ಪಕ್ಷಾತೀತವಾಗಿ ಜನರೆಲ್ಲಾ ಪ್ರತಿಭಟನೆಗೆ ಕೂತರೆಂದರೆ ಸಾಕು ರಾಜಕೀಯ ಮುಖಂಡರೂ ಒಟ್ಟಾಗಿ ಬಿಡ್ತಾರೆ. ಈ ತರಹದ ಪ್ರಸಂಗಗಳು ಶಿವಮೊಗ್ಗದಲ್ಲಂತೂ ಸಾಕಷ್ಟು ಸಾರಿ ಆಗಿದೆ. ಅಡಕೆ ಇರಬಹುದು, ಮರಳು ಇರಬಹುದು ಅಥವಾ ಬೆಳೆಗಳಿಗೆ ಮಂಗಗಳ ಕಾಟವೇ ಆಗಿರಬಹುದು, ಪ್ರತಿನಿಧಿಗಳು ಜನರ ಬೆಂಬಲಕ್ಕೆ ನಿಂತು ಬಿಡ್ತಾರೆ.
ಕೆಲವು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ರೈತರು ಹಾಗೂ ಮೈಕ್ ಹಿಡಿದಿದ್ದ ಕಾಂಗ್ರೆಸ್ ಮುಖಂಡರು ಘಂಟಾಘೋಷವಾಗಿ ಕೂಗುತ್ತಿದ್ದುದು ಇಷ್ಟು: ಮಂಗಗಳ ಹಾವಳಿಯಿಂದ ಜೀವನವೇ ಸಾಧ್ಯವಿಲ್ಲ, ಕಾಡುಕೋಣಗಳ ಉಪಟಳವನ್ನು ತಡೆಯಲಾಗದು. ಕಾಡು ಹಂದಿಗಳನ್ನ ಬಡಿದು ತಿನ್ನಿ. ಅನೇಕ ವರ್ಷಗಳಿಂದ ಮಂಕಿಪಾರ್ಕ್ ಹಾಗೂ ಕಾಡುಕೋಣಗಳ ಉದ್ಯಾನ ಮಾಡುವ ಭರವಸೆ ನೀಡುತ್ತಾ ಬಂದಿದ್ದ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ರೈತರ ಬೆಳೆಗಳನ್ನು ಕಾಡುಪ್ರಾಣಿಗಳು ಮೇಯಲು ಬಿಟ್ಟು ಮಜಾ ನೋಡುತ್ತಿದ್ದಾರೆ ಎಂದೆಲ್ಲಾ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು. ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯಿಂದ ಬಂದಿದ್ದ ರೈತರು ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸುತ್ತಿದ್ದರು. ಭಾಷಣ ಮುಗಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳ ಆಗಮನ ನಿರೀಕ್ಷೆ ಮಾಡುತ್ತಿದ್ದ ಜನರ ಎದುರು ಬಂದಿದ್ದು ಸಚಿವ ಕೆ. ಎಸ್. ಈಶ್ವರಪ್ಪ, ಸಂಸದ ಬಿ. ವೈ. ರಾಘವೇಂದ್ರ ಹಾಗೂ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ.
ಕಪ್ಪೆ ಹಿಡಿದು ಕೊಳಗ ತುಂಬಿದಂತೆ ಎನ್ನುವ ಹಾಗೆ ಮಂಗಗಳನ್ನು ಒಟ್ಟುಗೂಡಿಸಿ ಸೀಮಿತ ಪ್ರದೇಶದಲ್ಲಿ ಬಂಧಿಸುವ ಕಾಯಕಕ್ಕೆ ಪಕ್ಷಾತೀತವಾಗಿ ಬದ್ಧರಾದ ನಾಯಕರು ಮಂಕಿ ಪಾರ್ಕ್ ಮಾಡಿಯೇ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಅದರ ಜೊತೆ ಕಾಡುಕೋಣ ಹಾವಳಿಗೂ ಒಂದು ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಈ ಕುರಿತು ಮುಂದಿನ ತಿಂಗಳ ಮೊದಲ ವಾರ ಬೆಂಗಳೂರಿನಲ್ಲಿ ಸಭೆ ಕರೆದಿರುವುದಾಗಿ ಈಶ್ವರಪ್ಪ ಹೇಳಿದರು. ಆದರೆ, ಇವರೆಲ್ಲರಿಗೂ ಪುನಃ ಮುಳುವಾಗಿದ್ದು ಮಾತ್ರ `ಅವೈಜ್ಞಾನಿಕ’, `ಜೀವ ವೈವಿಧ್ಯದ ನೈಜ ವಾರಸುದಾರರು’ ಎಂದು ಹೇಳುತ್ತಾ ತಿರುಗುವ ಪರಿಸರವಾದಿಗಳು ಹಾಗೂ ಪ್ರಾಣಿ ಪ್ರಿಯರು.
