ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದ ತನಿಖೆ ಕೋರಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ವಜಾ ಮಾಡಿದೆ.
ಈ ಯುದ್ಧ ವಿಮಾನಗಳನ್ನು ಅತಿ ದುಬಾರಿ ದರ ತೆತ್ತು ಖರೀದಿಸಲಾಗಿದೆ, ವಿಧಿ ವಿಧಾನಗಳನ್ನು ಉಲ್ಲಂಘಿಸಲಾಗಿದೆ ಹಾಗೂ ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಗುತ್ತಿಗೆ ನೀಡಿ ಪಕ್ಷಪಾತ ತೋರಲಾಗಿದೆ.. ಈ ಕುರಿತು ತನಿಖೆಯಾಗಬೇಕು ಎಂಬುದಾಗಿ ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಗಣ್ಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವರ್ಷದ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಇದೇ ನ್ಯಾಯಪೀಠ ವಜಾ ಮಾಡಿತ್ತು.
ಆನಂತರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ಇದೀಗ ತಳ್ಳಿ ಹಾಕಿದೆ. ಕಳೆದ ಲೋಕಸಭಾ ಚುನಾವಣೆಗಳಿಗೆ ಮುನ್ನ ರಫೇಲ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಕುರಿತು ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮೊನಚಿನ ದಾಳಿ ನಡೆಸಿದ್ದವು.
ಈ ಆಪಾದನೆಗಳ ಕುರಿತು ತನಿಖೆಯ ಅಗತ್ಯವಿಲ್ಲ ಎಂಬುದಾಗಿ ಸುಪ್ರೀಮ್ ಕೋರ್ಟು ಎರಡನೆಯ ಸಲ ತೀರ್ಪು ನೀಡಿರುವುದು ಪ್ರಧಾನಿ ಮೋದಿಯವರ ಕೈ ಬಲಪಡಿಸಿದೆ. ಅವರ ವಿರೋಧಿಗಳಿಗೆ ಹಿನ್ನಡೆಯಾಗಿದೆ.
ಆದರೆ ಈ ಸಲದ ತೀರ್ಪು ಮೋದಿಯವರ ಪಾಲಿಗೆ ಸಂಪೂರ್ಣ ‘ಕಳಂಕರಹಿತ’ ಅಲ್ಲ ಎಂಬುದು ಗಮನಿಸಬೇಕಿರುವ ಅಂಶ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ನೇತೃತ್ವದ ಈ ನ್ಯಾಯಪೀಠ ನ್ಯಾಯಮೂರ್ತಿಗಳಾದ ಸಂಜಯ ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೂ ಒಳಗೊಂಡಿತ್ತು.
ಮರುಪರಿಶೀಲನೆಯ ಅರ್ಜಿಯನ್ನು ವಜಾ ಮಾಡಿರುವ ಉಳಿದಿಬ್ಬರ ತೀರ್ಪಿಗೆ ನ್ಯಾಯಮೂರ್ತಿ ಜೋಸೆಫ್ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದ್ದರೂ, 75 ಪುಟಗಳ ಪ್ರತ್ಯೇಕ ತೀರ್ಪು ನೀಡಿದ್ದಾರೆ. ಮೋದಿಯವರು ಮತ್ತು ಆಳುವ ಪಕ್ಷವನ್ನು ಮುಜುಗರ ಮತ್ತು ಕಿರಿಕಿರಿ ಉಂಟು ಮಾಡುವ ಹಲವು ಅಂಶಗಳು ಈ ತೀರ್ಪಿನಲ್ಲಿವೆ.
