ಲಕ್ಷಾಂತರ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿರುವ ಯೆಸ್ ಬ್ಯಾಂಕ್ ನ ಸ್ಥಾಪಕ ಮತ್ತು ಮಾಜಿ ಎಂಡಿ, ಸಿಇಒ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುವುದರೊಂದಿಗೆ ಯೆಸ್ ಬ್ಯಾಂಕ್ ಹಗರಣವು ಮತ್ತೊಂದು ಮಜಲು ಮುಟ್ಟಿದೆ. ಒಂದು ಕಡೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ) ಯೆಸ್ ಬ್ಯಾಂಕ್ ಗ್ರಾಹಕರ ಆತಂಕಗಳನ್ನು ದೂರ ಮಾಡಲು ಯತ್ನಿಸುತ್ತಿರುವಂತೆಯೇ ಅತ್ತ ಜಾರಿ ನಿರ್ದೇಶನಾಯವು (ಇಡಿ) ರಾಣಾ ಕಪೂರ್ ಅವರನ್ನು ಮೂವತ್ತು ಗಂಟೆಗಳ ಸುಧೀರ್ಘ ವಿಚಾರಣೆ ಒಳಪಡಿಸಿದ ನಂತರ ಬಂಧಿಸಿದೆ. ನ್ಯಾಯಾಲಯವು ರಾಣಾಕಪೂರ್ ಅವರನ್ನು ಮಾರ್ಚ್ 11ರವರೆಗೆ ಇಡಿ ಕಸ್ಟಡಿಗೆ ನೀಡಿದೆ. ವಿವಿಧ ಕಂಪನಿಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಾಲ ನೀಡುವಾಗ ರಾಣಾಕಪೂರ್ ಲಂಚ ಸ್ವೀಕರಿಸಿದ್ದಾರೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಂಬುದು ಅವರ ಮೇಲಿನ ಆರೋಪ.
ಇಡಿ ಅರೋಪದ ಪ್ರಕಾರ, ಒಂದು ಪ್ರಕರಣದಲ್ಲಿ ರಾಣಾಕಪೂರ್ ಈಗಾಗಲೇ ದಿವಾಳಿ ಎದ್ದಿರುವ ದಿವಾನ್ ಹೌಸಿಂಗ್ ಫೈನಾನ್ಸ್ (ಡಿಎಚ್ಎಫ್ಎಲ್) ನಿಂದ ₹600 ಕೋಟಿ ಲಂಚದ ರೂಪದಲ್ಲಿ ಪಡೆದಿದ್ದಾರೆ. ₹4300 ಕೋಟಿ ಸಾಲ ನೀಡಿದ್ದ ಯೆಎಸ್ ಬ್ಯಾಂಕ್ ಅದರ ಮರುಪಾವತಿಗೆ ಸೂಕ್ತ ಮತ್ತು ಕ್ಷಿಪ್ರ ಕ್ರಮ ಕೈಗೊಳ್ಳದಿರಲು ಡಿಎಚ್ಎಫ್ಎಲ್ ನಿಂದ ರಾಣಾಕೂಪರ್ ಕುಟುಂಬದ ಕಂಪನಿಯೊಂದಕ್ಕೆ ₹600 ಕೋಟಿ ಪಾವತಿಮಾಡಲಾಗಿದೆ. ಅಲ್ಲದೇ ಡಿಎಚ್ಎಫ್ಎಲ್ ಸೇರಿದಂತೆ ಹೀಗೆ ಒತ್ತಡದ ಮತ್ತು ನಿಷ್ಕ್ರಿಯ ಸಾಲದ ಬಗ್ಗೆ ಯೆಸ್ ಬ್ಯಾಂಕ್ ತನ್ನ ತ್ರೈಮಾಸಿಕ ಫಲಿತಾಂಶದ ವೇಳೆ ಮಾಹಿತಿ ನೀಡುತ್ತಿರಲಿಲ್ಲ. RBIಗೆ ಸಲ್ಲಿಸುತ್ತಿದ್ದ ವಿವರಗಳಲ್ಲೂ ಈ ಬಗ್ಗೆ ಪ್ರಸ್ತಾಪಿಸುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿಯೇ ಮಾಹಿತಿಯನ್ನು ಮುಚ್ಚಿಡಲಾಗುತ್ತಿತ್ತು ಎಂಬುದು ಇಡಿಯ ಆರೋಪ.
ಇದು ಆರಂಭ ಮಾತ್ರ. ಡಿಎಚ್ಎಫ್ಎಲ್ ನಂತೆಯೇ ಸುಮಾರು ಒಂದು ಡಜನ್ ಕಂಪನಿಗಳು ಯೆಸ್ ಬ್ಯಾಂಕ್ ನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿಲ್ಲ. ಯೆಸ್ ಬ್ಯಾಂಕ್ ಆಡಳಿತ ಮಂಡಳಿ ಸಹ ಸಾಲ ವಸೂಲಾತಿಗೆ ನಿಯಮಾನುಸಾರ ಕ್ರಮಕೈಗೊಂಡಿಲ್ಲದ ಹಿನ್ನೆಲೆಯಲ್ಲಿ ಈ ಕಂಪನಿಗಳಿಂದಲೂ ರಾಣಾ ಕಪೂರ್ ಲಂಚ ಸ್ವೀಕರಿಸಿದ್ದರೇ ಎಂಬುದರ ಬಗ್ಗೆ ಇಡಿ ತನಿಖೆ ಮುಂದುವರೆಸಿದೆ.
