ಕೊಡಗು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಒಂದು ವೀರಾಜಪೇಟೆ. ಇದು ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರಾಗಿದ್ದ ದೊಡ್ಡ ವೀರರಾಜೇಂದ್ರ ಅವರ ಹೆಸರಿನಲ್ಲೇ ವೀರರಾಜೇಂದ್ರ ಪೇಟೆ ಎಂದು ಹೆಸರಿಡಲಾಗಿದ್ದು ಕಾಲ ಕ್ರಮೇಣ ವೀರಾಜಪೇಟೆ ಎಂದಾಗಿದೆ. ತಾಲ್ಲೂಕು ಕೇಂದ್ರವೂ ಅಗಿರುವ ಈ ಪಟ್ಟಣದೊಳಗೆ ಸಿದ್ದಾಪುರ – ಕೇರಳ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯೂ ಹಾದು ಹೋಗಿದೆ. ವೀರಾಜಪೇಟೆ ಪಟ್ಟಣದ ಜನಸಂಖ್ಯೆ ಸುಮಾರು 12 ಸಾವಿರ ಇದ್ದು ವಾಹನಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಪ್ರತೀ ಬುಧವಾರ ನಡೆಯುವ ವಾರದ ಸಂತೆಯಲ್ಲಿ ವಾಹನಗಳ ಭರಾಟೆಯ ನಡುವೆ ಪಾದಚಾರಿಗಳ ಓಡಾಟ ಕಷ್ಟಕರವೇ ಆಗಿದೆ.
ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದೆ. ಆದರೆ ಈ ಅಗಲೀಕರಣಕ್ಕೆ ಪಟ್ಟಣದ ಹೆದ್ದಾರಿಯ ಇಕ್ಕೆಲಗಳ ಜನತೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಜನತೆಯ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚುತಿದ್ದು ಸಾಕಷ್ಟು ಜನ ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಧ್ವನಿ ತಂಡ ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ವಿಸ್ತರಣೆಯ ಸಾಧಕ -ಬಾಧಕಗಳನ್ನು ಅವಲೋಕಿಸಿ ಮಾಡಿದ ವರದಿ ಇದಾಗಿದೆ.
ವಾಹನಗಳ ಸಂದಣಿ ಹೆಚ್ಚಿದಂತೆ ವಾಹನಗಳ ಸುಗಮ ಸಂಚಾರ ಮಾಡಿಕೊಡುವುದು ಸಂಬಂಧಪಟ್ಟ ಇಲಾಖೆಗಳ ಕರ್ತವ್ಯವೇ ಆಗಿದ್ದರೂ ಇಲ್ಲಿ ಪಟ್ಟಣಕ್ಕೆ ಅಂಟಿಕೊಂಡೇ ಇರುವ ಮಲೆತಿರಿಕೆ ಬೆಟ್ಟ ರಸ್ತೆ ವಿಸ್ತರಣೆಗೆ ಅಡಚಣೆ ಆಗಿದೆ. ರಸ್ತೆ ವಿಸ್ತರಣೆ ಆದರೆ ನೂರಾರು ಜನರಿಗೆ ಅನಾನುಕೂಲ ಆಗಬಹುದು ಆದರೆ ಸಾವಿರಾರು ಜನರಿಗೆ ಅದರಿಂದ ಅನುಕೂಲ ಅಗುವುದನ್ನು ಗಮನದಲ್ಲಿಟ್ಟುಕೊಂಡೇ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ.

ವಿಸ್ತರಣೆಯಿಂದ ಏನು ತೊಂದರೆ?
ರಸ್ತೆ ವಿಸ್ತರಣೆ ಎಂದಾಗ ಮೊದಲು ನೆನಪಿಗೆ ಬರುವುದೇ ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಸಂಬವಿಸಿರುವ ಭೂ ಕುಸಿತ. ಈ ಭೂ ಕುಸಿತದಿಂದಾಗಿ ಹತ್ತಾರು ಜನ ಪ್ರಾಣ ತೆತ್ತಿದ್ದಾರೆ. ಜನರು ಮನೆ, ತೋಟಗಳನ್ನು, ಬದುಕನ್ನೇ ಕಳೆದುಕೊಂಡಿದ್ದಾರೆ. ಭೂ ಕುಸಿತದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ಭೂ ವಿಜ್ಞಾನಿಗಳ ತಂಡವು ಜಿಲ್ಲೆಯ ಭೂ ಕುಸಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ಮಾನವನ ಹಸ್ತಕ್ಷೇಪವೇ ಭೂ ಕುಸಿತಕ್ಕೆ ಕಾರಣ ಎಂದು ಸರ್ಕಾರಕ್ಕೆ ವರದಿ ನೀಡಿದೆ. ಅಲ್ಲದೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲೂ ಅರಣ್ಯ ಇಲಾಖೆ ಇಂಗು ಗುಂಡಿಗಳನ್ನು ನಿರ್ಮಿಸಿದ್ದರಿಂದ ಅದೂ ಕೂಡ ಬಿರುಕು ಬಿಟ್ಟು ಕುಸಿಯುವ ಅಪಾಯ ಎದುರಾಗಿತ್ತು. ಕಳೆದ ಮಳೆಗಾಲದಲ್ಲೂ ವೀರಾಜಪೇಟೆಯ ಮಲೆತಿರಿಕೆ ಬೆಟ್ಟ ಬಿರುಕು ಬಿಟ್ಟಿದ್ದು ಕುಸಿಯುವ ಆಪಾಯ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಸೂಕ್ತವೇ ಎಂದು ಕೂಡ ಆಲೋಚಿಸಬೇಕಾಗಿದೆ.
ಈ ಕುರಿತು ಪ್ರತಿದ್ವನಿ ಲೋಕೋಪಯೋಗಿ ಎಂಜಿನಿಯರ್ ಎಂ ಸುರೇಶ್ ಅವರನ್ನು ಮಾತಾಡಿಸಿದಾಗ ಹೆದ್ದಾರಿ ವಿಸ್ತರಣೆಯನ್ನು 1987 ರಲ್ಲೇ ರೂಪಿಸಲಾಗಿತ್ತು. ಈಗ 30 ವರ್ಷಗಳೇ ಉರುಳಿದ್ದು ವಾಹನಗಳ ಓಡಾಟಕ್ಕೇ ತೊಂದರೆ ಆಗಿದ್ದು ವಿಸ್ತರಣೆ ಅನಿವಾರ್ಯ ಎಂದರು. ವಿಸ್ತರಣೆ ಮಾಡದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಪ್ರಾಣಾಪಾಯ ಸಂಭವಿಸಿ ಜನರಿಗೆ ತೊಂದರೆ ಆಗಲಿದೆ ಎಂದರು.
ರಸ್ತೆ ವಿಸ್ತರಣೆಯನ್ನು ವಿರೋಧಿಸುತ್ತಿರುವ ಪ್ರಮುಖರಲ್ಲಿ ಒಬ್ಬರು ಮೋಹನ್ ಅಯ್ಯಪ್ಪ. ಅವರನ್ನು ಪ್ರತಿಧ್ವನಿ ಮಾತಾಡಿಸಿದಾಗ, ಈ ಹಿಂದೆ 1975 ರಲ್ಲೂ ರಸ್ತೆ ವಿಸ್ತರಣೆ ಮಾಡಲಾಗಿತ್ತು. ಈಗ ಪುನಃ ವಿಸ್ತರಣೆ ಮಾಡಿದರೆ ಮೊದಲೇ ಮಲೆ ತಿರಿಕೆ ಬೆಟ್ದದ ಮೇಲೆ ಮಾನವ ಹಸ್ತಕ್ಷೇಪ ನಡೆದಿದ್ದು ಕುಸಿಯುವುದು ಖಚಿತ. ಹಾಗೇನಾದರೂ ಆದಲ್ಲಿ ನೂರಾರು ಜನರ ಪ್ರಾಣ ಅಪಾಯಕ್ಕೆ ಸಿಲುಕಲಿದೆ. ಜತೆಗೇ ವೀರಾಜಪೇಟೆ ಪಟ್ಟಣದ ಭವಿಷ್ಯವೂ ಆತಂಕಕ್ಕೊಳಗಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ನಿವಾಸಿ ವಕೀಲ ರವೀಂದ್ರ ಕಾಮತ್ ಅವರನ್ನು ಮಾತಾಡಿಸಿದಾಗ ಹೇಳಿದ್ದಿಷ್ಟು. “ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ವೀರರಾಜೇಂದ್ರ ಪೇಟೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಹದಗೆಡಿಸಲಾಗುತ್ತಿದೆ. ಮಲೆತಿರಿಕೆ ಬೆಟ್ಟವನ್ನು ಕೊರೆದು ರಸ್ತೆ ವಿಸ್ತರಣೆ ಮಾಡಿದರೆ ಮಣ್ಣು ಸಡಿಲಗೊಂಡು ಪೂರ್ಣ ಪ್ರಮಾಣದಲ್ಲಿ ಬೆಟ್ಟ ಕುಸಿದು ಪಟ್ಟಣವನ್ನು ಆವರಿಸುವ ಆತಂಕವಿದೆ.’’ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿದ ನಂತರ ರಸ್ತೆ ವಿಸ್ತರಣೆ ಮಾಡಬೇಕೆನ್ನುವ ನಿಯಮವಿದೆ. ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅದೇಶಗಳನ್ನು ಗಾಳಿಗೆ ತೂರಿ ರಸ್ತೆ ವಿಸ್ತರಣೆಗೆ ಮುಂದಾಗಿದ್ದಾರೆ ಎಂದು ಕಾಮತ್ ಅವರು ಆರೋಪಿಸಿದರು.
