ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆಯಿಂದ ರಾಜ್ಯ ಬಿಜೆಪಿಯಲ್ಲಿ ವಿಸ್ತರಣೆಯಾಗಿರುವ ಭಿನ್ನಮತ ಶಮನ ಮಾಡು ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂದು ಘೋಷಿಸಿದರು. ಆದರೆ, ಅವರ ಈ ಹೇಳಿಕೆ ಭಿನ್ನಮತ ಶಮನ ಮಾಡುವ ಬದಲು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದುವರೆಗೆ ಸಚಿವ ಸ್ಥಾನಕ್ಕೆ ಮಾತ್ರ ಲಾಬಿ ನಡೆಯುತ್ತಿದ್ದರೆ, ಈ ಹೇಳಿಕೆ ಬಳಿಕ ಇರುವ ಸಚಿವ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಕೆಲಸವೂ ಶುರುವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಜನರ ಅನುಕಂಪ ಗಿಟ್ಟಿಸುವ ಹೇಳಿಕೆಗಳನ್ನು ಈಗಾಗಲೇ ನೀಡಲಾರಂಭಿಸಿದ್ದಾರೆ. ಈ ಮಧ್ಯೆ ಹಿರಿಯರು ಸೇರಿದಂತೆ ಬಹುತೇಕ ಸಚಿವರು ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳುವ ಇಲ್ಲವೇ ಹೊಗಳುವ ಮೂಲಕ ಅವರ ಗಮನ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈಗಾಗಲೇ ಸಂಪುಟ ವಿಸ್ತರಣೆ ಕುರಿತಂತೆ ಉದ್ಭವವಾಗಿರುವ ಭಿನ್ನಮತ, ಪ್ರಮುಖ ಖಾತೆಗಳಿಗಾಗಿ ಹೆಚ್ಚುತ್ತಿರುವ ಲಾಬಿ ಮಧ್ಯೆ ಒದ್ದಾಡುತ್ತಿರುವ ಯಡಿಯೂರಪ್ಪ ಅವರಿಗೆ ಸಚಿವರ ಈ ನಡವಳಿಕೆ ಇರುಸು ಮುರುಸು ತರುತ್ತಿದೆ. ಇದಲ್ಲದೆ, ಇನ್ನಷ್ಟು ಶಾಸಕರು ಸಚಿವರಾಗುವ ಆಕಾಂಕ್ಷೆಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.
ಮಂತ್ರಿ ಮಂಡಲ ವಿಸ್ತರಣೆ ಸಂದರ್ಭದಲ್ಲೇ ಸಚಿವ ಸಂಪುಟ ಪುನಾರಚನೆ ಮಾತು ಕೇಳಿಬರುತ್ತಿತ್ತು. ಆದರೆ, ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಗೆದ್ದ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿ ಪ್ರತ್ಯೇಕ ಸಭೆ ನಡೆಸುವ ಮಟ್ಟಕ್ಕೆ ತಲುಪಿದಾಗ ಪುನಾರಚನೆ ಮಾತು ನಿಂತುಹೋಗಿತ್ತು. ತಮ್ಮ ಸ್ಥಾನ ಕಳೆದುಕೊಳ್ಳಬೇಕಾಗುತ್ತದೋ ಎಂಬ ಆತಂಕದಲ್ಲಿದ್ದ ಸಚಿವರು ನಿರಾಳರಾಗಿದ್ದರು. ಆದರೆ, ಸಂಪುಟ ವಿಸ್ತರಣೆ ವೇಳೆ ಅರ್ಹ ಹತ್ತು ಶಾಸಕರಿಗೆ ಮಾತ್ರ ಮಣೆ ಹಾಕಿ ಮೂಲ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡದ ಬಗ್ಗೆ ಪ್ರತಿಕ್ರಿಯಿಸಿದ್ದ ನಳಿನ್ ಕುಮಾರ್ ಕಟೀಲ್, ಶೀಘ್ರವೇ ಮುಖ್ಯಮಂತ್ರಿಗಳು ಸಂಪುಟ ಪುನನಾರಚನೆ ಮಾಡಲಿದ್ದು, ಆಗ ಅನೇಕರಿಗೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ನಿರಾಶರಾಗಿ ಕುಳಿತಿದ್ದವರನ್ನು ಎಬ್ಬಿಸಿ ಲಾಬಿ ಮುಂದುವರಿಸುವಂತೆ ಮಾಡಿದೆ.
