ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶಗಳು ಬಿಜೆಪಿಗೆ ಖಂಡಿತವಾಗಿಯೂ ಎಚ್ಚರಿಕೆ ಗಂಟೆ. ಅಷ್ಟೇ ಅಲ್ಲ, ಮುಂದಿನ ಡಿಸೆಂಬರ್ ತಿಂಗಳಲ್ಲಿ ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ವಿಚಾರದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ತಲೆಬಿಸಿ ಮಾಡಿಕೊಳ್ಳುವಂತೆಯೂ ಮಾಡಿದೆ. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯೂ ಕಾಣಿಸಿಕೊಳ್ಳಲಾರಂಭಿಸಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದಿರಬಹುದು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಸ್ಥಾನಗಳಲ್ಲಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ 185 ಸ್ಥಾನ ಗಳಿಸಿದ್ದರೆ ಈ ಬಾರಿ ಮೈತ್ರಿಕೂಟದ ಸಂಖ್ಯಾಬಲ 160ಕ್ಕೆ ಕುಸಿದಿದೆ. ಅಂದರೆ, ಸರಿಸುಮಾರು 20 ಸ್ಥಾನಗಳನ್ನು ಕಳೆದುಕೊಂಡಿದೆ. ಹರಿಯಾಣದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರದಲ್ಲಿದ್ದ ಪಕ್ಷ ಈ ಬಾರಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಅಷ್ಟೇ. 2014ರಲ್ಲಿ 46 ಸ್ಥಾನ ಪಡೆದಿದ್ದ ಪಕ್ಷ ಈ ಬಾರಿ 39 ಸ್ಥಾನಗಳಿಗೆ (ಎರಡೂ ರಾಜ್ಯಗಳ ಫಲಿತಾಂಶ, ವರದಿ ಪ್ರಕಟಿಸುವ ಹೊತ್ತಿಗೆ) ತೃಪ್ತಿಪಟ್ಟುಕೊಂಡಿದೆ.
ಅದೇ ರೀತಿ ವಿವಿಧ ರಾಜ್ಯಗಳ ಉಪ ಚುನಾವಣೆಯಲ್ಲೂ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಅಸ್ಸಾಂಗಳಲ್ಲಿ ಪಕ್ಷ ಗೆಲುವು ಸಾಧಿಸಿದೆಯಾದರೂ ರಾಜಸ್ತಾನದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯ ಸಾಧಿಸಿದೆ. ಪಂಜಾಬ್‍ನ 4 ಕ್ಷೇತ್ರಗಳಲ್ಲಿ , 3ರಲ್ಲಿ ಕಾಂಗ್ರೆಸ್ ಮತ್ತು 1 ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿದಳ ಜಯ ದಾಖಲಿಸಿದೆ. ಒಡಿಶಾದ ಎರಡು ಸ್ಥಾನಗಳಲ್ಲಿ ಬಿಜು ಜನತಾದಳ ಜಯಿಸಿದೆ. ಪ್ರಮುಖವಾಗಿ ಪಕ್ಷಾಂತರಿಗಳ ಚುನಾವಣೆಯಾಗಿದ್ದ ಗುಜರಾತ್‍ನ 6 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಮೂರು ಮಾತ್ರ. ಉಳಿದ ಮೂರು ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.

ರಾಜ್ಯದ ಉಪ ಚುನಾವಣೆಗೆ ಎಚ್ಚರಿಕೆ ಗಂಟೆ ಏಕೆ?
ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಉಪ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿರುವ ಅಂಶಗಳು ಪ್ರವಾಹ ಪರಿಹಾರ ಮತ್ತು ಶಾಸಕರ ಪಕ್ಷಾಂತರ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಬರಲು ಕಾರಣರಾದ 15 ಮಂದಿಗೂ ಬಿಜೆಪಿಯಿಂದ ಟಿಕೆಟ್ ನೀಡಬೇಕಾಗುತ್ತದೆ. ಹೀಗಾಗಿ ಪ್ರಸ್ತುತ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಉಪ ಚುನಾವಣೆಗಳ ಫಲಿತಾಂಶ ರಾಜ್ಯಕ್ಕೆ ಎಚ್ಚರಿಕೆ ಗಂಟೆ ಆಗಲಿದೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ಬಿಜೆಪಿ ಆತಂಕಕ್ಕೆ ಒಳಗಾಗಲು ಮೂರು ಕಾರಣಗಳಿವೆ.
ಕಾರಣ-1
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರೀ ಪ್ರವಾಹ ಬಂದಿತ್ತು. ಆದರೆ, ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಹೆಚ್ಚು ಗಮನಕೊಡದೆ ಚುನಾವಣೆಯತ್ತ ಗಮನಹರಿಸಿದ್ದು ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಈ ಎರಡೂ ಜಿಲ್ಲೆಗಳ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಕೇವಲ ಎರಡು ಸ್ಥಾನ ದೊರೆತರೆ, ಒಂದು ಸ್ಥಾನ ಶಿವಸೇನೆಗೆ ಸಿಕ್ಕಿದೆ. ಉಳಿದ 15 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಗೆದ್ದಿದೆ. ಅದೇ ರೀತಿ ಬರಗಾಲ ಆವರಿಸಿರುವ ವಿದರ್ಭ ವಿಭಾಗದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದೆ. ಅಂದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟದ ಪ್ರದರ್ಶನ ಕುಂಠಿತವಾಗಲು ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶಗಳಲ್ಲಿ ಆಗಿರುವ ಸೋಲೇ ಕಾರಣ ಎಂಬುದು ಸ್ಪಷ್ಟ.
ಪ್ರಸ್ತುತ ರಾಜ್ಯದಲ್ಲೂ ಪ್ರವಾಹ ಪರಿಸ್ಥಿತಿ ಇದೆ. ಉತ್ತರ ಕರ್ನಾಟಕ ಎರಡು ಸತತ ಭಾರೀ ಪ್ರವಾಹದಿಂದ ನಲುಗಿ ಹೋಗಿದೆ. ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಕೇಂದ್ರ ಸರ್ಕಾರ ಅಗತ್ಯ ನೆರವು ಕೊಡುತ್ತಿಲ್ಲ ಎಂಬ ಆರೋಪವಿದೆ. ಉಪ ಚುನಾವಣೆ ನಡೆಯುವ ಬಹುತೇಕ ಕ್ಷೇತ್ರಗಳು ಈ ಭಾಗದಲ್ಲೇ ಬರುತ್ತವೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೊರತುಪಡಿಸಿ ಇತರೆ ಸಚಿವರ ಕಾರ್ಯವೈಖರಿ ಬಗ್ಗೆ ಸಂತ್ರಸ್ತರಿಗೆ ಬೇಸರವಿದೆ. ಕೇಂದ್ರ ಸರ್ಕಾರ ಅಗತ್ಯ ಹಣ ಬಿಡುಗಡೆ ಮಾಡಿಲ್ಲ ಎಂಬ ಆಕ್ರೋಶವಿದೆ. ಚುನಾವಣೆ ನಡೆದಾಗ ಈ ಆಕ್ರೋಶ ಮತಯಂತ್ರಗಳಲ್ಲಿ ದಾಖಲಾದರೆ ಆಗ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಬಹುದು.