ಮೋದಿ ಸರ್ಕಾರದ ಮೇಲೆ ದಾಳಿ ನಡೆಸಲು ಈ ಪ್ರತ್ಯೇಕ ತೀರ್ಪು ಸಾಕಷ್ಟು ಸರಕನ್ನು ಒದಗಿಸಿದೆ. ರಫೇಲ್ ಒಪ್ಪಂದವನ್ನು ಎತ್ತಿ ಹಿಡಿದು ತೀರ್ಪು ನೀಡಲಾಗಿದ್ದರೂ, ಖರೀದಿಯಲ್ಲಿ ಭ್ರಷ್ಟಾಚಾರದ ದೂರಿನ ತನಿಖೆ ನಡೆಸಲು ಸಿಬಿಐ ಗೆ ಯಾವ ಅಡ್ಡಿಯೂ ಇಲ್ಲ ಎಂದು ನ್ಯಾಯಮೂರ್ತಿ ಜೋಸೆಫ್ ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯ 17 ಎ ಸೆಕ್ಷನ್ ಅಡಿಯಲ್ಲಿ ಸರ್ಕಾರದಿಂದ ಪೂರ್ವಾನುಮತಿ ದೊರೆತರೆ ಸಿಬಿಐ ಈ ದೂರನ್ನು ತನಿಖೆ ಮಾಡಬಹುದು ಎಂದು ಅವರು ವಿವರಿಸಿದ್ದಾರೆ. ರಫೇಲ್ ನಂತಹ ಪ್ರಕರಣ ಕುರಿತು ಸುಪ್ರೀಮ್ ಕೋರ್ಟಿನಲ್ಲಿ ರಿಟ್ ಅರ್ಜಿ ಇಲ್ಲವೇ ಮರುಪರಿಶೀಲನಾ ಆರ್ಜಿಯನ್ನು ಸಲ್ಲಿಸುವುದು ಸೂಕ್ತ ಮಾರ್ಗ ಅಲ್ಲ. ಸರ್ಕಾರ ಮಾಡಿಕೊಂಡ ಒಪ್ಪಂದವೊಂದರ ಪರಿಶೀಲನೆ ಸಂಬಂಧದಲ್ಲಿ ನ್ಯಾಯಾಂಗಕ್ಕೆ ಇರುವ ವಿಚಾರಣಾ ವ್ಯಾಪ್ತಿ ಸೀಮಿತವಾದದ್ದು ಎಂದೂ ಅವರು ಹೇಳಿದ್ದಾರೆ.
ಮರುಪರಿಶೀಲನೆ ಕೋರಿಕೆಯ ಅರ್ಜಿಗಳನ್ನು ವಜಾ ಮಾಡುವ ಇನ್ನಿಬ್ಬರು ನ್ಯಾಯಮೂರ್ತಿಗಳ ತೀರ್ಮಾನವನ್ನು ಒಪ್ಪದೆ ಹೋಗಿದ್ದರೆ ಜೋಸೆಫ್ ಅವರ ತೀರ್ಪನ್ನು ಆಳುವ ಪಕ್ಷ ಬೇರೆ ತಿರುವು ನೀಡಿ ವ್ಯಾಖ್ಯಾನ ಮಾಡುವುದು ಸುಲಭವಿತ್ತು. ಆದರೆ ವಜಾ ಮಾಡುವ ತೀರ್ಪನ್ನು ಅವರು ಒಪ್ಪಿದ್ದಾರೆ. ಅದು ಆಳುವ ಪಕ್ಷಕ್ಕೆ ನುಂಗಲಾರದ ತುತ್ತು. ಆದರೆ ಸಲೀಸಾಗಿ ಬಾಯಿ ತೆರೆಯುವಂತಿಲ್ಲ ಎಂಬ ಇಕ್ಕಟ್ಟಿಗೆ ಸಿಕ್ಕಿದೆ.
