ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಲು, 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಲು, ಇನ್ನೂ ಹತ್ತಿಪತ್ತು ಮಂದಿ ಗಾಯಾಳುಗಳಾಗಲು, ಎರಡೂ ದೇಶಗಳು ಈಗ ಗಡಿಯಲ್ಲಿ ತಮ್ಮ ಸೇನಾ ಬಲವನ್ನು ಹೆಚ್ಚಿಸಲು, ಅದರಿಂದಾಗಿ ದೇಶದೊಳಗೆ ಆತಂಕ ನಿರ್ಮಾಣವಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗಳೇ ಕಾರಣ ಎಂದು ದಿನದಿಂದ ದಿನಕ್ಕೆ ಸಾಬೀತಾಗತೊಡಗಿವೆ. ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗಳು ಹೇಗಿವೆ ಎಂಬುದನ್ನು ನೋಡಲು ಇದು ಸಕಾಲ.
2014ರಲ್ಲಿ ಪ್ರಧಾನ ಮಂತ್ರಿಯ ಪಟ್ಟಕ್ಕೇರಿದ ನರೇಂದ್ರ ಮೋದಿ ಈವರೆಗೆ ಉದ್ದಕ್ಕೂ ಮಾಡಿಕೊಂಡು ಬಂದಿದ್ದು ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವ ಕೆಲಸವನ್ನು ಮಾತ್ರ. ದೇಶದೊಳಗಷ್ಟೇ ಅಲ್ಲ, ವಿದೇಶದಲ್ಲೂ ತಾನು ಅಪ್ರತಿಮ ನಾಯಕ ಎಂದು ಬಿಂಬಿಸಿಕೊಳ್ಳಲು ಹಪಹಪಿಸಿದರು. ಅವರ ಹಿಂಬಾಲಕರು ‘ಮೋದಿ ವಿಶ್ವಗುರು ಆಗುವತ್ತ ಅಡಿ ಇಟ್ಟಿದ್ದಾರೆ’ ಎಂದು ಪ್ರಚಾರ ಮಾಡಿದರು. ಈ ನಡುವೆ ನರೇಂದ್ರ ಮೋದಿ ಮತ್ತು ಅವರ ಹಿಂಬಾಲಕರು ಮರೆತದ್ದು ಭಾರತವನ್ನು!
ಅದು ಹೇಗೆ ಎಂದರೆ ಮೋದಿ, ಬಿಜೆಪಿ, ಆರ್ ಎಸ್ ಎಸ್ ಹಾಗೂ ಇನ್ನಿತರ ಅವರ ಕಾರ್ಯಪಡೆಯ ಕಾಲಾಳುಗಳೆಲ್ಲಾ ‘ಮೋದಿ ಮೊದಲು, ದೇಶ ನಂತರ’ ಎಂದೇ ಬಿಂಬಿಸಿತೊಡಗಿದರು. ‘ಮೋದಿಯಿಂದ ಭಾರತಕ್ಕೆ ಹೆಸರು’, ‘ಮೋದಿಯಿಂದ ಇಂದು ಭಾರತವನ್ನು ಜಗತ್ತು ಗುರುತಿಸುತ್ತಿದೆ’ ಎಂದೇ ಹುಸಿ ಪ್ರಚಾರಗೈದರು. ಮೋದಿಯನ್ನು ಮೆರೆಸಲು ಭಾರತಕ್ಕೆ ನಂತರದ ಪ್ರಾಶಸ್ತ್ಯ ನೀಡಿದರು. ಇದು ನರೇಂದ್ರ ಮೋದಿ ಅವರ ಅಧಿಕೃತ ವಿದೇಶಾಂಗ ನೀತಿಯ ಅನಧಿಕೃತವಾದ ನಿಲುವು ಕೂಡ ಆಗಿತ್ತು.
