ರಾಜ್ಯ ವಿಧಾನಸಭೆಯ 17 ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್ ನವರು ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಅನರ್ಹ ಶಾಸಕರ ಕುರಿತಂತೆ ಮಾತನಾಡಿದ್ದ ಆಡಿಯೊ/ವಿಡಿಯೊವನ್ನು ಸಲ್ಲಿಸಿದ್ದಾರೆ. ಆ ಆಡಿಯೊ/ವಿಡಿಯೊ ಸಿ.ಡಿ.ಯನ್ನು ನ್ಯಾಯಪೀಠ ಸ್ವೀಕರಿಸಿದೆ.
ಶಾಸಕರ ಅನರ್ಹತೆ ಕುರಿತು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮಂಗಳವಾರ ನಡೆದ ವಿದ್ಯಮಾನಗಳು ಇಷ್ಟು. ಆದರೆ, ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟಕ್ಕೆ ಜಯ ಸಿಕ್ಕಿದೆ. ಶಾಸಕರು ರಾಜಿನಾಮೆ ನೀಡಲು ಯಾರು ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವರಿಸಿರುವ ಆಡಿಯೊ/ವಿಡಿಯೊವನ್ನು ತೀರ್ಪು ನೀಡುವ ಸಂದರ್ಭದಲ್ಲಿ ಸಾಕ್ಷಿಯಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರ ಆಡಿಯೋ ಹೇಳಿಕೆಗೂ ಶಾಸಕರ ಅನರ್ಹತೆಗೂ ಯಾವುದೇ ಸಂಬಂಧವಿಲ್ಲ. ಈ ಆಡಿಯೋ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಅನರ್ಹ ಶಾಸಕರ ವಾದ. ಅದರ ಮಧ್ಯೆಯೂ ಅನರ್ಹ ಶಾಸಕರಲ್ಲಿ ಆತಂಕ ಕಾಡುತ್ತಿರುವುದಂತೂ ಸುಳ್ಳಲ್ಲ.

ಕಾಂಗ್ರೆಸ್ ಸಲ್ಲಿಸಿರುವ ಆಡಿಯೊ/ವಿಡಿಯೊ ಸಿ.ಡಿ.ಯನ್ನು ಸ್ವೀಕರಿಸಿರುವುದಾಗಿ ಮಾತ್ರ ಹೇಳಿರುವ ನ್ಯಾಯಪೀಠ, ಅದನ್ನು ತೀರ್ಪಿನ ವೇಳೆ ಅದನ್ನು ಪರಿಗಣಿಸಲಾಗುತ್ತದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಕಾನೂನು ತಜ್ಞರ ಪ್ರಕಾರ ಈ ಆಡಿಯೋ ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯ ವಾಗ್ವಾದಕ್ಕೆ ಅಸ್ತ್ರ ಒದಗಿಸಲಷ್ಟೇ ಸೀಮಿತವಾಗಿದೆಯೇ ಹೊರತು ಕಾನೂನು ಹೋರಾಟಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.
ಆಡಿಯೋದಲ್ಲಿ ಯಡಿಯೂರಪ್ಪ ಅವರು ಅನರ್ಹ ಶಾಸಕರ ಕುರಿತಂತೆ ಹೇಳಿದ್ದಿಷ್ಟು. 17 ಜನರ ತೀರ್ಮಾನ ಯಡಿಯೂರಪ್ಪ ಅಥವಾ ಇನ್ಯಾರೋ ಮುಖಂಡರು ತೆಗೆದುಕೊಂಡ ತೀರ್ಮಾನವಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದು, ಅವರೇ ನಿಂತು ಬಾಂಬೇನಲ್ಲಿ ಎರಡು-ಎರಡೂವರೆ ತಿಂಗಳು ಒಂದು ಕಡೆ ಇರುವಂತೆ ಮಾಡಿದ್ದರು. ಎರಡು-ಎರಡೂವರೆ ತಿಂಗಳು ಅವರು ಕ್ಷೇತ್ರಕ್ಕೂ ಬರಲಿಲ್ಲ, ಹೆಂಡತಿ ಮಕ್ಕಳ ಮುಖವನ್ನೂ ನೋಡ್ಲಿಲ್ಲ. ಮೂರೂಮುಕ್ಕಾಲು ವರ್ಷ ಪೂರ್ಣಾವಧಿ ವಿರೋಧ ಪಕ್ಷದಲ್ಲಿರಬೇಕಾದ ನಮ್ಮನ್ನು ಆಡಳಿತ ಪಕ್ಷಕ್ಕೆ ಬರಲು ಅವಕಾಶ ಮಾಡಿಕೊಟ್ಟು ಅವರು ಎಂಎಲ್ಎಗಿರಿಗೆ ರಾಜಿನಾಮೆ ಕೊಟ್ಟು, ಸುಪ್ರೀಂ ಕೋರ್ಟ್ ಗೆ ಹೋಗಿ ರಾಜಿನಾಮೆ ಸ್ವೀಕರಿಸಲು ಗಟ್ಟಿಯಾಗಿ ಕುಳಿತಿರಬೇಕಾದರೆ…. ಹೀಗೆ ಮಾತು ಮುಂದುವರಿಯುತ್ತದೆ.