‘ಈ ಹಿಂದೆ ಸಂವಿಧಾನಪೀಠ ಲಲಿತಕುಮಾರಿ ಪ್ರಕರಣದಲ್ಲಿ ನೀಡಿದ್ದ ತೀರ್ಮಾನಕ್ಕೆ ಸಿಬಿಐ ಬದ್ಧವಾಗಿರಲೇಬೇಕು. ನಿರ್ದಿಷ್ಟ ಪ್ರಕರಣದಲ್ಲಿ ನಿಚ್ಚಳವಾಗಿ ಗುರುತಿಸಬಹುದಾದ ಅಪರಾಧ ನಡೆದಿದೆಯೆಂದು ತಿಳಿದು ಬಂದರೆ ಎಫ್.ಐ.ಆರ್. ದಾಖಲಿಸುವುದು ಕಡ್ಡಾಯ. ನಿಚ್ಚಳವಾಗಿ ಗುರುತಿಸಬಹುದಾದ ಅಪರಾಧವು ಲಭ್ಯ ಮಾಹಿತಿಯಿಂದ ತಿಳಿದು ಬರದಿದ್ದಲ್ಲಿ ಪೂರ್ವಭಾವಿ ವಿಚಾರಣೆಯೊಂದನ್ನು ನಡೆಸಬೇಕಾಗುತ್ತದೆ. ಈ ವಿಚಾರಣೆಯಿಂದ ನಿಚ್ಚಳವಾಗಿ ಗುರುತಿಸಬಹುದಾದ ಅಪರಾಧ ನಡೆದಿದೆ ಎಂದು ಕಂಡು ಬಂದಲ್ಲಿ ಎಫ್.ಐ.ಆರ್. ದಾಖಲಿಸದೆ ವಿಧಿಯಿಲ್ಲ. ಒಂದು ವೇಳೆ ಪೂರ್ವಭಾವಿ ತನಿಖೆಯಿಂದ ಅಪರಾಧ ಕಂಡು ಬಾರದೆ ಹೋದಲ್ಲಿ ‘ಮುಗಿತಾಯದ ವರದಿ’ಯನ್ನು ಬರೆಯಬೇಕು. ಈ ವರದಿಯನ್ನು ಕಾರಣಗಳೊಂದಿಗೆ ಸಮರ್ಥಿಸಬೇಕು. ಪ್ರತಿಯನ್ನು ದೂರುದಾರಿನಿಗೆ ಒದಗಿಸತಕ್ಕದ್ದು ಎಂಬುದಾಗಿ ಲಲಿತಕುಮಾರಿ ಪ್ರಕರಣದಲ್ಲಿ ತೀರ್ಪ ನೀಡಲಾಗಿದೆ’ ಎಂದು ನ್ಯಾಯಮೂರ್ತಿ ಜೋಸೆಫ್ ಉಲ್ಲೇಖಿಸಿದ್ದಾರೆ.
‘ಸಿಬಿಐ ಸರ್ಕಾರದಿಂದ ಸಂಪೂರ್ಣ ಸ್ವತಂತ್ರವಾಗಿ ಕ್ರಮ ಜರುಗಿಸಬೇಕು. ಸಿಬಿಐ ಪರವಾಗಿ ಸರ್ಕಾರ ಮಾತಾಡುವಂತಿಲ್ಲ. ದೂರಿನ ತನಿಖೆ ನಡೆಸಲು ಸಿಬಿಐ ಅಧಿಕಾರಿಗೆ ವ್ಯಾಪಕ ಅಧಿಕಾರಗಳಿವೆ. ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟಿನ ಅಧಿಕಾರ ವ್ಯಾಪ್ತಿ ಎದುರಿಸುವ ನಿರ್ಬಂಧಗಳು ಸಿಬಿಐ ಅಧಿಕಾರಿಗೆ ಅನ್ವಯ ಆಗುವುದಿಲ್ಲ. ಹಾಗೆ ನೋಡಿದರೆ ಸಿ.ಬಿ.ಐ. ಅಗಾಧ ತಾಂತ್ರಿಕ ಸಂಪನ್ಮೂಲಗಳನ್ನು ಹೊಂದಿದೆ’ ಎಂದಿದ್ದಾರೆ.
