‘ಕೋವಿಡ್-19’ ದೇಶದಲ್ಲಿ ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆ ಮತ್ತು ಅದರಿಂದಾಗುವ ಸಂಭವನೀಯ ಆರ್ಥಿಕ ನಷ್ಟದ ಆತಂಕ ಪೇಟೆಯಲ್ಲಿ ಆವರಿಸಿದ್ದು ಸೋಮವಾರ ಷೇರುಪೇಟೆಯಲ್ಲಿ ಮಾರಣಹೋಮ ಮುಂದುವರೆದಿದೆ. ವಹಿವಾಟು ಆರಂಭವಾಗುತ್ತಲೇ ತ್ವರಿತವಾಗಿ ಸೆನ್ಸೆಕ್ಸ್ ಶೇ.10ರಷ್ಟು ಕುಸಿತ ದಾಖಲಿಸಿದ ಪರಿಣಾಮ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಯಿತು. ಕಳೆದೊಂದು ವಾರದಲ್ಲಿ ತ್ವರಿತ ಮಾರುಕಟ್ಟೆ ಕುಸಿತದ ಪರಿಣಾಮ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸುತ್ತಿರುವುದು ಇದು ಎರಡನೇ ಬಾರಿ. ಸೆನ್ಸೆಕ್ಸ್ 2991.85 ಅಂಶಗಳಷ್ಟು ಅಂದರೆ ಶೇ.10 ರಷ್ಟು ಕುಸಿತ ದಾಖಲಿಸಿ, 26924.11ಕ್ಕೆ ಇಳಿಯಿತು. ನಿಫ್ಟಿ 842.45 ಅಂಶಗಳಷ್ಟು ಅಂದರೆ ಶೇ.9.63ರಷ್ಟು ಕುಸಿಯಿತು. 45 ನಿಮಿಷಗಳ ನಂತರ ವಹಿವಾಟು ಪುನಾರಂಭಗೊಂಡರೂ ಚೇತರಿಕೆ ಕಾಣಲಿಲ್ಲ. ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.11ರಷ್ಟು ಕುಸಿದವು ಬ್ಲೂಚಿಪ್ ಷೇರುಗಳು ಸೇರಿದಂತೆ ಬಹುತೇಕ ಷೇರುಗಳು ಶೇ.5 ರಿಂದ 15ರಷ್ಟು ಕುಸಿತ ದಾಖಲಿಸಿದವು.
ಈ ನಡುವೆ ಸತತ ಕುಸಿತದ ಹಾದಿಯಲ್ಲಿರುವ ರುಪಾಯಿ ವಾರದ ಆರಂಭದ ವಹಿವಾಟಿನಲ್ಲಿ ಡಾಲರ್ ವಿರುದ್ಧ ಮತ್ತೊಮ್ಮೆ ಸರ್ವಕಾಲಿಕ ಕೆಳಮಟ್ಟಕ್ಕೆ ಇಳಿಯಿತು. ದಿನದ ಆರಂಭದಲ್ಲಿ ಶೇ.1.42ರಷ್ಟು ಅಂದರೆ 1.07 ಕುಸಿತ ದಾಖಲಿಸಿದ ರುಪಾಯಿ 76.18ರ ಮಟ್ಟದಲ್ಲಿ ವಹಿವಾಟು ನಡೆಸಿದೆ. ಇದೇ ಮೊದಲ ಬಾರಿಗೆ 76ರ ಮಟ್ಟಕ್ಕೆ ಕುಸಿದಿದೆ. ಜಾಗತಿಕ ಆರ್ಥಿಕ ಹಿಂಜರಿತದತ್ತ ದಾಪುಗಾಲು ಹಾಕುತ್ತಿರುವ ಈ ಹೊತ್ತಿನಲ್ಲಿ ಡಾಲರ್ ಹೆಚ್ಚು ಪ್ರಬಲವಾಗುತ್ತಿದೆ. ಉಳಿದ ಕರೆನ್ಸಿಗಳ ಮೌಲ್ಯಗಳು ಕುಸಿಯುತ್ತಿವೆ.
