ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಬಂದಿರುವ ದೂರುಗಳ ಆಧಾರದ ಮೇಲೆ ಸಮಿತಿಯ ಅಧ್ಯಕ್ಷರಾಗಿರುವಂತ ಹೆಚ್ ಕೆ ಪಾಟೀಲ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಸಮಯದಲ್ಲಿ ನಡೆದಿರಬಹುದಾದಂತಹ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕೋರಲಾಗಿದೆ.
ಪ್ರತಿಧ್ವನಿಯೊಂದಿಗೆ ಮಾತನಾಡಿದ ಹೆಚ್ ಕೆ ಪಾಟೀಲ್ ಅವರು, ಪಿಪಿಇ ಕಿಟ್ (PPE kit) ಹಾಗೂ ಮಾಸ್ಕ್ಗಳ ಬೆಲೆ ಹಾಗೂ ಗುಣಮಟ್ಟ, ಮೊದಲೇ ಉಪಯೋಗಿಸಿದ ವೆಂಟಿಲೇಟರ್ಗಳನ್ನು ಖರೀದಿಸಿರುವ ಕುರಿತು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಬಹಳಷ್ಟು ದೂರುಗಳು ಬಂದಿದ್ದವು. ಕರೋನಾದಂತಹ ಮಹಾಮಾರಿ ಬಂದಿರುವ ಈ ಸಂದರ್ಭದಲ್ಲಿ ಎಲ್ಲರೂ ಎಷ್ಟು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬಹುದು ಅಷ್ಟು ಪ್ರಾಮಣಿಕವಾಗಿ ಇರಬೇಕಾಗುತ್ತದೆ. ಆದರೆ, ಇದರ ತದ್ವಿರುದ್ದವಾಗಿ ಘಟನೆಗಳು ನಡೆದಿವೆ ಎಂದು ದೂರು ದಾಖಲಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಕೇಳಿದ್ದೇನೆ, ಎಂದಿದ್ದಾರೆ.
Also Read: Covid-19 ಸಂಕಷ್ಟ: ಗುಣಮಟ್ಟದ ನೆಪದಲ್ಲಿ ದುಬಾರಿ ಖರ್ಚು ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆ
ಗುರುವಾರದಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಿಂದ ಕೋವಿಡ್-19 ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ವೀಕ್ಷಣೆ ಮಾಡಲಿರುವ ಸ್ಥಳಗಳಲ್ಲಿ ಏನಾದರೂ ಅಕ್ರಮ ನಡೆಯುತ್ತಿರುವುದು ಕಂಡುಬಂದಲ್ಲಿ ಅದರ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ, ಎಂದು ಪ್ರತಿಧ್ವನಿಗೆ ಪಾಟೀಲ್ ಅವರು ತಿಳಿಸಿದ್ದಾರೆ.