ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಭಿನ್ನಾಭಿಪ್ರಾಯ ಹೊರಗೆ ಬೀಳುತ್ತಿವೆ. ಸರ್ಕಾರದಲ್ಲಿ ಪ್ರಮುಖರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೇ ಬಂಡಾಯ ಎದ್ದಿರುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ. ಯಾರೂ ಕೂಡ ಬಹಿರಂಗವಾಗಿ ಮನಸ್ತಾಪವನ್ನು ಹೊರಹಾಕುವ ಸಾಹಸಕ್ಕೆ ಕೈಹಾಕುತ್ತಿಲ್ಲ. ಆದರೆ ತಾವು ಮಾಡುತ್ತಿರುವ ಎಲ್ಲಾ ಚಟುವಟಿಗಳು ಮಾಧ್ಯಮಗಳಲ್ಲಿ ಬರುವಂತೆ ಕಾರ್ಯಯೋಜನೆ ರೂಪಿಸುತ್ತಿದ್ದಾರೆ. ಈ ಮೂಲಕ ತಮ್ಮ ಕಾರ್ಯಸಾಧನೆ ಸಾಧಿಸಿಕೊಳ್ಳುವುದು, ಎದುರಾಗಿರುವ ಅಡ್ಡಿ ಆತಂಕ ನಿವಾರಣೆ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಸಾಧ್ಯತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.
ಜಗದೀಶ್ ಶೆಟ್ಟರ್ ನಿವಾಸದಲ್ಲಿ ಮೊದಲಿಗೆ ಸಭೆ ನಡೆಸಿದರು. ಸಚಿವ ಸ್ಥಾನ ವಂಚಿತರಾಗಿರುವ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಹಾಗು ಸಿ.ಪಿ ಯೋಗೇಶ್ವರ್ ಶಾಸಕರನ್ನು ಸೆಳೆದು ಸಭೆಯನ್ನು ಯಶಸ್ವಿಯಾಗಿ ನಡೆಸಿದರು. ಈ ಬಗ್ಗೆ ಮಾಧ್ಯಮಗಳಿಗೂ ಸಣ್ಣ ಸುಳಿವು ಸಿಗುವಂತೆ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದ್ದರು. ರಾಜ್ಯ ಬಿಜೆಪಿ ಹಾಗು ಬಿಜೆಪಿ ಹೈಕಮಾಂಡ್‌ಗೂ ಈ ಬಗ್ಗೆ ಸ್ಪಷ್ಟ ಸಂದೇಶ ರವಾನೆ ಮಾಡುವಲ್ಲಿ ನಾಯಕರು ಯಶಸ್ಸು ಸಾಧಿಸಿದ್ರು. ಬಳಿಕ ಸಿಎಂ ಯಡಿಯೂರಪ್ಪ ಕೂಡ ಸಭೆಯ ಉಸ್ತುವಾರಿ ಹೊತ್ತಿದ್ದ ಶೆಟ್ಟರ್ ಹಾಗು ಯೋಗೇಶ್ವರ್ ಜೊತೆಗೆ ಮಾತುಕತೆ ನಡೆಸಿದರು.
ಆ ಬಳಿಕ ಯಡಿಯೂರಪ್ಪ ವಿರುದ್ಧ ಅನಾಮಧೇಯ ಪತ್ರವೊಂದು ಬಹಿರಂಗವಾಯ್ತು. ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ವಯೋ ಸಹಜ ಮರೆವಿನಿಂದ ಬಳಲುತ್ತಿದ್ದಾರೆ. ಅಸಮರ್ಥ ಆಡಳಿತ, ವಿಪಕ್ಷಗಳ ಟೀಕೆಗೆ ಉತ್ತರ ಕೊಡಲಾಗುತ್ತಿಲ್ಲ ಎಂದು ಟೀಕಿಸಲಾಗಿದೆ. ಇನ್ನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ರೀತಿ ಕೆಲಸ ಮಾಡುತ್ತಿದ್ದಾರೆ. ಅಸಲಿಗೆ ಸರ್ಕಾರ ಮುನ್ನಡೆಸುತ್ತಿರೋದು ವಿಜಯೇಂದ್ರ. ವಿಜಯೇಂದ್ರ ವಾಸವಿರುವ ಆದರ್ಶ ರೋಸ್ ನಿವಾಸ ಶಕ್ತಿ ಕೇಂದ್ರವಾಗಿದೆ. ಆಯಕಟ್ಟಿನ ಜಾಗಗಳಿಗೆಲ್ಲಾ ವಿಜಯೇಂದ್ರ ವರ್ಗಾವಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೈಬಿಟ್ಟು ಬೇರೊಬ್ಬ ಸೂಕ್ತ ನಾಯಕನ್ನು ಸಿಎಂ ಹುದ್ದೆಗೆ ಪರಿಗಣಿಸಬೇಕು ಎಂದು ಪತ್ರದಲ್ಲಿ ಒತ್ತಾಯ ಮಾಡಲಾಗಿತ್ತು. ಈ ಸುದ್ದಿ ಕೂಡ ಸಾಕಷ್ಟು ಸದ್ದು ಮಾಡಿದ ಬಳಿಕ ಸಿಎಂ ಯಡಿಯೂರಪ್ಪ ಪತ್ರದ ಮೂಲ ಹುಡುಕುವಂತೆ ಸೈಬರ್ ಕ್ರೈಂ ವಿಭಾಗಕ್ಕೆ ಸೂಚನೆ ಕೊಟ್ಟಿದ್ದರು.