ರಸ್ತೆಯ ಒಂದು ಭಾಗದಲ್ಲಿ ಮಲೆತಿರಿಕೆ ಬೆಟ್ಟವಿದ್ದರೆ ಮತ್ತೊಂದು ಭಾಗದಲ್ಲಿ 100 ಅಡಿಯಷ್ಟು ಆಳದ ಪ್ರಪಾತವಿದೆ. ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿ ವೈಜ್ಞಾನಿಕ ರೂಪದಲ್ಲಿ ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸದ ಪಟ್ಟಣ ಪಂಚಾಯಿತಿ ಕ್ರಮ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕೃತಿಯೊಂದಿಗೆ ಚೆಲ್ಲಾಟವಾಡುವ ಯೋಜನೆಗಳನ್ನು ಕೈಬಿಟ್ಟು ಇತಿಹಾಸ ಪ್ರಸಿದ್ಧ ವೀರಾಜಪೇಟೆಯ ಸೌಂದರ್ಯವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅವರು ಒತ್ತಾಯಿಸುತ್ತಾರೆ.
ಆದರೆ ಸ್ಥಳೀಯ ಆಟೋ ಚಾಲಕರ ಮುಖಂಡ ಬಿ ಲೋಹಿತ್ ಅವರು ರಸ್ತೆ ವಿಸ್ತರಣೆ ಆದಾಗ ಮಾತ್ರ ವಾಣಿಜ್ಯ ವಹಿವಾಟು ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸುಗಮ ವಾಹನ ಸಂಚಾರ ಸಾಧ್ಯವಾಗಲಿದೆ. ಈಗ ಪಾರ್ಕಿಂಗ್ ಗೆ ಸ್ಥಳವಿಲ್ಲದೆ ಪರದಾಡಬೇಕಿದೆ ಎಂದರು. ಅಭಿವೃದ್ದಿ ಆಗಬೇಕೆಂದರೆ ಒಂದಷ್ಟು ಪರಿಸರ ನಾಶ ಆಗುತ್ತದೆ ಆದರೆ ಮನುಷ್ಯನ ಬದುಕಿಗೆ ಅಭಿವೃದ್ದಿ ಮುಖ್ಯವಲ್ಲವೇ ಎಂದು ಪ್ರಶ್ನಿಸಿದರು.

ಈ ಮಧ್ಯೆ ಪಟ್ಟಣ ಪಂಚಾಯ್ತಿಗೆ 16 ಜನ ನೂತನ ಸದಸ್ಯರ ಆಯ್ಕೆ ನಡೆದಿದ್ದು ಅವರಿನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಶ್ರೀಧರ್ ಅವರೇ ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದೂ ಮಾಜಿ ಪಂಚಾಯ್ತಿ ಸದಸ್ಯ ಮತೀನ್ ಆರೋಪಿಸುತ್ತಾರೆ.
ಕಳೆದ ವಾರ ಶಾಸಕ ಕೆ ಜಿ ಬೋಪಯ್ಯ ಅವರ ಅಧ್ಯಕ್ಷತೆಯಲ್ಲೇ ಪರ ವಿರೋಧ ಚರ್ಚೆ ನಡೆದು ರಸ್ತೆಯ ಮಧ್ಯ ಭಾಗದಿಂದ ತಲಾ 30 ಅಡಿಗಳವರೆಗೆ ವಿಸ್ತರಿಸುವುದೆಂಬ ತೀರ್ಮಾನಕ್ಕೆ ಬರಲಾಗಿದೆ . ಆದರೆ ಕೆಲವರು ಕೋರ್ಟಿನ ಮೊರೆ ಹೋಗುವುದಾಗಿ ಹೇಳುತ್ತಿದ್ದಾರೆ. ಈಗಿರುವ ರಸ್ತೆ ಕೇವಲ 30 ಅಡಿಗಳಷ್ಟು ಮಾತ್ರ ಅಗಲವಿದ್ದು ಸಂಚಾರಕ್ಕೆ ತೀವ್ರ ತೊಡಕಾಗಿದೆ. ರಸ್ತೆ ವಿಸ್ತರಣೆ ಮಾಡುವುದಾದರೂ ವೈಜ್ಞಾನಿಕವಾಗಿಯೇ ಮಾಡಬೇಕಿದೆ. ಇಲ್ಲವಾದಲ್ಲಿ ಮುಂದಿನ ಮಳೆಗಾಲದಲ್ಲಿ ಬೆಟ್ಟದ ತಪ್ಪಲಲ್ಲಿ ವಾಸಿಸುವರ ಆತಂಕ ಹೆಚ್ಚುವುದಂತೂ ಖಚಿತ.