ಕಳೆದೊಂದು ವರ್ಷದ ಹಿಂದೆ ನಡೆದ ಭಾರೀ ನಾಟಕೀಯ ಬೆಳವಣಿಗೆ ಬಳಿಕ ಸರ್ಕಾರ ರಚನೆ ಆಗಿತ್ತು. ಸರ್ಕಾರ ಒಂದು ವರ್ಷ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸರ್ಕಾರ ಒಂದು ವರ್ಷದಲ್ಲಿ ಸಾಧಿಸಿದ್ದನ್ನು ಪುಸ್ತಕ ರೂಪದಲ್ಲಿ ಕೈಪಿಡಿ ಬಿಡುಗಡೆ ಮಾಡಲಾಯ್ತು. ಆ ಬಳಿಕ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರು ಸಂಪಾದಿಸಿರುವ ಪುಟಕ್ಕಿಟ್ಟ ಚಿನ್ನ ಎನ್ನುವ ಪುಸ್ತವನ್ನೂ ಲೋಕಾರ್ಪಣೆ ಮಾಡಲಾಯಿತು. ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯದ ಜನರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡರು.
ರಾಜ್ಯ ಸರ್ಕಾರ ಬರುವುದಕ್ಕೆ ಪ್ರಮುಖ ಕಾರಣ ಆಪರೇಷನ್ ಕಮಲ ಎನ್ನುವುದು ರಾಜ್ಯ ಅಷ್ಟೇ ಅಲ್ಲ ಇಡೀ ದೇಶದ ಜನರಿಗೆ ತಿಳಿದಿರುವ ಮಾಹಿತಿ. ಅಂದಿನಿಂದ ಇಂದಿನವರೆಗೂ ಅತೃಪ್ತರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡುತ್ತಲಿರುವ ಸಿಎಂ ಬಿಎಸ್ ಯಡಿಯೂರಪ್ಪ, ಮೊದಲಿಗೆ ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದವರ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಮಗ್ನರಾಗಿದ್ದರು. ಕಾನೂನು ಹೋರಾಟದಲ್ಲಿ ಅನರ್ಹತೆಯನ್ನು ಹೋಗಲಾಡಿಸುವುದು, ಉಪಚುನಾವಣೆಯಲ್ಲಿ ಗೆಲ್ಲುವಂತೆ ಅಬ್ಬರದ ಪ್ರಚಾರ ನಡೆಸುವುದು. ಗೆಲುವು ಸಾಧಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿ ಅಧಿಕಾರ ನೀಡುವುದು, ಗೆಲ್ಲಲು ಸಾಧ್ಯವಾಗದವರಿಗೆ ಸಮಾಧಾನ ಮಾಡುವುದು, ಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಮಾಡಿ, ಮುಖಭಂಗ ಅನುಭವಿಸುವುದು, ಅಂತಿಮವಾಗಿ ಎಲ್ಲರನ್ನೂ ತೃಪ್ತರನ್ನಾಗಿವ ಕೆಲಸವನ್ನು ಮಾಡಿದ್ದರು.
ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಅತೃಪ್ತ ಶಾಸಕರನ್ನು ಸಮಾಧಾನ ಮಾಡಿ, ಅವರಿಗೆ ಪಕ್ಷದಲ್ಲಿ ಸ್ಥಾನವನ್ನು ಕೊಡುವ ಹೊತ್ತಿಗೆ ಒಂದು ವರ್ಷವೇ ಪೂರ್ಣವಾಯಿತು. ಅದರಲ್ಲೂ ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಗೆಲುವನ್ನು ಪ್ರಶ್ನಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ಇರುವ ಕಾರಣ ಅವರಿಬ್ಬರಿಗೂ ಇನ್ನೂ ಸ್ಥಾನಮಾನ ದಕ್ಕಿಲ್ಲ. ಇನ್ನುಳಿದ 16 ಮಂದಿಗೆ ಸರ್ಕಾರದಲ್ಲಿ ಸ್ಥಾನಗಳು ಲಭ್ಯವಾಗಿದೆ. ಇದಾದ ಬಳಿಕ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದವರಿಗೂ ಸರ್ಕಾರದಲ್ಲಿ ಸ್ಥಾನಮಾನ ಕೊಡುವುದನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಾಡಿದರು. ಆಪರೇಷನ್ ಕಮಲದಲ್ಲಿ ಬಹುಮುಖ್ಯ ಪಾತ್ರ ಹೊಂದಿದ್ದ ಬಿಜೆಪಿ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಒದಗಿಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಆ ಬಳಿಕ ಕೆಲವರಿಗೆ ಪಕ್ಷದಲ್ಲಿ ಹಾಗೂ ಇನ್ನೂ ಕೆಲವರಿಗೆ ಪರಿಷತ್‌ನಲ್ಲಿ ಸ್ಥಾನಮಾನ ಒದಗಿಸುವ ಮೂಲಕ ಋಣ ತೀರಿಸುವ ಕೆಲಸ ಮಾಡಿದ್ದರು. ಇದೀಗ ಅಂತಿಮವಾಗಿ ನಿಗಮ ಮಂಡಳಿಗಳಲ್ಲೂ ಸ್ಥಾನ ನೀಡಿ ತನ್ನ ಮಾತು ಉಳಿಸಿಕೊಂಡಿದ್ದಾರೆ.
ಕಳೆದೊಂದು ವರ್ಷದಿಂದ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೊಳ್ಳುವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ. ಅಧಿಕಾರಕ್ಕೆ ಬಂದಾಗಲೇ ಎದುರಾದ ಪ್ರವಾಹ ಪರಿಸ್ಥಿತಿ ನಾಲ್ಕೈದು ತಿಂಗಳಾದರೂ ಸರ್ಕಾರ ಅದರಿಂದ ಹೊರಬಾರದಂತಹ ಪರಿಸ್ಥಿತಿ ಸೃಷ್ಟಿಸಿತ್ತು. ಆ ನಂತರ ಅನರ್ಹ ಶಾಸಕರನ್ನು ಅರ್ಹರಾಗುವಂತೆ ಮಾಡಿದ್ದು, ಆ ಬಳಿಕ ಬಿಜೆಪಿ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತವನ್ನು ಶಮನ ಮಾಡುವುದು. ಆ ನಂತರ ಕೋವಿಡ್ 19 ಸಮಸ್ಯೆ ವಿರುದ್ಧ ಹೋರಾಡುತ್ತಿರುವುದು. ಮನೆಯಿಂದ ಹೊರ ಬಂದರೆ ಕೋವಿಡ್ ಭಾದೆ ಕೊಡಲಿದೆ ಎನ್ನುವ ಕಾರಣಕ್ಕೆ ಕೇವಲ ವೀಡಿಯೋ ಕಾನ್ಫರೆನ್ಸ್‌ಗೆ ಸೀಮಿತವಾಗಿದೆ ಬಿ.ಎಸ್ ಯಡಿಯೂರಪ್ಪ ಅಧಿಕಾರ. ಆದರೆ ಒಂದು ವರ್ಷದಲ್ಲಿ ನಾವು ಸಾಧನೆ ಮಾಡಿದ್ದೇವೆ ಎಂದು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಸಾಧನೆ ಪುಸ್ತಕದಲ್ಲಿದೆಯೋ ಅಥವಾ ಪುಸ್ತಕದಲ್ಲಿ ನಿಜವಾದ ಸಾಧನೆಯನ್ನೇ ದಾಖಲಿಸಿದ್ದಾರೆಯೋ ಎನ್ನುವುದನ್ನು ಜನರೇ ನಿರ್ಧರಿಸಬೇಕಿದೆ.
ಸರ್ಕಾರವೇನೋ ನಾವು ಸಾಧನೆ ಮಾಡಿದ್ದೇವೆ ಎಂದು ಕಿರು ಹೊತ್ತಿಗೆ ಬಿಡುಗಡೆ ಮಾಡಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಟ್ವಿಟರ್ ಮೂಲಕ ಶುಭಕೋರುವ ನೆಪದಲ್ಲಿ ಹೀಗಳೆದಿದ್ದಾರೆ. ಮುಖ್ಯಮಂತ್ರಿ ಆಗಿ ವರ್ಷ ಪೂರೈಸಿದ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಶುಭ ಕೋರಿದ್ದಾರೆ. ಸಿಎಂಗೆ ಅಭಿನಂದನೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಆಗುವ ಗುರಿ ತಲುಪಿ ವರ್ಷ ಕಳೆದ ಸಂಭ್ರಮದಲ್ಲಿದ್ದೀರಿ. ಇಂತಹ ಸಂದರ್ಭದಲ್ಲಿ ತುಸು ಬಿಡುವು ಮಾಡಿಕೊಂಡು, ಈ ಗುರಿ ಮುಟ್ಟಲು ಬಳಸಿದ ದಾರಿಯ ಬಗ್ಗೆ ಆತ್ಮ ಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಿ..! ಎನ್ನುವ ಮೂಲಕ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದರ ಬಗ್ಗೆ ಆತ್ಮಸಾಕ್ಷಿ ಕೇಳಿಕೊಳ್ಳಿ ಎಂದು ಕುಟುಕಿದ್ದಾರೆ.
ಒಟ್ಟಾರೆ, ಬಿ.ಎಸ್ ಯಡಿಯೂರಪ್ಪ ಸರ್ಕಾರ ಸಾಧನೆ ಮಾಡಿದೆ ಎಂದು ಎಷ್ಟೇ ಹೇಳಿಕೊಂಡರೂ ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಪರ್ವ ಎಂದು ಕೊಚ್ಚಿಕೊಂಡರೂ ಜನರ ಮನಸ್ಸಿನಲ್ಲಿ ನಿಜವಾದ ಸಂಗತಿ ಏನು ಎನ್ನುವುದು ಗೊತ್ತಿದೆ. ಹಾಗಾಗಿ ಇನ್ನುಳಿದ ಮೂರು ವರ್ಷದ ಸಮಯವನ್ನಾದರೂ ಅಭಿವೃದ್ಧಿಯತ್ತ ಗಮನ ಕೊಡಬೇಕಿದೆ. ಅಧಿಕಾರದ ಅಂತಿಮ ಘಟ್ಟದಲ್ಲಿರುವ ಬಿ.ಎಸ್ ಯಡಿಯೂರಪ್ಪ ಉತ್ತಮ ಕಾರ್ಯಗಳಿಂದ ಜನಮಾನಸದಲ್ಲಿ ಉಳಿಯುವಂತಾ ಕೆಲಸ ಮಾಡಬೇಕಿದೆ. ಹಾಗಾಗ ಬೇಕಿದ್ದರೆ ಮೊದಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