ಕೆಲವು ತಿಂಗಳುಗಳ ಹಿಂದೆ ಅಮೆರಿಕದ ಮಾಧ್ಯಮಗಳು ಒಂದು ವಿಷಯದ ಬಗ್ಗೆ ಆತಂಕ ವ್ಯಕ್ತಪಡಿಸುವ ಜೊತೆಗೆ, ಎಚ್ಚರಿಸುವ ಕೆಲಸವನ್ನು ಮಾಡಿದ್ದವು. ಅದೇನೆಂದರೆ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿಸಲು ಮತ್ತು ರಾಜಕೀಯ ಧ್ರುವೀಕರಣಕ್ಕಾಗಿ ಡೀಪ್‌ಫೇಕ್ ತೀವ್ರವಾಗಿ ಬಳಕೆಯಾಗಲಿದೆ ಎಂದು ಹೇಳಿದ್ದವು.
ಅಚ್ಚರಿಯ ಸಂಗತಿಯೆಂದರೆ ಅದನ್ನು ಭಾರತದಲ್ಲಿ ಈಗಾಗಲೇ ಬಳಸಲಾಗಿದೆ!
ಹೌದು, ಕಳೆದ ಡಿಸೆಂಬರ್ 8ರಂದು ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯು ಡೀಪ್‌ಫೇಕ್ ಅನ್ನು ಬಳಸಿದೆ ಎಂದು ವೈಸ್.ಕಾಮ್‌ನ ತನಿಖಾ ವರದಿ ದಾಖಲೆಗಳೊಂದಿಗೆ ವಿವರಿಸಿದೆ.
ಡೀಪ್‌ಫೇಕ್, ಸುಲಭವಾಗಿ ಗುರುತಿಸಲಾಗದ ನಕಲಿ ವಿಡಿಯೋ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ರೂಪಿಸಿದ ವಿಡಿಯೋ ಇದಾಗಿದ್ದು, ಇದರ ಸತ್ಯಾಸತ್ಯತೆಯನ್ನು ಗುರುತಿಸುವುದು ಸುಲಭವಲ್ಲ. ಎಂಥವರನ್ನು ಬೇಸ್ತುಬೀಳಿಸುವಷ್ಟು ಸಮರ್ಥವಾಗಿರುತ್ತವೆ ಈ ವಿಡಿಯೋಗಳು.
ಇಂಥ ನಕಲಿ ವಿಡಿಯೋವನ್ನು ದೆಹಲಿ ಚುನಾವಣೆ ವೇಳೆ ಬಳಸಿರುವುದಾಗಿ ನಿಲೇಶ್ ಕ್ರಿಸ್ಟೋಫರ್ ಮಾಡಿರುವ ವರದಿ ಬಿಚ್ಚಿಡುತ್ತದೆ. ಮತದಾನದ ಮುನ್ನಾದಿನವಾದ ಫೆಬ್ರವರಿ 7ರಂದು ಬಿಜೆಪಿಯ ರಾಜ್ಯಾಧ್ಯಕ್ಷ ಮನೋಜ್ ತಿವಾರಿಯವರ ಎರಡು ವಿಡಿಯೋಗಳು ಹರಿದಾಡಿದವು. ಇದರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವನ್ನು ಅವರು ತೀವ್ರವಾಗಿ ಟೀಕಿಸಿದ್ದರು. ಈ ವಿಡಿಯೋಗಳು ವಾಟ್ಸ್‌ಆಪ್‌ನಲ್ಲಿ ವೈರಲ್ ಆದವು.
ಮೊದಲ ವಿಡಿಯೋದಲ್ಲಿ ತಿವಾರಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರೆ, ಇನ್ನೊಂದರಲ್ಲಿ ಹರಿಯಾಣ್ವಿಯಲ್ಲಿ ಮಾತನಾಡಿದ್ದಾರೆ. ಇದರಲ್ಲಿ ತಿವಾರಿ, ” ಕ್ರೇಜಿವಾಲ್, ತಮ್ಮ ಮಾತಿನಂತೆ ನಡೆದುಕೊಳ್ಳದೆ ಮೋಸ ಮಾಡಿದ್ದಾರೆ. ಆದರೆ ಈಗ ದೆಹಲಿಗೆ ಎಲ್ಲವನ್ನೂ ಬದಲಿಸುವ ಅವಕಾಶವಿದೆ. ಮೋದಿ ನೇತೃತ್ವದ ಸರ್ಕಾರ ರಚಿಸಲು ಫೆಬ್ರವರಿ 8ರಂದು ಕಮಲದ ಗುರುತಿನ ಬಟನ್ ಒತ್ತಿ” ಎಂದು ಹೇಳಿದ್ದರು. ಈ ವಿಡಿಯೋದ ಇಂಗ್ಲಿಷ್ ಮತ್ತು ಹರಿಯಾಣ್ವಿ ವಿಡಿಯೋ ಇಲ್ಲಿವೆ.
