ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿನಗರ(ಆರ್ ಆರ್ ನಗರ) ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿದೆ. ಕೆಲವು ಕಾರಣಗಳಿಂದಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಎರಡೂ ಕ್ಷೇತ್ರಗಳ ಚುನಾವಣೆ ಸಹಜವಾಗೇ ಮೂರೂ ಪ್ರಮುಖ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಆಯೋಗ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಈ ಕ್ಷೇತ್ರಗಳಲ್ಲಿ ಅಕ್ಟೋಬರ್ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಅ. 16 ಕೊನೇ ದಿನವಾಗಿದ್ದು, ಅ.17 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು, ನ.10 ರಂದು ಎರಡು ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಶಿರಾ ವಿಧಾನಸಭಾ ಕ್ಷೇತ್ರದ ಸ್ಥಾನ ತೆರವಾಗಿದ್ದರೆ, ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ , ಆಪರೇಷನ್ ಕಮಲದ ಭಾಗವಾಗಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದಾಗಿ ಆರ್ ಆರ್ ನಗರ ಕ್ಷೇತ್ರದ ಸ್ಥಾನ ತೆರವಾಗಿತ್ತು.
Also Read: ಶಿರಾ, ರಾಜರಾಜೇಶ್ವರಿ ನಗರ ಉಪಚುನಾವಣೆ ದಿನಾಂಕ ಘೋಷಣೆ
ಶಿರಾ ಕ್ಷೇತ್ರದ ಉಪ ಚುನಾವಣೆ ನಿರೀಕ್ಷಿತವೇ ಆಗಿತ್ತು. ಆದರೆ, ಆರ್ ಆರ್ ನಗರದ ವಿಷಯದಲ್ಲಿ ಹಿಂದಿನ ಚುನಾವಣೆಯಲ್ಲಿ ಭಾರೀ ಚುನಾವಣಾ ಅಕ್ರಮ ನಡೆದಿದೆ ಎಂದು ಅಂದಿನ ಬಿಜೆಪಿ ಅಭ್ಯರ್ಥಿ ಮತ್ತು ವಿಜೇತ ಮುನಿರತ್ನ ಅವರ ಪ್ರತಿಸ್ಪರ್ಧಿ ತುಳಸಿ ಮುನಿರಾಜಗೌಡ ಅವರು ಕೋರ್ಟ್ ಮೊರೆಹೋಗಿದ್ದರು. ಚುನಾವಣಾ ಅಕ್ರಮ ಮತ್ತು ಆ ಹಿನ್ನೆಲೆಯಲ್ಲಿ ಎರಡನೇ ಅತಿ ಹೆಚ್ಚು ಮತ ಪಡೆದ ತಮ್ಮನ್ನೇ ಅಧಿಕೃತ ಚುನಾಯಿತ ಎಂದು ಘೋಷಿಸಬೇಕು ಎಂದು ತುಳಸಿ ಮುನಿರಾಜಗೌಡ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಆ ಪೈಕಿ ಈಗ ತಮ್ಮನ್ನೇ ಅಧಿಕೃತ ಚುನಾಯಿತ ಎಂದು ಘೋಷಿಸಲು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಮಾಡಿದೆ. ಆ ಹಿನ್ನೆಲೆಯಲ್ಲಿ ಈವರೆಗೆ ಕಾಯ್ದಿರಿಸಿದ್ದ ಉಪಚುನಾವಣೆಯ ತೀರ್ಮಾನವನ್ನು ಆಯೋಗ ಇದೀಗ ಪ್ರಕಟಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರೋನಾ ಮತ್ತು ಕರೋನಾ ಲಾಕ್ ಡೌನ್ ವಿಷಯದಲ್ಲಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ, ಕೃಷಿಗೆ ಸಂಬಂಧಿಸಿದಂತೆ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ವಿವಾದಿತ ಕಾಯ್ದೆ- ಮಸೂದೆಗಳ ವಿಷಯದಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತದ ಜನವಿರೋಧಿ ಧೊರಣೆ, ಕರೋನಾ ಸಂಕಷ್ಟದ ನಡುವೆಯೂ ಸದ್ದು ಮಾಡಿದ ಸಾಲುಸಾಲು ಬಹುಕೋಟಿ ಭ್ರಷ್ಟಾಚಾರ ಹಗರಣಗಳ ನಡುವೆ ಈ ಉಪಚುನಾವಣೆ ಎದುರಾಗಿದೆ. ಹಾಗಾಗಿ ಬಿಜೆಪಿ ಪಾಲಿಗೆ ಇದು ಮಹತ್ವದ ಚುನಾವಣೆ.