ವಿದೇಶಾಂಗ ನೀತಿಯಲ್ಲಿ ನೆರೆಯ ದೇಶಗಳೊಂದಿಗೆ ಹೇಗಿರಬೇಕು? ಇತರೆ ದೇಶಗಳೊಂದಿಗೆ ಹೇಗಿರಬೇಕು? ಮಿತ್ರ ರಾಷ್ಟ್ರಗಳು ಯಾವ್ಯಾವು? ಶತ್ರು ದೇಶಗಳು ಯಾವ್ಯಾವು? ನಮ್ಮನ್ನು ಅವಲಂಬಿಸಿರುವ ದೇಶಗಳು ಯಾವ್ಯಾವು? ನಾವು ಅವಲಂಬಿಸಿರುವ ದೇಶಗಳು ಯಾವ್ಯಾವು? ಎಂಬ ಹಲವು ಸಂಗತಿಗಳಿರುತ್ತವೆ. ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಅಳೆದು ತೂಗಿ ಅಡಿ ಇಡಬೇಕಾಗುತ್ತದೆ. ಆದರೆ ನರೇಂದ್ರ ಮೋದಿ ಅವರು ಅಂಥ ಯಾವ ಲೆಕ್ಕಾಚಾರವನ್ನೂ ಮಾಡದೆ ಮುಂದಡಿ ಇಟ್ಟರು. ಮೊದಲ ಅವಧಿಯಲ್ಲಿ ನೆಪ ಮಾತ್ರಕ್ಕೆ ಸುಷ್ಮಾ ಸ್ವರಾಜ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಿ ತಾವು ವಿಶ್ವಪರ್ಯಟನೆ ನಡೆಸಿದರು. ಈ ಬಾರಿ ಅಧಿಕಾರಿ ಎಸ್. ಜೈಶಂಕರ್ ಅವರನ್ನು ತಂದು ಕೂರಿಸಿ ಸುಮ್ಮನಾಗಿದ್ದಾರೆ.
ಹಲವು ದೇಶಗಳನ್ನು ಸುತ್ತಿ ಬಂದ ಮೋದಿ ಎಷ್ಟು ಬಂಡವಾಳ ಹೊತ್ತು ತಂದಿದ್ದಾರೆ? ಎಷ್ಟು ತಂತ್ರಜ್ಞಾನದ ವಿನಿಮಯ ಮಾಡಿಕೊಂಡಿದ್ದಾರೆ? ಎಷ್ಟು ಮಂದಿ ವಿಶ್ವದ ಮುಂಚೂಣಿ ನಾಯಕರು ಭಾರತದ ಪರ ದನಿ ಎತ್ತಲು ಸಿದ್ದರಿದ್ದಾರೆ? ಎಂಬುದನ್ನು ಅವರ ಸರ್ಕಾರವಾಗಲಿ, ಸುದ್ದಿಗಳನ್ನು, ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡುವ ಅವರ ಪಕ್ಷದ ಐಟಿ ಸೆಲ್ ಆಗಲಿ, ‘ಭಕ್ತಗಣ’ವಾಗಲಿ ಯಾರೂ ಮಂಡಿಸಿಲ್ಲ. ಉತ್ಪ್ರೇಕ್ಷೆ ಮಾಡಿ, ಇರುವುದನ್ನು ಇಲ್ಲದಿರುವುದನ್ನು ಎಲ್ಲವನ್ನೂ ಸೇರಿಸಿ ಏನೋ ಒಂದು ಹೇಳಬೇಕಿತ್ತು. ಆದರೆ ಏನೂ ಹೇಳುತ್ತಿಲ್ಲ ಎಂದರೆ ಅವರುಗಳಿಗೆ ‘ಶೂನ್ಯದಿಂದ ಸೃಷ್ಟಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದೇ ತಾನೇ ಅರ್ಥ?
ಏಕೆಂದರೆ ಮೋದಿ ದೇಶ-ದೇಶ ಸುತ್ತಿದ್ದೇ ಬೇರೆ ಉದ್ದೇಶಕ್ಕೆ; ತಮ್ಮ ವರ್ಚಸ್ಸು ವೃದ್ಧಿಗಾಗಿ. ಉದಾಹರಣೆಗೆ ಚೀನಾ ವಿಷಯವನ್ನು ನೋಡಬಹುದು. ಕಳೆದ 6 ವರ್ಷದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಮೋದಿ ಬೇರೆ ಬೇರೆ ಸಂದರ್ಭಗಳಲ್ಲಿ 18 ಬಾರಿ ಭೇಟಿ ಮಾಡಿದ್ದಾರೆ. ಅವರ ಹುಟ್ಟೂರಿಗೆ ಹೋಗಿದ್ದಾರೆ. ಕ್ಸಿ ಜಿನ್‌ಪಿಂಗ್ ಅವರನ್ನು ತಮ್ಮ ಹುಟ್ಟೂರು ವಡ್ನಗರಕ್ಕೆ ಕೈಹಿಡಿದು ಕರೆತಂದಿದ್ದಾರೆ. ವೈಯಕ್ತಿಕವಾಗಿ ಮೋದಿ-ಕ್ಸಿ ಜಿನ್‌ಪಿಂಗ್ ಸಂಬಂಧ ಗಟ್ಟಿಯಾಗಿದೆ. ಆದರೆ ಭಾರತ ಮತ್ತು ಚೀನಾ ಸಂಬಂಧ? ನಿಜಕ್ಕೂ ಭಾರತ ಮತ್ತು ಚೀನಾ ಸಂಬಂಧ ಮೋದಿ ಬಂದ ಬಳಿಕ ಗಟ್ಟಿಯಾಗಿದ್ದರೆ ಈಗ ಗಡಿಯಲ್ಲಿ ಸಂಘರ್ಷ ಸೃಷ್ಟಿ ಆಗಿದ್ದೇಕೆ?
