ಅಂತೂ ಇಂತು ಕುಂತೀ ಮಕ್ಕಳಿಗೆ ರಾಜ್ಯ ಸಿಕ್ಕಿತು ಎಂಬಂತೆ ಒಂದೂವರೆ ತಿಂಗಳ ಸತತ ಪ್ರಯತ್ನ, ಒತ್ತಡಗಳಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಸಿಕ್ಕಿದೆ. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿ ಗೆದ್ದ ಎಲ್ಲಾ 11 ಮಂದಿಗೂ ಸಚಿವ ಸ್ಥಾನ ಕೊಡಬೇಕು ಎಂಬ ಮುಖ್ಯಮಂತ್ರಿಗಳ ಪ್ರಯತ್ನ ಪೂರ್ಣ ಫಲ ನೀಡಿಲ್ಲವಾದರೂ ಬಹುತೇಕ ಯಡಿಯೂರಪ್ಪ ಅವರ ಮಾತಿಗೆ ಹೈಕಮಾಂಡ್ ಅಸ್ತು ಎಂದಿದೆ. ಸದ್ಯದ ಮಾಹಿತಿ ಪ್ರಕಾರ ಒಟ್ಟು 13 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದರಲ್ಲಿ ಮೈತ್ರಿ ಸರ್ಕಾರ ಉರುಳಿಸಿ ಗೆದ್ದು ಬಂದಿರುವ 11 ಶಾಸಕರ ಪೈಕಿ ಎಷ್ಟು ಮಂದಿಗೆ ಮತ್ತು ಮೂಲ ಬಿಜೆಪಿಯಿಂದ ಗೆದ್ದು ಬಂದವರ ಪೈಕಿ ಎಷ್ಟು ಮಂದಿಗೆ ಸಚಿವ ಸ್ಥಾನ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಒಂದು ಮೂಲಗಳ ಪ್ರಕಾರ 10+3 (10 ಮಂದಿ ನೂತನವಾಗಿ ಗೆದ್ದವರು, ಮೂವರು ಹಳೇ ಬಿಜೆಪಿ) ಲೆಕ್ಕಾಚಾರದೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಸಚಿವ ಸಂಪುಟ ವಿಸ್ತರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಆದರೆ, ಸಚಿವರ ಸಂಖ್ಯೆ ಇನ್ನೂ ಸ್ಪಷ್ಟವಾಗುತ್ತಿಲ್ಲ. ಏಕೆಂದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಒಮ್ಮೆ 11 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ ಎನ್ನುತ್ತಾರೆ. ಮತ್ತೊಂದೆಡೆ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸುಮ್ಮನಾಗುತ್ತಾರೆ. ಆದರೆ, ಒಂದಂತೂ ಸ್ಪಷ್ಟ. ಸಂಪುಟ ರಚನೆ ಸಂದರ್ಭದಲ್ಲಿ ಸಾಕಷ್ಟು ಆಟ ಆಡಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಬಯಕೆಯಂತೆ (ಉಪಮುಖ್ಯಮಂತ್ರಿ ಹುದ್ದೆ ಹೊರತುಪಡಿಸಿ) ಸಚಿವರ ಆಯ್ಕೆಗೆ ಒಪ್ಪಿಗೆ ನೀಡಿದ ತಂತ್ರವನ್ನೇ ಈ ಬಾರಿಯೂ ಹೈಕಮಾಂಡ್ ಅನುಸರಿಸಿದೆ. ಇದರ ಜತೆಗೆ, ನಾನು ದೆಹಲಿಗೆ ಹೋಗುವುದಿಲ್ಲ ಎಂದು ಕುಳಿತಿದ್ದ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು, ನಿಮ್ಮ ಮಾತು ನಾವು ಕೇಳುತ್ತೇವೆ. ಅದೇ ರೀತಿ ನಮ್ಮ ಮಾತಿಗೂ ನೀವು ಬೆಲೆ ಕೊಡಬೇಕಾಗುತ್ತದೆ ಎಂಬ ಸಂದೇಶವನ್ನು ವರಿಷ್ಠರು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ.
