ಕನ್ನಡ ನಾಡಿಗೆ ಹಾಗೂ ಕನ್ನಡ ಭಾಷೆಗೆ ಅಪಾರವಾದ ಸೇವೆಯನ್ನು ಸಲ್ಲಿಸಿರುವ ಹಲವಾರು ಗಣ್ಯರಲ್ಲಿ ಚಿ.ಶ್ರೀನಿವಾಸರಾಜು ಒಬ್ಬರು. ಪ್ರಾಧ್ಯಾಪಕರಾಗಿ, ಪರಿಚಾರಕರಾಗಿ ಹಾಗೂ ಪ್ರಕಾಶಕರಾಗಿ ಚಿ. ಶ್ರೀನಿವಾಸರಾಜು ಸಾಕಷ್ಟು ದುಡಿದಿದ್ದಾರೆ. ಚಿ.ಶ್ರೀನಿವಾಸರಾಜು ನವೆಂಬರ್ 28 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರೌಢಶಾಲೆಯ ವ್ಯಾಸಂಗ ಮಾಡುತ್ತಿರುವಾಗಲೇ ಕನ್ನಡದ ಮೇಲೆ ಅಗಾಧವಾದ ಒಲವನ್ನು ಇಟ್ಟುಕೊಂಡಿದ್ದರು. ಕನ್ನಡ ಗೀಳನ್ನು ಹತ್ತಿಸಿಕೊಂಡಿದ್ದರು. ಇವರ ತಾಯಿ ಸಾವಿತ್ರಮ್ಮ, ತಂದೆ ವಿ.ಚಿಕ್ಕರಾಜು.
ಕನ್ನಡ ಭಾಷೆಯಿಂದ, ಕನ್ನಡ ಪುಸ್ತಕ ಪರಂಪರೆಯಿಂದ ಯುವ ಪೀಳಿಗೆಗೆ ಕನ್ನಡದ ಅರಿವನ್ನು ಮೂಡಿಸುವ ಮೇಷ್ಟ್ರು ಎಂದೇ ಪ್ರಖ್ಯಾತರಾಗಿದ್ದವರು ಶ್ರೀನಿವಾಸರಾಜು ಅವರು. ಸಾಮಾನ್ಯವಾಗಿ ಒಂದು ಗುರಿಯ ಹಿಂದೆ ಒಬ್ಬ ಗುರು ಇರಬೇಕು ಎಂಬುದು ಮಾತಿದೆ. ಅಂತೆಯೇ ಹಲವಾರು ಯುವ ಲೇಖಕರನ್ನು ಮುನ್ನಲೆಗೆ ತರುವಲ್ಲಿ ಇವರು ಸಾಕಷ್ಟು ಶ್ರಮಿಸಿದ್ದಾರೆ.
ಕನ್ನಡದ ಮೊಟ್ಟಮೊದಲ ಯೂನಿಕೋಡ್ ಫಾಂಟ್
ಇವರ 75ನೇ ಜನ್ಮದಿನದ ನೆನಪಿನಲ್ಲಿ ಚಿ.ಶ್ರೀನಿವಾಸರಾಜು ಅವರ ಕುಟುಂಬ ಕನ್ನಡಕ್ಕೆ ‘ಶ್ರೀರಾಜು’ ಹೆಸರಿನಲ್ಲಿ ಉಚಿತವಾದ ನಾಲ್ಕು ಯೂನಿಕೋಡ್ ಫಾಂಟ್ ಗಳನ್ನು ಬಿಡುಗಡೆ ಮಾಡಿತ್ತು. ಇವತ್ತು ಇವರ ಹುಟ್ಟುಹಬ್ಬವಾಗಿದ್ದು, ಅಂದರೆ 77ನೇ ಜನ್ಮದಿನದ ನೆನಪಿನ ಸಂದರ್ಭದಲ್ಲಿ ಇನ್ನೆರಡು ಫಾಂಟ್ ಗಳನ್ನು ಬಿಡುಗಡೆ ಮಾಡಿದೆ. ಆರು ವಿನ್ಯಾಸಗಳಿರುವ ಕನ್ನಡದ ಮೊಟ್ಟಮೊದಲ ಯೂನಿಕೋಡ್ ಫಾಂಟ್ ಇದಾಗಿದೆ. ಈ ನೂತನ ಯೂನಿಕೋಡ್ ಫಾಂಟ್ ಅನ್ನು ಲಿಪಿಕಾರರಾದ ನಾಗಲಿಂಗಪ್ಪ ಬಡಿಗೇರ್ ಸಿದ್ಧಪಡಿಸಿದ್ದಾರೆ.
