ವನ್ಯಜೀವಿಗಳು ಸ್ವಚ್ಛಂಧ ಪರಿಸರದಲ್ಲಿ ಎಷ್ಟು ದೂರ ನಡೆಯಬಹುದು, ಹೇಗೆ ವಿರಮಿಸಬಹುದು..? ಆನೆಗಳು ಕಾರಿಡಾರ್ ಮೂಲಕ ನೂರಾರು ಕಿಲೋಮೀಟರ್ ಸಾಗಿ ಬರುತ್ತವೆಯಂತೆ ಎಂಬುದಷ್ಟೇ ಗೊತ್ತಿದೆ, ಆದರೆ ಹುಲಿ ಎರಡು ಸಾವಿರ ಕಿಲೋಮೀಟರ್ ಸಾಗಿದರೆ ಹೇಗಿರಬೇಕು..? ಅಷ್ಟು ಸುದೀರ್ಘ ಪಯಣದಲ್ಲಿ ಹಳ್ಳಿ, ಹೊಲ-ಗದ್ದೆ, ಬೆಟ್ಟ-ಗುಡ್ಡಗಳೆಲ್ಲಾ ಇರುತ್ತವೆ, ಆದರೆ ಎಲ್ಲೂ ತೊಂದರೆ ನೀಡಿಲ್ಲವಂತೆ..! ಹೀಗೊಂದು ಟ್ವಿಟ್ಟರ್ ಪೋಸ್ಟ್ ಕಳೆದ ವಾರ ಸಾಕಷ್ಟು ಸುದ್ದಿಯಲ್ಲಿತ್ತು. ಭಾರತೀಯ ಅರಣ್ಯ ಸೇವೆಯಲ್ಲಿರುವ ಪರ್ವೀನ್ ಕಸ್ವಾನ್ ಇಂತಹ ಅಚ್ಚರಿಗಳನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಹಂಚಿಕೊಳ್ಳುತ್ತಿರುತ್ತಾರೆ.
ಇವರು ಬರೆದುಕೊಂಡಂತೆ ಹುಲಿಯೊಂದು ಸಂಗಾತಿಯನ್ನರಸಿ ಸುಮಾರು ಎರಡು ಸಾವಿರ ಕಿಲೋಮೀಟರ್ ರಸ್ತೆ, ಕಾಡು, ಕಂದರಗಳಲ್ಲಿ ಸಾಗಿ ಕೊನೆಗೆ ಮಹಾರಾಷ್ಟ್ರದ ಜ್ಞಾನಗಂಗಾ ರಕ್ಷಿತಾರಣ್ಯಕ್ಕೆ ತಲುಪಿದೆ. ಈ ಸುದೀರ್ಘ ಪ್ರಯಾಣದಲ್ಲಿ ಯಾರಿಗೂ ತೊಂದರೆ ನೀಡಿಲ್ಲ, ಹಗಲು ವಿಶ್ರಾಂತಿ ಪಡೆದು ರಾತ್ರಿಯಾಗುತ್ತಿದ್ದಂತೆ ಪಯಣ ಆರಂಭಿಸುತ್ತಿತ್ತು. ಹೀಗೆ ಸಾಗಿದ ಹುಲಿಯನ್ನ ರೇಡಿಯೋ ಕಾಲರ್ ಮೂಲಕ ಚಲನವಲನಗಳನ್ನ ದಾಖಲು ಮಾಡಲಾಗಿದೆ.