ಎದುರಾಗಿದೆ ಸಮಸ್ಯೆಗಳ ಸರಮಾಲೆ
ಇಷ್ಟೆಲ್ಲಾ ಆದರೂ ಸಂಪುಟ ವಿಸ್ತರಣೆ ಕುರಿತಂತೆ ಗೊಂದಲ ಮಾತ್ರ ಇನ್ನೂ ಬಗೆಹರಿದಿಲ್ಲ. ಏಕೆಂದರೆ, ಸಂಖ್ಯೆ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. 10+3 ಲೆಕ್ಕಾಚಾರದ ಪ್ರಕಾರವೇ ಮಂತ್ರಿ ಮಂಡಲ ವಿಸ್ತರಿಸುವುದಾದರೆ ಬಹುತೇಕ ಮಹೇಶ್ ಕುಮುಟಳ್ಳಿ ಹೊರನಿಲ್ಲಬೇಕಾಗುತ್ತದೆ. ಏಕೆಂದರೆ, ಅಥಣಿ ಕ್ಷೇತ್ರದಿಂದ ಈಗಾಗಲೇ ಒಬ್ಬರು (ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ) ಸಂಪುಟದಲ್ಲಿದ್ದಾರೆ. ಮಹೇಶ್ ಕುಮುಟಳ್ಳಿಗೂ ಸ್ಥಾನ ನೀಡಿದರೆ ಒಂದೇ ಕ್ಷೇತ್ರದಿಂದ ಇಬ್ಬರು ಸಚಿವರಾದಂತಾಗುತ್ತದೆ. ಇದು ಬಿಜೆಪಿಯ ಆಂತರಿಕ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮಂತ್ರಿ ಮಂಡಲ ರಚನೆಯಲ್ಲಿ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಪಾಲಿಸುತ್ತಿಲ್ಲ ಎಂಬ ಕೂಗಿಗೆ ದೊಡ್ಡ ಬೆಂಬಲವೇ ಸಿಕ್ಕಿ ಭವಿಷ್ಯದಲ್ಲಿ ಬಿಜೆಪಿಗೆ ಪ್ರತೀಕೂಲ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ರೀತಿಯ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮಹೇಶ್ ಕುಮುಟಳ್ಳಿಗೆ ಸಚಿವ ಸ್ಥಾನ ನೀಡಿದರೆ ಆಗ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನದ ಭಾಗ್ಯ ತಪ್ಪುತ್ತದೆ.
ಇನ್ನು ಹಳೆಯ ಬಿಜೆಪಿಯಲ್ಲೂ ಸಚಿವ ಸ್ಥಾನದ ವಿಚಾರದಲ್ಲಿ ಕೆಲವು ತೊಡಕುಗಳಿವೆ. ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಹಾಲಪ್ಪ ಆಚಾರ ಜತೆ ಸಿ.ಪಿ.ಯೋಗೇಶ್ವರ್ ಅವರ ಹೆಸರು ಕೇಳಿಬರುತ್ತಿದೆ. ಆಪರೇಷನ್ ಕಮಲದ ರುವಾರಿಯಾಗಿರುವ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಸರಿಯಾದರೂ ಅವರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರಲ್ಲದೇ ಇರುವುದೇ ಸಮಸ್ಯೆ. ಪ್ರಸ್ತುತ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ಸ್ಥಾನ ಒಂದು ಮಾತ್ರ. ಈ ಸ್ಥಾನಕ್ಕೆ ಫೆ. 17ರಂದು ಚುನಾವಣೆ ನಡೆಯಲಿದ್ದು, ಉಪುಮುಖ್ಯಮಂತ್ರಿ ಹುದ್ದೆ ಮುಂದುವರಿಯುತ್ತಿರುವುದರಿಂದ ಲಕ್ಷ್ಮಣ ಸವದಿ ಅವರನ್ನೇ ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು.
