ಬಿಜೆಪಿ ಶಾಸಕರು ಉನ್ನತ ಮಟ್ಟಕ್ಕೆ ಏರಬೇಕು, ಉನ್ನತ ಹುದ್ದೆ ಪಡೆಯಬೇಕು ಎಂದರೆ ಸಂಘ ಪರಿವಾರದ ಆಶೀರ್ವಾದ ಇರಲೇಬೇಕು ಎನ್ನುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಬಿಜೆಪಿಯ ಮಾತೃ ಸಂಸ್ಥೆ ಆಗಿರುವ ಆರ್‌ಎಸ್‌ಎಸ್, ಬಿಜೆಪಿ ಸರ್ಕಾರ ಎಲ್ಲಾ ನಿರೂಪಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ತಿಳಿದಿರುವ ವಿಚಾರ. ಕೆಲವು ವಿಚಾರಗಳ ಬಗ್ಗೆ ಆರ್‌ಎಸ್‌ಎಸ್ ನಾಯಕರ ಜೊತೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವ ಪರಿಪಾಠವಿದೆ. ಇದೀಗ ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಲವು ನಾಯಕರಿಗೆ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಕ್ಕೆ ಸಾಕಷ್ಟು ಕಷ್ಟವಾಗ್ತಿದೆ. ಇದು ಅವರ ನಡೆ ನುಡಿಯಲ್ಲೂ ಆಗಾಗ ವ್ಯಕ್ತವಾಗುತ್ತಲೇ ಇದೆ.
ಇನ್ನೂ ಕೆಲವು ನಾಯಕರು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದರೂ ಬಿ.ಎಸ್ ಯಡಿಯೂರಪ್ಪ ಕೊಟ್ಟಿದ್ದ ಆಶ್ವಾಸನೆಯಿಂದ ಮಂತ್ರಿಗಳಾಗಿದ್ದಾರೆ. ಈ ಅವಧಿ ಮುಗಿದರೆ ಬಿ.ಎಸ್. ಯಡಿಯೂರಪ್ಪ ಮೂಲೆ ಗುಂಪಾಗುವುದು ಶತಸಿದ್ಧ. ಆ ಬಳಿಕ ಪಕ್ಷದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಸಂಘ ಪರಿವಾರದ ಕೃಪೆ ಇರಲೇಬೇಕೆಂಬುದನ್ನು ಮನಗಂಡು ಸಂಘ ಪರಿವಾರವನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮೊದಲಿಗ ಎಂದರೆ ಕೆ.ಆರ್. ಪೇಟೆಯಿಂದ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ನಾರಾಯಣಗೌಡ. ಹಾಗು ಯಶವಂತಪುರ ಕ್ಷೇತ್ರದ ಎಸ್.ಟಿ. ಸೋಮಶೇಖರ್.
ಮುಂಬೈನಲ್ಲಿ ಹೋಟೆಲ್ ಉದ್ಯಮಿ ಆಗಿರುವ ಕೆ.ಆರ್. ಪೇಟೆ ತಾಲೂಕಿನ ಕೈಗೋನಹಳ್ಳಿಯ ನಾರಾಯಣಗೌಡ, ಅಲ್ಲಿಂದ ಮತ್ತೆ ತವರೂರಿಗೆ ವಾಪಸ್ ಬಂದು ಜೆಡಿಎಸ್ ಟಿಕೆಟ್ ಗಿಟ್ಟಿಸಿ ಶಾಸಕರಾಗಿದ್ದರು. ಎರಡು ಬಾರಿ ಶಾಸಕರಾದ ಬಳಿಕ ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇದೀಗ ಗೆದ್ದು ಬಿಜೆಪಿಯಿಂದ ಸಚಿವರಾಗಿದ್ದಾರೆ. ಇದೀಗ ಸಂಘ ಪರಿವಾರವನ್ನೂ ಸೆಳೆಯಲು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎನ್ನುವ ಮೂಲಕ ಕನ್ನಡಿಗರ ಆಕ್ರೋಶ ಕಾರಣವಾಗಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಸಚಿವ ನಾರಾಯಣಗೌಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಿರುವ ಸಚಿವ ನಾರಾಯಣಗೌಡ, ಕೊನೆಯಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರಿಸಿದ್ದಾರೆ. ಇಂದು ನಾನು ಏನೇ ಆಗಿದ್ದರು ಅದು ಮಹಾರಾಷ್ಟ್ರದಿಂದ ಮಾತ್ರ. ಕಳೆದ 35 ವರ್ಷಗಳ ಹಿಂದೆ ಮುಂಬೈಗೆ ಹೋಗಿದ್ದ ನಾನು ಈಗ ಮಹಾರಾಷ್ಟ್ರದಲ್ಲಿ ದೊಡ್ಡ ಹೋಟೆಲ್ ಉದ್ಯಮಿ ಆಗಿದ್ದೇನೆ. ಬಿಲ್ಡರ್ ಕೂಡ ಆಗಿ ಮತ್ತೆ ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ. ನನ್ನ ದೇಹದಲ್ಲಿ ಏನಾದರೂ ತಾಕತ್ತಿದೆ ಅಂದರೆ ಅದು ಮಹಾರಾಷ್ಟ್ರದಿಂದ ಮಾತ್ರ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ವಾರ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಹಾರಾಷ್ಟ್ರಕ್ಕೆ ಜೈ ಎಂದಿದ್ರು. ಯಾವಾಗ ವಿವಾದ ಸ್ವರೂಪ ಪಡೀತೋ ಆಗ ಉಲ್ಟಾ ಹೊಡೆದಿದ್ದ ಶಾಸಕ ಬಸಬರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ, ನಾನು ಮರಾಠ ಯುವಕ ಮಂಡಳಿ ಆಯೋಜಿಸಿದ್ದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಬಳಿಕ ಜೈ ಶಿವಾಜಿ ಎಂದ ಕೂಡಲೇ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಎಂದಿದ್ದು. ಉದ್ದೇಶಪೂರ್ವಕವಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಇದೀಗ ಮಿನಿಸ್ಟರ್ ಒಬ್ಬರು ಸಂಘ ಪರಿವಾರ ಓಲೈಸಿಕೊಳ್ಳುವ ಉದ್ದೇಶದಿಂದ ಹಿಂದಿಯಲ್ಲಿ ಭಾಷಣ ಮಾಡಿ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದಿದ್ದಾರೆ ಎಂದು ಆಕ್ರೋಶ ಭುಗಿಲೆದ್ದಿದೆ.
ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಮಂಡ್ಯ ಜನರೇ ನಿರ್ಧಾರ ಮಾಡುತ್ತಾರೆ. ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರ ನಾಡಾಗಿದೆ. ಮಹಾರಾಷ್ಟ್ರದಲ್ಲಿ ಉದ್ಯಮ ಮೂಲಕ ಹಣ ಮಾಡಿರಬಹುದು. ಆದೇ ದುಡ್ಡಲ್ಲಿ ನಾನು ಜನರನ್ನು ಕೊಂಡುಕೊಂಡಿದ್ದೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಂಡ್ಯದ ಕೆ.ಆರ್ ಪೇಟೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್ ನಾರಾಯಣಗೌಡ ಮಾತನಾಡಿ ಕೂಡಲೇ ರಾಜೀನಾಮೆ ಕೊಟ್ಟು ಕನ್ನಡಿಗರ ಕ್ಷಮಾಪಣೆ ಕೇಳಬೇಕು. ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಮಾತನಾಡಿರುವುದು ತಪ್ಪು ಎಂದು ಖಂಡಿಸಿದ್ದಾರೆ. ವಿವಾದ ಸ್ವರೂಪ ಪಡೆಯುವ ಮುನ್ನ ಮಂಡ್ಯದಲ್ಲಿ ಮಾತನಾಡಿರುವ ಸಚಿವ ನಾರಾಯಣಗೌಡ ಕನ್ನಡಿಗರ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಈ ರೀತಿ ಮರಾಠಿ ಪ್ರೇಮ ಬೆಳಗಾವಿ ರಾಜಕಾರಣಿಗಳಲ್ಲಿ ಆಗಾಗ ಕಾಣಿಸುತ್ತದೆ. ಚುನಾವಣೆ ಘೋಷಣೆಯಾದ ವೇಳೆ ಅಲ್ಲಿನ ರಾಜಕಾರಣಿಗಳು ಮಹಾರಾಷ್ಟಕ್ಕೂ ಜೈ ಎನ್ನುತ್ತಾರೆ. ಅದಕ್ಕೆ ಕಾರಣ ಎಂದರೆ ಬೆಳಗಾವಿ ಗಡಿ ಭಾಗದಲ್ಲಿರುವ ಮರಾಠಿ ಮತದಾರ ಮತಗಳನ್ನು ಗಳಿಸುವ ಉದ್ದೇಶವಿರುತ್ತದೆ. ಆದರೆ ಮಂಡ್ಯದಲ್ಲಿ ಅಪ್ಪಟ ಕನ್ನಡಿಗರೇ ವಾಸ ಮಾಡುತ್ತಿದ್ದು, ಇಲ್ಲಿ ಮರಾಠಿ ಮತದಾರರನ್ನು ಸೆಳೆದು ಗೆಲುವು ಸಾಧಿಸುವ ಯಾವುದೇ ಪ್ರಮೆಯವಿಲ್ಲ. ಆದರೂ ಸಚಿವ ನಾರಾಯಣಗೌಡ ಮರಾಠಿ ಪ್ರೇಮ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ರೂಪು ರೇಷೆ ಸಿದ್ದವಾಗುವಾಗಲೇ ಕ್ಷಮೆ ಕೇಳಿ ನಾರಾಯಣಗೌಡ ಬಚಾವ್ ಆಗಿದ್ದಾರೆ.