Also Read: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಕಾಂಗ್ರೆಸ್‌ನಿಂದ ಟಿ.ಬಿ ಜಯಚಂದ್ರ ಕಣಕ್ಕೆ
ಅದೇ ಹೊತ್ತಿಗೆ, ಈ ಎರಡೂ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ಸಿನ ಭದ್ರಕೋಟೆಗಳಾಗಿ ಇತ್ತೀಚಿನ ವರ್ಷಗಳಲ್ಲಿ ಗುರುತಿಸಿಕೊಂಡಿದ್ದವು. ಕಳೆದ ಚುನಾವಣೆಯಲ್ಲಿ ಶಿರಾದಲ್ಲಿ ಪಕ್ಷದ ಹಿರಿಯ ನಾಯಕ ಟಿ ಬಿ ಜಯಚಂದ್ರ ಅವರು ಜೆಡಿಎಸ್ ನ ಸತ್ಯನಾರಾಯಣ ಅವರ ಎದುರು ಅನಿರೀಕ್ಷಿತ ಸೋಲು ಕಂಡಿದ್ದರು ಎಂಬುದನ್ನು ಹೊರತುಪಡಿಸಿ ಅಲ್ಲಿ ಕಾಂಗ್ರೆಸ್ ಗೆ ಗಟ್ಟಿ ನೆಲೆ ಇದೆ ಎಂಬುದನ್ನು ತಳ್ಳಿಹಾಕಲಾಗದು. ಅದೇ ರೀತಿ ಆರ್ ಆರ್ ನಗರ ಕ್ಷೇತ್ರ ಕೂಡ ಕಾಂಗ್ರೆಸ್ ಭದ್ರಕೋಟೆಯೇ. ಜೊತೆಗೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ ಕೆ ಶಿವಕುಮಾರ್ ಎದುರಿಸುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದು. ಅಲ್ಲದೆ, ಎರಡೂ ಕ್ಷೇತ್ರಗಳಲ್ಲಿ ಅವರದೇ ಸಮುದಾಯವಾದ ಒಕ್ಕಲಿಗರು ನಿರ್ಣಾಯಕ ಪ್ರಮಾಣದಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿಯೂ ಇದು ಕಾಂಗ್ರೆಸ್ ಪಕ್ಷಕ್ಕೂ ಮತ್ತು ಸ್ವತಃ ಡಿ ಕೆ ಶಿವಕುಮಾರ್ ಅವರಿಗೂ ಪ್ರತಿಷ್ಠೆಯ ಚುನಾವಣೆ.
ಇನ್ನು ಜೆಡಿಎಸ್ ಕೂಡ ತನ್ನದೇ ವಶದಲ್ಲಿದ್ದ ಶಿರಾದಲ್ಲಿ ತನ್ನ ಪ್ರಭಾವ ಇನ್ನೂ ಕುಗ್ಗಿಲ್ಲ ಮತ್ತು ಕಳೆದ ಚುನಾವಣೆಯಲ್ಲಿ ಸತ್ಯನಾರಾಯಣ ಅವರ ಆಯ್ಕೆ ಆಕಸ್ಮಿಕವಲ್ಲ ಎಂಬುದನ್ನು ಸಾಬೀತುಮಾಡಬೇಕಿದೆ. ಆರ್ ಆರ್ ನಗರದಲ್ಲಿ ಆ ಪಕ್ಷಕ್ಕೆ ದೊಡ್ಡ ನೆಲೆಯೇನೂ ಇಲ್ಲವಾದರೂ, ರಾಜಧಾನಿಯ ಪ್ರಮುಖ ಕ್ಷೇತ್ರವಾದ ಅಲ್ಲಿ ಆ ಪಕ್ಷದ ನಡೆ ಕುತೂಹಲ ಮೂಡಿಸಿದೆ.
