ಕರೋನಾ ಸೋಂಕು ತಡೆಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸೋಷಿಯಲ್ ಡಿಸ್ಟೆನ್ಸ್ ಎಷ್ಟು ಮುಖ್ಯವೋ ಅಷ್ಟೇ ಪ್ರಮುಖವಾದುದು ಅಂದ್ರೆ ರ‍್ಯಾಪಿಡ್ ಟೆಸ್ಟ್. ರ‍್ಯಾಪಿಡ್ ಟೆಸ್ಟ್ ಕಿಟ್‌ನಿಂದ ಅತಿ ವೇಗವಾಗಿ ಫಲಿತಾಂಶ ಪಡೆಯಲು ಸಹಕಾರಿ ಆಗುತ್ತದೆ. ಅದೇ ಕಾರಣಕ್ಕೆ ಕರೋನಾ ತವರು ಚೀನಾದಿಂದ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಭಾರತ ಆಮದು ಮಾಡಿಕೊಂಡಿತ್ತು. ಬರೋಬ್ಬರಿ 5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಆಮದು ಮಾಡಿಕೊಂಡು ಎಲ್ಲಾ ರಾಜ್ಯಗಳಿಗೂ ಹಂಚಿಕೆ ಮಾಡಿತ್ತು. ಆದ್ರೆ ರ‍್ಯಾಪಿಡ್ ಟೆಸ್ಟ್ ಕಿಟ್ನಲ್ಲಿ ಫಲಿತಾಂಶ ನಿಖರವಾಗಿ ಸಿಗುತ್ತಿಲ್ಲ ಎನ್ನು ಕಾರಣವನ್ನು ಹಲವಾರು ರಾಜ್ಯಗಳು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದವು. ರಾಜ್ಯಗಳ ಅಹವಾಲು ಆಲಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research) ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ಸೂಚನೆ ಕೊಟ್ಟಿತ್ತು.
Also Read: PPE ಕೊರತೆ ಎಫೆಕ್ಟ್; ದಾದಿಯರಲ್ಲೂ ಕಂಡು ಬರುತ್ತಿದೆ ಕರೋನಾ ಸೋಂಕು!
ಇದೀಗ ಚೀನಾ ದೇಶ ನಮ್ಮ ಕಿಟ್‌ಗಳಲ್ಲಿ ಯಾವುದೇ ದೋಷವಿಲ್ಲ. ನಿಮ್ಮ ದೇಶದಲ್ಲಿ ರ‍್ಯಾಪಿಡ್ ಟೆಸ್ಟ್ ಕಿಟ್ ಬಳಸುತ್ತಿರುವವರು ಸರಿಯಾಗಿ ಬಳಸುತ್ತಿಲ್ಲ ಎಂದು ತನ್ನ ವಸ್ತುವನ್ನು ಸಮರ್ಥಿಸಿಕೊಂಡಿದೆ. ಅಂತಿಮವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research) ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಕಠಿಣ ಪರೀಕ್ಷೆಗೆ ಒಳಪಡಿಸಿದ್ದು, ಒಂದು ವೇಳೆ ದೋಷಪೂರಿತ ಎಂದು ಖಚಿತವಾದರೆ ಎಲ್ಲಾ ಒಪ್ಪಂದಗಳನ್ನು ರದ್ದು ಮಾಡುತ್ತೇವೆ. ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಎರಡನೇ ಹಂತದ ಟೆಸ್ಟ್ ಕಿಟ್‌ಗಳನ್ನು ತರಿಸುತ್ತೇವೆ ಎಂದಿದ್ದಾರೆ. ಚೀನಾದ ವೊಂಡ್ಫೋ ಬಯೋಟೆಕ್ ಹಾಗೂ ಲಿವ್ವನ್ ಡಯಾಗ್ನೋಸ್ಟಿಕ್‌ನಿಂದ ಭಾರತ ಲಕ್ಷ ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ತರಿಸಲು ಒಪ್ಪಂದ ಮಾಡಿಕೊಂಡಿದೆ. ಆದರೆ ಚೀನಾ ಕಂಪನಿಗಳು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಸರಿಯಾಗಿ ಪ್ರಯೋಗಕ್ಕೆ ಒಳಪಡಿಸದೆ ತಯಾರಿಕೆ ಮಾಡುತ್ತಿವೆ ಎಂದು ಭಾರತೀಯ ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಕಷ್ಟು ಪ್ರಯೋಗಗಳನ್ನು ಮಾಡದೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ತಮ್ಮ ಉತ್ಪನ್ನವನ್ನು ವ್ಯಾಪಾರೀಕರಣ ಮಾಡುತ್ತಿದೆ ಎಂದು ಹಿರಿಯ ಸಾಂಕ್ರಾಮಿಕ ರೋಗ ಸಲಹೆಗಾರ ಡಾ. ಮುಬಶೀರ್ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Also Read: ಮೇಡ್ ಇನ್ ಚೈನಾ; ತಿರಸ್ಕರಿಸಿದ ವಿಶ್ವ.. ಮುಗಿಬಿದ್ದ ಭಾರತ!