ಇದೇನೂ ಹೊಸ ಪ್ರಯಾಣವೇನು ಅಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹುಲಿಗಳ ಯಾನವನ್ನ ದಾಖಲಿಸಲಾಗಿದೆ. ಒಮ್ಮೆ ರೇಡಿಯೋ ಕಾಲರ್ನ್ನ ಅಳವಡಿಸಿದರೆ ಒಂಭತ್ತು ತಿಂಗಳ ನಂತರ ತೆಗೆಯುತ್ತಾರೆ, ಅದರ ಬ್ಯಾಟರಿ ಬಾಳಿಕೆ ಅಷ್ಟರಲ್ಲಿ ಮುಗಿದಿರುತ್ತೆ. ಈ ಮಧ್ಯೆ ಈ ಕಾಲರ್ ಸಂದೇಶಗಳನ್ನ ಆಧರಿಸಿ ಜಿಪಿಎಸ್ ಮೂಲಕ ಅದರ ಸ್ಥಳವನ್ನ ದಾಖಲಿಸುತ್ತಾ ಹೋಗುತ್ತಾರೆ. ಹೀಗೆ ನಿರಂತರವಾಗಿ ಏಳು ತಿಂಗಳ ನಂತರ ಈ ಗಂಡು ಹುಲಿ ಎರಡು ಸಾವಿರ ಕಿಲೋಮೀಟರ್ ಸಾಗಿ ಬಂದಿದೆ. ಜ್ಞಾನಗಂಗಾ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 2016ರಲ್ಲಿ ಈ ರೀತಿ ರೇಡಿಯೋ ಕಾಲರ್ ಅಳವಡಿಕೆ ಶುರುಮಾಡಲಾಗಿದೆ. ಇಲ್ಲಿನ ವಿಭಾಗೀಯ ಅರಣ್ಯಾಧಿಕಾರಿ ಹೇಳುವಂತೆ ಹುಲಿಗಳ ಸ್ವಭಾವವನ್ನ ನಿರ್ಧರಿಸಲು ಸಾಧ್ಯವಿಲ್ಲ, ಹುಲಿಗಳು ತನ್ನ ಸರಹದ್ದನ್ನು ಗುರುತಿಸಿಕೊಳ್ಳುವುದು ನಿಜ, ಆದರೆ ಗಂಡು ಹುಲಿ ಸಾಕಷ್ಟು ದೂರು ಪ್ರಯಾಣ ಮಾಡುತ್ತದೆ. ಕೆಲವೊಮ್ಮೆ ಸೂಕ್ತ ಸಂಗಾತಿಯನ್ನ ಹುಡುಕಿಕೊಂಡು, ಕೆಲವೊಮ್ಮೆ ಆಹಾರವನ್ನ ಹುಡಿಕಿಕೊಂಡು ಸಾಗುತ್ತದೆ. ಕಳೆದ ವರ್ಷ ಎರಡೂವರೆ ವರ್ಷದ ಹುಲಿಯೊಂದು (ಟಿ1ಸಿ1) ಜೂನ್ನಿಂದ ಡಿಸೆಂಬರ್ವರೆಗೆ ತೆಲಂಗಾಣದಿಂದ ಗಡಿದಾಟಿ ಮಹಾರಾಷ್ಟ್ರದ ತಿಪ್ಪೇಶ್ವರ ಅರಣ್ಯ ಪ್ರದೇಶದಕ್ಕೆ ಸೇರಿತ್ತು. ಅಲ್ಲಿಂದ ಜ್ಞಾನಗಂಗಾ ಅರಣ್ಯಕ್ಕೆ ತಲುಪಿತ್ತು. ಒಟ್ಟು ಸುಮಾರು 1,300 ಕಿಲೋಮೀಟರ್ ಕ್ರಮಿಸಿ ಎಲ್ಲರನ್ನ ಅಚ್ಚರಿ ಮೂಡಿಸಿತ್ತು ಎನ್ನುತ್ತಾರೆ.
