, “ಕೆಲವು ಜಲಾನಯನ ಪ್ರದೇಶಗಳು ಅರಣ್ಯ ಇಲಾಖೇಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದನ್ನು ಕೊಪ್ಪಳದ ಜಿಲ್ಲಾಧಿಕಾರಗಳ ಜೊತೆಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಲ್ಲ ವಿವರಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು”.
ಇಲ್ಲಿರುವ ನೀರು ನಾಯಿಗಳ ಸಂರಕ್ಷಣೆಯ ಕೂಗು ಇಂದಿನದಲ್ಲ. ಮೊದಲು ಸಿಂಧನೂರ ಕಡೆಗೆ ವಲಸೆ ಬಂದು ಕೆಲವು ಜನರು ಇವುಗಳನ್ನು ಬೇಟೆಯಾಡುತ್ತಿದ್ದರು. ಅದ್ಕಕೆ ಈಗ ಸಾಕಷ್ಟು ಕಡಿವಾಣ ಹಾಕಲಾಗಿದೆ. ಆದರು ಹೊಂಚು ಹಾಕಿ ಸಂಚು ಮಾಡಿ ಇವುಗಳನ್ನು ಕೊಲ್ಲುತ್ತಿದ್ದಾರೆ. ಇದರ ಬಗ್ಗೆ ವನ್ಯ ಜೀವಿ ಪ್ರೇಮಿಗಳು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ನೀರಿನ ಯೋಜನೆ ಒಂದು ಇಲ್ಲಿ ಬಂದರೆ ಅವುಗಳಿಗೆ ಹಾನಿಯಾಗುವುದಂತೂ ಖಚಿತ. ಇವುಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೂ ಅಲ್ಲವೇ….
ಗದಗ ಜಿಲ್ಲೆಯ ಮಂಜುನಾಥ ನಾಯಕ, ಜೀವಿ ಸಂಶೋಧಕರ ಅಭಿಪ್ರಾಯ, “ಗಂಗಮ್ಮನ ಮಡುಗು ,ಕರಿಯಮ್ಮನ ಮಡುಗು ಹಾಗೂ ಜೋಗೆಮ್ಮನ ಮಡುಗು ಈ ಪ್ರದೇಶವು ಕೊಪ್ಪಳ ಜಿಲ್ಲೆಯ ಹುಲಿಗಿ ಭಾಗದಲ್ಲಿ ಕಂಡು ಬರುವ ಐತಿಹಾಸಿಕ ಹಾಗು ನೀರು ನಾಯಿ ಸಂರಕ್ಷಿತ ಪ್ರದೇಶ. ಮೊಸಳೆ ,ನೀರುನಾಯಿ , ಆಮೆಗಳು ,ಹಾವುಗಳ ಹಾಗು ಇನ್ನಿತರ ಜಲಚರಗಳು ಕಂಡು ಬರುವ ವಿಶಿಷ್ಟ ತಾಣ. ಸರಕಾರವು ಇಂತಹ ಸಂರಕ್ಷಿತ ಪ್ರದೇಶದಿಂದಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಕೈಗೊಂಡಿರುವದು ವಿಪರ್ಯಾಸ”.
ಬಳ್ಳಾರಿ ಜಿಲ್ಲೆಯ ವನ್ಯ ಜೀವಿ ಪ್ರೇಮಿ ಪಂಪಯ್ಯ ಮಳೀಮಠ “ನಮಗೆ ನೀರಿನ ಯೋಜನೆಯ ಬಗ್ಗೆ ಯಾವುದೇ ತಕರಾರಿಲ್ಲ. ಆ ಯೋಜನೆಯ ಪ್ರದೇಶವನ್ನು ಬದಲಿಸಿ ಜಲಚರಗಳಿಗೆ ಅನುಕೂಲ ಮಾಡಿದರೆ ಸಾಕು ಎಂಬುದಷ್ಟೇ ನಮ್ಮ ಆಶಯ”.
ಮುಂದೇನು ಮಾಡುವರು:
ಕೊಪ್ಪಳ ಮತ್ತು ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಈ ಯೋಜನೆ ಸ್ಥಗಿತ ಗೊಳಿಸುವರೇ…..ಜಲಚರ ಜೀವಿಗಳನ್ನು ಉಳಿಸಲು ಸಹಕರಿಸುವರೇ…..ಯೋಜನೆಯನ್ನು ಬೇರೆಡೆ ಸ್ಥಳಾಂತರಿಸುವರೆ ಕಾದು ನೋಡೋಣ…ಒಟ್ಟಿನಲ್ಲಿ ಜಲಚರ ಜೀವಿಗಳಿಗೆ ಹಾನಿಯಾಗಬಾರದು….ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಬೇಕು ಹಾಗೂ ಕೆರೆಗಳನ್ನೂ ಭರ್ತಿ ಮಾಡಬೇಕು…ಇದೇ ಅಧಿಕಾರಿಗಳಿಗೆ ಮುಂದಿರುವ ಸವಾಲ್…ಅವರೂ ಸಭೆ ಸೇರಿ ಯೋಚಿಸಲಿ.., ಸೂಕ್ತ ತೀರ್ಮಾನ ತೆಗೆದುಕೊಂಡು ನಮಗೂ ತಿಳಿಸಲಿ ಎಂದು ಕಾಯೋಣ……