‘ಶ್ರೀರಾಜು’ ಲಿಪಿಕುರಿತು ನಾಗಲಿಂಗಪ್ಪ ಬಡಿಗೇರ್ “ಇದು ಕನ್ನಡಕ್ಕಾಗಿ ಅರಳಿಸಿರುವ ಹೊಸ ಲಿಪಿ. ಇದರ ವೈಶಿಷ್ಟ್ಯವೆಂದರೆ ಇದಕ್ಕೆ ತಲೆಕಟ್ಟು ಇಲ್ಲದೇ ಇರುವುದು. ತಲೆಕಟ್ಟು ಇಲ್ಲದ ಮೊದಲ ಕನ್ನಡ ಲಿಪಿ ಇದು. ಹಾಗಾಗಿ, ಇದು ಪುಟವೊಂದರಲ್ಲಿ ಅಥವಾ ಡಿಜಿಟಲ್ ಸ್ಕ್ರೀನಿನ ಮೇಲೆ ಕಡಿಮೆ ಸ್ಥಳ ಆಕ್ರಮಿಸಿಕೊಳ್ಳುತ್ತದೆ. ಜೊತೆಗೆ, ಆಧುನಿಕತೆಯ ಸ್ಪರ್ಶ ಮತ್ತು ಚಲನಶೀಲ ಗುಣವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಈ ಅಕ್ಷರ ವಿನ್ಯಾಸ ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳಿಗೆ ಬಳಸಲು ಸೂಕ್ತ” ಎಂದಿದ್ದಾರೆ. ಇದನ್ನು ಲಿಖಿತ್ ಸಾಫ್ಟ್ ವೇರ್ ನ ಹರೀಶ್ ಸಾಲಿಗ್ರಾಮ ಡಿಜಿಟಲ್ ರೂಪಕ್ಕೆ ಅಭಿವೃದ್ಧಿಪಡಿಸಿದ್ದಾರೆ.
ಆರು ವಿನ್ಯಾಸಗಳಿರುವ ಕನ್ನಡದ ಏಕೈಕ ಯೂನಿಕೋಡ್ ಫಾಂಟ್ ಇದಾಗಿದ್ದು, ರೆಗ್ಯುಲರ್, ರೆಗ್ಯುಲರ್ ಇಟಾಲಿಕ್, ಬೋಲ್ಡ್, ಬೋಲ್ಡ್ ಇಟಾಲಿಕ್, ಔಟ್ ಲೈನ್ ಇಟಾಲಿಕ್ ರೂಪದಲ್ಲಿ ಲಭ್ಯ ಇವೆ.
ಶ್ರೀನಿವಾಸರಾಜು ಅವರ ನೆನಪು ಇಂದಿಗೆ ಅತಿ ಮುಖ್ಯ
ಶ್ರೀನಿವಾಸರಾಜು ಅವರು ಬಿ.ಎಸ್ಸಿ ಶಿಕ್ಷಣ ಪಡೆಯುವುದಲ್ಲದೆ, ಕನ್ನಡ ಓದುವ ಹಂಬಲ ಹೆಚ್ಚಾದ್ದರಿಂದ ಬಿ.ಎ ಮತ್ತು ಎಂ.ಎ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಜಿ.ಎಸ್.ಶಿವರುದ್ರಪ್ಪ, ಎಂ.ಚಿದಾನಂದ ಮೂರ್ತಿ ಮತ್ತು ಜಿ.ಪಿ.ರಾಜರತ್ನಂ ಇವರ ಗುರುಗಳಾಗಿದ್ದರು. ಕಾಲೇಜಿನಲ್ಲಿ ಕನ್ನಡ ನಾಡು, ನುಡಿ, ಭಾಷೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಿಗೆ ಎಂದಿಗೂ ಗೈರಾದವರಲ್ಲ. ಎಲ್ಲದಕ್ಕೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ತಮ್ಮ ಗುರುಗಳಾದ ಜಿ.ಪಿ.ರಾಜರತ್ನಂರಂತೆ ಶ್ರೀನಿವಾಸರಾಜುರವರು ಸಹ ಕನ್ನಡದ ಪರಿಚಾರಕರಾಗಿ ದುಡಿದರು. ಜೀವನದ ಉದ್ದಕ್ಕೂ ಮಾನವೀಯತೆಗಾಗಿ ಜೀವಿಸಿ, ಮಾನವೀಯ ಮಂತ್ರವನ್ನು ಜಪಿಸುತ್ತಾ ಅನೇಕ ಯುವಕರಿಗೆ ಚಿ.ಶ್ರೀನಿವಾಸರಾಜು ಪ್ರೇರಣೆಯಾಗಿದ್ದರು. ಕನ್ನಡವು ತನ್ನ ಉಸಿರೆಂದು, ಶ್ರದ್ಧೆಯಿಂದ ಭಾಷೆಯನ್ನು ಕಟ್ಟಲು, ಕನ್ನಡವನ್ನು ಉಳಿಸಲು ‘ಅಂಕಣ’, ‘ವಿಮೋಚನ’, ‘ಶೂದ್ರ’ ಪತ್ರಿಕೆಗಳನ್ನು ತೆರೆದರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ಅಗಾಧವಾಗಿ ತೊಡಗಿಕೊಂಡಿದ್ದ ಶ್ರೀನಿವಾಸರಾಜು ಅವರ ವಿಚಾರಪೂರ್ಣ ಬರಹಗಳು, ನಾಟಕ, ಪ್ರಬಂಧ, ಕವನ ಸಂಕಲನ, ಅನುವಾದ ಹಾಗೂ ವ್ಯಕ್ತಿಚಿತ್ರಗಳು ಪ್ರಕಟಗೊಂಡಿವೆ.
