ಲಿಂಗಾಯತ ಹಿಂದೂ ಧರ್ಮದಿಂದ ಸಿಡಿದು ರೂಪುಗೊಂಡಂತಹ ಪ್ರತ್ಯೇಕ ಧರ್ಮ. ಹಿಂದೂ ಧರ್ಮದ ಪ್ರವಾದದಲ್ಲಿ ಆಚರಣೆಗಳು ಇನ್ನೂ ಸ್ವಲ್ಪ ಹಾಗೆಯೇ ಉಳಿದುಕೊಂಡಿದೆ. ಆದರೆ ನಾವು ಮೂರ್ತಿ ಪೂಜೆಯನ್ನು ಮಾಡುವುದು ಸರಿಯಲ್ಲ. ನಮ್ಮದೇನಿದ್ದರೂ ಲಿಂಗಾರಾಧನೆ. ಆತ್ಮಲಿಂಗವನ್ನು ಮಾತ್ರ ನಾವು ಪೂಜಿಸುತ್ತೇವೆ ಎನ್ನುವುದು ಒಂದು ವರ್ಗ. ನಾವು ಹಿಂದೂಗಳು ಬೇರೆ ಬೇರೆಯಲ್ಲ, ನಾವು ಕೂಡ ಹಿಂದೂ ಧರ್ಮದ ಭಾಗವೇ ಆಗಿದ್ದೇವೆ ಎನ್ನುವುದು ಮತ್ತೊಂದು ವರ್ಗ. ಈ ನಡುವೆ ವೀರಶೈವ ಲಿಂಗಾಯತ ಹಾಗು ಲಿಂಗಾಯತ ಪಂಥಗಳು ಬೇರೆ ಬೇರೆ ಎನ್ನುವುದು ಮತ್ತೊಂದು ವರ್ಗದ ಜನರ ಮಾತು. ಲಿಂಗಾಯತರು ಹಾಗು ವೀರಶೈವ ಲಿಂಗಾಯತರು ಎಲ್ಲರೂ ಒಂದೇ. ಎರಡೂ ಪಂಥಗಳು ಹಿಂದೂ ಧರ್ಮದ ಭಾಗವೇ ಆಗಿದ್ದಾರೆ ಎನ್ನುವುದು ಹಲವರ ವಾದ. ಇವೆಲ್ಲವೂ ತಮ್ಮ ಸಮಾಜದಲ್ಲಿರುವ ತಜ್ಞರು, ಜ್ಞಾನಿಗಳು, ಬುದ್ಧಿಜೀವಿಗಳ ಅಭಿಪ್ರಾಯ.
ಏನಿದು ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ?
ಕಳೆದ 2014ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಲಿಂಗಾಯತ ಸಮುದಾಯದ ನಾಯಕರು ಪ್ರತ್ಯೇಕ ಧರ್ಮ ಘೋಷಣೆಗೆ ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಸರ್ಕಾರ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರ ನಿರ್ಧಾರಕ್ಕಾಗಿ ಕಳುಹಿಸಿಕೊಟ್ಟಿತ್ತು. ಅಷ್ಟರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿ ಅಂತ್ಯವಾಗುತ್ತಾ ಸಾಗಿದ್ದರಿಂದ ಸಿದ್ದರಾಮಯ್ಯ ಸರ್ಕಾರ ಕೂಡ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ನಿರ್ಧಾರ ಮಾಡಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎನ್ನುವ ಹೇಳಿಕೆಗಳು ಹೊರಬಿದ್ದವು.
ಅದನ್ನೇ ತಿರುಗುಬಾಣ ಮಾಡಿದ ಬಿಜೆಪಿ ಲಿಂಗಾಯತ ಹಾಗು ವೀರಶೈವ ಲಿಂಗಾಯತ ಎರಡೂ ಒಂದೇ, ಇವರಿಬ್ಬರ ನಡುವೆ ಒಡಕು ಮೂಡಿಸಿ, ಮತಗಳಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿತ್ತು. ಆ ಬಳಿಕ ಕಾಂಗ್ರೆಸ್ ಯಾವುದೇ ಹೇಳಿಕೆ ಕೊಟ್ಟರೂ ಇಕ್ಕಟ್ಟಿಗೆ ಸಿಲುಕಿದ ಅನುಭವ ಉಂಟಾಯಿತು. ಕೊನೆಗೆ ಲಿಂಗಾಯತ ಪ್ರಾಬಲ್ಯವಿರುವ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಧೂಳಿಪಟವಾಯ್ತು. ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯೇ ಸಿದ್ದರಾಮಯ್ಯ ಸೋಲಿಗೆ ಪ್ರಮುಖ ಕಾರಣವಾಯ್ತು.
ಬಸವ ಪೀಠದ ಧರ್ಮಾಧ್ಯಕ್ಷೆಯಾಗಿದ್ದ ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ರೂಪಿಸಲಾಯ್ತು. ರಾಜಕೀಯ ನಾಯಕರನ್ನೂ ಒಳಗೊಂಡಂತೆ ಪಕ್ಷಾತೀತ ವೇದಿಕೆ ಮೂಲಕ ಹೋರಾಟ ಮುಂದುವರಿಸಲಾಗಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ, ಎಂ.ಬಿ ಪಾಟೀಲ್ ಸೇರಿದಂತೆ ಹಲವಾರು ನಾಯಕರು ಇನ್ನು ಪ್ರತ್ಯೇಕ ಧರ್ಮ ಮಾನ್ಯತೆಗೆ ಒತ್ತಾಯ ಮಾಡುತ್ತಲೇ ಇದ್ದಾರೆ. ಆದರೆ ಅಂದು ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ತೀಕ್ಷ್ಣವಾಗಿ ವಿರೋಧಿಸಿ, ಲಿಂಗಾಯತ ವೀರಶೈವ ಎರಡು ಹಿಂದೂ ಧರ್ಮದ ಭಾಗವೇ ಆಗಿದೆ ಎಂದು ವಾದಿಸಿದ್ದ ಬಿಜೆಪಿ ನಾಯಕರು ಇಂದು ಪ್ರತ್ಯೇಕ ಧರ್ಮ ಗ್ರಂಥ ಬಿಡುಗಡೆಗೆ ಮುಂದಾಗಿದ್ದಾರೆ. ಅದರಲ್ಲೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರೇ ಲಿಂಗಾಯತ ಧರ್ಮ ಗ್ರಂಥ ಬಿಡುಗಡೆ ಮಾಡುತ್ತಿರುವುದು ಮತ್ತೊಂದು ವಿಶೇಷ.
ಲಿಂಗಾಯತ ಧರ್ಮ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಚುನಾವಣಾ ಸಮಾವೇಶಗಳಲ್ಲಿ ಅಬ್ಬರಿಸಿದ್ರು. ಧರ್ಮವನ್ನು ಒಡೆಯುವ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಕರೆ ಕೊಟ್ಟಿದ್ದರು. ಇದೀಗ ನಾಳೆ ನಡೆಯುತ್ತಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಧರ್ಮಗ್ರಂಥ ʻಸಿದ್ಧಾಂತ ಶಿಖಾಮಣಿʼ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. 18 ರಾಷ್ಟ್ರೀಯ ಹಾಗು ಕೆಲವು ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಈ ಕೃತಿ ನಾಳೆ ಬಿಡುಗಡೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಸಿಯಲ್ಲೇ ಕಾರ್ಯಕ್ರಮ ಆಯೋಜನೆಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ವೀರಶೈವ ಲಿಂಗಾಯತ ಹಾಗು ಲಿಂಗಾಯತ ಒಂದೇ. ಅವು ಹಿಂದೂ ಧರ್ಮದ ಭಾಗ ಎಂದ ಮೇಲೆ ಪ್ರತ್ಯೇಕ ಧರ್ಮಗ್ರಂಥ ಇರುವುದಕ್ಕೆ ಹೇಗೆ ಸಾಧ್ಯ? ಅದರಲ್ಲೂ ಲಿಂಗಾಯತ ಹಾಗು ವೀರಶೈವ ಲಿಂಗಾಯತ ಹಿಂದೂ ಧರ್ಮದ ಭಾಗ ಎನ್ನುತ್ತಿದ್ದ ಬಿಜೆಪಿಯೇ ಪ್ರತ್ಯೇಕ ಧರ್ಮಗ್ರಂಥ ಬಿಡುಗಡೆ ಮಾಡಲು ಮುಂದಾಗಿರುವುದು ಕಮಲ ಪಕ್ಷದ ಇಬ್ಬಗೆ ನೀತಿಯನ್ನು ಸಾರುವಂತಿದೆ. ತಮ್ಮ ಅಧಿಕಾರದಲ್ಲಿ ತಮಗೆ ಬೇಕಾದ ನಿಲುವು ತೆಗೆದುಕೊಳ್ತಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಈ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಗ್ರಂಥ.