ಕಳೆದೆರಡು ವಾರಗಳಿಂತ ತೀವ್ರ ಏರಿಳಿತದಲ್ಲಿ ವಹಿವಾಟಾಗುತ್ತಿರುವ ಚಿನ್ನ ವಾರದ ಆರಂಭದಲ್ಲಿ ಶೇ.1ರಷ್ಟು ಏರಿಕೆ ದಾಖಲಿಸಿ 40,700 ಗಡಿದಾಟಿ ವಹಿವಾಟಾಗುತ್ತಿದೆ. ಬೆಳ್ಳಿ ಕೂಡಾ ಶೇ.1ರಷ್ಟು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರಿಳಿತ ಮುಂದುವರೆದಿದ್ದು, ಡಬ್ಲ್ಯೂಟಿಐ ಕ್ರೂಡ್ 22 ಡಾಲರ್ ಮತ್ತು ಬ್ರೆಂಟ್ ಕ್ರೂಡ್ 28 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿವೆ.

ಮಾರುಕಟ್ಟೆ ಮುಂದೇನು?
‘ಕೋವಿಡ್-19’ ನಿಯಂತ್ರಣಕ್ಕೆ ಬರುವವರೆಗೂ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ತೀವ್ರ ಮಾರಾಟ ಒತ್ತಡ ಇದ್ದು, ಸಣ್ಣ ಹೂಡಿಕೆದಾರರು ಮಾರುಕಟ್ಟೆಯಿಂದ ದೂರ ಇರುವಂತೆ ಹೂಡಿಕೆ ತಜ್ಞರು ಸಲಹೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಯಾವಾಗ ಸ್ಥಿರತೆ ಬರಲಿದೆ ಎಂಬುದರ ಬಗ್ಗೆ ಅಂದಾಜಿಸುವ ಧೈರ್ಯ ಯಾರಲ್ಲೂ ಇಲ್ಲವಾಗಿದೆ. ಹೂಡಿಕೆದಾರರಿಗೆ ಎಂದೂ ನಷ್ಟಮಾಡುವುದಿಲ್ಲ ಎಂದೇ ನಂಬಲಾಗಿದ್ದ ಬ್ಲೂಚಿಪ್ ಕಂಪನಿಗಳ ಷೇರುಗಳೇ ಸತತ ಕುಸಿತ ದಾಖಲಿಸುತ್ತಿವೆ. ನಿತ್ಯವೂ ಶೇ.10ರಷ್ಟು ಕುಸಿತ ದಾಖಲಿಸುತ್ತಿರುವ ಈ ಷೇರುಗಳ ಈಗಾಗಲೇ ಗರಿಷ್ಠ ಮಟ್ಟದಿಂದ ಶೇ.40ರಿಂದ 70 ರಷ್ಟು ಕುಸಿತ ದಾಖಲಿಸಿವೆ. ಆದರೂ ಮಾರುಕಟ್ಟೆಯಲ್ಲಿ ಖರೀದಿಗೆ ಉತ್ಸಾಹವಿಲ್ಲ.
ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಚೇತರಿಕೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿರೀಕ್ಷೆಯಲ್ಲಿ ಮಾರುಕಟ್ಟೆ ಇದೆ. ಆದರೆ, ಇದುವರೆಗೆ ಆರ್ಬಿಐ ನಗದು ಹರಿವಿಗೆ ಪೂರಕ ಕ್ರಮ ಕೈಗೊಂಡಿದೆಯಾದರೂ, ಬಡ್ಡಿದರ ಕಡಿತ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಭಾರತ ಸರ್ಕಾರದಿಂದಲೂ ‘ಕೋವಿಡ್-19’ ನಿಯಂತ್ರಣಕ್ಕೆ ಜನರಿಗೆ ಸೂಚನೆ ನೀಡುವುದು ಮತ್ತು ಸಾರ್ವಜನಿಕ ಸಂಚಾರ ವ್ಯವಸ್ಥೆ ರದ್ದು ಮಾಡುವ ಮುನ್ನೆಚ್ಚರಿಕೆ ಕ್ರಮದ ಹೊರತಾಗಿ ಹಣಕಾಸು ಪರಿಹಾರಗಳನ್ನು ಘೋಷಿಸಿಲ್ಲ. ‘ಕೋವಿಡ್-19’ ಹಾವಳಿ ಆರಂಭಗೊಂಡದಿನದಿಂದ ಇದುವರೆಗೆ ಆರ್ಥಿಕ ಸ್ಥಿತಿ ಹದಗೆಡುತ್ತಾ ಬಂದಿದೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ. ನಿರ್ಮಾಣ ಕಾಮಕಾರಿಗಳು ಮಂದಗತಿಯಲ್ಲಿದ್ದು, ಅವುಗಳೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದುವರೆಗೆ ಮಂದಗತಿಯಲ್ಲಿದ್ದ ಆರ್ಥಿಕತೆಯು ಹಿಂಜರಿತದತ್ತಾ ದಾಪುಗಾಲು ಹಾಕಲಾರಂಭಿಸಿದೆ. ಕೇಂದ್ರ ಸರ್ಕಾರ ಮತ್ತಷ್ಟು ತಡಮಾಡಿದರೆ, ಆರ್ಥಿಕತೆ ಚೇತರಿಕೆಗೆ ಧೀರ್ಘಕಾಲವೇ ಬೇಕಾಗಬಹುದು.

ಕೇಂದ್ರ ಸರ್ಕಾರ ಪರಿಹಾರ ಕ್ರಮಗಳನ್ನು ಘೋಷಿಸಲು ವಿಳಂಬ ಮಾಡುತ್ತಿರುವುದೇಕೆ ಎಂಬ ಬಗ್ಗೆ ಮಾರುಕಟ್ಟೆಯಲ್ಲಿ ಆತಂಕಭರಿತ ಅಚ್ಚರಿ ಇದೆ. ‘ಕೋವಿಡ್-19’ನಿಂದ ತೀವ್ರ ಹಾನಿ ಅನುಭವಿಸಿರುವ ಮತ್ತು ಅನುಭವಿಸುತ್ತಿರುವ ದೇಶಗಳು ಮುನ್ನೆಚ್ಚರಿಕೆ ಕ್ರಮಗಳ ಜತೆಗೆ ಆರ್ಥಿಕ ಪರಿಹಾರಗಳನ್ನು ಘೋಷಿಸಿವೆ. ಆ ಮೂಲಕ ಎರಡು ಮೂರು ವಾರ ಇಡೀ ದೇಶದಲ್ಲಿ ಚಟುವಟಿಕೆ ಸ್ಥಗಿತಗೊಂಡಾಗ ಆಗುವ ಆರ್ಥಿಕ ನಷ್ಟವನ್ನು ಭರಿಸುವ ಭರವಸೆಯನ್ನು ಮತ್ತು ತ್ವರಿತ ಚೇತರಿಕೆಗೆ ಪ್ರೋತ್ಸಾಹವನ್ನು ಘೋಷಿಸಿವೆ. ಭಾರತ ಸರ್ಕಾರ ಇನ್ನೂ ಆ ಕ್ರಮ ಕೈಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿ, ‘ಕೋವಿಡ್-19’ ವಿರುದ್ಧ ಸೆಣೆಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ದೇಶದ್ಯಾಂತ ಚಪ್ಪಾಳೆಹೊಡೆಯಲು ಕರೆಕೊಟ್ಟರು. ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ವಾಸ್ತವವಾಗಿ ಕೃತಜ್ಞತೆಯ ಚಪ್ಪಾಳೆ ತಟ್ಟಲು ಸಾಕಷ್ಟು ಕಾಲಾವಕಾಶ ಇದೆ. ಕೊರೊನಾ ವೈರಸ್ ನಮ್ಮ ದೇಶದಿಂದ ಸಂಪೂರ್ಣವಾಗಿ ತೊಲಗಿದ ನಂತರ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಬಹುದು. ಈ ಹೊತ್ತಿಗೆ ತುರ್ತು ಪರಿಹಾರ ಕ್ರಮಗಳ ಅಗತ್ಯವಿದೆ. ದೇಶವ್ಯಾಪಿ ಸಂಚಾರ ಸ್ತಗಿತಗೊಳ್ಳುವುದರಿಂದಾಗುವ ಅನುಕೂಲತೆಗಳನ್ನು ತಗ್ಗಿಸುವುದು ಮತ್ತು ಆರ್ಥಿಕ ನಷ್ಟಗಳನ್ನು ತುಂಬುವುದು ಹೇಗೆ? ಈ ಅವಧಿಯಲ್ಲಿ ಉದ್ಯೋಗವಿಲ್ಲದೇ ಕಂಗಾಲಾಗುವ ಜನರಿಗೆ ಯಾವ ರೀತಿಯ ಪರಿಹಾರ ನೀಡಲಾಗುತ್ತದೆ? ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವರ್ಗಾಹಿಸಲಾಗುತ್ತದೆಯೇ? ಎಷ್ಟು ವರ್ಗಾಹಿಸಲಾಗುತ್ತದೆ? ಬ್ಯಾಂಕ್ ಖಾತೆ ಕೂಡಾ ಇಲ್ಲದ ನಿರ್ಗತಿಕರ ಪಾಡೇನು? ಅವರಿಗೆ ಹೇಗೆ ಪರಿಹಾರ ನೀಡಲಾಗುತ್ತದೆ? ಈ ಯಾವ ವಿಷಯಗಳನ್ನು ಪ್ರಧಾನಿಗಳು ಪ್ರಸ್ತಾಪಿಸಲೂ ಇಲ್ಲೂ ಪರಿಹಾರ ಸೂಚಿಸಿಯೂ ಇಲ್ಲ.
ಹಣಕಾಸು ಮತ್ತು ಷೇರುಮಾರುಕಟ್ಟೆ ಹಾಗೂ ವಾಣಿಜ್ಯೋದ್ಯಮವು ಕೇಂದ್ರ ಸರ್ಕಾರ ಪ್ರಕಟಿಸಬಹುದಾದ ಆರ್ಥಿಕ ಪ್ರೋತ್ಸಾಹದ ಚೇತರಿಕೆಯ ಕ್ರಮಗಳ ನಿರೀಕ್ಷೆಯಲ್ಲಿವೆ. ಕೇಂದ್ರ ಸರ್ಕಾರ ತ್ವರಿತವಾಗಿ ಘೋಷಣೆ ಮಾಡದೇ ಹೋದರೆ ದೇಶದ ಆರ್ಥಿಕತೆಗೆ ಮತ್ತಷ್ಟು ಹಿನ್ನಡೆ ಆಗಲಿದೆ. ‘ಕೋವಿಡ್-19’ ಹಾವಳಿಯು ಬರೀ ಪ್ರಾಣ ನಷ್ಟವನ್ನಷ್ಟೇ ಮಾಡದು, ಇಡೀ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಅಪಾಯವಿದೆ. ಕೇಂದ್ರ ಸರ್ಕಾರ ಪ್ರಾಣಿ ಹಾನಿ ತಡೆಗೆ ಕ್ರಮ ಕೈಗೊಳ್ಳುವುದರ ಜತೆಗೆ ಆರ್ಥಿಕತೆ ಬುಡಮೇಲಾಗುವುದನ್ನು ತಡೆಯಲು ತುರ್ತು ಕ್ರಮಕೈಗೊಳ್ಳಬೇಕಿದೆ. ಈಗಾಗಲೇ ತಡವಾಗಿದೆ. ಮತ್ತಷ್ಟು ತಡಮಾಡಿದರೆ ಹಾನಿ ಪ್ರಮಾಣವನ್ನು ಯಾರೂ ಊಹಿಸಲು ಸಾಧ್ಯವಿಲ್ಲ.