ಬಿ.ಎಸ್ ಯಡಿಯೂರಪ್ಪ ವಿರುದ್ಧ ಒಂದು ತಂಡ ಸಹಿ ಸಂಗ್ರಹ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬಂದವು. ಸಹಿ ಸಂಗ್ರಹವನ್ನೂ ಮಾಡಿದ್ದರು. ಆದರೆ ಅದು ಇನ್ನೊಂದು ರೀತಿಯ ಬಂಡಾಯ. ಕಲ್ಯಾಣ ಕರ್ನಾಟಕಕ್ಕೆ ಈ ಹಿಂದಿನ ಸರ್ಕಾರ 1,500 ಕೋಟಿ ರೂಪಾಯಿ ಅನುದಾನ ಕೊಟ್ಟಿತ್ತು. ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಿದೆ. ಹಾಗಾಗಿ 2 ಸಾವಿರ ಕೋಟಿ ಅನುದಾನ ಕೊಡಬೇಕು ಎಂದು ಸುರಪುರ ಶಾಸಕ ರಾಜೂಗೌಡ ಬಹಿರಂಗ ಪತ್ರ ಬರೆದು ಶಾಸಕರ ಸಹಿ ಸಂಗ್ರಹ ಮಾಡಿದ್ದರು. ಈ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾತನಾಡಿರುವ ಶಾಸಕ ರಾಜೂಗೌಡ, ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ಕೊಡುವಂತೆ ಮನವಿ ಮಾಡಿದ್ದೇವೆ. ನಂಜುಂಡಪ್ಪ ವರದಿ ಪ್ರಕಾರ ಅನುದಾನ ಹಂಚಿಕೆ ಆಗುತ್ತೆ. ಈಗ 500 ಕೋಟಿ ಹೆಚ್ಚುವರಿ ಕೇಳುತ್ತಿದ್ದೇವೆ. ಸಿಎಂಗೆ ಮನವಿ ಮಾಡಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 42 ಶಾಸಕರು ಇದ್ದೇವೆ. ಅದರಲ್ಲಿ 38 ಶಾಸಕರ ಸಹಿಯೊಂದಿಗೆ ಮನವಿ ಸಲ್ಲಿಸಲಾಗಿದೆ. ಇದು ಪಕ್ಷಾತೀತ ಮನವಿ ಎಂದಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರದ ಹರ ಜಾತ್ರೆಯಲ್ಲಿ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಬಹಿರಂಗವಾಗಿ ಪಂಚಮಸಾಲಿ ಸಮುದಾಯದ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಆಗ್ರಹ ಮಾಡಿದ್ರು. ಬಿಎಸ್ ಯಡಿಯೂರಪ್ಪ ಕೋಪದಿಂದ ಕುದಿಯುವ ದೃಶ್ಯ ಎಲ್ಲಾ ಕಡೆ ಪ್ರಸಾರವಾಗಿತ್ತು. ಆ ಬಳಿಕ ಪಂಚಮಸಾಲಿ ಸಮುದಾಯ ಮತ್ತೊಮ್ಮೆ ಸಿಡಿದಿದೆ. ಕೂಡಲಸಂಗಮ ಪೀಠದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಅನೇಕ ಬಿಜೆಪಿ ಶಾಸಕರು ಭಾಗಿಯಾಗಿ ಅಹವಾಲು ಸಲ್ಲಿಸಿಸಿದ್ದಾರೆ. ಅದರಲ್ಲಿ ಮಹೇಶ್ ಕುಮಟಳ್ಳಿ ಹಾಗು ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಿಸಲೇಬೇಕು ಎಂಬ ನಿರ್ಧಾರ ಮಾಡಿದ್ದಾರೆ. ಮೋಹನ್ ಲಿಂಬಿಕಾಯಿ ಅವರನ್ನು ಪರಿಷತ್‌ಗೆ ಆಯ್ಕೆ ಮಾಡಬೇಕು ಎಂದು ಒತ್ತಡ ಹೇರಲು ನಿರ್ಧಾರ ಮಾಡಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ಆಗಿರುವುದು ಬಿಜೆಪಿ ನಾಯಕರಿಂದಲೇ ಅನ್ನೋದು ಖಚಿತ. ಸಿಎಂ ಯಡಿಯೂರಪ್ಪ ಗಮನ ಸೆಳೆಯಲು ಸಾಕಷ್ಟು ನಾಯಕರು ಭಿನ್ನ ಭಿನ್ನವಾಗಿ ಯತ್ನಿಸುತ್ತಿದ್ದಾರೆ. ಅದರಲ್ಲೂ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಜಾತಿ ಮುಂದಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಕಟ್ಟಿಹಾಕುವ ಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಲಿಂಗಾಯತ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಈಗ ಮಠಾಧೀಶರ ಮೂಲಕ ಯಡಿಯೂರಪ್ಪ ಮೇಲೆ ಒತ್ತಡ ಬೀರುವುದು, ಸಚಿವ ಸ್ಥಾನ ಗಿಟ್ಟಿಸುವುದು ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಇನ್ನು ವಿಜಯೇಂದ್ರ ದೆಹಲಿ ಮಟ್ಟದಲ್ಲೂ ಪಕ್ಷದ ಕಾರ್ಯಕಲಾಪದಲ್ಲಿ ಭಾಗಿಯಾಗುತ್ತಿರುವುದು ಮತ್ತೆ ಒಂದಿಷ್ಟು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಮುಂದಿನ ನಾಯಕತ್ವಕ್ಕಾಗಿ ಪೈಪೋಟಿ ಶುರುವಾಗಿದ್ದು, ಬಿಜಯೇಂದ್ರ ಸರ್ಕಾರದ ಕೆಲಸಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಲು ಇಷ್ಟೆಲ್ಲಾ ಸರ್ಕಸ್ ನಡೆದಿದೆ ಎನ್ನುವ ಮಾತು ಬಿಜೆಪಿ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.