ಕಾರಣ-2
ಹರಿಯಾಣಾದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲು ಕಾರಣವಾಗಿದ್ದು ಜಾತಿ, ಆಡಳಿತ ವಿರೋಧಿ ಅಲೆಗಿಂತ ಹೆಚ್ಚಾಗಿ ನಿಷ್ಠಾವಂತರಿಗೆ ಕೈಕೊಟ್ಟು ಸೆಲಬ್ರಿಟಿಗಳಿಗೆ ಟಿಕೆಟ್ ನೀಡಿದ ವಿಚಾರ. ಟಿಕೆಟ್ ಹಂಚಿಕೆಯಲ್ಲಿ ಈ ರೀತಿಯಾಗಿರುವುದು ಕೆಲವೇ ಕ್ಷೇತ್ರಗಳಲ್ಲಾದರೂ ರಾಜ್ಯದಲ್ಲಿ ಪರಿಣಾಮ ಬೀರಿತ್ತು. ಇದರಿಂದಾಗಿ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರಿಗೆ ಬೇಸರವಾಗಿ ಚುನಾವಣೆಯಲ್ಲಿ ತಟಸ್ಥರಾಗಿ ಉಳಿದಿದ್ದರು. ಅದೇ ರೀತಿ ಗುಜರಾತಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರು ಮಂದಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಪಕ್ಷದ ನಿಷ್ಠಾವಂತರು ಬೇಸರಗೊಂಡಿದ್ದರು. ಪರಿಣಾಮ ಆರರಲ್ಲಿ ಮೂರು ಕಡೆ ಬಿಜೆಪಿ ಸೋತಿತು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲೇ ಬೇಕಾಗುತ್ತದೆ. ಇದರಿಂದ ಪಕ್ಷದಲ್ಲಿ ನಿಷ್ಟಾವಂತರಿಗೆ, ಅದರಲ್ಲೂ ಮಾಜಿ ಶಾಸಕರು ಮತ್ತು ಕಳೆದ ಬಾರಿ ಸೋತವರಿಗೆ ಬೇಸರ, ಅಸಮಾಧಾನ ಉಂಟಾಗುತ್ತದೆ. ಒಂದೋ ಅವರು ಚುನಾವಣೆಯಲ್ಲಿ ತಟಸ್ಥರಾಗಬಹುದು ಇಲ್ಲವೇ ಟಿಕೆಟ್ ಸಿಕ್ಕಿದರೆ ಬೇರೆ ಪಕ್ಷ ಸೇರಬಹುದು. ಹರಿಯಾಣ ಮತ್ತು ಗುಜರಾತ್ ನಂತೆ ಆದರೆ ಹೊರಗಿನಿಂದ ಬಂದವರಿಗೆ ಸೋಲು ಉಂಟಾಗಬಹುದು.
ಕಾರಣ-3
ಬಿಜೆಪಿಯೇತರ ಸರ್ಕಾರಗಳಿರುವ ಮೂರು ರಾಜ್ಯಗಳ ಉಪ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಗೆಲುವು ಸಾಧಿಸಿದೆ. ರಾಜಸ್ತಾನದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯ ಸಾಧಿಸಿದರೆ, ಪಂಜಾಬ್‍ನ 4 ಕ್ಷೇತ್ರಗಳಲ್ಲಿ , 3ರಲ್ಲಿ ಕಾಂಗ್ರೆಸ್, ಒಡಿಶಾದ ಎರಡು ಸ್ಥಾನಗಳಲ್ಲಿ ಬಿಜು ಜನತಾದಳ ಜಯಿಸಿದೆ. ಅಂದರೆ, ಬಿಜೆಪಿಯೇತರ ಪಕ್ಷಗಳನ್ನು ಜನ ಒಪ್ಪಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿಯೇ ಇದೆ. ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ಸೋಲಲು ಜಾತಿ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳೇ ಕಾರಣವಾದವು. ಈ ವಿಚಾರ ಜನರಿಂದ ಮರೆಯಾಗುತ್ತಿದೆ. ಆದರೆ, ಪ್ರವಾಹದ ವಿಚಾರದಲ್ಲಿ ಲಾಭ ಪಡೆಯಲು ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಿದ್ದು, ಇದಕ್ಕೆ ಮತದಾರರು ಸ್ಪಂದಿಸಿದರೆ ಆಗ ಬಿಜೆಪಿಗೆ ಕಷ್ಟದ ಪರಿಸ್ಥಿತಿ ಬರಬಹುದು.
ಹೀಗಾಗಿ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶವನ್ನು ಆಧರಿಸಿ ರಾಜ್ಯದಲ್ಲಿ ಇರುವ ಅಂತಹದ್ದೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸದೇ ಇದ್ದಲ್ಲಿ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಬಹುದು. ಹೀಗಾಗಿಯೇ ಬಿಜೆಪಿಗೆ ಈ ಚುನಾವಣಾ ಫಲಿತಾಂಶಗಳು ಎಚ್ಚರಿಕೆಯ ಗಂಟೆಯಾಗುವುದರಲ್ಲಿ ಸಂಶಯವೇ ಇಲ್ಲ.