ಸಮಸ್ಯೆ ಬಗೆಹರಿದರಷ್ಟೇ ಮತ್ತೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ
ಪ್ರಸ್ತುತ ಯಡಿಯೂರಪ್ಪ ಅವರ ಸಚಿವ ಸಂಪುಟ ಸದಸ್ಯರ ಸಂಖ್ಯೆ (ಮುಖ್ಯಮಂತ್ರಿಗಳು ಸೇರಿ) 28 ಆಗಿದ್ದು, ಇನ್ನು ಆರು ಸ್ಥಾನಗಳು ಖಾಲಿಯಿವೆ. 28 ಸಚಿವರ ಪೈಕಿ ಏಳು ಮಂದಿ ಬೆಂಗಳೂರಿನವರಾಗಿದ್ದರೆ, ನಾಲ್ವರು ಬೆಳಗಾವಿ ಜಿಲ್ಲೆಯವರು. ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಿಗೆ ತಲಾ ಎರಡು ಸಚಿವ ಸ್ಥಾನ ಸಿಕ್ಕಿದ್ದರೆ, 13 ಜಿಲ್ಲೆಗಳಿಗೆ ತಲಾ ಒಂದು ಸ್ಥಾನ ಬಂದಿದೆ. ಇನ್ನು ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೌಡಗು, ಮೈಸೂರು, ದಕ್ಷಿಣ ಕನ್ನಡ, ಹಾಸನ, ವಿಜಯಪುರ ಮತ್ತು ದಾವಣಗೆರೆ (13) ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿಲ್ಲ. ಇದು ಪ್ರಾದೇಶಿಕ ಅಸಮತೋಲನದ ಆರೋಪವನ್ನು ಯಡಿಯೂರಪ್ಪ ಅವರ ಸರ್ಕಾರದ ಮೇಲೆ ಹೊರಿಸಿದೆ. ಸಂಪುಟ ವಿಸ್ತರಣೆ ವೇಳೆ ಈ ಭಾಗಕ್ಕೆ ಸಚಿವ ಸ್ಥಾನ ನೀಡಲೇ ಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.
ಇನ್ನು ಜಾತೀವಾರು ಲೆಕ್ಕಾಚಾರದಲ್ಲೂ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ 28 ಮಂದಿ ಪೈಕಿ ಒಂಬತ್ತು ಮಂದಿ ವೀರಶೈವ ಲಿಂಗಾಯತರಿದ್ದರೆ, ಒಕ್ಕಲಿಗರು ಏಳು ಮಂದಿ, ಪರಿಶಿಷ್ಟ ಜಾತಿ- 3, ಕುರುಬ- 2, ಪರಿಶಿಷ್ಟ ಪಂಗಡ- 2, ಬ್ರಾಹ್ಮಣ- 2, ಈಡಿಗ, ಮರಾಠ ಮತ್ತು ರಜಪೂತ ಸಮಾಜಕ್ಕೆ ತಲಾ ಒಂದು ಸಚಿವ ಸ್ಥಾನ ನೀಡಲಾಗಿದೆ. ಅಂದರೆ, ಜಾತಿವಾರು ಲೆಕ್ಕಾಚಾರದಲ್ಲೂ ಲಿಂಗಾಯತರು ಮತ್ತು ಒಕ್ಕಲಿಗರೇ ಅರ್ಧಕ್ಕಿಂತ ಹೆಚ್ಚಿನ ಸ್ಥಾನ ಪಡೆದಿದ್ದು, ಇತರೆ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗೂ ಕೇಳಿಬರುತ್ತಿದೆ.
ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವಾಗ ಪ್ರಾದೇಶಿಕವಾರು ಮತ್ತು ಜಾತಿವಾರು ಆಗಿರುವ ಅನ್ಯಾಯವನ್ನು ಸರಪಡಿಸಬೇಕು ಎಂಬ ಒತ್ತಡವನ್ನು ಆಯಾ ಭಾಗ ಮತ್ತು ಸಮುದಾಯದ ಶಾಸಕರು ಹಾಕುತ್ತಿದ್ದಾರೆ. ಈ ಮಧ್ಯೆ ಲಿಂಗಾಯತರಿಗೆ ಅತಿ ಹೆಚ್ಚು (9) ಸ್ಥಾನ ಸಿಕ್ಕಿದರೂ ಅದರಲ್ಲಿರುವ ಒಳಪಂಗಡಗಳಲ್ಲಿ ಅದು ಹಂಚಿಕೆಯಾಗಿಲ್ಲ. ಹೀಗಾಗಿ ನಮ್ಮ ಪಂಗಡಕ್ಕೆ ನೀಡಬೇಕು ಎಂಬ ಆಗ್ರಹ ಆ ಪಂಗಡದ ಶಾಸಕರು ಮತ್ತು ಸ್ವಾಮೀಜಿಗಳಿಂದ ಕೇಳಿಬರುತ್ತಿದೆ. ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಿದ ಬಳಿಕವೇ ಸಂಪುಟ ವಿಸ್ತರಣೆ ಮಾಡಿ ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಬೇಕೇ ಅಥವಾ ಪುನಾರಚನೆ ಮಾಡಿ ಕೆಲವರನ್ನು ಕೈಬಿಟ್ಟು ಆ ಜಾಗಕ್ಕೆ ಹೊಸಬರನ್ನು ಸೇರಿಸಿಕೊಳ್ಳಬೇಕೇ ಎಂಬುದು ನಿರ್ಧಾರವಾಗಲಿದೆ. ಒಂದು ವೇಳೆ ಸಮಸ್ಯೆ ಬಗೆಹರಿದರೆ ಮಾರ್ಚ್ 5ರ ಬಜೆಟ್ ಅಧಿವೇಶನಕ್ಕೆ ಮುನ್ನ ಮತ್ತೊಮ್ಮೆ ಸಂಪುಟ ವಿಸ್ತರಣೆಯಾಗಬಹುದು ಇಲ್ಲವೇ ಪುನಾರಚನೆ ಕಾಣಬಹುದು. ಇಲ್ಲವಾದಲ್ಲಿ ಜೂನ್ ತಿಂಗಳವರೆಗೆ ಪರಿಸ್ಥಿತಿ ಇದೇ ರೀತಿ ಮುಂದುವರಿಯಲಿದೆ.
ಅಪ್ಪ-ಮಗನ ಜಂಟಿ ಕಾರ್ಯಾಚರಣೆ
ಪ್ರಸ್ತುತ ಉದ್ಭವವಾಗಿರುವ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಪುತ್ರ ಬಿ.ವೈ.ವಿಜಯೇಂದ್ರ ಕೂಡ ಕಣಕ್ಕಿಳಿದ್ದಿದ್ದು, ಹೈಕಮಾಂಡ್ ನಾಯಕರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುವಾರ ಸಂಪುಟ ವಿಸ್ತರಣೆ ಬೆನ್ನಲ್ಲೇ ವಿಜಯೇಂದ್ರ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ವಿದ್ಯಮಾನಗಳನ್ನು ಅವರ ಗಮನಕ್ಕೆ ತಂದಿದ್ದಾರೆ. ಯಾಕಾಗಿ ಸಮಸ್ಯೆ ಉದ್ಭವವಾಗಿದೆ? ಅದನ್ನು ಬಗೆಹರಿಸಲು ಏನೇನು ಮಾಡಬಹುದು? ಅಸಮಾಧಾನಗೊಂಡಿರವವರನ್ನು ಯಾರ ಮೂಲಕ ಸಮಾಧಾನಪಡಿಸಬಹುದು? ಹೇಗೆಲ್ಲಾ ಸಮಾಧಾನಪಡಿಸಲು ಸಾಧ್ಯ? ಎಂಬಿತ್ಯಾದಿ ಅಂಶಗಳನ್ನು ವಿಜಯೇಂದ್ರ ಅವರು ರಾಷ್ಟ್ರೀಯ ನಾಯಕರಿಗೆ ವಿವರಿಸಿದ್ದಾರೆ. ಇದರ ಆಧಾರದ ಮೇಲೆ ವರಿಷ್ಠರು ಒಂದು ಕಾರ್ಯತಂತ್ರವನ್ನು ರೂಪಿಸಲಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಕುಳಿತಿರುವ ವಿಜಯೇಂದ್ರ ಅವರು ತಂದೆಯ ಪರವಾಗಿ ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇರುವ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಸಭೆ ಮಾಡಿದ್ದ ಶಾಸಕರ ಗುಂಪಿನಲ್ಲಿದ್ದ ಒಬ್ಬೊಬ್ಬರೇ ತಣ್ಣಗಾಗುವ ಲಕ್ಷಣ ಕಾಣಿಸುತ್ತಿದೆ. ಈಗಾಗಲೇ ಎಂ.ಪಿ.ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ಬ್ಯಾಟ್ ಬೀಸುವ ಮೂಲಕ ಅಪ್ಪ-ಮಗನ ಜಂಟಿ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಭಿನ್ನಮತ ನಿಧಾನವಾಗಿ ಶಮನವಾಗುವ ಸಾಧ್ಯತೆ ಇದೆ.