ಯಾಕಾಗಿ ಆಡಿಯೊ/ವಿಡಿಯೊ ಕೋರ್ಟ್ ಪರಿಗಣಿಸಲು ಸಾಧ್ಯವಿಲ್ಲ?
1. ಇಡೀ ಆಡಿಯೊ/ವಿಡಿಯೊದಲ್ಲಿ ಯಡಿಯೂರಪ್ಪ ಅವರು, ನಮ್ಮ ಆಮಿಷಕ್ಕೆ ಅಥವಾ ಬಲವಂತಕ್ಕೆ ಶಾಸಕರು ರಾಜಿನಾಮೆ ನೀಡಿದರು ಎಂದು ಹೇಳಿಲ್ಲ. ಇನ್ನು ಆ ಶಾಸಕರೆಲ್ಲರೂ ಮುಂಬೈನಲ್ಲಿದ್ದದ್ದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೇಲೆ. ಅಲ್ಲಿ ಆ ಶಾಸಕರನ್ನು ಒಟ್ಟಾಗಿ ಇರಲು ವ್ಯವಸ್ಥೆ ಮಾಡಿದ್ದು ರಾಷ್ಟ್ರೀಯ ಅಧ್ಯಕ್ಷರು ಎಂದು ಯಡಿಯೂರಪ್ಪ ಹೇಳಿದ್ದರೂ ಅದಕ್ಕೆ ಸಾಕ್ಷಿಗಳು ಇಲ್ಲ. ಮೇಲಾಗಿ ಶಾಸಕರು ರಾಜಿನಾಮೆ ನೀಡಿದ ಬಳಿಕ ಅವರು ಬಯಸಿದಲ್ಲಿ ಬೇರೆಯವರು ವಾಸ್ತವ್ಯ ಕಲ್ಪಿಸುವುದು ತಪ್ಪಲ್ಲ.
2. ಸದ್ಯ ಸುಪ್ರೀಂ ಕೋರ್ಟ್ ಮುಂದೆ ಇರುವ ವಿಚಾರ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶ ಮತ್ತು ಅನರ್ಹತೆ ಅವಧಿಯನ್ನು 2023ರವಗೆ ನಿಗದಿಪಡಿಸಿರುವುದು. ತಮ್ಮ ಮುಂದೆ ಇದ್ದ ದಾಖಲೆಗಳನ್ನು ಆಧರಿಸಿ ಅವರು ಅನರ್ಹತೆ ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಅವರು ತಮ್ಮ ಆದೇಶ ಹೊರಡಿಸುವಾಗ ಈ ಆಡಿಯೊ/ವಿಡಿಯೊ ಅವರ ಮುಂದೆ ಇರಲಿಲ್ಲ. ಹೀಗಾಗಿ ಯಾವ ದಾಖಲೆಗಳನ್ನು ಆಧರಿಸಿ ಸ್ಪೀಕರ್ ತೀರ್ಪು ನೀಡಿದ್ದರೋ ಅದಷ್ಟೇ ದಾಖಲೆಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಪ್ರಕರಣ ಇತ್ಯರ್ಥಗೊಳಿಸಬೇಕಾಗುತ್ತದೆ.
3. ಆಡಿಯೋಗಳನ್ನು ಸಾಕ್ಷಿಗಳಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಅನೇಕ ತೀರ್ಪುಗಳನ್ನು ನೀಡಿದೆ. ಅದರ ಹೊರತಾಗಿಯೂ ಕೋರ್ಟ್ ಸಿ.ಡಿ.ಯನ್ನು ಪರಿಗಣಿಸಿದರೂ ಅದರ ಆಧಾರದ ಮೇಲೆ ತೀರ್ಪು ನೀಡುವಂತಿಲ್ಲ. ಏಕೆಂದರೆ, ಸ್ಪೀಕರ್ ಎಂಬುದು ಸಾಂವಿಧಾನಿಕ ಹುದ್ದೆ. ಹೀಗಾಗಿ ಹೊಸ ಸಾಕ್ಷಿಗಳೊಂದಿಗೆ ಅವರ ಆದೇಶದ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಬದಲಾಗಿ ಈ ಸಿ.ಡಿ.ಯನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ತೀರ್ಪು ಮರುಪರಿಶೀಲಿಸಿ ಎಂದು ಪ್ರಕರಣವನ್ನು ಮತ್ತೆ ಸ್ಪೀಕರ್ ಅವರಿಗೆ ವಾಪಸ್ ಕಳುಹಿಸಬೇಕು.