ಹುಲಿಗಳ ಸಾಂದ್ರತೆ ಹೆಚ್ಚಾದಂತೆ ಗಂಡು ಹುಲಿಗಳು ಹೊಸ ಸರಹದ್ದನ್ನ ಮಾಡಿಕೊಂಡು ಮುನ್ನಡೆಯುತ್ತವೆ. ತಾವು ಸಾಗುವ ದಾರಿಯಲ್ಲಿ ಹೆಣ್ಣು ಹುಲಿಗಳು ಸಿಗದಿದ್ದರೆ ಪ್ರಯಾಣವನ್ನ ಮೊಟಕುಗೊಳಿಸುವುದಿಲ್ಲ, ಅಥವಾ ಕಾಯುತ್ತಾ ಕೂರುವುದಿಲ್ಲ. ಮಹಾರಾಷ್ಟ್ರದ ಜ್ಞಾನಗಂಗಾ ಪ್ರದೇಶವೂ ಸಹ ಅಭಯಾರಣ್ಯಗಳ ಪ್ರದೇಶ. ತೆಲಂಗಾಣದಿಂದಲೂ ಹುಲಿಗಳು ಗಡಿದಾಡಿ ಈಚೆಗೆ ಸಾಗುತ್ತವೆ. ಈ ಪ್ರದೇಶದಲ್ಲಿ ವ್ಯಾಘ್ರಗಳ ಮಹಾಯಾನ ನಿರಂತರವಾಗಿ ದಾಖಲಾಗುತ್ತಿದೆ. ಹುಲಿಗಳ ಸಂತತಿ ವಿಶ್ವದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಒಟ್ಟು ನಾಲ್ಕು ಸಾವಿರ ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ಅದರಲ್ಲೂ ನಿಷೇಧಿತ ಪ್ರದೇಶಗಳಲ್ಲಿವೆ.
ಕಳೆದ ನಾಲ್ಕು ವರ್ಷಗಳಲ್ಲಿ ಹುಲಿ ಸಂತತಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ ಮಾಹಿತಿ ನೀಡಿದೆ. ಈಗ ಹುಲಿಗಳು ಗಡಿಗಳನ್ನ ದಾಟಿ, ಜನರಿಗೂ ತೊಂದರೆ ನೀಡದೇ ಧೀರ್ಘ ಪ್ರಯಾಣ ಬೆಳೆಸುತ್ತಿರುವುದರ ಬಗ್ಗೆ ವರದಿಗಳು ಬಂದಿರುವುದು ಸಂತಸದ ವಿಚಾರ.
ರೇಡಿಯೋ ಕಾಲರ್ಗಳನ್ನ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತೆ. ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡದಿರುವಂತೆ ತಡೆಯಲೂ ಸಹ ಇದರ ಬಳಕೆಯಾಗಿದೆ. ಮೂರು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಸೆರೆಹಿಡಿದ ಒಂಟಿ ಸಲಗವನ್ನ ಶಿವಮೊಗ್ಗ ಸಕ್ರೆಬೈಲ್ಗೆ ತಂದಿದ್ದರು, ಸಾಧು ಸ್ವಭಾವದ ಆನೆಯನ್ನ ಬಿಡಾರದಲ್ಲಿ ಇಟ್ಟುಕೊಳ್ಳುವುದರ ಬದಲು ಕಾಡಿಗೆ ಬಿಡುವ ಹಾಗೂ ಅದನ್ನ ಕೆಲವು ಸಮಯ ರೇಡಿಯೋ ಕಾಲರ್ ಮೂಲಕ ಸ್ಯಾಟಲೈಟ್ ಸಂಪರ್ಕಕ್ಕೆ ತಂದು ಮೊಬೈಲ್ ಅಪ್ಲಿಕೇಷನ್ನಲ್ಲಿ ಅದರ ಇರುವಿಕೆಯನ್ನ ಗಮನಿಸುವ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಕೆಲವು ರೇಡಿಯೋ ಕಾಲರ್ಗಳನ್ನ ಪ್ರಾಯೋಗಿಕವಾಗಿ ಆನೆಗಳಿಗೆ ಅಳವಡಿಸುವ ಕೆಲಸವೂ ನಡೆದಿದೆ. ಒಟ್ಟಾರೆ ಹುಲಿಯ ಯಾನದ ಬಗ್ಗೆ ಬೆರಗಿನಿಂದ ನೋಡುವುದಕ್ಕಿಂತ, ಇಷ್ಟು ದೂರ ಸಾಗಲು ಯೋಗ್ಯ ಪರಿಸರ ಇದೆಯಲ್ಲ ಎಂಬುದು ಹೆಮ್ಮೆಯ ವಿಷಯ.