ದೇಶದ ಆರ್ಥಿಕವಾಗಿ ಎಷ್ಟು ಸುಭಿಕ್ಷವಾಗಿದೆ ಮತ್ತು ಸದೃಢವಾಗಿದೆ ಎಂಬುದನ್ನು ತಿಳಿಯಲು ಆ ದೇಶದಲ್ಲಿರುವ ಬ್ಯಾಂಕಿಂಗ್ ಸೇವಾ ಮಟ್ಟವನ್ನು ಅರಿಯಬೇಕು. ಆರ್ಥಿಕತೆ ಹೆಚ್ಚು ಸುಬಧ್ರ ಮತ್ತು ಸದೃಢವಾದಷ್ಟೂ ಬ್ಯಾಂಕಿಂಗ್ ಸೇವೆಗಳು ಹೆಚ್ಚುತ್ತಾ ಹೋಗುತ್ತವೆ. ಅಂದರೆ, ದೇಶದಲ್ಲಿ ಬ್ಯಾಂಕುಗಳ ಶಾಖೆಗಳು ಹೆಚ್ಚುತ್ತಾ ಹೋದಷ್ಟು ಆರ್ಥಿಕತೆ ಸದೃಢವಾಗುತ್ತಿದೆ ಎಂದೇ ಅರ್ಥ. ಹಾಗೆಯೇ ದೇಶದಲ್ಲಿ ಬ್ಯಾಂಕುಗಳು ತಮ್ಮ ಶಾಖೆಗಳನ್ನು ಮುಚ್ಚುತ್ತಿವೆ ಎಂದಾದರೆ ಆರ್ಥಿಕತೆ ಸದೃಢವಾಗುವ ಬದಲು ಸಡಿಲವಾಗುವತ್ತ ಸಾಗಿರುವುದನ್ನು ಪ್ರತಿಬಿಂಬಿಸುತ್ತದೆ.
ವಿಶ್ವಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ ಹತ್ತು ವರ್ಷಗಳ ಪೈಕಿ ಮೊದಲ ಆರು ವರ್ಷಗಳಲ್ಲಿ ಬ್ಯಾಂಕಿಂಗ್ ಸೇವೆ ತ್ವರಿತವಾಗಿ ವಿಸ್ತಾರಗೊಂಡಿದೆ. ಅಂದರೆ ಪ್ರತಿ ಒಂದು ಲಕ್ಷ ನಾಗರಿಕರಿಗೆ 2007ರಲ್ಲಿ 8.98 ರಷ್ಟು ಇದ್ದ ಬ್ಯಾಂಕು ಶಾಖೆಗಳು 2014ರ ವೇಳಗೆ 12.85ರಷ್ಟಕ್ಕೆ ಜಿಗಿದಿವೆ. ಈ ಅವಧಿಯಲ್ಲಿ ಸರಾಸರಿ 0.77ರಷ್ಟು ಹೆಚ್ಚಳ ವಾಗಿದೆ. ಇದೇ ವೇಳೆ 2015 ರಿಂದ 2018ರ ನಡುವೆ ಬ್ಯಾಂಕು ಶಾಖೆಗಳ ಹೆಚ್ಚಳವು ಕೇವಲ 0.25ರಷ್ಟಿದೆ. ವಿಶೇಷ ಎಂದರೆ 2017 ರಲ್ಲಿ 1 ಲಕ್ಷ ಜನರಿಗೆ 14.568 ರಷ್ಟು ಶಾಖೆಗಳು ಇದ್ದದ್ದು 2018ರಲ್ಲಿ 14.564ಕ್ಕೆ ಕುಸಿದಿದೆ. ಅಂದರೆ, 2008-2018ರ ದಶಕದಲ್ಲಿನ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆಯನ್ನು ಗಮನಿಸಿದರೆ, 2017-2018ರ ನಡುವೆ ಬ್ಯಾಂಕುಗಳ ಶಾಖೆಗಳು ಸಂಖ್ಯೆಗಳು ಹೆಚ್ಚಾಗುವ ಬದಲು ಕಡಿಮೆಯಾಗುತ್ತಾ ಬಂದಿದೆ.
