ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಆಸಿಯಾನ್ ದೇಶಗಳೊಂದಿಗೆ ಮಾಡಿಕೊಳ್ಳಲು ಹೊರಟಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿ-ಇಪಿ) ಒಪ್ಪಂದ ರೈತರ ಪಾಲಿನ ಮರಣ ಶಾಸನವೇ ಅಗಲಿರುವುದು ಖಚಿತ ಎಂದು ಕೃಷಿ ವಲಯದ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದ್ದರೂ ಕೂಡ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಏಷ್ಯಾದ ಹತ್ತು ಅಸಿಯಾನ್ ದೇಶಗಳು (ಬ್ರೂನೈ, ಕಾಂಬೋಡಿಯಾ, ಸಿಂಗಾಪುರ, ಫಿಲಿಫ್ಫಿನ್ಸ್, ಇಂಡೋನೇಷಿಯಾ, ಲಾವೋಸ್, ಥೈಲಾಂಡ್, ಮಲೇಷಿಯಾ, ವಿಯೆಟ್ನಾಂ ಮತ್ತು ಮ್ಯಾನ್ಮಾರ್) ಮತ್ತು ಈ ದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಅಸ್ಟ್ರೇಲಿಯಾ, ಭಾರತ, ಚೀನಾ, ಜಪಾನ್, ಕೊರಿಯಾ ಮತ್ತು ನ್ಯೂಜಿಲೆಂಡ್ ದೇಶಗಳ ನಡುವೆ ‘’ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಡಿಯಲ್ಲಿ ನಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದ ದ ಬಗ್ಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ.
ಇದೇ ನವಂಬರ್ 4ರಂದು ಅಂತಿಮ ಸಹಿ ಬೀಳುವ ನಿರೀಕ್ಷೆ ಇದೆ. ಈ ಒಪ್ಪಂದ ನಡೆದು ಹೋದರೆ ಈ ಗುಂಪಿನ ಹದಿನಾರು ದೇಶಗಳು ಶೇಕಡಾ 80ರಿಂದ 90ರಷ್ಟು ಸರಕುಗಳನ್ನು ಯಾವುದೇ ಆಮದು ಸುಂಕ ಇಲ್ಲದೆ/ಕಡಿಮೆ ಆಮದು ಸುಂಕ ತೆತ್ತು ಆಮದು ಮಾಡಿಕೊಳ್ಳಬಹುದಾಗಿದೆ. ಈ ವ್ಯಾಪಾರ ಒಪ್ಪಂದ ಮುಂದಿನ ದಿನಗಳಲ್ಲಿ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಈ ಗುಂಪಿನಲ್ಲಿರುವ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತವೆ. ಇದರಿಂದಾಗಿ ಕೇವಲ ಹೈನುಗಾರಿಕೆ ಮಾತ್ರವಲ್ಲ, ಗದ್ದೆಯ ಮತ್ತು ತೋಟದ ಬೆಳೆಗಳು, ಸಾಂಬಾರ ಪದಾರ್ಥಗಳು ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮೇಲೆಯೂ ಒಪ್ಪಂದ ಪರಿಣಾಮ ಬೀರಲಿದೆ. ಔಷಧಿಗಳ ಬೆಲೆ ಕೂಡಾ ಹೆಚ್ಚಾಗಲಿದೆ.
ಈ ಒಪ್ಪಂದದ ಹಿನ್ನೆಲೆಯಲ್ಲಿ ಅಡಿಕೆ ಬೆಲೆ ಈಗಾಗಲೇ ತೀವ್ರ ಕುಸಿತ ಕಂಡಿದ್ದು ಇತರ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ದರವೂ ಕುಸಿಯಲಿರುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ದೇಶದ ಅನೇಕ ಕಡೆಗಳಲ್ಲಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವ ರೈತರು ಭಾರೀ ಪ್ರತಿಭಟನೆ ಮಾಡಿದ್ದಾರೆ. ದೇಶದ ಹೈನೋದ್ಯಮವೊಂದರಲ್ಲೇ ಸುಮಾರು 1.5 ಕೋಟಿ ಕುಟುಂಬಗಳು ತೊಡಗಿಸಿಕೊಂಡಿವೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬಾದಿತವಾಗುವುದು ಹೈನುಗಾರಿಕೆ.
ನಮ್ಮ ರಾಜ್ಯದಲ್ಲಿಯೇ ಪ್ರತಿದಿನ ಸುಮಾರು 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನಮ್ಮ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಮಹಿಳೆಯರ ಜೀವನೋಪಾಯಕ್ಕೆ ದಾರಿಯಾಗಿರುವುದು ಹೈನುಗಾರಿಕೆ. ನ್ಯೂಜಿಲೇಂಡ್, ಅಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದು ಮಾಡಿಕೊಳ್ಳಲು ಅವಕಾಶ ನೀಡುವ ಆರ್ ಸಿ ಇ ಪಿ ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ. ದೇಶದಲ್ಲಿ ಸಹಕಾರ ಕ್ಷೇತ್ರದ ಸುಮಾರು 1.86 ಲಕ್ಷ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇವುಗಳಲ್ಲಿ 32,000 ಸೊಸೈಟಿಗಳು ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿವೆ. ಸಹಕಾರಿ ಕ್ಷೇತ್ರದ ಹೈನೋದ್ಯಮದಲ್ಲಿ ಅಮುಲ್ ಮತ್ತು ನಮ್ಮ ರಾಜ್ಯದ ಕೆ ಎಂ ಎಫ್ ಮುಂಚೂಣಿಯಲ್ಲಿದ್ದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದಾಗಿ ಇವೂ ಸೊರಗಲಿವೆ.