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರನ್ನು ಕೇಳಿದಾಗ, ಚೀನಾ ಪೂರೈಸಿರುವ ರ‍್ಯಾಪಿಡ್ ಟೆಸ್ಟ್ ಕಿಟ್‌ನಲ್ಲಿ ದೋಷಗಳು ಕಂಡುಬಂದಿದ್ದು, ಅವುಗಳನ್ನು ವಾಪಸ್ ಕಳುಹಿಸಲಾಗುವುದು ಎಂದಿದ್ದಾರೆ. ಭಾರತದಲ್ಲಿ ಕರೋನಾ ಸೋಂಕು ಪತ್ತೆಗೆ ಬಳಸುತ್ತಿರುವ RT-PCRಗೆ ರ‍್ಯಾಪಿಡ್ ಟೆಸ್ಟ್ ಕಿಟ್ ಪರ್ಯಾಯವಲ್ಲ ಎಂದು ICMR ತಿಳಿಸಿದೆ. ಅನುಮಾನಗಳು ಹೆಚ್ಚಾಗಿದ್ದರೆ RT-PCR ವಿಧಾನದಲ್ಲಿ ಗಂಟಲ ದ್ರವ ಅಥವಾ ಮೂಗಿನಿಂದ ಸ್ವ್ಯಾಬ್ ಮೂಲಕವೇ ತಪಾಸಣೆ ಸೂಕ್ತ ಎಂದಿದೆ.ಚೀನಾದ ರ‍್ಯಾಪಿಡ್ ಕಿಟ್ ಜೊತೆಗೆ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿಗೆ ಬಳಸುವ ರಕ್ಷಣಾ ವಸ್ತ್ರ (PPE) ಕಿಟ್ ಕೂಡ ಕಳಪೆ ಎನ್ನುವುದು ಗೊತ್ತಾಗಿದೆ. ಹೀಗಾಗಿ ಕೋಟಿ ಕೋಟಿ ಹಣ ಕೊಟ್ಟ ಖರೀದಿ ಮಾಡಿದ್ದ ಪಿಪಿಇ ಕಿಟ್‌ಗಳು ಗೋದಾಮು ಸೇರಿವೆ. ಮುಂಬೈ ಮೂಲದ ಸಂಸ್ಥೆ ಮೂಲಕ ಚೀನಾದಿಂದ (Personal protection equipment) ಕಿಟ್ ಖರೀದಿಸಲಾಗಿತ್ತು. PPE ಕಿಟ್‌ಗಳನ್ನು ಗುಣಮಟ್ಟ ಪರೀಕ್ಷೆ ಮಾಡದೇ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ.
ಪ್ಲಾಸ್ಟಿಸರ್ಜ್ ಎನ್ನುವ ಸಂಸ್ಥೆ ಸರಬರಾಜು ಮಾಡಿದ್ದ PPE ಕಿಟ್ಸ್ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವುದು ಗೊತ್ತಾಗಿದೆ. 7 ರಿಂದ 10 ಸಂಸ್ಥೆಗಳಿಂದ PPE ಕಿಟ್ ಖರೀದಿ ಮಾಡಲಾಗಿದೆ. ಪ್ಲಾಸ್ಟಿಸರ್ಜ್ ಸಂಸ್ಥೆಗೆ ಒಟ್ಟು 22 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ನೀಡಲಾಗಿತ್ತು. 3 ಲಕ್ಷ PPE ಕಿಟ್‌ಗಳನ್ನು ಪೂರೈಸಲು ವರ್ಕ್ ಆರ್ಡರ್ ನೀಡಲಾಗಿತ್ತು. ಅದರಲ್ಲಿ ಒಂದೂವರೆ ಲಕ್ಷ ಕಿಟ್‌ಗಳು ಈಗಾಗಲೇ ಕಳುಹಿಸಿಕೊಡಲಾಗಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ರಕ್ಷಣಾ ಕವಚಗಳನ್ನು ರವಾನೆ ಮಾಡಲಾಗಿದೆ. ಆದರೆ ರಕ್ಷಣಾ ಕವಚಗಳು ಕಳಪೆ ಆಗಿವೆ ಎಂದಿರುವುದು ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ.