44 ಸೆಕೆಂಡ್‌ಗಳ ವಿಡಿಯೋವನ್ನು ನೋಡಿದ ಯಾರಿಗೂ ಇದು, ಸಾಮಾನ್ಯ ಚುನಾವಣಾ ಪ್ರಚಾರದ ವಿಡಿಯೋ ಎಂದೇ ಅನ್ನಿಸುತ್ತದೆ. ಆದರೆ ವಾಸ್ತವದಲ್ಲಿ ಇದು ನಿಜವಾದ ವಿಡಿಯೋ ಅಲ್ಲ. ಮೂಲ ವಿಡಿಯೋ ಇಲ್ಲಿದೆ. ಇದರಲ್ಲಿ ತಿವಾರಿ ಸಿಎಎ ಜಾರಿ ಕುರಿತು ತಿವಾರಿ ಮಾತನಾಡಿದ್ದಾರೆ.
ಆಡಿಯೋ, ವಿಡಿಯೋ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿ, ಸತ್ಯದ ತಲೆಯ ಮೇಲೆ ಹೊಡೆಯುವಂತಹ ವಿಡಿಯೋಗಳನ್ನು ಸೃಷ್ಟಿಸಲು ಸಾಧ್ಯವಿದೆ ಎನ್ನುತ್ತಾರೆ ತಂತ್ರಜ್ಞರು. 2017ರಿಂದ ಇಂಥ ವಿಡಿಯೋಗಳ ಸೃಷ್ಟಿಯಾಗುತ್ತಿದ್ದು, ಇವುಗಳನ್ನು ನೀಲಿ ಚಿತ್ರಗಳಲ್ಲಿ ಬಳಸಲಾಗುತ್ತಿದೆ. ಜನಪ್ರಿಯ ತಾರೆಗಳ ಮುಖಗಳನ್ನು ನೀಲಿಚಿತ್ರಗಳ ನಟರ ಮುಖಕ್ಕೆ ಹೊಂದಿಸಿ ಜನರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹೀಗೆ ದುರ್ಬಳಕೆಯಾಗುತ್ತಿರುವ ಈ ತಂತ್ರಜ್ಞಾನವನ್ನು ಈಗ ಜನರನ್ನು ಹಾದಿ ತಪ್ಪಿಸುವ, ರಾಜಕೀಯವಾಗಿ ಧ್ರುವೀಕರಿಸುವ, ತಪ್ಪು ಮಾಹಿತಿಯನ್ನು ಹರಡುವ ಉದ್ದೇಶಗಳಿಗೆ ಬಳಸಲಾಗುತ್ತಿದೆ.
ವೈಸ್.ಕಾಂ ವರದಿಯಲ್ಲಿ ಉಲ್ಲೇಖಿಸಿರುವಂತೆ ದೆಹಲಿಯ ಬಿಜೆಪಿ ಐಟಿ ಸೆಲ್, ರಾಜಕೀಯ ಸಂವಹನ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಂಸ್ಥೆ ದಿ ಐಡಿಯಾಜ್ ಫ್ಯಾಕ್ಟರಿಯೊಂದಿಗೆ ಕೈ ಜೋಡಿಸಿ, ಡೀಪ್‌ಫೇಕ್ ಮೂಲಕ ಗುಣಾತ್ಮಕ ಪ್ರಚಾರವನ್ನು ರೂಪಿಸುವುದಕ್ಕೆ ಮುಂದಾದರು. ಈ ಮೂಲಕ ಭಿನ್ನ ಭಾಷಿಕ ಮತದಾರರನ್ನು ಪ್ರಭಾವಿಸುವ ಪ್ರಯತ್ನ ಮಾಡಲಾಯಿತು.