ಇದರ ಜತೆಗೆ ಮೈತ್ರಿ ಸರ್ಕಾರ ಉರುಳಲು ಕಾರಣರಾದ ಆರ್.ಶಂಕರ್ ಅವರಿಗೆ ವಿಧಾನಸಭೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಿ ಸಚಿವ ಸ್ಥಾನ ಕಲ್ಪಿಸುವ ಭರವಸೆ ನೀಡಲಾಗಿದ್ದು, ಮುಂದೆ ವಿಧಾನ ಪರಿಷತ್ತಿನ ಒಂದು ಸ್ಥಾನವನ್ನು ಅವರಿಗೆ ಮೀಸಲಿಡಬೇಕಾಗುತ್ತದೆ. ಹೀಗಿರುವಾಗ ಯೋಗೇಶ್ವರ್ ಅವರನ್ನು ಮಂತ್ರಿ ಮಾಡಿದರೆ ಅವರನ್ನು ಆರು ತಿಂಗಳಲ್ಲಿ ಮೇಲ್ಮನೆಗೆ ಆಯ್ಕೆ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯ. ಹಾಗೆಂದು ಮಂತ್ರಿ ಸ್ಥಾನ ನೀಡದೇ ಇದ್ದರೆ ಸರ್ಕಾರ ರಚನೆಗೆ ಕಾರಣರಾದ ಯೋಗೇಶ್ವರ್ ಅವರಿಗೆ ದ್ರೋಹ ಮಾಡಿದಂತಾಗುತ್ತದೆ. ಈ ಸಮಸ್ಯೆಗೂ ಮದ್ದೆರೆಯುವ ಜವಾಬ್ದಾರಿ ಯಡಿಯೂರಪ್ಪ ಅವರ ಮೇಲಿದೆ.
ಇದಿಷ್ಟು ಒಂದೆಡೆಯಾದರೆ, ಪ್ರಸ್ತುತ ಹಳೆಯ ಬಿಜೆಪಿಗೆ ಸಿಕ್ಕಿರುವ ಮೂರು ಸ್ಥಾನಗಳ ಪೈಕಿ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೆ ನೀಡಲೇ ಬೇಕಾಗುತ್ತದೆ. ಉಮೇಶ್ ಕತ್ತಿ ಅವರಿಗೆ ಈಗಾಗಲೇ ಯಡಿಯೂರಪ್ಪ ಅವರು ಮಂತ್ರಿ ಮಾಡುವ ಭರವಸೆ ನೀಡಿದ್ದರೆ, ಸಂಪುಟ ರಚನೆ ವೇಳೆಯೇ ಮಂತ್ರಿಯಾಗಬೇಕಿದ್ದ ಅರವಿಂದ ಲಿಂಬಾವಳಿ ಕಾರಣಾಂತರಗಳಿಂದ ಮಂತ್ರಿ ಸ್ಥಾನ ತಪ್ಪಿಸಿಕೊಂಡಿದ್ದರು. ಈ ಬಾರಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಬಹುತೇಕ ಖಚಿತ. ಉಳಿದ ಒಂದು ಸ್ಥಾನಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಆಕಾಂಕ್ಷಿಯಾಗಿದ್ದರೆ, ಯೋಗೇಶ್ವರ್ ಹೆಸರು ಕೇಳಿಬರುತ್ತಿದೆ.
ಆದರೆ, ಈ ಬಾರಿ 13 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಟ್ಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಚಾರ ಬಂದೇ ಇಲ್ಲ. ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿರುವ ಸುನೀಲ್ ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸುಳ್ಯದ ಎಸ್.ಅಂಗಾರ ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇದೆ. ಈ ಬಾರಿಯಾದರೂ ಒಂದು ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗುತ್ತಿದ್ದು, ಇದು ಭವಿಷ್ಯದಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡಬಹುದು. ಆದರೆ, ಇದನ್ನು ಯೋಚಿಸದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಮಾಜಿಕ ನ್ಯಾಯಕ್ಕಿಂತ ಸರ್ಕಾರ ಭದ್ರ ಮಾಡಿಕೊಳ್ಳುವುದಷ್ಟೇ ನನ್ನ ಕೆಲಸ ಎಂದುಕೊಂಡರೆ ಆ ಭಾಗಕ್ಕೆ ಮಂತ್ರಿ ಸ್ಥಾನ ಮರೀಚಿಕೆಯಾಗಲಿದೆ.
