ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಒಂದಲ್ಲ ಒಂದು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ತಮ್ಮನ್ನು ಮುಖ್ಯಮಂತ್ರಿ ಮಾಡಿದವರಿಗೆ ಸದಾ ನಿಷ್ಠೆ ತೋರುತ್ತಲೇ ಇದ್ದಾರೆ. ದೆಹಲಿ ಚುನಾವಣೆ ಕಾವಿನಲ್ಲಿ ಗುಂಡಿನ ಮೊರೆತ ಕೇಳುತ್ತಿದ್ದರೆ, ಜನ ಭಯಭೀತರಾಗಿದ್ದರು. ಆದರೆ ಇಂತಹ ಘಟನೆಗಳಿಂದ ಕಳವಳ ಪಡಬೇಕಿದ್ದ ಆದಿತ್ಯನಾಥ್ ಚುನಾವಣಾ ರ್ಯಾಲಿಯಲ್ಲಿ ʻಬೋಲಿ ಸೇ ನಹೀ ಗೋಲಿ ಸೆ ಸಾಮ್ನಾ ಕರ್ನಾ ಪಡೆಗಾʼ ಎಂದು ಪ್ರಚೋದನಾತ್ಮಕವಾದ ಹೇಳಿಕೆಯನ್ನು ನೀಡಿದ್ದರು. ಶಾಹೀನ್ ಭಾಗ್ ಪ್ರತಿಭಟನಾಕಾರರನ್ನ ತರಾಟೆಗೆ ತೆಗೆದುಕೊಂಡು ಅವರ ಅಸಲಿಯತ್ತು ಸಿಎಎ ವಿರೋಧಿ ಹೋರಾಟ ಅಲ್ಲ, ಕಾಶ್ಮೀರದಲ್ಲಿ ವಿಶೇಷಾಧಿಕಾರ ತೆರವು ಮಾಡಿದ್ದು, ಸುಪ್ರೀಂಕೋರ್ಟ್ ರಾಮಜನ್ಮ ಭೂಮಿ ತೀರ್ಪನ್ನ ನಮ್ಮ ಪರವಾಗಿ ನೀಡಿದ್ದು, ನಮ್ಮ ಸರ್ಕಾರ ತ್ರಿವಳಿ ತಲಾಖ್ ರದ್ದು ಮಾಡಿರುವುದು ಎಂದು ಹೇಳಿದ್ದರು.
ಇಷ್ಟಕ್ಕೂ ಸುಮ್ಮನಾಗದೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಶ್ಮೀರ ವಿಶೇಷ ಕಾಯ್ದೆ ರದ್ಧತಿ ವಿರೋಧಿಸಿ ಪಾಕಿಸ್ತಾನದ ಪರ ನಿಂತಿದ್ದಾರೆ ಎಂದು ಬಿಟ್ಟಿದ್ದರು. ಈ ತರಹದ ಹೇಳಿಕೆಗಳು ಸಾಕಷ್ಟು ನೀಡಿದ್ದಾರೆ ಇನ್ನೂ ನೀಡುತ್ತಾ ಇದ್ದಾರೆ. ಈಗ ಬಹಳ ಆಶ್ಚರ್ಯ ಎನ್ನುವ ಹಾಗೆ ತಮ್ಮ ರಾಜ್ಯದಲ್ಲಿ ಸಿಎಎ ವಿರುದ್ದ ನಡೆದ ಪ್ರತಿಭಟನೆಗಳಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ, ಸಾವು ನೋವುಗಳೇ ಸಂಭವಿಸಿಲ್ಲ, ಪೊಲೀಸರು ಮುಗ್ಧರು ಎನ್ನವಂತೆ ಮಾತನಾಡುತ್ತಿದ್ದಾರೆ. ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವವರಿಗೆ ಪುನಃ ಅದೇ ದಾಟಿಯಲ್ಲಿ ಎಚ್ಚರಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ದಿನದಿಂದ ಇಲ್ಲಿವರೆಗೆ ಉತ್ತರ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಉತ್ತರ ನೀಡಿದ ಸಿಎಂ ಯೋಗಿ ಆದಿತ್ಯಾನಾಥ್, ಸಿಎಎ ವಿರೋಧಿ ಪ್ರತಿಭಟನಾಕಾರ ಯಾರೂ ಮೃತರಾಗಿಲ್ಲ ಎಂದು ಹೇಳಿಕೆ ನೀಡಿ ದಿಗಿಲು ಬಡಿಸಿದ್ದಾರೆ. ಹಾಗಾದರೆ ಕಳೆದ ಎರಡು ತಿಂಗಳಲ್ಲಿ ಮೃತಪಟ್ಟಿರುವವರು ಅವರೆಲ್ಲಾ ಯಾರು ಎಂಬುದಕ್ಕೆ ಅವರ ಉತ್ತರ ಇನ್ನೂ ಬಾಲಿಶವಾಗಿದೆ. ಉತ್ತರ ಪ್ರದೇಶದಲ್ಲಿ ಯಾವುದೇ ಸಂಘರ್ಷ ಆಗಿಲ್ಲ, ಸಾಯುತ್ತೇನೆ ಎಂದು ಬಂದವರನ್ನ ಯಾರು ತಡೆಯುತ್ತಾರೆ? ಪೊಲೀಸ್ ಗುಂಡೇಟಿಗಂತೂ ಯಾರೂ ಪ್ರಾಣ ಬಿಟ್ಟಿಲ್ಲ, ಉಪದ್ರವಿಗಳು ಅವರೇ ಹೊಡೆದುಕೊಂಡು ಸತ್ತಿದ್ದಾರೆ , ನಮ್ಮ ಪೊಲೀಸರನ್ನ ಟೀಕಿಸುವುದರ ಬದಲು ಎಲ್ಲರೂ ಹೊಗಳಬೇಕಿದೆ ಎಂದರು.