Also Read: ಶಿರಾ: ಉಪಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ ಒಳಗೆ ಭಿನ್ನಮತದ ಹೊಗೆ..!
ಸದ್ಯಕ್ಕೆ ಎರಡೂ ಕ್ಷೇತ್ರಗಳ ಚುನಾವಣಾ ತಯಾರಿಯ ವಿಷಯದಲ್ಲಿ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿದೆ. ಶಿರಾ ಕ್ಷೇತ್ರದ ವಿಷಯದಲ್ಲಿ ಹಿರಿಯ ನಾಯಕ ಹಾಗೂ ಸಂಸದೀಯ ಪಟು ಟಿ ಬಿ ಜಯಚಂದ್ರ ಅವರೇ ತಮ್ಮ ಪಕ್ಷದ ಹುರಿಯಾಳು ಎಂಬುದನ್ನು ಪಕ್ಷ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಘೋಷಿಸಿದ್ದಾರೆ. ಈ ಮೊದಲೇ ಆ ಕುರಿತ ಎಲ್ಲಾ ಮಾತುಕತೆ ನಡೆಸಿದ್ದ ಕೆಪಿಸಿಸಿ, ಬುಧವಾರ ಚುನಾವಣಾ ಘೋಷಣೆಯಾಗುತ್ತಿದ್ದಂತೆ ಪ್ರಮುಖರ ಸಭೆ ನಡೆಸಿ ಈ ತೀರ್ಮಾನ ಪ್ರಕಟಿಸಿದೆ.
ಮುಖ್ಯವಾಗಿ ತುಮಕೂರು ಜಿಲ್ಲಾ ರಾಜಕಾರಣದ ವಿಷಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಾಲಿಗೆ ಮಗ್ಗುಲಮುಳ್ಳಾಗಿರುವ ಕೆ ಎನ್ ರಾಜಣ್ಣ ಶಿರಾ ಉಪ ಚುನಾವಣೆಯ ವಿಷಯದಲ್ಲಿಯೂ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸ್ವತಃ ರಾಜಣ್ಣ ಅವರೇ ಜಯಚಂದ್ರ ಅವರ ಹೆಸರು ಸೂಚಿಸಿರುವುದಾಗಿಯೂ, ಜಿಲ್ಲೆಯ ಮತ್ತೊಂದು ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿಯೇ ಉಪಚುನಾವಣೆ ನಡೆಸುವುದಾಗಿಯೂ ಕೆಪಿಸಿಸಿ ಅಧ್ಯಕ್ಷರು ಘೋಷಿಸುವ ಮೂಲಕ ಎಲ್ಲಾ ವಿಘ್ನಗಳನ್ನು ದಾಟಿರುವ ನಿಟ್ಟಿಸಿರು ಬಿಟ್ಟಿದ್ದಾರೆ. ಹಾಗಾಗಿ ಪರಿಶಿಷ್ಟರು, ಒಕ್ಕಲಿಗರು ಮತ್ತು ಕುರುಬ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಆ ಜಾರಿ ಸಮೀಕರಣವನ್ನು ದಾಳವಾಗಿಟ್ಟುಕೊಂಡೇ ಜಯಚಂದ್ರ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ನಿರ್ಧರಿಸಿದೆ.