ಅರ್‌ಸಿಇಪಿ ಒಪ್ಪಂದದ ಹಿನ್ನೆಲೆಯಲ್ಲಿ ಅಡಿಕೆ ದರ ಈಗಾಗಲೇ ಪಾತಾಳ ಕಂಡಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ನಮ್ಮ ರಾಜ್ಯ ದೇಶದಲ್ಲೇ ಅತ್ಯಂತ ಹೆಚ್ಚು ಕಾಳು ಮೆಣಸು ಮತ್ತು ಕಾಫಿ ಉತ್ಪಾದಿಸುತಿದ್ದು ಈ ಬೆಳೆಗಾರರೂ ನೆಲಕಚ್ಚುವುದು ಖಂಡಿತ. ಈಗಾಗಲೇ ವಿಯಟ್ನಾಂ ನಿಂದ ಅಗ್ಗದ ಕಾಳು ಮೆಣಸು ಕಳ್ಳ ಮಾರ್ಗದಿಂದ ಭಾರತ ಪ್ರವೇಶಿಸಿದ ಕಾರಣದಿಂದ ಕೆಜಿಗೆ 750 ರೂಪಾಯಿಗಳಿಗೆ ಮಾರಾಟವಾಗುತಿದ್ದ ಮೆಣಸಿನ ದರ ಇಂದು ಕೆಜಿಗೆ 280 ರೂಪಾಯಿಗಳಿಗೆ ಕುಸಿದಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪಾದನೆ ಹೆಚ್ಚಳ, ಕುಸಿದ ಬೇಡಿಕೆಯಿಂದ ಕಾಫಿ ಬೆಲೆಯೂ ಕುಸಿದಿದ್ದು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ವರ್ಷ ಕಾಫಿ ಬೆಳೆಯುವ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಭೂ ಕುಸಿತ ಮತ್ತು ವ್ಯಾಪಕ ಮಳೆಯಿಂದಾಗಿ ಕಾಫಿ ಫಸಲು ನೆಲಕಚ್ಚಿದ್ದು ಬೆಳೆಗಾರರು ಮುಗಿಲು ನೋಡುತಿದ್ದಾರೆ.
ದಕ್ಷಿಣ ಭಾರತದ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ಆಪ್ ಸೌತ್ ಇಂಡಿಯಾ (ಉಪಾಸಿ) ವಿಶ್ಲೇಷಣೆಯ ಪ್ರಕಾರ, ಮೆಣಸು, ಕಾಫಿ ಮತ್ತು ಚಹಾವು ವ್ಯಾಪಾರ ಒಪ್ಪಂದದಿಂದ ಹೆಚ್ಚು ಹಾನಿಗೊಳಗಾಗಲಿದೆ. ಪ್ರಸ್ತುತ ನಡೆಯುತ್ತಿರುವ ಆರ್‌ಸಿಇಪಿ ಮಾತುಕತೆ ಕುರಿತು ಉಪಾಸಿ ಅಧ್ಯಕ್ಷ ಎ.ಎಲ್.ಆರ್.ನಾಗಪ್ಪನ್ ಕಳವಳ ವ್ಯಕ್ತಪಡಿಸಿದ್ದಾರೆ. “ಆಮದು ಸುಂಕದಲ್ಲಿ ಯಾವುದೇ ಕಡಿತವು ತೋಟ ಸರಕುಗಳ ಬೆಲೆ ಸಾಕ್ಷಾತ್ಕಾರವನ್ನು ತೀವ್ರವಾಗಿ ಪರಿಣಾಮ ಬೀರುತ್ತದೆ ಮತ್ತು ತೋಟ ಕ್ಷೇತ್ರವನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುತ್ತದೆ” ಎಂದು ಉಪಾಸಿ ಆತಂಕ ವ್ಯಕ್ತಪಡಿಸಿದೆ.