ಈ ಅಯೋಮಯ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಪರಿಸರವಾದಿಗಳ ನಡೆಯನ್ನು ಪ್ರಶ್ನಿಸಿರುವ ಸಂಸದ ರಾಘವೇಂದ್ರ, ರೈತರ ಫಸಲು ಬಹುತೇಕ ಕಾಡು ಪ್ರಾಣಿಗಳ ಪಾಲಾಗುತ್ತದೆ. ಹೊಸನಗರದ ಭಾಗದಲ್ಲಿ ದ್ವೀಪದಂತಹ ಪ್ರದೇಶ ಚಕ್ರನಗರ ಆಯ್ಕೆ ಮಾಡಿಕೊಂಡು ಮಂಕಿ ಪಾರ್ಕ್ ಮಾಡಲು ನಿಶ್ಚಯಿಸಿದ್ದೇವೆ. ಅಲ್ಲಿ ಮಂಗಗಳಿಗೆ ಬೇಕಿರುವ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ. ಅಸ್ಸಾಂನಲ್ಲಿ ಈಗಾಗಲೇ ಈ ವ್ಯವಸ್ಥೆ ಆಗಿದೆ. ಅದನ್ನೂ ನೋಡಿಕೊಂಡು ಬರಲು ತಂಡವನ್ನು ಕಳುಹಿಸುತ್ತೇವೆ. ಪರಿಸರವಾದಿಗಳೂ ಕೂಡ ಅರ್ಥಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ಕೂಡ ಸ್ಪಂದಿಸಬೇಕು, ಇಲ್ಲವಾದರೆ ಇಲಾಖೆ ಈ ಪ್ರಾಣಿಗಳನ್ನು ಅವರ ವಲಯದಲ್ಲಿ ಇಟ್ಟುಕೊಳ್ಳಲಿ. ರೈತರ ಜಮೀನಿಗೆ ಇವು ಬರುವುದು ಬೇಡ. ಈ ಪರಿಸರವಾದಿಗಳಿಗೆ ಅಷ್ಟೊಂದು ಪ್ರೀತಿ ಇದ್ದರೆ ಕೆಲವು ಪ್ರಾಣಿಗಳನ್ನು ಅವರ ಮನೆಗೆ ಕೊಟ್ಟು ಬಿಡೋಣ. ಕಾಡೆಮ್ಮೆ, ಮಂಗ, ಹಂದಿಗಳನ್ನು ನೀವೇ ಸಾಕಿಕೊಳ್ಳಿ ಎನ್ನೋಣ, ಅವಾಗ ಅರ್ಥವಾಗುತ್ತೆ ಎಂದು ಹೇಳಿರುವ ಮಾತು ಹಲವರನ್ನು ಕೆರಳಿಸಿದೆ.