Also Read: ಶಿರಾ ಉಪ ಚುನಾಚಣೆಗೆ ಸಂಬಂಧ ಜೆಡಿಎಸ್ ನಾಯಕರ ಸಭೆ ಕರೆದ ಹೆಚ್‌ಡಿಕೆ
ಆದರೆ, ಜೆಡಿಎಸ್ ಇದಕ್ಕೆ ಪ್ರತಿ ದಾಳ ಉರುಳಿಸಲು ಸಜ್ಜಾಗಿದ್ದು, ಪರಿಶಿಷ್ಟರು ಮತ್ತು ಒಕ್ಕಲಿಗ ಮತಗಳ ತಮ್ಮ ನೆಲೆಯನ್ನೇ ನೆಚ್ಚಿಕೊಂಡು ಮಾಜಿ ಶಾಸಕ ಸತ್ಯನಾರಾಯಣ ಅವರ ಕುಟುಂಬದವರನ್ನೇ ಕಣಕ್ಕಿಳಿಸಲು ಕಾರ್ಯತಂತ್ರ ಹೆಣೆದಿದೆ. ಆದರೆ, ಈವರೆಗೂ ಆ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಬಿಜೆಪಿ ಮಾತ್ರ ಈವರೆಗೆ ಯಾವುದೇ ಅಭ್ಯರ್ಥಿಯನ್ನು ಗುರುತಿಸಿಲ್ಲ. ಹಾಗೆ ನೋಡಿದರೆ ಆ ಪಕ್ಷಕ್ಕೆ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ನೆಲೆ ಇಲ್ಲ. ಹಾಗಾಗಿ ಆಡಳಿತ ಪಕ್ಷವಾಗಿ ಅದು ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಮಾಡುವ ತಂತ್ರಗಾರಿಕೆ ಚುನಾವಣಾ ಕಣದ ಹಣಾಹಣಿಯ ತೀವ್ರತೆಯನ್ನು ನಿರ್ಧರಿಸಲಿದೆ.
ಇನ್ನು ಆರ್ ಆರ್ ನಗರದ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೂರ್ವತಯಾರಿಯ ವಿಷಯದಲ್ಲೇ ಸಾಕಷ್ಟು ತಂತ್ರ- ಪ್ರತಿತಂತ್ರದ ಹಣಾಹಣಿ ಆರಂಭವಾಗಿದೆ. ಪ್ರಮುಖವಾಗಿ ಒಕ್ಕಲಿಗ ಮತ್ತು ಅಹಿಂದ ಜಾತಿಗಳೇ ನಿರ್ಣಾಯಕವಾಗಿರುವ ರಾಜಧಾನಿಯ ಪ್ರತಿಷ್ಠಿತ ಪ್ರದೇಶದಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತಬ್ಯಾಂಕ್ ಹೊಂದಿದೆ. ಆ ಹಿನ್ನೆಲೆಯಲ್ಲಿಯೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾಗಿರುವ ಸಮುದಾಯಕ್ಕೆ ಸೇರಿದ್ದರೂ ಮುನಿರತ್ನ ಸತತ ಗೆಲುವು ಕಂಡಿದ್ದರು. ಆದರೆ, ಈಗ ಪರಿಸ್ಥಿತಿ ಅದಲು ಬದಲಾಗಿದೆ. ಮುನಿರತ್ನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ, ಮುನಿರತ್ನ ಬಿಜೆಪಿಗೆ ಸೇರಿರಬಹುದು; ಆದರೆ ಅವರೊಂದಿಗೆ ಅವರ ಮತದಾರರೂ ಬಿಜೆಪಿಗೆ ಅಪರೇಷನ್ ಕಮಲವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಈ ಉಪಚುನಾವಣೆ ಹೇಳಲಿದೆ.
ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪ್ರಭಾವ ಸಾಕಷ್ಟು ಇರುವ ಮತ್ತುಅವರ ಶೈಕ್ಷಣಿಕ ಮತ್ತು ವ್ಯವಹಾರಿಕ ಚಟುವಟಿಕೆಗಳ ನೆಲೆಯೂ ಆಗಿರುವ ಆರ್ ಆರ್ ನಗರದಲ್ಲಿ ಮುನಿರತ್ನ ಅವರ ಆಪರೇಷನ್ ಕಮಲಕ್ಕೆ ಸರಳ ರಹದಾರಿ ಇಲ್ಲ. ಆ ಹಿನ್ನೆಲೆಯಲ್ಲೇ ಕಾಂಗ್ರೆಸ್ ಕ್ಷೇತ್ರಕ್ಕೆ ದಿವಂಗತ ಮಾಜಿ ಐಎಎಸ್ ಅಧಿಕಾರಿ ಪತ್ನಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಹನುಮಂತರಾಯಪ್ಪ ಪುತ್ರಿ ಸುಷ್ಮಾ ಅವರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಹೂಡಿದೆ ಎನ್ನಲಾಗುತ್ತಿದೆ. ಈ ನಡುವೆ, ಮಾಗಡಿಯ ಎಚ್ ಸಿ ಬಾಲಕೃಷ್ಣ ಅವರ ಹೆಸರು ಕೂಡ ಕೇಳಿಬರುತ್ತಿದೆ. ಒಟ್ಟಾರೆ, ಆರ್ ಆರ್ ನಗರದ ವಿಷಯದಲ್ಲಿಯೂ ಕಾಂಗ್ರೆಸ್ ಚುನಾವಣಾ ಘೋಷಣೆಗೆ ಮುನ್ನವೇ ಸಾಕಷ್ಟು ತಯಾರಿಮಾಡಿಕೊಂಡಿದೆ.
ಈ ನಡುವೆ ಆರ್ ಆರ್ ನಗರ ಕ್ಷೇತ್ರದ ಮೇಲೆ ಡಿ ಕೆ ಶಿವಕುಮಾರ್ ಅವರಿಗೆ ಇರುವ ಪ್ರಭಾವ ಮತ್ತು ಅವರು ಮತ್ತು ಮುನಿರತ್ನ ನಡುವಿನ ಈ ಹಿಂದಿನ ಗುರುಶಿಷ್ಯ ನಂಟಿನ ಹಿನ್ನೆಲೆಯಲ್ಲಿಯೂ, ಮುನಿರತ್ನರೇ ಬಿಜೆಪಿಯಿಂದ ಕಣಕ್ಕಿಳಿದಲ್ಲಿ, ಈ ಚುನಾವಣೆ ಒಂದು ರೀತಿಯಲ್ಲಿ ಗುರುಶಿಷ್ಯರ ಕಾಳಗವೇ. ಜೊತೆಗೆ ಅಹಿಂದ ಮತಗಳ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣದ ಲಿಟ್ಮಸ್ ಟೆಸ್ಟ್ ಕೂಡ ಇದಾಗಲಿದೆ ಎನ್ನಲಾಗುತ್ತಿದೆ.
ಆದರೆ, ಜೆಡಿಎಸ್ ಮಾತ್ರ ಈ ಕ್ಷೇತ್ರದ ವಿಷಯದಲ್ಲಿ ತನ್ನ ಆಯ್ಕೆಗಳು ಮತ್ತು ತಂತ್ರಗಾರಿಕೆಯ ವಿಷಯದಲ್ಲಿ ಈವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ, ಒಕ್ಕಲಿಗ ಮತಗಳೇ ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಆ ಪಕ್ಷದ ನಡೆ ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮ ಬೀರುವುದಂತೂ ನಿಶ್ಚಿತ.
ಒಟ್ಟಾರೆ, ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಈ ಎರಡೂ ಕ್ಷೇತ್ರಗಳ ಉಪಚುನಾವಣೆ ಸವಾಲಿನದ್ದಾಗಿದ್ದು, ವಿಧಾನಸಭಾ ಬಲಾಬಲದ ವಿಷಯದಲ್ಲಿ ಅಂತಹ ವ್ಯತ್ಯಾಸವೇನೂ ಆಗದೇ ಇದ್ದರೂ, ಅದರ ಸೋಲು-ಗೆಲುವು ರಾಜಕೀಯವಾಗಿ ಸಾಕಷ್ಟು ಮಹತ್ವ ಹೊಂದಿವೆ. ಕಣದಲ್ಲಿರುವ ಅಭ್ಯರ್ಥಿಗಳ ವೈಯಕ್ತಿಕ ರಾಜಕೀಯ ಏಳುಬೀಳಿನ ಸಂಗತಿಗಿಂತ ಪಕ್ಷಗಳ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಇದು ಮಹತ್ವ ಪಡೆದುಕೊಂಡಿದೆ ಎಂಬುದು ವಿಶೇಷ.