ಇನ್ನೊಂದು ವಿಷಯವನ್ನೂ ಗಮನಿಸಬೇಕು. ದೇಶದಲ್ಲಿ ನೋಟು ರದ್ದುಗೊಳಿಸಿದ ಪರಿಣಾಮ ದೇಶ ಕಡುಕಷ್ಟ ಎದುರಿಸುತ್ತಿದ್ದಾಗ, ಆರ್ಥಿಕ ಹಿನ್ನಡೆ ಉಂಟಾದಾಗ, ‘ಇನ್ ಟಾಲರೆನ್ಸ್’ ಸದ್ದು ಮಾಡುತ್ತಿದ್ದಾಗ ಹಾಗೂ ಇನ್ನಿತರ ಸಂದಿಗ್ಧ ಸಂದರ್ಭಗಳಲ್ಲಿ ನರೇಂದ್ರ ಮೋದಿ ಭರ್ಜರಿ ವಿದೇಶ ಪ್ರವಾಸ ಮಾಡಿದ್ದಾರೆ. ಜೊತೆಗೆ ಅವಾಗೆಲ್ಲಾ ಮೋದಿಗೆ ವಿದೇಶಗಳಲ್ಲೂ ಭಾರೀ ಮನ್ನಣೆ ಇದೆ ಎಂದು ದೇಶದಲ್ಲಿ ಬಿಂಬಿಸಲಾಗಿದೆ. ಆ ಮೂಲಕ ಅಸಲಿ ಸಮಸ್ಯೆಯಿಂದ ವಿಷಯಾಂತರ ಮಾಡಲಾಗಿದೆ. ಇದೇ ತಂತ್ರವನ್ನು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲೂ ಅನುಸರಿಸಲಾಗಿದೆ.
ಮೋದಿ ಇತರೆ ಪಕ್ಷಗಳ ನಾಯಕರ ಜೊತೆ ಬಹಳ ಚೆನ್ನಾಗಿ ಮಾತನಾಡುತ್ತಾರೆ. ಆದರೆ ರಾಜಕೀಯವಾಗಿ ರಾಜೀ ಸ್ವಭಾವದವರಲ್ಲ. ಅದೇ ರೀತಿ ಅವರ ವಿದೇಶಾಂಗ ನೀತಿಯಲ್ಲಿ ಹೆಸರಿಗೆ ‘ನೈಬರರ್ ಫಸ್ಟ್’ ಎಂಬ ಕಲ್ಪನೆ ಇದೆ. ವಾಸ್ತವವಾಗಿ ಇಲ್ಲ. ಉದಾಹರಣೆಗೆ 2014ರಿಂದ ಈಚೆಗೆ ಟಿಬೆಟಿಯನ್ ಧರ್ಮ ಗುರುಗಳಾದ ದಲೈ ಲಾಮಾ ಮತ್ತಿತರ ವಿಷಯದಲ್ಲಿ ಮೋದಿ ಮೌನವಾಗಿದ್ದಾರೆ. ಹಾಗಾಗಿ ಈಗ ಭಾರತ-ಚೀನಾ ಸಂಘರ್ಷದ ವಿಷಯದಲ್ಲಿ ಟಿಬೆಟಿಯನ್ ಧರ್ಮಗುರುಗಳು ಮೌನವಾಗಿದ್ದಾರೆ. ನೆರೆಯ ಯಾವೊಂದು ದೇಶಕ್ಕೂ ಅವರಿಗೆ ಅನುಕೂಲವಾಗುವಂತಹ ಯಾವ ನಿಲುವನ್ನು ತೆಗೆದುಕೊಂಡಿಲ್ಲ. ಜೊತೆಜೊತೆಯಾಗಿ ಪ್ರಗತಿ ಸಾಧಿಸುವ ಪರಿಕಲ್ಪನೆಯೇ ಇಲ್ಲ. ಇನ್ನೊಂದೆಡೆ ನೆರೆಯ ಎಲ್ಲಾ ದೇಶಗಳಲ್ಲಿ ಚೀನಾ ಅಪಾರ ಪ್ರಮಾಣದ ಬಂಡವಾಳ ಹೂಡಿದೆ. ಆಯಾ ದೇಶಗಳ ಆರ್ಥಿಕತೆಗೆ ಊರುಗೋಲಾಗಿದೆ. ಇಂದು ಅವು ಅನಿವಾರ್ಯವಾಗಿ ಚೀನಾವನ್ನು ಬೆಂಬಲಿಸಬೇಕಾಗಿದೆ.