ಈ ನಡುವೆ ಕೆಲ ಕಂಪನಿಗಳು, ಸಂಸ್ಥೆಗಳು ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು RBI ರದ್ದು ಮಾಡುವ ಪೂರ್ವದಲ್ಲಿ (ಒಂದು ವಾರದ ಅಂತರದಲ್ಲಿ)ತ್ವರಿತವಾಗಿ ತಮ್ಮ ಠೇವಣಿಗಳನ್ನು ಹಿಂಪಡೆದಿರುವುದು ಮತ್ತು ವಹಿವಾಟು ಸ್ಥಗಿತಗೊಳಿಸಿರುವುದರ ಬಗ್ಗೆ ಅನೇಕ ಅನುಮಾನಗಳೆದ್ದಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಗಳು ವೈರಲ್ ಆಗಿದ್ದು, ಬಹುತೇಕ ಮಾಹಿತಿಗಳಲ್ಲಿ ಯೆಸ್ ಬ್ಯಾಂಕ್ ಆಡಳಿತ ಮಂಡಳಿ ರದ್ದು ಮಾಡುವ ವಿಚಾರವನ್ನು ಆಯ್ದ ಕಂಪನಿಗಳಿಗೆ ಮುಂಚಿತವಾಗಿ ಮಾಹಿತಿ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿವೆ.
ಯೆಸ್ ಬ್ಯಾಂಕ್ ಹಗರಣಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಕಾರಣ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರೋಪವನ್ನು ಟೀಕಿಸಿರುವ ಮೀಮ್ ಗಳೂ ವೈರಲ್ ಆಗಿವೆ. ಅಲ್ಲದೇ 2014ರಲ್ಲಿ ₹55,000 ಕೋಟಿ ಇದ್ದ ಯೆಸ್ ಬ್ಯಾಂಕ್ ಸಾಲದ ಮೊತ್ತವು 2019ರಲ್ಲಿ ₹2.40 ಲಕ್ಷ ಕೋಟಿಗೆ ಏರಲು ಕಾಂಗ್ರೆಸ್ ಹೇಗೆ ಕಾರಣವಾಗುತ್ತದೆ ಎಂಬ ಮಾಜಿ ವಿತ್ತ ಸಚಿವ ಚಿದಂಬಂರಂ ಅವರ ಪ್ರಶ್ನೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿರ್ಮಲಾ ಸೀತಾರಾಮನ್ ಇನ್ನೂ ತಾವು ವಿರೋಧ ಪಕ್ಷದಲ್ಲೇ ಇದ್ದೇವೆಂಬ ಭಾವನೆಯಲ್ಲೇ ಮಾತನಾಡುತ್ತಿದ್ದಾರೆಂದು ಟೀಕಿಸಲಾಗಿದೆ.
ಠೇವಣಿ ಸುರಕ್ಷಿತ: ಗ್ರಾಹಕರು ತಮ್ಮ ಠೇವಣಿ ಹಿಂಪಡೆಯುವ ಕುರಿತಂತೆ ಶುಕ್ರವಾರ ಮತ್ತು ಶನಿವಾರ ಇದ್ದ ಗೊಂದಲಗಳು ಬಹುತೇಕ ನಿವಾರಣೆಯಾಗಿವೆ. ಯೆಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಳಸಿ ಎಲ್ಲಿ ಬೇಕಾದರೂ ಹಣ ಹಿಂಪಡೆಯಬಹುದಾಗಿದೆ. ಆದರೆ, ₹50000 ರುಪಾಯಿ ಮಿತಿಯು ಏಪ್ರಿಲ್ 3ರವರೆಗೆ ಜಾರಿಯಲ್ಲಿರುತ್ತದೆ.
ಈ ನಡುವೆ RBI ಮತ್ತು SBI ಯೆಸ್ ಬ್ಯಾಂಕಿನ ಪುನಶ್ಚೇತನಕ್ಕಾಗಿ ಹಲವು ಸಾಧ್ಯತೆಗಳು ಮತ್ತು ಪ್ರಸ್ತಾಪಗಳನ್ನು ಪರಿಶೀಲಿಸುತ್ತಿವೆ. SBI ಅಲ್ಲದೇ ಬೇರೆ ಹೂಡಿಕೆದಾರರೂ ಮುಂದೆ ಬಂದಿದ್ದಾರೆ. ಈಗಾಗಲೇ SBI ಶೇ.49ರಷ್ಟು ಪಾಲನ್ನು ಖರೀದಿಸುವುದರ ಜತೆಗೆ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಬೇಕಾದ ₹10,000 ಕೋಟಿ ಒದಗಿಸಲು ಸಿದ್ದವಾಗಿರುವುದಾಗಿ ತಿಳಿಸಿದೆ. SBI ಅಧ್ಯಕ್ಷ ರಂಜಿತ್ ಕುಮಾರ್ ಪ್ರಕಾರ, ವಿವಿಧ ಹೂಡಿಕೆದಾರರೂ ಯೆಸ್ ಬ್ಯಾಂಕಿನಲ್ಲಿ ಪಾಲು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ₹10,000 ಕೋಟಿ ಪೂರ್ಣ SBI ಪೂರೈಸದೇ ಇದ್ದರೂ ಹೂಡಿಕೆದಾರರಿಂದ ಕ್ರೋಢೀಕರಿಸುವ ಸಾಧ್ಯತೆಯೂ ಇದೆ.