ಯೋಗಿ ಆದಿತ್ಯಾನಾಥ್ ಇರೋದೇ ಹೀಗೆ, ತಮ್ಮದೇ ಇಲಾಖೆಯ ಅಧಿಕಾರಿಗಳು ಮಾಧ್ಯಮದ ಮುಂದೆ ಏನು ಹೇಳಿದ್ದಾರೆಂಬುದರ ಪರಿವೆಯೇ ಇಲ್ಲ ಎಂಬಂತೆ ಸಾವು ನೋವುಗಳಿಗೆ ಷರಾ ಬರೆದುಬಿಟ್ಟರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓ.ಪಿ ಸಿಂಗ್ ಇಂಡಿಯಾ ಟುಡೇ ಚಾನೆಲ್‌ಗೆ ಮಾತನಾಡುವಾಗ, ಸುಮಾರು 20 ಜನರು ಸಿಎಎ ವಿರೋಧಿ ಹೋರಾಟದಲ್ಲಿ ಮೃತರಾಗಿದ್ದಾರೆ, ಬಿಜ್ನೋರ್, ಕಾನ್‌ಪುರಗಳಲ್ಲಿ ಪೊಲೀಸ್ ಫೈರಿಂಗ್ ಆಗಿದೆ ಎಂದು ಹೇಳಿದ್ದರು. ಆದರೆ ಇದ್ಯಾವದೂ ತಮ್ಮ ಅರಿವಿಗೆ ಬಂದಿಲ್ಲವೇನೋ ಎಂಬಂತೆ ಮಾತನಾಡುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಇಷ್ಟಕ್ಕೇ ಸುಮ್ಮನಾಗಿಲ್ಲ. ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡು ಸಂವಿಧಾನವನ್ನ ಇಷ್ಟು ವರ್ಷ ಹಾಳುಗೆಡುವಿರುವ ನಿಮ್ಮಿಂದ ಪಾಠ ಕಲಿಯುವುದು ಬೇಕಿಲ್ಲ. ಯಾರಿಗೆ ಯಾವ ತರಹ ಉತ್ತರ ನೀಡಬೇಕೋ ಅದು ನಮಗೆ ಗೊತ್ತಿದೆ ಎಂದು ಸಿಎಎ ವಿರೋಧಿ ಹೋರಾಟಗಾರರಿಗೂ ಎಚ್ಚರಿಸಿದ್ದಾರೆ. ವಾರದ ಹಿಂದೆ ಸಿಎಎ ವಿರೋಧಿ ಹೋರಾಟದಲ್ಲಿ ಆಸ್ತಿ ನಷ್ಟವಾದರೆ ಅದನ್ನ ಹೋರಾಟಗಾರರೇ ಭರಿಸಬೇಕು ಎಂದು ತಾಕೀತು ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಉತ್ತರ ಪ್ರದೇಶ ಪೊಲೀಸ್ ರಾಜ್ಯವಾಗಿ ಹಲವು ದಶಕಗಳೇ ಕಳೆದಿವೆ, ಅಲ್ಲಿ ಕಾನೂನು ಸುವ್ಯವಸ್ಥೆಗೆ ಅರ್ಥವೇ ಇಲ್ಲವಾಗಿ ಹೋಗುವ ಸಂದರ್ಭ ಎದುರಾಗಿದೆ. ಬಿಜೆಪಿಯ ಯೋಗಿ ಆದಿತ್ಯಾನಾಥ್ ಇದರ ಮುಂದುವರಿದ ಭಾಗ ಅಷ್ಟೇ! ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಸರ್ಕಾರ ಆರೋಪಿಗಳಿಗೆ ಅಭಯ ನೀಡಿದ್ದು ಕೂಡಾ ಟೀಕೆಗೆ ಗುರಿಯಾಗಿತ್ತು.