4. ಒಂದೊಮ್ಮೆ ಇವೆಲ್ಲವನ್ನೂ ಬದಿಗಿಟ್ಟು ಆಡಿಯೊ/ವಿಡಿಯೊ ಪರಿಗಣಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅದು ಅನರ್ಹ ಶಾಸಕರಿಗೆ ವಿರುದ್ಧವಾಗಿ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರಲ್ಲಿ ಮೈತ್ರಿ ಸರ್ಕಾರದ ಕುರಿತು, ‘ಪಾರ್ಲಿಮೆಂಟ್ ಎಲೆಕ್ಷನ್ ವರೆಗೆ ಇರ್ತಾರೆ. ಆಮೇಲೆ ಏನೇನು ರಾಜಕೀಯ ಬೆಳವಣಿಗೆ ಆಗುತ್ತೆ ಅಂತ ನೋಡೋಣ’ ಎಂದು ಹೇಳಿದ್ದ ಆಡಿಯೊ/ವಿಡಿಯೊ ಮುಂದಿಟ್ಟುಕೊಂಡು ಅನರ್ಹ ಶಾಸಕರು ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದು.

5. ತೀರ್ಪು ಕಾಯ್ದಿರಿಸಿದ ಬಳಿಕ ಕಾಂಗ್ರೆಸ್ ಸಲ್ಲಿಸಿದ್ದ ಆಡಿಯೊ/ವಿಡಿಯೊವನ್ನು ಪರಿಗಣಿಸಿದ ಕೋರ್ಟ್ ಆಗ ಅನರ್ಹ ಶಾಸಕರು ಸಲ್ಲಿಸಿದ್ದ ಆಡಿಯೊ/ವಿಡಿಯೊ ಕೂಡ ಪರಿಶೀಲಿಸಬೇಕಾಗುತ್ತದೆ. ಆಗ ಮತ್ತೆ ತೀರ್ಪು ವ್ಯತಿರಿಕ್ತವಾಗಬಹುದು. ಯಡಿಯೂರಪ್ಪ ಹೇಳಿಕೆ ಆಧರಿಸಿ ಆಪರೇಷನ್ ಕಮಲ ನಡೆದಿದೆ ಎಂದು ಕೋರ್ಟ್ ಪರಿಗಣಿಸುವುದಾದರೆ, ಸಿದ್ದರಾಮಯ್ಯ ಹೇಳಿಕೆ ಆಧರಿಸಿ ಸರ್ಕಾರ ಉರುಳುವುದು ಅವರಿಗೆ ಮೊದಲೇ ಗೊತ್ತಿದ್ದಂತಾಗುತ್ತದೆ.
6. ಸಾಮಾನ್ಯವಾಗಿ ಸುದೀರ್ಘ ವಿಚಾರಣೆ ನಡೆಸಿ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದ ಬಳಿಕ ಯಾವುದೇ ಹೊಸ ಸಾಕ್ಷ್ಯಗಳನ್ನು ಪರಿಗಣಿಸುವುದಿಲ್ಲ. ಒಂದೊಮ್ಮೆ ಪರಿಗಣಿಸುವುದಾದರೆ ತೀರ್ಪು ಕಾಯ್ದಿರಿಸುವಾಗಲೇ ಬೇರೆ ವಾದ-ಪ್ರತಿವಾದಗಳೇನಾದರೂ ಇದ್ದಲ್ಲಿ ಅವುಗಳನ್ನು ಲಿಖಿತವಾಗಿ ಸಲ್ಲಿಸಿ ಎಂದು ಹೇಳುತ್ತದೆ. ಆದರೆ, ಈ ಪ್ರಕರಣದಲ್ಲಿ ಕೋರ್ಟ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಇದನ್ನು ಆಧರಿಸಿಯೂ ಆಡಿಯೊ/ವಿಡಿಯೊ ಪರಿಗಣಿಸುವುದು ಕಷ್ಟಸಾಧ್ಯ ಎಂದು ಹೇಳಬಹುದು.
ಇವೆಲ್ಲಾ ಕಾರಣಗಳಿಂದ ಶಾಸಕರ ಅನರ್ಹತೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಕಳೆದ ವಾರ ಅದು ತೀರ್ಪು ಕಾಯ್ದಿರಿಸುವವರೆಗಿನ ವಾದ-ಪ್ರತಿವಾದ ಆಧರಿಸಿ ಇರಬಹುದೇ ಹೊರತು ಆಡಿಯೊ/ವಿಡಿಯೊ ಪರಿಗಣಿಸುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಕಾನೂನು ತಜ್ಞರು.