ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಈ ತಿಂಗಳ ಹೊತ್ತಿಗೆ ಸ್ಟಾರ್ ಹೀರೋಗಳ ನಾಲ್ಕೈದು ದೊಡ್ಡ ಸಿನಿಮಾಗಳು ಥಿಯೇಟರ್ ನಲ್ಲಿರುತ್ತಿದ್ದವು. ಚಿತ್ರಮಂದಿರಗಳೆದುರು ದೊಡ್ಡ ಕಟೌಟ್‍ಗಳಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಸ್ಟಾರ್ ಪಟ್ಟ ಕಟ್ಟಿ ಸಂಭ್ರಮಿಸುತ್ತಿದ್ದರು. ಆದರೀಗ ಕರೋನಾ ಲಾಕ್‍ಡೌನ್‍ನಿಂದಾಗಿ ಸಿನಿಮೋದ್ಯಮ ನೆಲಕಚ್ಚಿದೆ. ಎಲ್ಲಾ ಚಟುವಟಿಕೆಗಳು ನಿಂತಿದ್ದು, ಭವಿಷ್ಯದ ದಿನಗಳ ಬಗ್ಗೆ ಚಿಂತಿಸುವಂತಾಗಿದೆ. ಸಿನಿಮಾಗಳಿಗೆ ಬಂಡವಾಳ ಹೂಡಿರುವ ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, ಇತರೆ ವಿಭಾಗಗಳ ತಂತ್ರಜ್ಞರು ಹಾಗೂ ಕಾರ್ಮಿಕರು ಕೆಲಸವಿಲ್ಲದೆ ತೊಂದರೆಗೀಡಾಗಿದ್ದಾರೆ. ಲಾಕ್‍ಡೌನ್ ತೆರವಿನಿಂದಾಗಿ ಎಲ್ಲಾ ಸಮಸ್ಯೆಗಳು ಬಗೆಹರಿಯುವುದಿಲ್ಲ ಎನ್ನುವುದೇ ಉದ್ಯಮದ ಆತಂಕಕ್ಕೆ ಕಾರಣವಾಗಿದೆ.

‘ಯುವರತ್ನ’ (ಪುನೀತ್ ರಾಜಕುಮಾರ್), ‘ರಾಬರ್ಟ್’ (ದರ್ಶನ್), ‘ಕೋಟಿಗೊಬ್ಬ 3’ (ಸುದೀಪ್), ‘ಪೊಗರು’ (ಧ್ರುವ ಸರ್ಜಾ) ‘ಚಾರ್ಲಿ’ (ರಕ್ಷಿತ್ ಶೆಟ್ಟಿ) ಸಿನಿಮಾಗಳು ಥಿಯೇಟರ್‍ಗೆ ಬರಲು ಸಿದ್ಧವಾಗಿದ್ದವು. ದುಬಾರಿ ಬಜೆಟ್‍ನಲ್ಲಿ ತಯಾರಾಗಿರುವ ಈ ಸಿನಿಮಾಗಳ ಜೊತೆ ಮಧ್ಯಮ ಮತ್ತು ಸಣ್ಣ ಬಜೆಟ್‍ನ 50ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ಆದರೆ ಲಾಕ್‍ಡೌನ್‍ನಿಂದಾಗಿ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗಿವೆ. ಗಾಂಧಿನಗರದ ಮೂಲಗಳ ಪ್ರಕಾರ ಸರಿಸುಮಾರು 75 ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. ಈ ಎಲ್ಲಾ ಚಿತ್ರಗಳಿಗೆ ಹೂಡಿರುವ ಬಂಡವಾಳ ನಾನೂರು ಕೋಟಿ ರೂಪಾಯಿ ದಾಟುತ್ತದೆ. ಕನ್ನಡ ಚಿತ್ರಗಳ ಜೊತೆ ಬಾಲಿವುಡ್ ಸೇರಿದಂತೆ ತೆಲುಗು, ತಮಿಳು, ಮಲಯಾಳಂನ 60ಕ್ಕೂ ಹೆಚ್ಚು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಒಂದೊಮ್ಮೆ ಕನ್ನಡ ಸೇರಿದಂತೆ ಈ ಎಲ್ಲಾ ಚಿತ್ರಗಳು ಬಿಡುಗಡೆಯಾಗುತ್ತವೆ ಎನ್ನುವುದಾದರೆ ಅಷ್ಟು ಥಿಯೇಟರ್‍ಗಳು ಎಲ್ಲಿವೆ? ಎಲ್ಲಕ್ಕಿಂತ ಮುಖ್ಯವಾಗಿ ಜನರು ಥಿಯೇಟರ್‍ಗೆ ಬರುತ್ತಾರೆ ಎನ್ನುವ ಖಾತ್ರಿ ಎಲ್ಲಿದೆ?

