ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾದ ನಂತರ ದೇಶ-ವಿದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಒಂದೆಡೆಯಾದರೆ ಅದನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಮಾಯಕರ ಮೇಲೆ ನಡೆಸಿರುವ ದೌರ್ಜನ್ಯದ ಕರಾಳ ಮುಖ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಮಂಗಳೂರಿನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದರು. ಈ ಸಂಬಂಧ ಸಾರ್ವಜನಿಕ ಅಹವಾಲು ಆಲಿಸಿದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದ ಪೀಪಲ್ ಟ್ರಿಬ್ಯುನಲ್ “ಪೊಲೀಸರು ಪ್ರತಿಭಟನಾನಿರತರನ್ನು ಕೊಲ್ಲುವ ಉದ್ದೇಶ ಹೊಂದಿದ್ದರು” ಎಂಬ ಅಂಶ ಹೊರಗೆಡುವವ ಮೂಲಕ ಬೆಚ್ಚಿ ಬೀಳಿಸಿದೆ.
ಇದರ ಮಧ್ಯೆ, ಸಿಎಎ ವಿರೋಧಿ ಹೋರಾಟದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು 22 ಅಮಾಯಕರನ್ನು ಬಲಿ ತೆಗೆದುಕೊಂಡಿದೆ. ಈ ಪೈಕಿ ಕೇವಲ ನಾಲ್ವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಅವರ ಕುಟುಂಬದವರಿಗೆ ನೀಡಲಾಗಿದೆ. ಉಳಿದ ಮಂದಿಯ ಮರಣೋತ್ತರ ವರದಿಯನ್ನು ಇದುವರೆಗೂ ಸಂಬಂಧಿತ ಕುಟಂಬದವರಿಗೆ ನೀಡಲಾಗಿಲ್ಲ.
ಹಲವು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಸಂಗ್ರಹಿಸಿದ್ದಾರೆ. ಸರ್ಕಾರದ ಆದೇಶವನ್ನು ಪಾಲಿಸಿದ ಪೊಲೀಸರ ಅಟ್ಟಹಾಸಕ್ಕೆ ಸಾಕಷ್ಟು ಕುಟುಂಬಗಳು ಆಧಾರಸ್ತಂಭವಾಗಿದ್ದ ಮಕ್ಕಳು ಹಾಗೂ ಕುಟುಂಬದ ಯಜಮಾನರನ್ನು ಕಳೆದುಕೊಂಡಿವೆ. ಪೊಲೀಸರ ದೌರ್ಜನ್ಯದಿಂದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಭಯದ ವಾತಾರವಣದಲ್ಲಿ ಜೀವನ ದೂಡುವಂತಾಗಿದೆ. ಚುನಾಯಿತ ಸರ್ಕಾರವು ತನ್ನ ಜನರ ಮೇಲೆ ಈ ಥರದ ದಾಳಿ ನಡೆಸಲು ಮುಂದಾದರೆ ಅದನ್ನು ತಡೆಯುವುದಾದರೂ ಹೇಗೆ? ಪೊಲೀಸರ ಗುಂಡಿಗೆ ಬಲಿಯಾದವರ ಮರಣೋತ್ತರ ಪರೀಕ್ಷಾ ವರದಿಗಳನ್ನು ಸಂಬಂಧಪಟ್ಟ ಕುಟುಂಬದವರಿಗೆ ಇನ್ನೂ ನೀಡಲಾಗಿಲ್ಲ. ಪ್ರತಿಭಟನಾಕಾರರು ಪೊಲೀಸರ ದುರುದ್ದೇಶಕ್ಕೆ ತುತ್ತಾಗಿಲ್ಲ ಎನ್ನುವುದಾದರೆ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಸಂಬಂಧಿತ ಕುಟುಂಬದವರಿಗೆ ಸರ್ಕಾರ ಏಕೆ ನೀಡುತ್ತಿಲ್ಲ? ಇದನ್ನು ಸರ್ಕಾರ ತಡೆಯುತ್ತಿರುವ ಉದ್ದೇಶವಾದರೂ ಏನಾಗಿರಬಹುದು?