ರಮೇಶ್ ಜಾರಕಿಹೊಳಿ ತಂಡವೂ ಇಕ್ಕಟ್ಟಿಗೆ ಸಿಲುಕಿದೆ
ಇಲ್ಲಿ ಯಡಿಯೂರಪ್ಪ ಮಾತ್ರವಲ್ಲ, ರಮೇಶ್ ಜಾರಕಿಹೊಳಿ ಮತ್ತು ಅವರ ತಂಡವೂ (11 ಶಾಸಕರು) ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಲು ಕಾರಣರಾದ ಎಲ್ಲರಿಗೂ (ಸೋತವರು ಸೇರಿ) ಸಚಿವ ಸ್ಥಾನ ನೀಡಬಕೇಕು, ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಲೇ ಬೇಕು ಎಂದು ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ ಮತ್ತು 10 ಶಾಸಕರ ತಂಡ ಇದೀಗ ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ. ಗೆದ್ದಿರುವ 11 ಶಾಸಕರ ಪೈಕಿ ಹೈಕಮಾಂಡ್ ಇಂತಿಷ್ಟು (9 ಅಥವಾ 10) ಮಂದಿಗೆ ಸಚಿವ ಸ್ಥಾನಗಳನ್ನು ನೀಡಿ ಎಂದು ಹೈಕಮಾಂಡ್ ಹೇಳಿದೆ. ಈ ಸ್ಥಾನಗಳಿಗೆ ನಿಮ್ಮ 11 ಮಂದಿ ಪೈಕಿ ಯಾರನ್ನೆಲ್ಲಾ ಆಯ್ಕೆ ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಆ ಮೂಲಕ ತಮ್ಮ ಒಂದು ಸಮಸ್ಯೆಯನ್ನು ರಮೇಶ್ ಜಾರಕಿಹೊಳಿ ಮತ್ತು ತಂಡದ ಮೇಲೆಯೇ ಹಾಕಿ ತಾವು ಪಾರಾಗಿದ್ದಾರೆ.
ಇರುವ 11 ಶಾಸಕರಿಗೆ ಇಂತಿಷ್ಟು ಸಚಿವ ಸ್ಥಾನ ಎಂದು ನಿಗದಿಯಾಗಿರುವುದರಿಂದ ಅದಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಅವರವರೇ ಕುಳಿತು ಬಗೆಹರಿಸಿಕೊಳ್ಳಬೇಕು. ಯಾರಿಗೆ ಸಚಿವ ಸ್ಥಾನ ತಪ್ಪಿದರೂ ಅದಕ್ಕೆ ಅವರ ಜತೆಗಿದ್ದವರೇ ಕಾರಣರಾಗುತ್ತಾರೆ. ಯಡಿಯೂರಪ್ಪ ಅವರ ಮೇಲೆ ಅಪವಾದ ಬರುವುದು ತಪ್ಪುತ್ತದೆ. ಇನ್ನೊಂದೆಡೆ ಎಲ್ಲರಿಗೂ ಮಂತ್ರಿ ಸ್ಥಾನ ನೀಡದೇ ಇದ್ದಲ್ಲಿ ಯಾರಿಗೂ ಸಚಿವ ಸ್ಥಾನ ಬೇಡವೇ ಬೇಡ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಶಾಸಕ ಸ್ಥಾನದಿಂದ ಅನರ್ಹಗೊಂಡು ಈಗಷ್ಟೇ ಪುನರಾಯ್ಕೆಯಾಗಿರುವ ಅವರು ಮತ್ತೆ ಕ್ಯಾತೆ ತೆಗೆದು ರಾಜೀನಾಮೆ ನೀಡಿದರೆ ಅಳಿದುಳಿದ ಗೌರವವೂ ಹರಾಜಾಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲು ಈ ಶಾಸಕರು ಕೂಡ ನಿರ್ಧರಿಸಿದ್ದಾರೆ.
ಆದರೆ, ಅಂತಿಮವಾಗಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗುತ್ತದೆ ಎಂಬುದು ಸೋಮವಾರವಷ್ಟೇ ಗೊತ್ತಾಗಲಿದೆ. ಒಂದೊಮ್ಮೆ ಅಷ್ಟರೊಳಗೆ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಸಂಪುಟ ವಿಸ್ತರಣೆ ಮತ್ತೂ ಒಂದೆರಡು ದಿನ ಮುಂದಕ್ಕೆ ಹೋಗಬಹುದು.