‘ತನಿಖೆಯ ಅತ್ಯಾಧುನಿಕ ತಂತ್ರಗಳನ್ನು ಅಳವಡಿಸಿಕೊಂಡಿರುವ ಪ್ರಧಾನ ತನಿಖಾ ಸಂಸ್ಥೆ ಸಿ.ಬಿ.ಐ. ತಾಂತ್ರಿಕ ಅಥವಾ ಇತರೆ ಎಲ್ಲ ವಸ್ತು ಸಾಮಗ್ರಿಯನ್ನು ಸಂಗ್ರಹಿಸುವುದು ಮತ್ತು ಅದನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ರೂಪದಲ್ಲಿ ಸಲ್ಲಿಸುವುದು ಸಿ.ಬಿ.ಐ.ನ ತನಿಖಾಧಿಕಾರಿಯ ಕರ್ತವ್ಯ’ ಎಂದೂ ಅವರು ನೆನಪಿಸಿದ್ದಾರೆ.
ಸಿನ್ಹಾ, ಭೂಷಣ್ ಹಾಗೂ ಶೌರಿ ಅವರ ಮರುಪರಿಶೀಲನಾ ಆರ್ಜಿಯನ್ನು ವಜಾ ಮಾಡುವ ತೀರ್ಪನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ಮತ್ತು ಸಂಜಯ ಕೌಲ್ ಅವರು ಎಂಟೇ ಪುಟಗಳಲ್ಲಿ ಮುಗಿಸಿದ್ದಾರೆ. 2018ರ ಅಕ್ಟೋಬರ್ ನಾಲ್ಕರಂದು ಈ ಮೂರು ಮಂದಿ ಅರ್ಜಿದಾರರು ಸಿ.ಬಿ.ಐ.ಗೆ ಸಲ್ಲಿಸಿದ್ದ ಕ್ರಿಮಿನಲ್ ದೂರನ್ನು ಜೋಸೆಫ್ ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ವಿವರವಾಗಿ ಪರಿಶೀಲಿಸಿದ್ದಾರೆ. ಇಂತಹ ಅರ್ಜಿಗಳನ್ನು ಪುರಸ್ಕರಿಸಲು ಸಾಕಷ್ಟು ತಾಂತ್ರಿಕ ಪರಿಣತಿ ಮತ್ತು ಸಾಮಗ್ರಿ ಸುಪ್ರೀಮ್ ಕೋರ್ಟ್ ಬಳಿ ಇಲ್ಲ. ಆದರೆ ಸಿಬಿಐ ಅಥವಾ ಇತರೆ ಯಾವುದೇ ತನಿಖಾ ಸಂಸ್ಥೆ ತನಿಖೆ ನಡೆಸಬಹುದಾಗಿದೆ ಎಂದಿದ್ದಾರೆ. 2014ರ ಲಲಿತಕುಮಾರಿ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ್ದಾರೆ.
ರಫೇಲ್ ಪ್ರಕರಣದಲ್ಲಿ ಎಫ್.ಐ.ಆರ್. ದಾಖಲಿಸಬೇಕೆಂಬ ಅರ್ಜಿದಾರರ ವಾದಕ್ಕೆ ಪುಷ್ಟಿ ನೀಡುವ ಮೂಲಕ ಎನ್.ಡಿ.ಎ. ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಸಾಲುಗಳೂ ಜೋಸೆಫ್ ತೀರ್ಪಿನಲ್ಲಿವೆ- ‘ಅರ್ಜಿದಾರರು ಸಲ್ಲಿಸಿರುವ ದೂರಿನಲ್ಲಿ ನಿಚ್ಚಳವಾಗಿ ಗುರುತಿಸಬಹುದಾದಂತಹ ಅಪರಾಧಗಳನ್ನು ಕಾಣಬಹುದಾಗಿದೆ ಎಂಬುದು ನಿರ್ವಿವಾದದ ಸಂಗತಿ. ತನಿಖೆ ನಡೆಸುವಂತೆ ಸಿ.ಬಿ.ಐ.