ತಮ್ಮ ಗುರುಗಳಾದ ಜಿ.ಪಿ.ರಾಜರತ್ನಂ ನಿಧನರಾದಾಗ “ಕಾದ ಮರಳಲ್ಲಿ ಕಾಗುಣಿತ ತಿದ್ದುವುದಾಗಿತ್ತು ನಿನ್ನ ಕೆಲಸ, ಇರುಳು ಕನ್ನಡಿಯಲ್ಲಿ ಪ್ರತಿಮೆ ಹುಡುಕುವುದೊಂದೇ ನನ್ನ ಕೆಲಸ” ಎಂದು ಶ್ರೀನಿವಾಸರಾಜು ನಮನ ಸಲ್ಲಿದ್ದರು. ಅಂತೆಯೇ ಆತ್ಮಕಥೆ ಎಂಬ ಶೀರ್ಷಿಕೆ ಅಡಿಯಲ್ಲಿ ಬರೆದ ಕವಿತೆಯ ಆರಂಭದ ಸಾಲು ಹೀಗಿತ್ತು “ಏನು ಬರೆಯಲಿ ಏಕೆ ಬರೆಯಲಿ ನನ್ನ ಆತ್ಮಕಥೆ ನೀನು ಬಿಟ್ಟ ಗಾಳಿಯನ್ನೇ ನಾನು ಎಳೆಯುತ್ತಿರುವಾಗ, ನೀನು ಬಿತ್ತಿದ ಕಾಳನ್ನೇ ನಾನು ತಿನ್ನುತ್ತಿರುವಾಗ, ನೀನು ನೆಯ್ದ ಬಟ್ಟೆಯನ್ನೇ ನಾನು ಧರಿಸುತ್ತಿರುವಾಗ, ನೀನು ಮೆಟ್ಟಿದ ಮಣ್ಣನ್ನೇ ನಾನು ತುಳಿಯುತ್ತಿರುವಾಗ”
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಶ್ರೀನಿವಾಸರಾಜು ಅವರ ಕುರಿತು “ಸಮೃದ್ಧವಾದ ಬೆಳೆಗೆ ‘ಅಂತರ್ಜಲ’ದಂತೆ ವರ್ತಿಸಿದವರು ಚಿ.ಶ್ರೀನಿವಾಸರಾಜು ಅವರು” ಅಂತೆಯೇ ಖ್ಯಾತ ಪತ್ರಕರ್ತ ಪಿ.ಲಂಕೇಶ್ “ಸಂಕೋಚ ಸ್ವಭಾವದ, ಧ್ವನಿಯೆತ್ತಿ ಮಾತನಾಡಲು ಹಿಂಜರಿಯುವ, ಮಾಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ, ಕನ್ನಡಾಭಿಮಾನದ ಸೊಕ್ಕು ಕಿಂಚತ್ತೂ ಇಲ್ಲದ ಸಜ್ಜನ ಈ ಶ್ರೀನಿವಾಸರಾಜು” ಎಂದು ಹೇಳಿದ್ದರು. ಸಾಮಾಜಿಕ ಸಂವೇದನೆಗಳತ್ತ ಶ್ರೀನಿವಾಸರಾಜು ಅವರ ಮನಸ್ಸು ಸದಾ ತುಡಿಯುತ್ತಿತ್ತು. ಡಿಸೆಂಬರ್ 28 2007ರಂದು ತೀರ್ಥಹಳ್ಳಿಯಲ್ಲಿ ಮಹಾನ್ ಚೇತನ ಚಿ.ಶ್ರೀನಿವಾಸರಾಜು ಅವರು ನಿಧನರಾದರು.