ಇನ್ನು ಪ್ರಚಾರ ಪಡೆಯುವ ಕಲೆಯನ್ನು ಕರಗತಗೊಳಿಸಿಕೊಂಡಿರುವ ಮೋದಿ ತಮ್ಮ ಸರ್ಕಾರದ ಯೋಜನೆಗಳಿಗೆ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್, ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಸ್ಕಿಲ್ ಇಂಡಿಯಾ ಇತ್ತೀಚೆಗೆ ಆತ್ಮನಿರ್ಭರ್ ಭಾರತ್ ಎಂಬ ಹೆಸರಿಟ್ಟಿದ್ದಾರೆ. ಆದರೆ ಇವೆಲ್ಲವೂ ಹೆಸರಿಗಷ್ಟೇ. ಮೇಕ್ ಇನ್ ಇಂಡಿಯಾ ಅಂತಾ ಹೆಸರಿಟ್ಟ ಇದೇ ಮೋದಿ ತಮ್ಮ ಗುಜರಾತ್ ಅಸ್ಮಿತೆ, ತಮ್ಮ ಪಕ್ಷದ ಐಕಾನ್ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ಚೀನಾದಿಂದ ಮಾಡಿಸಿದ್ದಾರೆ. ಸ್ವಚ್ಛ ಭಾರತ್ ಮೋದಿ ಪ್ರಚಾರಕ್ಕೆ ಮೀಸಲಾಗಿದೆ. ಡಿಜಿಟಲ್ ಇಂಡಿಯಾ ಬಗ್ಗೆ ಸ್ಪಷ್ಟವಾದ ನೀತಿಯೇ ರೂಪುಗೊಂಡಿಲ್ಲ. ಬೇರೆ ಬೇರೆ ಇಲಾಖೆಗಳ ಅಡಿ ಬರುವ ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಆ ಇಲಾಖೆಗಳಿಗೆ ಸ್ವಾತಂತ್ರ್ಯವೇ ಇಲ್ಲ.
ಈ ರೀತಿ ಹೇಳುವುದೊಂದು ಮಾಡುವುದು ಇನ್ನೊಂದು; ದೇಶದ ಒಳಗೂ ಹೊರಗೂ. ಹಾಗಾಗಿಯೇ ಮೋದಿ ಕಾರ್ಯಕಾಲದ ವಿದೇಶಾಂಗ ನೀತಿ ಕೈಕೊಟ್ಟಿದೆ. ಮೋದಿ ವಿದೇಶಿ ನೀತಿಗಳು ಪೊಳ್ಳು ಎಂದು ಅರಿತ ಚೀನಾ ಮೊದಲಿಗೆ ನೇಪಾಳವನ್ನು ಅಖಾಡಕ್ಕಿಳಿಸಿ ಬಳಿಕ ತಾನು ಅತಾರು ಹಿಡಿದು ನಿಂತಿದೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕತೆ ಎಂಬುದು ಕೊಡು-ಕೊಳ್ಳುವ ಪ್ರಕ್ರಿಯೆ. ಅಲ್ಲಿ ವೈಯಕ್ತಿಕ ಪ್ರತಿಷ್ಟೆಗೆ ಪ್ರಾಧಾನ್ಯತೆ ನೀಡಿದರೆ ದೇಶದ ಹಿತಾಸಕ್ತಿ ಸಹಜವಾಗಿ ಆದ್ಯತೆಗಳ ಪಟ್ಟಿಯಿಂದ ಕೆಳಗಿಳಿಯುತ್ತದೆ. ಈಗ ಆಗಿರುವುದು ಅದೇ.