RBI ಸಿದ್ದಪಡಿಸಿರುವ ‘ಯೆಸ್ ಬ್ಯಾಂಕ್ ಲಿಮಿಟೆಡ್ ಪುನಶ್ಚೇತನ ಯೋಜನೆ 2020’ ಪ್ರಕಾರ ಯೆಸ್ ಬ್ಯಾಂಕ್ ನ ಹೆಚ್ಚುವರಿ ಶ್ರೇಣಿ 1 ಬಂಡವಾಳದ (ಎಟಿ1) ವ್ಯಾಪ್ತಿಗೆ ಬರುವ ಎಲ್ಲಾ ಸಾಲಗಳನ್ನು ಶಾಶ್ವತವಾಗಿ ಲೆಕ್ಕಪುಸ್ತಕದಿಂದ ತೆಗೆದುಹಾಕಲಿದೆ (ಇದರ ಅರ್ಥ ಆ ಸಾಲಗಳನ್ನೆಲ್ಲ ಮನ್ನಾ ಮಾಡಲಾಗುತ್ತದೆ) ನಂತರ ಷೇರು ಬಂಡವಾಳವನ್ನು ಪರಿಷ್ಕರಿಸಿ ₹5000 ಕೋಟಿಗೆ ತಗ್ಗಿಸಲಾಗುತ್ತದೆ. ಹೊಸ ಬಂಡವಾಳಗಾರರು ಹಾಕಿರುವ ಷರತ್ತು ಏನೆಂದರೆ ಹೆಚ್ಚಿನ ಬಂಡವಾಳ ಹೂಡುತ್ತಿರುವ SBI ತನ್ನ ಪಾಲನ್ನು ಮುಂದಿನ ಮೂರು ವರ್ಷಗಳವರೆಗೆ ಶೇ.26ಕ್ಕಿಂತ ತಗ್ಗಿಸಬಾರದು ಎಂಬುದಾಗಿದೆ. ಜತೆಗೆ ಮುಖ್ಯ ಹುದ್ದೆಗಳ ಹೊರತು ಪಡಿಸಿ ಯಾವುದೇ ಯೆಸ್ ಬ್ಯಾಂಕ್ ಸಿಬ್ಬಂದಿಯನ್ನು ಮುಂದಿನ ಒಂದು ವರ್ಷದವರೆಗೆ ತೆಗೆದುಹಾಕುವಂತಿಲ್ಲ ಎಂಬ ಷರತ್ತನ್ನೂ ಹಾಕಲಾಗಿದೆ.
ವಿಲೀನ ಇಲ್ಲ: ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ SBI ಮುಂದಾಗಿದೆಯೇ ಹೊರತು ಅದನ್ನು SBI ಅಥವಾ ಇನ್ನಾವುದೇ ಬ್ಯಾಂಕಿನೊಂದಿಗೆ ವಿಲೀನಗೊಳಿಸುವುದಿಲ್ಲ ಎಂದು SBI ಅಧ್ಯಕ್ಷ ರಂಜಿತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದಿವಾಳಿಯಂಚಿಗೆ ಬಂದಿದ್ದಾಗ, ಗ್ರಾಹಕರ ಠೇವಣಿಯನ್ನು ರಕ್ಷಿಸಲು ಮುಂದಾಗಿದ್ದ RBI ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜತೆ ವಿಲೀನಗೊಳಿಸಿ ಆದೇಶ ಹೊರಡಿಸಿತ್ತು. ಪ್ರಸ್ತುತ ಯೆಸ್ ಬ್ಯಾಂಕ್ ದಿವಾಳಿಯಾಗುವ ಹಂತಕ್ಕೆ ತಲುಪಿಲ್ಲ. ಬಂಡವಾಳ ಮರುಪೂರಣ ಮಾಡಿದರೆ ಮತ್ತು ಮುಂದೆ ಬ್ಯಾಂಕ್ ನಿಯಮಾನುಸಾರ ವಹಿವಾಟು ನಡೆಸಿದರೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೀಗಾಗಿ ಬ್ಯಾಂಕ್ ವಿಲೀನಗೊಳಿಸುವ ಪ್ರಸ್ತಾಪ RBI ಮುಂದೆ ಇಲ್ಲ.