ಹಸಿರುವ ಬಣ್ಣದ ಪರದೆಯ ಮುಂದೆ ಕುಳಿತಿರುವ ತಿವಾರಿಯವರು ಕ್ಯಾಮೆರಾಕ್ಕೆ ಮುಖ ಮಾಡಿ ಮಾತನಾಡಿದ್ದಾರೆ. ಆದರೆ ಇಂಗ್ಲಿಷ್ ಮತ್ತು ಹರಿಯಾಣ್ವಿಯಲ್ಲಿ ಆಡಿರುವ ಯಾವ ಮಾತುಗಳು, ವಾಸ್ತವದಲ್ಲಿ ಅವರು ಆಡಿದ ಮಾತುಗಳೇ ಅಲ್ಲ. ಅವುಗಳನ್ನು ಬರೆದು, ಬಿಜೆಪಿ ಐಟಿ ಸೆಲ್ ಅನುಮತಿ ಪಡೆದು ಸೃಷ್ಟಿಸಲಾದ ಡೀಪ್‌ಫೇಕ್.
ವೈಸ್‌ಗೆ ಹೇಳಿಕೆಯನ್ನು ನೀಡಿರುವ ದೆಹಲಿ ಬಿಜೆಪಿ ಐಟಿ ಸೆಲ್‌ನ ಉಸ್ತುವಾರಿ ವಹಿಸಿಕೊಂಡಿರುವವರಲ್ಲಿ ಒಬ್ಬರಾದ ನೀಲಕಾಂತ್ ಬಕ್ಷಿ, “ಡೀಪ್‌ಫೇಕ್ ತಂತ್ರಜ್ಞಾನ ನಮ್ಮ ಪ್ರಚಾರ ಕಾರ್ಯವನ್ನು ಹಿಂದೆಂದಿಗಿಂತ ಹೆಚ್ಚು ಪ್ರಭಾವಿಯಾಗಿಸುವಲ್ಲಿ ನೆರವಾಗಿದೆ” ಎಂದಿದ್ದಾರೆ. ‘ಹರಿಯಾಣ್ವಿ ವಿಡಿಯೋ, ಅದೇ ಭಾಷೆ ಮಾತನಾಡುವ ಮತದಾರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ವಾಸ್ತವದಲ್ಲಿ ಅಭ್ಯರ್ಥಿಯ ಆ ಭಾಷೆಯಲ್ಲಿ ಮಾತನಾಡಿಯೇ ಇಲ್ಲ” ಎಂದು ಬಕ್ಷಿ ವಿವರಿಸಿದ್ದಾರೆ. ಬಕ್ಷಿ ಅವರ ಹೇಳಿಕೆಯ ಪ್ರಕಾರ ಸುಮಾರು 5800 ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಈ ವಿಡಿಯೋ ಹಂಚಲಾಗಿದ್ದು, ಸುಮಾರು 1.5 ಕೋಟಿ ಜನರಿಗೆ ತಲುಪಿದೆ ಎಂದು ಅಂದಾಜು ಮಾಡಿದ್ದಾರೆ.
ದೆಹಲಿಯಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಹರಿಯಾಣದಿಂದ ಉದ್ಯೋಗ ಅರಸಿ ವಲಸೆ ಬಂದ ಜನರಿದ್ದು, ತಿವಾರಿಯವರ ಸೃಷ್ಟಿಸಲಾದ ವಿಡಿಯೋ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ವೈಸ್.ಕಾಂ ವರದಿ ವಿಶ್ಲೇಷಿಸಿದೆ.
ವಿಡಿಯೋ ಸೃಷ್ಟಿಯ ಕುರಿತು ವೈಸ್.ಕಾಮ್‌ಗೆ ವಿವರಣೆ ನೀಡಿರುವ ಐಡಿಯಾಜ್ ಫ್ಯಾಕ್ಟರಿಯ ಚೀಫ್ ಸ್ಟ್ರಾಟರ್ಜಿಸ್ಟ್ ಸಾಗರ್ ವಿಷ್ಣೋಯ್, ” ಲಿಪ್ ಸಿಂಕ್ ಡೀಪ್ ಫೇಕ್ ಆಲ್ಗರಿದಮ್ ಅನ್ನು ಬಳಸಲಾಗಿದ್ದು, ಇದನ್ನು ತಿವಾರಿಯ ಭಾಷಣಗಳನ್ನು ಕೇಳಿಸಿಕೊಂಡು ಶಬ್ದವನ್ನು ತುಟಿಗಳ ಚಲನೆಯನ್ನಾಗಿ ಪರಿವರ್ತಿಸುವಂತೆ ಮಾಡಲಾಯಿತು. ನಂತರ ತಿವಾರಿಯನ್ನು ಅನುಕರಣೆ ಮಾಡುವ ಕಂಠದಾನ ಕಲಾವಿದರನ್ನು ಕರೆಸಿ, ಹರಿಯಾಣ್ವಿಯಲ್ಲಿ ಬರೆದ ಸಾಲುಗಳನ್ನು ರೆಕಾರ್ಡ್ ಮಾಡಿ, ವಿಡಿಯೋದಲ್ಲಿ ಬಳಸಲಾಯಿತು” ಎಂದು ವಿವರಿಸಿದರು.
ವೈಸ್ ಈ ವಿಡಿಯೋಗಳನ್ನು ನ್ಯೂಯಾರ್ಕ್‌ನಲ್ಲಿರುವ ರೋಶೆಸ್ಟರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪರಿಶೀಲನೆ ನೀಡಿದ್ದು, ಅವರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವುದಾಗಿ ವರದಿಯಲ್ಲಿ ಹೇಳಿದೆ. ರೋಶೆಸ್ಟರ್ ಸಂಸ್ಥೆ ಡೀಪ್‌ಫೇಕ್ ಪತ್ತೆಗೆಂದೇ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದು, ಸ್ವತಃ ವಿಡಿಯೋ ಪರಿಶೀಲಿಸಿ ವರದಿ ಸಲ್ಲಿಸುತ್ತದೆ. ಐಡಿಯಾಜ್ ಫ್ಯಾಕ್ಟರಿ ಡೀಪ್‌ಫೇಕ್ ವಿಡಿಯೋ ರೂಪಿಸುವ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ ಹೋಗಿದ್ದರು, ಡೀಪ್‌ಫೇಕ್ ಕುರಿತು ಅಧ್ಯಯನ ಮಾಡುತ್ತಿರುವ ಸನಿಯಾಟ್ ಜಾವಿದ್ ಸೊಹ್ರವರ್ದಿ ಅವರು, ಎನ್‌ವಿಡಿಯಾ ಅವರ ವಿಡ್2ವಿಡ್ ಕೋಡ್ ಬಳಸಲಾಗಿದೆ. ಇದನ್ನು ಬಿಟ್ಟರೆ ಫೇಸ್2ಫೇಸ್ ಹೆಸರಿನ ಅಪ್ಲಿಕೇಷನ್ ಬಳಸಲಾಗಿದೆ. ಇದನ್ನು ಬಳಸಿಯೇ ಒಬಾಮ್ ಡೀಪ್‌ಫೇಕ್ ಸೃಷ್ಟಿ ಮಾಡಿದ್ದು ವರದಿಯಲ್ಲಿ ಉಲ್ಲೇಖಿಸಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಡೀಪ್‌ಫೇಕ್ ಸದ್ದು ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿ ಕಾಣುತ್ತಿಲ್ಲ ಎಂದು ಅನೇಕ ತಂತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಯನ್ನು ತೆಳುವಾಗಿಸುತ್ತಿರುವ ಈ ತಂತ್ರಜ್ಞಾನ, ಭಾರಿ ಸವಾಲುಗಳನ್ನು ಒಡ್ಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಡಿಜಿಟಲ್ ಸಾಕ್ಷರತೆ ತೀರಾ ಪ್ರಾಥಮಿಕ ಹಂತದಲ್ಲಿರುವ ಭಾರತದಲ್ಲಿ, ಸಣ್ಣ ಪುಟ್ಟ ವಿಡಿಯೋಗಳೇ ಹಿಂಸಾಚಾರಗಳಿಗೆ ಕಾರಣವಾಗಿದೆ.
ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವ ಸವಾಲನ್ನು ಇನ್ನಷ್ಟು ಸಂಕೀರ್ಣವಾಗಿಸಲಿರುವ ಡೀಪ್‌ಫೇಕ್ ಅನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದೇ ಅಮೆರಿಕ ವ್ಯಾಖ್ಯಾನಿಸಿದೆ. ಕಳೆದ ಎರಡು ವರ್ಷಗಳಿಂದ ರಾಜಕೀಯವಾಗಿ ಬಳಕೆಯಾಗುತ್ತಿರುವ ತಂತ್ರಜ್ಞಾನದ ಮೂಲಕ ಬರಾಕ್ ಒಬಾಮ, ಗಾಬನ್‌ನ ಅಧ್ಯಕ್ಷ ಅಲಿ ಬಾಂಗೊ ವಿಡಿಯೋಗಳನ್ನು ಸೃಷ್ಟಿಸಲಾಗಿದೆ.
ಕೃಪೆ: ಟೆಕ್ ಕನ್ನಡ