ಗೆ ನಿರ್ದೇಶನ ನೀಡಲು ಬೇಕಾಗುವಷ್ಟು ಸಾಮಗ್ರಿ ಮರುಪರಿಶೀಲನಾ ಅರ್ಜಿಗಳಲ್ಲಿ ಇರಲಿಲ್ಲ. ಹೀಗಾಗಿ ಅಗತ್ಯ ಪರಿಣತಿ ಇಲ್ಲದ ಕಾರಣ ರಫೇಲ್ ನಂತಹ ತಾಂತ್ರಿಕ ವಿಷಯವನ್ನು ಪ್ರವೇಶಿಸುವುದು ನ್ಯಾಯಾಲಯಕ್ಕೆ ಬಹುಕಷ್ಟದ ಕೆಲಸವಾಗಿತ್ತು. ಪರಿಣಾಮವಾಗಿ ಮರುಪರಿಶೀಲನಾ ಅರ್ಜಿಗಳನ್ನು ವಜಾ ಮಾಡಬೇಕಾಯಿತು ‘ ಎಂಬುದಾಗಿ ನ್ಯಾಯಮೂರ್ತಿ ಜೋಸೆಫ್ ಹೇಳಿದ್ದಾರೆ. ಮೋದಿ ಸರ್ಕಾರವನ್ನು ತಿವಿಯಲು ಈ ಮಾತುಗಳನ್ನು ಪ್ರತಿಪಕ್ಷಗಳು ಇನ್ನಷ್ಟು ಕಾಲ ಬಳಸಿಕೊಳ್ಳುವಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಈಗಾಗಲೆ ತನಿಖೆಗೆ ಒತ್ತಾಯಪಡಿಸಿದೆ. ಅರ್ಜಿದಾರರಾಗಿದ್ದ ಸಿನ್ಹಾ, ಶೌರಿ, ಭೂಷಣ್ ತ್ರಿವಳಿ ಕೂಡ ಶುಕ್ರವಾರ ಸಂಜೆ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಮೂರ್ತಿ ಜೋಸಫ್ ಅವರ ತೀರ್ಪಿನ ಪ್ರಕಾರ ತಮ್ಮ ದೂರನ್ನು ತನಿಖೆಗೆ ಎತ್ತಿಕೊಳ್ಳುವಂತೆ ಸಿ.ಬಿ.ಐ.ಯನ್ನು ಆಗ್ರಹಪಡಿಸಿದೆ.
ಅರ್ಜಿದಾರರು ಸಿ.ಬಿ.ಐ.ಗೆ ನೀಡಿದ್ದ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಗಳ ವಿರುದ್ಧ ಪೂರ್ವಭಾವಿ ತನಿಖೆ ನಡೆಸಲು ಕೂಡ 17 ಎ ಸೆಕ್ಷನ್ ಪ್ರಕಾರ ಸರ್ಕಾರದ ಪೂರ್ವಾನುಮತಿ ಬೇಕೇ ಬೇಕು. ಆದರೆ ಅರ್ಜಿದಾರರು 17 ಎ ಸೆಕ್ಷನ್ ನ ಸಿಂಧುತ್ವವನ್ನು ಪ್ರಶ್ನಿಸಿಯೇ ಇಲ್ಲ. ಅರ್ಜಿದಾರರ ದೂರನ್ನು ಒಂದು ವೇಳೆ ನ್ಯಾಯಾಲಯ ಪುರಸ್ಕರಿಸಿ ಎಫ್.ಐ.ಆರ್. ದಾಖಲಿಸಬೇಕು ಎಂದು ಆದೇಶ ಮಾಡುವುದೇ ಆದಲ್ಲಿ ಅದು ವ್ಯರ್ಥ ಆದೇಶವಾಗಲಿದೆಯಲ್ಲವೇ? ಯಾಕೆಂದರೆ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎನ್ನುತ್ತದೆ ಸೆಕ್ಷನ್ 17 ಎ. ಹೀಗಾಗಿ ಅರ್ಜಿದಾರರು ಮುಂದುವರೆಯುವುದು ಸಾಧ್ಯವೇ ಇಲ್ಲ ಎಂದೂ ಜೋಸೆಫ್ ತಮ್ಮ ತೀರ್ಪಿನ ಮಿತಿಯನ್ನು ಗುರುತಿಸಿದ್ದಾರೆ.