“ಬೇರೆ ಉದ್ಯಮಗಳಾದರೆ ಇಂತಹ ಸಂದರ್ಭಗಳಲ್ಲಿ ಬೇಗ ರಿಕವರಿ ಆಗುತ್ತವೆ ಎಂದು ಹೇಳಬಹುದು. ಆದರೆ ಸಿನಿಮೋದ್ಯಮದ ಕತೆ ಬೇರೆ. ತಿಂಗಳ ನಂತರ ಲಾಕ್‍ಡೌನ್ ಓಪನ್ ಆದರೂ ಜನರು ಥಿಯೇಟರ್‍ಗೆ ಬರೋಕೆ ಭಯ ಪಡ್ತಾರೆ. ಈಗಾಗಲೇ ಜನರ ಕೆಲಸ, ಕಾರ್ಯಗಳಿಗೆ ತೊಂದರೆಯಾಗಿದೆ. ಸದ್ಯ ಅವರ ಎಲ್ಲಾ ಗಮನ ತಮ್ಮ ಉದ್ಯೋಗದೆಡೆ ಇರುತ್ತದೆ. ಜೊತೆಗೆ ಕುಟುಂಬ, ಮಕ್ಕಳ ಓದು, ಪಾಲನೆಯತ್ತ ಗಮನ. ಮನರಂಜನೆ ಏನಿದ್ದರೂ ಎರಡನೇ ಆದ್ಯತೆ. ನನ್ನ ಪ್ರಕಾರ ಎಲ್ಲವೂ ಸಹಜ ಸ್ಥಿತಿಗೆ ಮರಳಬೇಕೆಂದರೆ ವರ್ಷವಾದರೂ ಬೇಕಾಗುತ್ತದೆ” ಎನ್ನುತ್ತಾರೆ ಕನ್ನಡ ಚಿತ್ರರಂಗದ ಹಿರಿಯ ವಿತರಕ, ನಿರ್ಮಾಪಕ ಮಾರ್ಸ್ ಸುರೇಶ್. ಅವರು ಹೇಳುವಂತೆ ಹಿಂದೆಂದೂ ಉದ್ಯಮ ಹೀಗೆ ಸ್ತಬ್ಧವಾಗಿರಲಿಲ್ಲ. ವರನಟ ಡಾ.ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ ಒಂದಷ್ಟು ದಿನ ಉದ್ಯಮದ ಕಾರ್ಯಚಟುವಟಿಕೆಗಳು ನಿಂತಿದ್ದವು. ಅದರ ಹೊರತಾಗಿ ಮತ್ತಾವ ಸಂದರ್ಭಗಳಲ್ಲೂ ಲಾಕ್‍ಡೌನ್ ಆಗಿರಲಿಲ್ಲ.
ಇನ್ನು ಕರೋನಾ ಹಾವಳಿಯಿಂದ ಇಲ್ಲಿಯವರೆಗೆ ಆಗಿರುವ ನಷ್ಟವನ್ನು ಲೆಕ್ಕಹಾಕುವುದೂ ಅಪ್ರಸ್ತುತ ಎನ್ನುವುದು ಸುರೇಶ್ ಅಭಿಪ್ರಾಯ. “ಕರೋನಾದಿಂದಾಗಿ ಜಗತ್ತಿನ ಚಿತ್ರೋದ್ಯಮವೇ ಸ್ಥಗಿತಗೊಂಡಿದೆ. ಒಟ್ಟು ನಷ್ಟದ ಅಂದಾಜು ಮಾಡಿ, ಅದರಲ್ಲಿ ಕನ್ನಡ ಚಿತ್ರರಂಗದ ಶೇರ್ ಎಷ್ಟು ಎಂದು ಹೇಳಬಹುದಷ್ಟೆ!” ಎನ್ನುತ್ತಾರವರು. ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರಿಗೂ ಕೂಡ ಪರಿಸ್ಥಿತಿಯ ಸರಿಯಾದ ಅಂದಾಜು ಸಿಗುತ್ತಿಲ್ಲ. ಅವರ ನಿರ್ಮಾಣದ ಬಹುಕೋಟಿ ವೆಚ್ಚದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದ ಚಿತ್ರೀಕರಣಕ್ಕೆ ಕರೊನಾದಿಂದಾಗಿ ಆರಂಭದಲ್ಲೇ ವಿಘ್ನ ತಲೆದೋರಿದೆ. “ಸದ್ಯಕ್ಕೆ ನಾನು ಬ್ಲ್ಯಾಂಕ್ ಆಗಿದ್ದೇನೆ. ಕನ್ನಡ ಚಿತ್ರರಂಗದ ಕಾರ್ಯಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಗೊಂದಲವಾಗಿದೆ. ಬಹುಶಃ ಇನ್ನೊಂದು ವಾರದಲ್ಲಿ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದ ನಂತರ ಒಂದು ಕ್ಲಿಯಾರಿಟಿ ಸಿಗಬಹುದೇನೋ” ಎನ್ನುತ್ತಾರೆ ರಾಕ್‍ಲೈನ್.
ಲಾಕ್‍ಡೌನ್‍ನಿಂದಾಗಿ ಚಿತ್ರೋದ್ಯಮವನ್ನೇ ನಂಬಿಕೊಂಡು ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪೈಕಿ ಕಾರ್ಮಿಕರ ಒಕ್ಕೂಟದಲ್ಲಿ ಗುರುತಿಸಿಕೊಳ್ಳದ ಒಂದು ವರ್ಗವೂ ಇದೆ. ಸಿನಿಮಾ ಪೋಸ್ಟರ್ ಹಚ್ಚುವವರು, ಕಟೌಟ್, ಸ್ಟಾರ್ ತಯಾರಕರು, ಥಿಯೇಟರ್ ವಿನ್ಯಾಸ ಮಾಡುವವರು, ವಾಹನ ಚಾಲಕರು, ಅಡುಗೆ ಮಾಡುವವರು ಸೇರಿದಂತೆ ಅಸಂಘಟಿತ ವಲಯದ ದೊಡ್ಡ ಸಮುದಾಯವೂ ಇಲ್ಲಿದೆ. ಅವರಿಗೆ ಒಕ್ಕೂಟದಿಂದಲೂ ಸದ್ಯ ಯಾವ ನೆರವೂ ಸಿಗುತ್ತಿಲ್ಲ. ಇವರಿಗೆ ಕೆಲಸವಿಲ್ಲದೆ ಬದುಕು ನಡೆಸುವುದೂ ಕಷ್ಟವಾಗಿದೆ. ಸಾಧ್ಯವಾದಷ್ಟು ಬೇಗ ಉದ್ಯಮ ಸಹಜ ಸ್ಥಿತಿಗೆ ಮರಳಿ ಕೆಲಸಗಳು ಆರಂಭವಾಗಲಿ ಎಂದು ಅವರು ಪರಿತಪಿಸುತ್ತಿದ್ದಾರೆ.
ನಿರ್ಮಾಪಕರು, ಕಾರ್ಮಿಕರ ಅನಿಶ್ಚಿತತೆ ಒಂದೆಡೆಯಾದರೆ ಕ್ರಿಯಾಶೀಲ ವರ್ಗದ ತಂತ್ರಜ್ಞರು ಹಾಗೂ ಕಲಾವಿದರದ್ದು ಮತ್ತೊಂದು ರೀತಿಯ ಆತಂಕ. ಅರ್ಧ ಶೂಟಿಂಗ್ ನಡೆಸಿರುವ, ಚಿತ್ರೀಕರಣ ಆರಂಭಿಸಬೇಕಿದ್ದ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿಸಿಕೊಂಡಿರುವ ನಿರ್ದೇಶಕರಿಗೆ ಕಂಟ್ಯೂನಿಟಿ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳ ಬಗೆಗಿನ ಆತಂಕ ಅವರ ಕ್ರಿಯಾಶೀಲತೆ ಕೊಂಚ ತಡೆಯೊಡ್ಡಿರುವುದು ಹೌದು. “ಕರೋನಾಕುರಿತು ಸರಿಯಾದ ಕ್ಲ್ಯಾರಿಟಿ ಸಿಗುತ್ತಿಲ್ಲ. ಈಗ ಲಾಕ್‍ಡೌನ್ ಮುಗಿದಾಕ್ಷಣ ಚಿತ್ರರಂಗದ ಸಮಸ್ಯೆಗಳೇನೂ ತಕ್ಷಣಕ್ಕೆ ಬಗೆಹರಿಯೋಲ್ಲ. ಜನ ಥಿಯೇಟರ್‍ಗೆ ಬರೋಕೆ ತುಂಬಾ ಸಮಯ ಬೇಕಾಗುತ್ತದೆ. ಜನಕ್ಕೆ ಈಗ ಉದ್ಯೋಗದ ಅನಿಶ್ಚಿತತೆ ಇದೆ. ಮನರಂಜನೆ ಅವರಿಗೆ ಸೆಕೆಂಡ್ ಆಪ್ಶನ್. ನನ್ನ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಾಗಬೇಕಿತ್ತು. ಈಗ ಹೊಸ ಸ್ಕ್ರಿಪ್ಟ್ ಗಳಲ್ಲಿ ತೊಡಗಿಸಿಕೊಳ್ಳೂಕೂ ಒಂದು ರೀತಿ ನಿರಾಸಕ್ತಿ” ಎನ್ನುತ್ತಾರೆ ಯುವನಿರ್ದೇಶಕ ಮಂಸೋರೆ. ಮುಂದಿನ ದಿನಗಳಲ್ಲಿ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಂದರ್ಭಗಳೂ ಸೃಷ್ಟಿಯಾಗಬಹುದು ಎನ್ನುವ ಅವರು ಅಲ್ಲಿನ ಮಿತಿಗಳ ಬಗ್ಗೆಯೂ ಮಾತನಾಡುತ್ತಾರೆ.

ಹಿರಿಯ ಚಿತ್ರನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಈ ಸಂದರ್ಭವನ್ನು ಬೇರೆಯದ್ದೇ ರೀತಿ ವಿಶ್ಲೇಷಿಸುತ್ತಾರೆ. ಈ ಪರಿಸ್ಥಿತಿ ಸಿನಿಮಾದೆಡೆ ಜನರಿಗಿರುವ ಪರಿಕಲ್ಪನೆಯನ್ನೇ ಬದಲಿಸಬಹುದು ಎನ್ನುವುದು ಅವರ ಅನುಭವದ ಮಾತು. “ಮನೇಲೇ ಸಿನಿಮಾ ನೋಡಬಹುದಲ್ವೆ, ಥಿಯೇಟರ್‍ಗೆ ಯಾಕೆ ಹೋಗ್ಬೇಕು ಅನ್ನೋ ರೀತಿ ಜನ ಯೋಚಿಸಬಹುದು. ಇನ್ನೂ ಒಂದು ವರ್ಗಕ್ಕೆ ಥಿಯೇಟರ್ ಬೇಕೇಬೇಕು. ಸದ್ಯ ಅಲ್ಲೀಗ ಎಸಿ ಹಾಕುವ ಹಾಗಿಲ್ಲ, ಸೋಷಿಯಲ್ ಡಿಸ್ಟಾನ್ಸಿಂಗ್ ಎನ್ನುವಂತಹ ನಿಯಮಗಳು ಇರುತ್ತವೆ. ಇವೆಲ್ಲಾ ಹೇಗೆ ಸಾಲ್ವ್ ಆಗುತ್ತವೆ ನೋಡಬೇಕು. ಓಟಿಟಿಯಲ್ಲಿ ನೋಡುವ ಸಿನಿಮಾಸಕ್ತರು ಹೊಸ ಪ್ರಯೋಗಶೀಲ ಸಿನಿಮಾಗಳನ್ನು ಅಪೇಕ್ಷಿಸಬಹುದು. ಕರೋನಾಅಡಚಣೆ ತಾತ್ಕಾಲಿಕ. ಏನೇ ಅಡ್ಡಿ, ಆತಂಕಗಳು ಎದುರಾದರೂ ಸಿನಿಮಾ ಯಾವತ್ತೂ ನಿಲ್ಲೋಲ್ಲ. ಅದಕ್ಕೊಂದು ಪವರ್ ಇದೆ. ಹಿಂದೆ ಜಗತ್ತಿನ ಹಲವೆಡೆ ಯುದ್ಧಗಳಾದಾಗಲೂ ಸಿನಿಮಾ ತಯಾರಿಕೆ ನಿಂತಿಲ್ಲ. ಹೊಸ ಪ್ರಶ್ನೆಗಳು, ಸವಾಲುಗಳು ಉದ್ಭವವಾಗುತ್ತವಷ್ಟೆ” ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ ಸಿಂಗ್ ಬಾಬು.
ನಟಿ ಮಯೂರಿಗೆ ಕರೋನಾ ಸಂದರ್ಭ ಒಂದೊಳ್ಳೆ ಪಾಠದಂತೆ ಕಾಣಿಸಿದೆ. ಸದ್ಯ ಅವರೀಗ ಯೋಗ, ಧ್ಯಾನ, ಓದಿನಲ್ಲಿ ತೊಡಗಿಸಿಕೊಂಡಿದ್ದಾರೆ. “ಇದು ಮನುಕುಲಕ್ಕೆ ಪ್ರಕೃತಿ ಕಲಿಸುತ್ತಿರುವ ಪಾಠ ಎಂದೇ ನಾನು ಭಾವಿಸುತ್ತೇನೆ. ಬದುಕು ಎಷ್ಟು ದೊಡ್ಡದು ಎನ್ನುವುದು ನನಗೆ ಅರಿವಾಗುತ್ತಿದೆ. ಚಿತ್ರೀಕರಣದಲ್ಲಿ ಬಿಝಿ ಇದ್ದಾಗ ನಾಲ್ಕು ದಿನ ಬಿಡುವು ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದೆ. ಈಗ ಮನೆಯಲ್ಲೇ ಇರುವಂತಾಗಿದೆ. ಸಾಧ್ಯವಾದಷ್ಟು ಬೇಗ ಎಲ್ಲವೂ ತಿಳಿಯಾಗಿ ಇಂಡಸ್ಟ್ರೀ ಮೊದಲಿನಂತಾದರೆ ಇಲ್ಲಿನ ಎಲ್ಲರೂ ನಿಟ್ಟುಸಿರುಬಿಡಬಹುದು” ಎನ್ನುತ್ತಾರವರು. ಉದ್ಯಮದ ಎಲ್ಲಾ ವಿಭಾಗದವರೂ ಸಹಜಸ್ಥಿತಿಯನ್ನು ಎದುರು ನೋಡುತ್ತಿದ್ದಾರೆ. ಆದರೆ ಇದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.