ಕಾಡಲ್ಲಿದ್ದ ಹಲಸು ದ್ವಾರಬಾಗಿಲಾಯ್ತು, ನೇರಳೇ ಮರ ನಾಟ ಹಾಗೂ ಅಡಕೆ, ಚೊಗರಿಗೆ ಬಲಿಯಾಯ್ತು, ಮುಳ್ಳಣ್ಣು ಗುಡ್ಡೇ ಗೇರೆಲ್ಲಾ ಸುಟ್ಟು ಭಸ್ಮವಾಯ್ತು, ಬೇಲಿ ಎದ್ದು ಕಾಡನ್ನೇ ಮೇಯ್ದ ಮೇಲೆ ಕೊಡಚಾದ್ರಿ ಬುಡದಲ್ಲೊಂದು ಮಂಗಗಳ ಉದ್ಯಾನವಂತೆ. ಮಲೆನಾಡನ್ನೇ ಅಕೇಶಿಯಾ ಮಾಡಿದ ಮೇಲೆ ಮಂಗಗಳಿಗೊಂದು ಗತಿ ಕಾಣಿಸುವುದು ಸಾಹಸವೇನಲ್ಲ. ಸಂಸದ ರಾಘವೇಂದ್ರ ಅವರ ಕಾಲೇಜೊಂದು ಶೆಟ್ಟಿಹಳ್ಳಿ ಅಭಯಾರಣ್ಯದ ವಲಯದಲ್ಲೇ ಇದೆ ನೋಡಿ ಎಂದು ಪ್ರಾಣಿ ಪ್ರಿಯರೆಲ್ಲಾ ತಿರುಗಿ ಬಿದ್ದಿದ್ದಾರೆ. ಹದಿನೈದು ದಿನಗಳ ಹಿಂದೆ ಸಕ್ರೆಬೈಲ್‌ನಲ್ಲಿ ಲೋಗೋ ಬಿಡುಗಡೆ ಮಾಡಿ ಜೀವಸಂಕುಲದ ಬಗ್ಗೆ ಮಾತನಾಡಿದ ಸಂಸದರಿಗೆ ನೈತಿಕತೆ ಇಲ್ಲ ಎಂದು ಪರಿಸರವಾದಿ ಅಜಯ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಮಂಗಗಳ ಗುಣ ಸ್ವಭಾವಕ್ಕನುಗುಣವಾಗಿ ಹೇಳುವುದಾದರೆ ಗುಂಪಾಗಿ ವಾಸಿಸುವ ಮಂಗಗಳು ಬೇರೆ ಗುಂಪುಗಳೊಂದಿಗೆ ಸೇರದೇ ಕಿತ್ತಾಡುತ್ತಿರುತ್ತವೆ. ಸೀಮಿತ ಅಂದರೆ ಹತ್ತಾರು ಕಿಲೋಮೀಟರ್ ವ್ಯಾಪ್ತಿಯ ಕಾಡಿನಲ್ಲಿಡಬೇಕು, ನಿಸರ್ಗದತ್ತ ಆಹಾರ ಅಲಭ್ಯತೆಯಿಂದ ಅವುಗಳು ಬದುಕಲು ಸಾಧ್ಯವಿಲ್ಲ ಎನ್ನುತ್ತಾರೆ ಅಖಿಲೇಶ್ ಚಿಪ್ಪಳಿ.
ಏನಿದು ಅಸ್ಸಾಂ ಮಾದರಿ?
ಹಾಗಾದರೆ ಇವರು ಅನುಸರಿಸಲು ಹೊರಟಿರುವ ಅಸ್ಸಾಂ ಮಾದರಿ ಯಾವುದು ಗೊತ್ತಾ..? ಗಿಬ್ಬನ್ ವೈಲ್ಡ್‌ಲೈಫ್ ಸೆಂಕ್ಚುರಿ. ಮಯನ್ಮಾರ್ ಗಡಿಯ ಪಾಟ್ಕೈ ಪರ್ವತ ಶ್ರೇಣಿಯ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪಾರ್ಕ್ ಇದೆ. ಟೀ ತೋಟಗಳ ಒತ್ತುವರಿಯಿಂದ ಕಾಡನ್ನು ಸಂರಕ್ಷಿಸಿ ಅಲ್ಲಿನ ವಿಶಿಷ್ಟ ಪ್ರಬೇಧದ ಮಂಗಗಳ ಸಂತತಿಗೆ ಎಂಟೂವರೆ ಚದುರ ಮೈಲಿ ಅಳತೆಯಲ್ಲಿ ನಿಷೇಧಿತ ಸಂರಕ್ಷಿತ ಉದ್ಯಾನವನ ಮಾಡಲಾಗಿದೆ. ಅಲ್ಲಿ ವಿರಳ ಪ್ರಬೇಧ, ಅದರಲ್ಲೂ ಹೊಲ್ಲಾಂಗ್ ತಳಿಯ ಎತ್ತರದ ಮರಗಳಿವೆ. ಈ ಮರಗಳು ಗಿಬ್ಬನ್, ಲಂಗೂರ್, ಅಸ್ಸಾಂ ಸಿಂಗಳೀಕಗಳಿಗೆ ಆಶ್ರಯ ತಾಣವಾಗಿವೆ. ಇವು ಸೀಮಿತ ಪ್ರದೇಶದಲ್ಲಿ ಎತ್ತರದ ಮರಗಳಲ್ಲಿ ವಾಸವಿರಬಲ್ಲವು. ಆದರೆ ನಮ್ಮ ರಾಜಕೀಯ ಮುಖಂಡರ ಕನಸಿನ ಮಂಕಿಪಾರ್ಕ್‌ನಲ್ಲಿ ಮಂಗಗಳನ್ನ ಹೇಗೆ ಕೂಡಿಡ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸಾವಿರಾರು ಸಂತತಿಯ ಜೀವ ವೈವಿಧ್ಯತೆಯ ಪಶ್ಚಿಮಘಟ್ಟದ ಯಾವುದೇ ಭೂಪ್ರದೇಶವನ್ನು ಮಂಗಗಳಿಗೆ ಸೀಮಿತಗೊಳಿಸಿದರೆ ಪಾಕೃತಿಕ ಅಸಮತೋಲನವೂ ಕಾಡಬಹುದು. ಇನ್ನು ಕಾಡೆಮ್ಮೆ, ಕಾಡುಕೋಣಗಳನ್ನು ದಿಡ್ಡಿಯಲ್ಲಿ ಬಂಧಿಸುವ ಕಾಯಕಕ್ಕೆ ಮುಂದಾಗಿದ್ದು, ಶಿವಮೊಗ್ಗ ಸಮೀಪದ ಸಿಂಹಧಾಮದ ಬಳಿ ನೆಲೆ ಕಲ್ಪಿಸಲಾಗುವುದು ಎಂದು ಹೇಳುತ್ತಾ ಬಂದಿದ್ದಾರೆ. ಶರಾವತಿ ಕಣಿವೆಯಲ್ಲಿಯೇ ಬದುಕಲು ಹರಸಾಹಸ ಪಡುತ್ತಿರುವ ಈ ದೈತ್ಯ ಜೀವಿಗಳನ್ನು ಬಿಲದಲ್ಲಿ ಕೂಡಿಹಾಕುವ ಕೆಲಸವೂ ಬೇಸರ ತಂದಿದೆ.
ಶಿವಮೊಗ್ಗದಲ್ಲಿಯಾದರೆ ರಾಜಕೀಯ ಪ್ರಭುತ್ವವೂ ಇದೆ, ಮೇಲಧಿಕಾರಿಗಳಿಂದ ಕಡತಕ್ಕೆ ಮುಲಾಜಿಲ್ಲದೇ ಸಹಿಹಾಕಿಸುವ ತಾಕತ್ತೂ ಇದೆ. ಆದರೆ, ಉಳಿದೆಡೆ ಪಶ್ಚಿಮ ಘಟ್ಟದಂಚಿನ ತಾಲೂಕುಗಳ ಕಥೆ ಏನು..? ಈಗಾಗಲೇ ಮೂಡುಬಿದಿರೆಯಲ್ಲೂ ರೈತರು ಮಂಕಿಪಾರ್ಕ್ ಹಾಗೂ ನವಿಲುಗಳ ಉದ್ಯಾನ ಬೇಕೆಂದು ಕೇಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕನಿಷ್ಟ ಎರಡು ಪಾರ್ಕ್‌ಗಳಾದರೂ ಬೇಕಾಗುತ್ತವೆ. ಎಲ್ಲಾ ಅರಣ್ಯವನ್ನೂ ಮಂಕಿ ಪಾರ್ಕ್ ಮಾಡುತ್ತಾ ಹೋದರೆ ಸ್ವಾಭಾವಿಕ ಪ್ರಾಣಿ ಪ್ರಬೇಧದ ಪರಿಸ್ಥಿತಿ ಏನು ..? ಉತ್ತರ ಕನ್ನಡ ಹಾಗೂ ಶಿವಮೊಗ್ಗದಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕಗಳಿಗೆಲ್ಲಿ ನೆಲೆ.?