ಉಪಾಸಿ ವಿಶ್ಲೇಷಣೆಯ ಪ್ರಕಾರ, 2018-19ರ ಅವಧಿಯಲ್ಲಿ, ತೋಟದ ಸರಕುಗಳಲ್ಲಿನ ವ್ಯಾಪಾರ ಕೊರತೆಯು ಆರ್‌ಸಿಇಪಿ ದೇಶಗಳೊಂದಿಗೆ ಋಣಾತ್ಮಕ 5,716.64 ಕೋಟಿ ರೂ. ಆಗಿದ್ದು ಆರ್‌ಸಿಇಪಿ ಒಪ್ಪಂದವು ಕಾರ್ಯರೂಪಕ್ಕೆ ಬಂದರೆ ತೋಟ ಸರಕುಗಳು ಗಮನಾರ್ಹವಾಗಿ ನಷ್ಟವಾಗಲಿವೆ ಮತ್ತು ಆಮದು ಸುಂಕವನ್ನು ಮತ್ತಷ್ಟು ಕಡಿತಗೊಳಿಸುವುದರಿಂದ ತೋಟದ ಸರಕುಗಳಲ್ಲಿನ ವ್ಯಾಪಾರ ಕೊರತೆಯನ್ನು ಇನ್ನಷ್ಟು ಹದಗೆಡಿಸಬಹುದು. ಕಾಫಿ ಉದ್ಯಮವು ಈಗಾಗಲೇ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗಳ ಕಾರಣದಿಂದಾಗಿ ಸವಾಲಿನ ಸಮಯವನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.
ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಕಾರಣದಿಂದಾಗಿ 2001 ರ ಏಪ್ರಿಲ್ ನಿಂದ ಚಹಾ, ಕಾಫಿ, ನೈಸರ್ಗಿಕ ರಬ್ಬರ್, ಏಲಕ್ಕಿ ಮತ್ತು ಮೆಣಸಿನಂತಹ ತೋಟಗಾರಿಕೆ ಸರಕುಗಳು ಅಂತರರಾಷ್ಟ್ರೀಯ ಸ್ಪರ್ಧೆಗೆ ದೂಡಲ್ಪಟ್ಟವು. ಡಬ್ಲ್ಯುಟಿಒ ಅಡಿಯಲ್ಲಿ ಬದ್ಧತೆಗಳ ಪ್ರಕಾರ ಪರಿಮಾಣಾತ್ಮಕ ನಿರ್ಬಂಧವನ್ನು ತೆಗೆದುಹಾಕಲಾಯಿತು. 2009 ರಲ್ಲಿ ಆಸಿಯಾನ್ ಒಪ್ಪಂದಕ್ಕೆ ಸಹಿ ಹಾಕಿದ ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥೈಲ್ಯಾಂಡ್ ಮುಂತಾದ ತೋಟಗಾರಿಕಾ ಬೆಳೆಗಳನ್ನು ಉತ್ಪಾದಿಸುವ ದೇಶಗಳಿಗೆ ಭಾರತೀಯ ಮಾರುಕಟ್ಟೆಯನ್ನು ಮತ್ತಷ್ಟು ತೆರೆಯಿತು. ಆಸಿಯಾನ್ ಒಪ್ಪಂದದ ಪ್ರಕಾರ, ಚಹಾ, ಕಾಫಿ ಮತ್ತು ಮೆಣಸುಗಾಗಿ 2009 ರಿಂದ ಆಮದು ಸುಂಕವನ್ನು ಕ್ರಮೇಣ ಕಡಿಮೆಗೊಳಿಸಲಾಯಿತು. ರಬ್ಬರ್, ಏಲಕ್ಕಿ ಮತ್ತು ಕಾಫಿಯಲ್ಲಿ ಕೆಲವು ಸುಂಕದ ಪ್ರಮಾಣವನ್ನು ಹೊರಗಿಡುವ ಪಟ್ಟಿಯಲ್ಲಿ ಇರಿಸಲಾಗಿತ್ತು. ಆಸಿಯಾನ್ ದೇಶಗಳಿಗೆ ಪ್ರಸ್ತುತ ಆಮದು ಸುಂಕವು ಚಹಾ ಮತ್ತು ಕಾಫಿಗೆ 50 ಪ್ರತಿಶತ (ಇತರ ದೇಶಗಳಿಗೆ ಡಬ್ಲ್ಯುಟಿಒ ಅಡಿಯಲ್ಲಿ 100 ಪ್ರತಿಶತ) ಮತ್ತು ಮೆಣಸಿಗೆ 51 ಪ್ರತಿಶತ (ಡಬ್ಲ್ಯುಟಿ ಒ ಅಡಿಯಲ್ಲಿ 70 ಪ್ರತಿಶತ) ಎಂದು ಅವರು ಹೇಳಿದರು.
ಒಟ್ಟಿನಲ್ಲಿ ರೈತ ದೇಶದ ಬೆನ್ನೆಲುಬು ಎಂದು ಹೇಳೀಕೊಳ್ಳುತ್ತಾ ಪುನಃ ರೈತರ ಬದುಕನ್ನು ಮೂರಾಬಟ್ಟೆ ಮಾಡುವ ಕಾರ್ಯ ಸಲೀಸಾಗಿ ನಡೆಯುತಿದ್ದು ದೇಶದ ಎಲ್ಲ ರೈತ ವರ್ಗ ಇದರ ವಿರುದ್ದ ನಿಂತು ಪ್ರತಿಭಟಿಸಿದಾಗ ಮಾತ್ರ ರೈತ ಆಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ.