ಕೋವಿಡ್-19 ಕಾರಣದಿಂದ ಹೇರಲಾದ ಲಾಕ್ ಡೌನ್ನಿಂದಾಗಿ ದೇಶವಾಸಿಗಳು ಹೈರಾಣಾಗಿ ಹೋಗಿದ್ದಾರೆ. ಮನೆಯಲ್ಲೇ ಕೂಡಿ ಹಾಕಿರುವಂತ ಪರಿಸ್ಥಿತಿಯಲ್ಲಿದ್ದಾರೆ ಜನರು. ಹೀಗಿರುವಾಗ ಒಂದಲ್ಲಾ ಒಂದು ಮನರಂಜನಾ ಕಾರ್ಯಕ್ರಮಗಳ ಕಡೆ ಹಾಗೂ ಮನೆಯೊಳಗಡೆಯೇ ಆಟ ಆಡುವುದು ಮತ್ತು ಆನ್ಲೈನ್ ಗೇಮಿಂಗ್ ಕಡೆಗೂ ಜನರು ಮುಖ ಮಾಡಿದ್ದಾರೆ. ಆದರೆ ಅದೂ ಕೂಡ ಈಗ ಜನರಲ್ಲಿ ಬೇಸರ ತರಿಸಿದೆ. ಈತನ್ಮಧ್ಯೆ, ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ IPL ಈಗ ನಡೆದರೆ ಲಾಕ್ ಡೌನ್ ತಲೆ ಬಿಸಿ ಕಡಿಮೆ ಆಗಬಹುದು ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶ್ರೀಲಂಕಾ ಕ್ರಿಕೆಟಿಗ ಎಂಜಲೋ ಮ್ಯಾಥ್ಯೂಸ್ ಜೊತೆ ಕಮೆಂಟ್ ಮಾತುಕತೆ ನಡೆಸುವ ವೇಳೆ ಶಿಖರ್ ಧವನ್ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. “ಸದ್ಯ ಯಾವುದಾದರೊಂದು ಕ್ರೀಡೆಗೆ ಚಾಲನೆ ಸಿಕ್ಕರೆ ಒಳ್ಳೆಯದಿತ್ತು. ಅದ್ರಲ್ಲೂ IPLಗೆ ಅನುಮತಿ ಕೊಟ್ಟಿದ್ದರೆ ಅದು ಲಾಕ್ ಡೌನ್ ತಲೆ ಬಿಸಿಯಲ್ಲಿರುವ ಜನರಲ್ಲಿ ಸಕಾರಾತ್ಮಕ ಭಾವನೆ ಹುಟ್ಟಿಸಬಲ್ಲದು. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ IPL ಕೂಟವನ್ನು ಆಯೋಜಿಸಬೇಕು. ಜನರಿಗೆ ಸ್ಟೇಡಿಯಂಗೆ ಬಂದು ನೋಡಲು ಅವಕಾಶ ನೀಡದೆ ಕೂಡ ಟೂರ್ನಮೆಂಟ್ ಆಯೋಜನೆ ಮಾಡಬಹುದು. ಆದರೆ, ನಾವು ಜನ ಸಾಗರದ ಮಧ್ಯೆ ನಿಂತು ಆಡುವ ಮಜವನ್ನು ಕಳೆದುಕೊಳ್ಳಲಿದ್ದೇವೆ. ಆದರೂ ಅಡ್ಡಿಯಿಲ್ಲ, IPL ನಡೆದರೆ ಕ್ರಿಕೆಟ್ ಪ್ರಿಯರಲ್ಲಿ ಅದು ಹುಮ್ಮಸ್ಸು ಮೂಡಿಸಲಿದೆ” ಎಂದಿದ್ದಾರೆ. ಅಂದಹಾಗೆ, ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. 2019ರಲ್ಲಿ ಸನ್ ರೈಸರ್ಸ್ ಹೈದಾಬಾದ್ ತಂಡದಿಂದ ಹೊರ ಬಿದ್ದು 5.2 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು.
ಮಾರ್ಚ್ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕರೋನಾ ಹಾಗೂ ಲಾಕ್ ಡೌನ್ ಕಾರಣಕ್ಕೆ BCCI ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಕೇವಲ IPL ಮಾತ್ರವಲ್ಲ ಎಲ್ಲಾ ಅಂತಾರಾಷ್ಟ್ರೀಯಾ ಕ್ರಿಕೆಟ್ ಪಂದ್ಯಗಳನ್ನೂ ಕೂಡ ICC ರದ್ದು ಮಾಡಿತ್ತು. ಆದರೆ ಲಾಕ್ ಡೌನ್ ಕಾರಣದಿಂದ ರದ್ದಾಗಿರುವ 13ನೇ ಆವೃತ್ತಿಯ IPL ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ನಡೆಸಲು BCCI ಚಿಂತಿಸುತ್ತಿದೆ. ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ವಿಶ್ವ ಕಪ್ ಕೂಡ ನಡೆಯಲಿದೆ. ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ICC ಮಾಡಿದರೆ, ಇದೇ ಸಮಯದಲ್ಲಿ ಇಲ್ಲಿ IPL ಚುಟುಕು ಕ್ರಿಕೆಟ್ ಹಬ್ಬ ಕೂಡ ಶುರುವಾಗುವ ಸಾಧ್ಯತೆ ಇದೆ.