Also Read: ಕೋಟೆ ಕೊಳ್ಳೆ ಹೋದ ನಂತರ ಬಾಗಿಲು ಮುಚ್ಚಿದ ಕೇಂದ್ರ?
ಚೀನಾದ PPE (Personal protection equipment) ಕಿಟ್ ಹಾಗೂ ರ‍್ಯಾಪಿಡ್ ಟೆಸ್ಟ್ ಕಿಟ್ಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ ಎಂದು ನಿಮ್ಮ ಪ್ರತಿಧ್ವನಿ ವಾರದ ಹಿಂದೆಯೇ ವರದಿ ಮಾಡಿತ್ತು. ಅದರಲ್ಲೂ ವಿಶ್ವದ 7 ರಾಷ್ಟ್ರಗಳು ಚೀನಾದಿಂದ ಖರೀದಿ ಮಾಡಿದ್ದ PPE ಕಿಟ್ ಹಾಗೂ ರ‍್ಯಾಪಿಡ್ ಟೆಸ್ಟ್ ಕಿಟ್ಗಳನ್ನು ಕಳಪೆ ಗುಣಮಟ್ಟದ್ದು ಎನ್ನುವ ಏಕೈಕ ಕಾರಣಕ್ಕೆ ತಿರಸ್ಕರಿಸಲಾಗಿದೆ ಎನ್ನುವುದನ್ನು ಮೇಡ್ ಇನ್ ಚೈನಾ.. ತಿರಸ್ಕರಿಸಿದ ವಿಶ್ವ.. ಮುಗಿಬಿದ್ದ ಭಾರತ..! ಎನ್ನುವ ಶೀರ್ಷಿಕೆಯಲ್ಲಿ ವರದಿ ಮಾಡಿತ್ತು. ಭಾರತೀಯ ಮಾಧ್ಯಮಗಳಲ್ಲೂ ಸುದ್ದಿ ಬಂದಿತ್ತು. ಆದರೂ ಚೀನಾದ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ತರಿಸಿಕೊಳ್ಳುವ ಮುನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮಾನ್ಯತೆ ಕೊಟ್ಟಿದ್ದು ಹೇಗೆ ಎನ್ನುವ ಅನುಮಾನ ಮೂಡುತ್ತದೆ.
Also Read: ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್, ತೊಡೋಕೆ ಕನಿಷ್ಠ ಪಿಪಿಇ ಕೂಡ ಇಲ್ಲ!
ಇದರಲ್ಲಿ ಏನಾದರೂ ಗೋಲ್‌ಮಾಲ್ ನಡೀತಾ..? ನಡೆಯದಿದ್ದರೆ ಇಷ್ಟೆಲ್ಲಾ ಕಳೆಪೆ ಗುಣಮಟ್ಟದ ಸಲಕರಣೆಗಳು ಭಾರತಕ್ಕೆ ಬಂದಿದ್ದಾರು ಹೇಗೆ? ರಾಜ್ಯ ಸರ್ಕಾರಗಳೇ ನೇರವಾಗಿ ಖರೀದಿ ಮಾಡುತ್ತಿವೆ. ಕೋಟಿ ಕೋಟಿ ಹಣ ಕೋವಿಡ್ – 19 ಹೆಸರಲ್ಲಿ ಹೊಳೆಯಂತೆ ಹರಿದು ಹೋಗುತ್ತಿದೆ. ಮುಂದಿನ ಚುನಾವಣೆಗೆ ಖಜಾನೆ ಸೇರುತ್ತಿದೆ ಎನ್ನುವ ಅನುಮಾನ ಈಗಾಗಲೇ ಹುಟ್ಟಿಕೊಂಡಿದೆ. ಸೂಕ್ತ ಕಾಲದಲ್ಲಿ ಸಾಕ್ಷಿ ಹೊರಬರಬೇಕಿದೆ ಅಷ್ಟೆ. ಆದರೂ ಜನರ ಸಾವು ನೋವಿನಲ್ಲಿ ಬೆಂದು ಬಳಲುತ್ತಿರುವಾಗ ನಮ್ಮ ರಾಜಕಾರಣಿಗಳು ಹಣ ಮಾಡುವ ಬಗ್ಗೆ ಚಿಂತಿಸುತ್ತಿದ್ದಾರ ಎನ್ನುವ ಯೋಚನೆಯೇ ಅಸಹ್ಯ ಮೂಡಿಸುವಂತಿದೆ.