ಇನ್ನು ಸಿಎಎ ವಿರೋಧಿಸಿ ಕಳೆದ 40 ದಿನಗಳಿಂದ ದೆಹಲಿಯ ಶಹೀನ್ ಬಾಗ್ ನಲ್ಲಿ ಲಕ್ಷಾಂತರ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ಮಹಿಳೆಯರ ಮೇಲೆ ದೊಂಬಿ ಆರೋಪ ನಿಗದಿಗೊಳಿಸಿ 100ಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾಕಾರರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರವು ದೂರು ದಾಖಲಿಸಿ ಅವರ ಬಾಯಿ ಮುಚ್ಚಿಸಲು ಮುಂದಾಗುತ್ತಿರುವುದು ಜನತಂತ್ರ ವ್ಯವಸ್ಥೆಗೆ ವಿರುದ್ಧವಾದ ಕ್ರಮವಲ್ಲವೇ? ಅಸಹಾಯಕರಾಗಿರುವ ಜನರು ಕೋರ್ಟ್ ಮೆಟ್ಟಿಲೇರಿ ನ್ಯಾಯಕೇಳುವ ಸ್ಥಿತಿಯಲ್ಲಿಯೂ ಇಲ್ಲ. ಸಂತ್ರಸ್ತ ಕುಟುಂಬದವರಿಗೆ ಕಾನೂನು ಸಲಹೆ ನೀಡಲು ಮುಂದಾದ ವಕೀಲರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಮೇಲೆಯೂ ದಾಳಿ ನಡೆಸಿರುವ ಪ್ರಕರಣಗಳು ವರದಿಯಾಗಿವೆ.
ಇದೆಲ್ಲದ ಮಧ್ಯೆ, ಬಿಜೆಪಿ ನಾಯಕರು ಧ್ರುವೀಕರಣ ರಾಜಕಾರಣದಲ್ಲಿ ನಿರತರಾಗಿದ್ದಾರೆ. ವಿವಾದಾತ್ಮಕ ಹಾಗೂ ಸಂವಿಧಾನ ವಿರೋಧಿ ಹೇಳಿಕೆಗಳ ಮೂಲಕ ಬಹುಸಂಖ್ಯಾತರ ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಇಂಥ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ. “ಪ್ರತಿಭಟನಾನಿರತರನ್ನು ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಗುಂಡಿಟ್ಟು ಕೊಲ್ಲುವ ಮೂಲಕ ತಕ್ಕ ಉತ್ತರ ನೀಡಿವೆ” ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಬಹಿರಂಗವಾಗಿ ಹೇಳಿದ್ದಾರೆ.
ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು “ಮುಸ್ಲಿಮರು ಮಸೀದಿಗಳಲ್ಲಿ ಶಸಾಸ್ತ್ರ ಸಂಗ್ರಹಿಸಿಡುತ್ತಾರೆ. ಮುಸ್ಲಿಮರ ಮತ ನನಗೆ ಬೇಕಾಗಿಲ್ಲ. ಅನುದಾನವನ್ನು ನಮ್ಮ ಜನರಿಗೆ (ಹಿಂದೂಗಳಿಗೆ) ವರ್ಗಾಯಿಸುತ್ತೇನೆ. ನಿಮ್ಮನ್ನು ಎಲ್ಲಿಡಬೇಕು ಅಲ್ಲಿ ಇಡುತ್ತೇನೆ” ಎಂದು ಘೋಷಿಸುತ್ತಾರೆ. ಇನ್ನೊಂದೆಡೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು “ಎದೆ ಸೀಳಿದರೆ ಎರಡು ಅಕ್ಷರ ಬರದ ಪಂಚರ್ ಹಾಕುವವರು ಪ್ರತಿಭಟನೆ ಮಾಡುತ್ತಾರೆ” ಎಂದು ಪ್ರತಿಭಟನಾನಿರತರನ್ನು ಅವಮಾನಿಸುತ್ತಾರೆ. ಇದ್ಯಾವುದರ ಬಗ್ಗೆಯೂ ಪೊಲೀಸರು ಕ್ರಮಕ್ಕೆ ಮುಂದಾಗುವುದಿಲ್ಲ!
ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದೊಳಕ್ಕೆ ನುಗ್ಗಿ ದಾಂದಲೆ ಸೃಷ್ಟಿಸಿದ ಪೊಲೀಸರು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆ ಎನ್ ಯು) ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿದ್ದುದಕ್ಕೆ ಬೆಂಬಲ ನೀಡಿದ್ದರು ಎಂಬುದು ಬಹಿರಂಗವಾಗಿದೆ. ಜೆ ಎನ್ ಯುವಿನಲ್ಲಿ ದಾಳಿ ನಡೆಸಿದವರು ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಎಂಬುದನ್ನು ಹಲವು ಸ್ವತಂತ್ರ ಮಾಧ್ಯಮಗಳು ದಾಖಲೆ ಸಮೇತ ಬಹಿರಂಗಗೊಳಿಸಿದ್ದರೂ ಪೊಲೀಸರು ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದರ ನೇತೃತ್ವ ವಹಿಸಿರುವುದು ಅಮಿತ್ ಶಾ. ವಿಭಜನಾಕಾರಿ ನೀತಿಯನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಶಾ ಅವರಿಂದ ಯಾವ ತೆರನಾದ ನೀತಿ ನಿರೀಕ್ಷಿಸಲು ಸಾಧ್ಯ?
ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ದೇಶೀಯ ಉತ್ಪನ್ನ (ಜಿಡಿಪಿ) ಶೇ. 4.8ಕ್ಕೆ ಇಳಿಸಿದೆ. ಅಷ್ಟುಮಾತ್ರವಲ್ಲದೇ ಭಾರತದ ಆರ್ಥಿಕತೆಯು ಜಗತ್ತಿನ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ, ಅಮಿತ್ ಶಾ ಅವರು “ಜಾಗತಿಕ ಕಾರಣಗಳಿಂದ ಭಾರತದ ಆರ್ಥಿಕತೆ ಹಿನ್ನಡೆ ಅನುಭವಿಸಿದೆ” ಎನ್ನುವ ಹೇಳಿಕೆ ನೀಡಿದ್ದರು. ಇಷ್ಟಕ್ಕೆ ನಿಲ್ಲದ ಐಎಂಎಫ್ ಹಾಂಕಾಂಗ್ ನಲ್ಲಿ ವಿದ್ಯಾರ್ಥಿ ಹೋರಾಟದಿಂದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು, ಹೂಡಿಕೆ ಮಾಡುವವರು ಹಿಂಜರಿಯುತ್ತಿದ್ದಾರೆ ಎಂದಿದೆ. ಭಾರತದಲ್ಲೂ ಸರ್ಕಾರದ ವಿಭಜನಕಾರಿ ನೀತಿಗಳು ಅಶಾಂತಿ ಸೃಷ್ಟಿಸಿದೆ. ಇದರಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಉದ್ಯಮಿಗಳು ಹೂಡಿಕೆಗೆ ಮುಂದಾಗುತ್ತಿಲ್ಲ ಎನ್ನುವುದನ್ನು ಹಲವು ಉದ್ಯಮಿಗಳು ಹೇಳಿದ್ದಾರೆ. ಈಗಾಗಲೇ ಆರ್ಥಿಕ ಕುಸಿತದ ಹಾದಿ ಹಿಡಿದಿರುವ ಭಾರತದಲ್ಲಿ ಅಶಾಂತಿ ಹೆಚ್ಚಾದಷ್ಟೂ ಮತ್ತಷ್ಟು ಸಮಸ್ಯೆ ಹೆಚ್ಚುತ್ತದೆ ಎನ್ನುವುದನ್ನು ಸರ್ಕಾರಕ್ಕೆ ಅರ್ಥಮಾಡಿಸುವವರು ಯಾರು?
ದೇಶದ ಶಾಂತಿ, ಸುವ್ಯವಸ್ಥೆಯ ನೇತೃತ್ವ ವಹಿಸಿರುವ ಗೃಹ ಸಚಿವ ಅಮಿತ್ ಶಾ ಅವರು ವಿಭಜಕಾರಿ ಕೃತ್ಯಗಳಿಗೆ ಮುಂದಾಗಿರುವಾಗ ಅವರನ್ನೇ ವರಿಷ್ಠ ನಾಯಕ ಎಂದು ನಂಬಿರುವ ಅವರ ಪಕ್ಷದ ನಾಯಕರಿಂದ ವಿವಾದಾತ್ಮಾಕ ಹೇಳಿಕೆಗಳ ಹೊರತಾಗಿ ಮತ್ತೇನು ನಿರೀಕ್ಷಿಸಲು ಸಾಧ್ಯ?