ಯುಪಿಎ-2 ಸರ್ಕಾರದ ಅವಧಿಯಲ್ಲಿ ಬ್ಯಾಂಕುಗಳ ಶಾಖೆಗಳ ವಿಸ್ತರಣೆಯು ಪ್ರತಿ ಒಂದು ಲಕ್ಷ ಜನರಿಗೆ ಪ್ರತಿ ವರ್ಷ ಸರಾಸರಿ 0.77ರಷ್ಟು ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಅದೇ ಎನ್ ಡಿ ಎ-2 ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ಯಾಂಕು ಶಾಖೆಗಳ ವಿಸ್ತರಣೆಯು ಸರಾಸರಿ ವಾರ್ಷಿಕ 0.77ರಿಂದ 0.25ಕ್ಕೆ ಕುಸಿದಿದೆ. (ಈ ಅಂಕಿಅಂಶ ಗಮನಿಸಿ: 2007- 8.98, 2008– 9.286, 2009- 9.575, 2010- 10.01, 2011- 10.486, 2012- 11.16, 2013- 11.83, 2014- 12.85, 2015- 13.557, 2016- 14.264, 2017- 14.568, 2018- 14.564).
ಗಮನಿಸ ಬೇಕಾದ ಪ್ರಮುಖ ಅಂಶ ಎಂದರೆ 2016ರ ನವೆಂಬರ್ ನಲ್ಲಿ ಜಾರಿಗೆ ತಂದ ಅಪನಗದೀಕರಣದ ವ್ಯತಿರಿಕ್ತ ಪರಿಣಾಮಗಳು ಬ್ಯಾಂಕಿಂಗ್ ವಲಯದ ಮೇಲಾಗಿದೆ. ಹೀಗಾಗಿ 2017 ಮತ್ತು 2018ರಲ್ಲಿ ಬ್ಯಾಂಕುಗಳ ಸೇವಾ ವಿಸ್ತರಣೆಯು ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, 2018ರಲ್ಲಿ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ.
ವಿಶ್ವಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 1 ಲಕ್ಷ ನಾಗರಿಕರಿಗೆ 30ಕ್ಕಿಂತಲೂ ಹೆಚ್ಚು ಬ್ಯಾಂಕು ಶಾಖೆಗಳಿವೆ. ಬೆಲ್ಜಿಯಂ 32, ಬೊಲಿವಿಯಾ 40 ಬಲ್ಗೇರಿಯಾ 52.7, ಸೈಪ್ರಸ್ 42, ಫ್ರಾನ್ಸ್ 34.9, ಜಪಾನ್ 34.1 ಲಕ್ಸಂಬರ್ಗ್ 68, ಸ್ಪೈನ್ 55.1 ಸ್ವಿಜ್ಜರ್ಲ್ಯಾಂಡ್ 39.5 ಯುನೈಟೆಡ್ ಸ್ಟೇಸ್ಟ್ 30.9 ಶಾಖೆಗಳನ್ನು ಹೊಂದಿವೆ. ನೆರೆಯ ಶ್ರೀಲಂಕಾದಲ್ಲಿ ಕೂಡಾ ಪ್ರತಿ ಲಕ್ಷ ನಾಗರಿಕರಿಗೆ 18.6 ಬ್ಯಾಂಕು ಶಾಖೆಗಳಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಎನ್ಡಿಎ-2 ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ವಲಯದ 26 ಬ್ಯಾಂಕುಗಳ 3400 ಶಾಖೆಗಳನ್ನು ಮುಚ್ಚಲಾಗಿದೆ ಇಲ್ಲವೇ ಇತರ ಶಾಖೆಗಳೊಂದಿಗೆ ವಿಲೀನಗೊಳಿಸಲಾಗಿದೆ. ಮಾಹಿತಿ ಹಕ್ಕುಕಾಯ್ದೆಯಡಿ ನಿಮೂಚ್ ಮೂಲದ ಚಂದ್ರಶೇಖರ ಗೌಡ್ ಅವರು ಆರ್ ಬಿ ಐ ನಿಂದ ಪಡೆದಿರುವ ಮಾಹಿತಿ ಪ್ರಕಾರ, ಮುಚ್ಚಲ್ಟಟ್ಟ ಅಥವಾ ವಿಲೀನಗೊಳಿಸಲ್ಪಟ್ಟ ಶಾಖೆಗಳ ಪೈಕಿ ಶೇ.75ರಷ್ಟು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದವು. ಪಿಟಿಐ ಸುದ್ದಿಸಂಸ್ಥೆ ಉಲ್ಲೇಖಿಸಿ ಬ್ಲೂಮ್ಬರ್ಗ್ ಕ್ವಿಂಟ್ ಮಾಡಿರುವ ವರದಿ ಪ್ರಕಾರ, 2014-15ರಲ್ಲಿ 90 ಶಾಖೆಗಳು, 2015-16ರಲ್ಲಿ 126, 2016-17ರಲ್ಲಿ 253, 2017-18ರಲ್ಲಿ 2083 ಮತ್ತು 2018-19ರಲ್ಲಿ 