ಆದರೂ ಭ್ರಷ್ಟಾಚಾರ ನಿಗ್ರಹ ಕಾಯಿದೆಯ 17 ಎ ಸೆಕ್ಷನ್ ಅಡಿಯಲ್ಲಿ ಸರ್ಕಾರದ ಪೂರ್ವಾನುಮತಿ ಪಡೆದಲ್ಲಿ ಅರ್ಜಿದಾರರ ದೂರಿನ ಕುರಿತು ಸಿ.ಬಿ.ಐ. ಕ್ರಮ ಜರುಗಿಸಬಹುದಾಗಿದೆ. ಮರುಪರಿಶೀಲನಾ ಅರ್ಜಿಗಳನ್ನು ಈ ನ್ಯಾಯಾಲಯ ವಜಾ ಮಾಡಿರುವ ಈ ತೀರ್ಪು ಕೂಡ ಇಂತಹ ಕ್ರಮಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಆದರೆ ತನ್ನ ಮೇಲಿನ ದೂರಿನ ತನಿಖೆಗೆ ಕೇಂದ್ರ ಸರ್ಕಾರ ತಾನೇ ಅನುಮತಿ ನೀಡುವುದು ಬಹುತೇಕ ಅಸಂಭವ. ಮೂವರು ಸದಸ್ಯರ ನ್ಯಾಯಪೀಠದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ಮತ್ತು ನ್ಯಾಯಮೂರ್ತಿ ಸಂಜಯ ಕೌಲ್ ಅವರು ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ತನಿಖೆ ಕೋರಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾ ಮಾಡುವ ಗೋಗೋಯ್ ಮತ್ತು ಕೌಲ್ ಅವರ ತೀರ್ಪನ್ನು ಜೋಸೆಫ್ ತಾವೂ ಒಪ್ಪಿದ್ದಾರೆ. ಹೀಗಾಗಿ ಅವರ ಪ್ರತ್ಯೇಕ ತೀರ್ಪನ್ನು ಅಲ್ಪಮತದ್ದೆಂದು ಸುಲಭವಾಗಿ ತಳ್ಳಿ ಹಾಕಲು ಬರುವುದಿಲ್ಲ. ಹಾಗೆಂದು ನ್ಯಾಯಪೀಠದ ಉಳಿದ ಇಬ್ಬರು ಸದಸ್ಯರು ಈ ಮಾತು ಹೇಳಿಲ್ಲ. ಹೀಗಾಗಿ ಜೋಸೆಫ್ ಅವರ ಮಾತುಗಳಿಗೆ ತೂಕವಿದ್ದೂ ತೂಕವಿರುವುದಿಲ್ಲ. ಆಳುವ ಪಕ್ಷದ ನೆರಳಿನಲ್ಲಿ ಸರಿದಾಡುವ ಸಿಬಿಐ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಎರಡು ಕಾರಣಗಳಿಂದ ರಫೇಲ್ ದೂರಿನ ಕುರಿತು ಸಿಬಿಐ ತನಿಖೆ ನಡೆಯುವುದಿಲ್ಲ. ಆದರೆ ಪ್ರತಿಪಕ್ಷಗಳು ನ್ಯಾಯಮೂರ್ತಿ ಜೋಸೆಫ್ ಅವರ ಅಭಿಪ್ರಾಯವನ್ನು ಮೋದಿ ಸರ್ಕಾರದ ಮುಖಕ್ಕೆ ಒಡ್ಡುವುದು ನಿಲ್ಲುವುದಿಲ್ಲ. ಹಾವು ಅರೆಜೀವವಾಗಿದೆ, ಕೋಲೂ ಮೆತ್ತಗಾಗಿದೆ ಎಂಬ ಜಾಡು ಹಿಡಿದಿದೆ ರಫೇಲ್ ಪ್ರಕರಣ.