875 ಶಾಖೆಗಳನ್ನು ಮುಚ್ಚಲಾಗಿದೆ ಇಲ್ಲವೆ ವಿಲೀನಗೊಳಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 2568 ಶಾಖೆಗಳು ಮುಚ್ಚಲ್ಪಟ್ಟಿವೆ ಇಲ್ಲವೇ ವಿಲೀನಗೊಂಡಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಜತೆಗೆ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ವಿಲೀನಗೊಂಡವೆ. ವಿಲೀನಗೊಂಡ ನಂತರ ಕೆಲವು ಶಾಖೆಗಳನ್ನು ಮುಚ್ಚಲಾಗಿದೆ ಇಲ್ಲವೇ ವಿಲೀನಗೊಳಿಸಲಾಗಿದೆ. ನಂತರ ಬ್ಯಾಂಕ್ ಆಫ್ ಬರೋಡ ಜತೆಗೆ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ವೀಲೀನಗೊಳಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯ ಮುಖ್ಯ ಉದ್ದೇಶ ಇದ್ದದ್ದು, ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವುದು ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವುದಾಗಿತ್ತು. ಆದರೆ, ಬ್ಯಾಂಕಿಂಗ್ ವಿಲೀನ ಪ್ರಕ್ರಿಯೆಯನ್ನು ವೆಚ್ಚ ಕಡಿತಗೊಳಿಸುವ ಲಾಭದಾಯಕ ಮಾರ್ಗವನ್ನಾಗಿ ಮಾಡಿಕೊಳ್ಳಲಾಗಿದೆ.
ಒಂದೇ ಪ್ರದೇಶದಲ್ಲಿ ವಿಲೀನಗೊಂಡ ಎರಡು ಬ್ಯಾಂಕುಗಳ ಶಾಖೆಗಳು ಕಾರ್ಯನಿರ್ವಹಿಸುವುದರಲ್ಲಿ ಅರ್ಥವಿಲ್ಲ. ನಿಜ, ಆದರೆ, ಅಂತಹ ಪರಿಸ್ಥಿತಿಯಲ್ಲಿ ವಿಲೀನಗೊಂಡ ಎರಡೂ ಬ್ಯಾಂಕುಗಳ ಶಾಖೆಗಳನ್ನು ವಿಲೀನಗೊಳಿಸದೇ, ಒಂದು ಶಾಖೆಯನ್ನು ಎಲ್ಲಿ ಬ್ಯಾಂಕಿಂಗ್ ಸೇವೆ ಇಲ್ಲವೋ ಅಥವಾ ಸೇವಾ ಪ್ರಮಾಣವು ಕಡಮೆ ಇದೆಯೋ ಅಲ್ಲಿಗೆ ಸ್ಥಳಾಂತರಿಸಬೇಕು ಮತ್ತು ಅಲ್ಲಿ ಪೂರ್ಣಪ್ರಮಾಣದಲ್ಲಿ ಶಾಖೆಯು ಕಾರ್ಯನಿರ್ವಹಿಸಬೇಕು. ಇದರಿಂದ ಬ್ಯಾಂಕ್ ನೌಕರರ ಉದ್ಯೋಗವೂ ಸುರಕ್ಷಿತವಾಗಿರುತ್ತದೆ. ಆದರೆ, ಆರಂಭದಲ್ಲಿ ಬ್ಯಾಂಕಿಂಗ್ ಸೇವಾ ವಿಸ್ತರಣೆಯನ್ನು ಉದ್ದೇಶ ಇಟ್ಟುಕೊಂಡಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಿಯಂತ್ರಿಸುತ್ತಿರುವ ಕೇಂದ್ರ ಸರ್ಕಾರ ಈಗ, ಅದನ್ನು ಲಾಭದಾಯಕ ನೆಲೆಯಲ್ಲಿ ನೋಡತೋಡಗಿದೆ. ಹೀಗಾಗಿ ಬ್ಯಾಂಕುಗಳ ಶಾಖೆಗಳನ್ನು ಸ್ಥಳಾಂತರಿಸುವ ಬದಲು ಮುಚ್ಚುವ ಅಥವಾ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಾಸ್ತವವಾಗಿ ಇದರ ಲಾಭವನ್ನು ಖಾಸಗಿ ಬ್ಯಾಂಕುಗಳು ಪಡೆಯುತ್ತಿವೆ. ಮುಚ್ಚಲ್ಪಟ್ಟ ಮತ್ತು ವಿಲೀನಗೊಳಿಸಲ್ಪಟ್ಟ ಶಾಖೆಗಳಲ್ಲಿನ ಗ್ರಾಹಕರನ್ನು ಮೂಲ ಬ್ಯಾಂಕುಗಳಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ವಿಲೀನಪ್ರಕ್ರಿಯೆಯ ಹೊತ್ತಿನಲ್ಲಿ ಉದ್ಭವಿಸಿದ ತಾಂತ್ರಿಕ ಲೋಪ ಮತ್ತು ವಿಳಂಬದಿಂದಾಗಿ ಸಾಕಷ್ಟು ಗ್ರಾಹಕರು ಖಾಸಗಿ ಬ್ಯಾಂಕುಗಳತ್ತ ವಲಸೆ ಹೋಗಿದ್ದಾರೆ.
ಕೇಂದ್ರ ಸರ್ಕಾರವು ದೇಶದಲ್ಲಿ ಕೇವಲ 4 ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಕು ಎಂಬ ನಿಲವು ತಳೆದಿದ್ದು ಮತ್ತಷ್ಟು ವಿಲೀನ ಪ್ರಕ್ರಿಯೆಗೆ ಮುಂದಾಗಿದೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರ ಪ್ರಕಾರ, ಒಂದು ವೇಳೆ ಕೇವಲ ನಾಲ್ಕು ದೊಡ್ಡ ಬ್ಯಾಂಕುಗಳನ್ನು ಮಾತ್ರ ಉಳಿಸಿಕೊಳ್ಳುವ ನಿರ್ಧಾರವನ್ನು ಜಾರಿ ಮಾಡಿದರೆ ಇನ್ನೂ ಕನಿಷ್ಠ 7000 ಶಾಖೆಗಳನ್ನು ಮುಚ್ಚಬೇಕಾಗುತ್ತದೆ ಇಲ್ಲವೇ ವಿಲೀನಗೊಳಿಸಬೇಕಾಗುತ್ತದೆ. ಇದರಿಂದ ಪ್ರತಿ ಶಾಖೆಯಲ್ಲಿ ಸರಾಸರಿ 10 ಮಂದಿ ಸಿಬ್ಬಂದಿ ಎಂದು ಅಂದಾಜಿಸಿದರೂ 70,000 ಬ್ಯಾಂಕ್ ಸಿಬ್ಬಂದಿ ಉದ್ಯೋಗ ತುಗುಯ್ಯಾಲೆಯಲ್ಲಿ ಸಿಲುಕಲಿದೆ.
ನಿಷ್ಕ್ರಿಯ ಸಾಲದ ಸಮಸ್ಯೆಯನ್ನು ನಿವಾರಿಸುವ ಮತ್ತು ವೆಚ್ಚವನ್ನು ತಗ್ಗಿಸುವ ನೆಪದಲ್ಲಿ ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡುತ್ತಿದೆ. ಆದರೆ, ಕುಸಿಯುತ್ತಿರುವ ಬ್ಯಾಂಕಿಂಗ್ ಸೇವಾ ವಿಸ್ತರಣೆ ಮತ್ತು ದೀರ್ಘಕಾಲದಲ್ಲಿ ಆರ್ಥಿಕತೆ ಮೇಲಾಗುವ ಪರಿಣಾಮಗಳನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕಿದೆ. ಬ್ಯಾಂಕುಗಳ ವಿಲೀನ ಎಂದರೆ ಶಾಖೆಗಳನ್ನು ತಗ್ಗಿಸಿ, ಉದ್ಯೋಗಿಗಳಿಗೆ ಕಡ್ಡಾಯ ಸ್ವಯಂ ನಿವೃತ್ತಿ ನೀಡುವುದಲ್ಲ, ಬದಲಿಗೆ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸವುದಾಗಿದೆ ಮತ್ತು ಸಮಾಜ ಎಲ್ಲಾ ವರ್ಗದವರಿಗೂ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವುದಾಗಿದೆ.
ಕೇಂದ್ರ ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡುವವರಾರು?