ಭಾರತ – ಚೀನಾ ಘರ್ಷಣೆ ನಡೆಯುತ್ತಿದ್ದು ಯುದ್ಧದ ಕಾರ್ಮೋಡ ಆವರಿಸಿದೆ. ಈ ನಡುವೆ ಭಾರತ ಚೀನಾ ಗಡಿ ಭಾಗವಾದ ಲೇಹ್‌ನ ಸೇನಾ ನೆಲೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿ ಸೈನಿಕರಿಗೆ ಶಹಬ್ಬಾಸ್‌ಗಿರಿ ನೀಡಿದ್ದಾರೆ. ಇದು ಸುರೇಶ್ ಕುಮಾರ್ ಅವರ ಸಂತೋಷಕ್ಕೆ ಕಾರಣವಲ್ಲ. ಬದಲಿಗೆ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯವಾಗಿದ್ದು, ಅಂದುಕೊಂಡಿದ್ದನ್ನು ಸಾಧಿಸಿರುವ ಮಂದಹಾಸ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೊಗದಲ್ಲಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕು ಎಂದು ಹಠ ಹಿಡಿದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ನಡೆಸಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಕರೋನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಹೇಳಿದ್ದಾರೆ. ಆದರೆ ಪರಿಕ್ಷಾ ಕೇಂದ್ರಗಳಿಂದ ಸೋಂಕು ಹರಡಿಲ್ಲ ಎನ್ನುವುದು ಸುರೇಶ್ ಕುಮಾರ್ ಅವರ ಮಾತು.
2019-20ನೇ ಸಾಲಿನ SSLC ಪರೀಕ್ಷೆ ಮುಕ್ತಾಯವಾದ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕರೋನಾ ಸೋಂಕಿನ ನಡುವೆ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಪರೀಕ್ಷೆ ಮುಗಿಸಿದೆ ಎಂದು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮದ ಕುರಿತು ಸಾಕ್ಷಾಚಿತ್ರ ಬಿಡುಗಡೆ ಮಾಡಿದ್ದಾರೆ. 7 ಲಕ್ಷದ 76 ಸಾವಿರದ 251 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ 7 ಲಕ್ಷದ 61 ಸಾವಿರದ 506 ವಿದ್ಯಾರ್ಥಿಗಳು ಹಾಜರಾಗಿದ್ದರು. ಕಳೆದ ವರ್ಷ 98.6% ವಿದ್ಯಾರ್ಥಿಗಳು ಹಾಜರಿದ್ದರು. ಈ ಬಾರಿ 0.6% ರಷ್ಟು ಹಾಜರಾತಿ ಕಡಿಮೆಯಾಗಿದೆ. ಪರೀಕ್ಷೆ ತಡವಾದರೂ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಯಶಸ್ವಿಯಾಗೋಕೆ ಮಕ್ಕಳೇ ಕಾರಣ ಎಂದು ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ಮಾಡಿದರೆ ಯಾವುದೂ ಸಾಧ್ಯ ಎಂಬುದನ್ನು ಈ ಪರೀಕ್ಷೆಗಳು ರುಜುವಾತು ಮಾಡಿವೆ.
— S.Suresh Kumar, Minister – Govt of Karnataka (@nimmasuresh) July 3, 2020
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಡಹಬ್ಬದಂತಾಗಿದೆ ಎಂದ ಸುರೇಶ್ ಕುಮಾರ್, ನಮ್ಮ ನೆರೆಯ ರಾಜ್ಯಗಳೆಲ್ಲಾ ಪರೀಕ್ಷೆಯನ್ನು ರದ್ದು ಮಾಡಿದವು. ಆದರೆ ಕೇರಳ ರಾಜ್ಯ ಕೂಡ ಪರೀಕ್ಷೆಯನ್ನ ಚೆನ್ನಾಗಿ ಮಾಡಿದೆ. ಪರೀಕ್ಷೆಯ ಮೊದಲ ದಿನ ಪೋಷಕರಿಗೆ ಭಯ ಇತ್ತು. ವಿದ್ಯಾರ್ಥಿಗಳಿಗೂ ಆತಂಕ ಇತ್ತು. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಖುಷಿ ಕೊಟ್ಟಿದೆ. ಶಿಕ್ಷಣ ಇಲಾಖೆಗೂ ಇದು ಸಂತಸ ವಿಚಾರ ಎಂದಿದ್ದಾರೆ. ಸರಿ ಸುಮಾರು ನಾನು 70 ರಿಂದ 80 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಕರೋನಾ ವಿರುದ್ಧದ ಮಾರ್ಗಸೂಚಿಯನ್ನು ನಾವೆಲ್ಲರೂ ಫಾಲೋ ಮಾಡಿದ್ದೀವಿ. ಈ ಪರೀಕ್ಷೆ ನಡೆಸುವ ಮೂಲಕ ನಾವು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಪರೀಕ್ಷೆ ನಡೆಸೋಕೆ ಆಡಳಿತ, ವಿರೋಧ ಪಕ್ಷ, ಸಂಘ ಸಂಸ್ಥೆಗಳು ಸಹಕಾರ ನೀಡಿದವು ಎಂದು ಜ್ಞಾಪಿಸಿಕೊಂಡಿದ್ದಾರೆ.
ಎಸ್‌ಎಸ್‌ಏಲ್‌ಸಿ ಪರೀಕ್ಷೆ ನಡೆಸದಂತೆ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಮೆಟ್ಟಿಲೂ ಸಹ ಏರಿದ್ರು. ಆದ್ರೆ ಆ ಸಮಯದಲ್ಲಿ ವಕೀಲರು ಸಾಕಷ್ಟು ಸಹಾಯ ಮಾಡಿದ್ದಾರೆ. ಆ ಬಳಿಕ ಪರೀಕ್ಷಾ ಕೇಂದ್ರದಿಂದ ಸೋಂಕು ಹರಡದಂತೆ ನೋಡಿಕೊಂಡಿದ್ದೇವೆ. ಯಾರ ಮನೆಯಲ್ಲಿ ಸೋಂಕು ಇರುತ್ತೆ ಅವರಿಗೆ ಪೂರಕ ಪರೀಕ್ಷೆಗೆ ಅವಕಾಶ ಮಾಡಿಕೊಡುತ್ತೇವೆ. ಆಗಸ್ಟ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದೆ. ಕರೋನಾ ಹರಡದಂತೆ ಸಾಕಷ್ಟು ಮುಂಜಾಗ್ರತಾ ವಹಿಸಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದ್ದಾರೆ. ಕೆಲವು ಕಡೆ ಪರೀಕ್ಷೆಗೆ ಹೋಗುವ ಮಕ್ಕಳಿಗೆ ಉಚಿತ ಆಟೋ ವ್ಯವಸ್ಥೆ ಕೂಡ ಮಾಡಿದ್ದಾರೆ ಎಂದಿದ್ದಾರೆ.

ಪಿಯು ಪರೀಕ್ಷೆಯಿಂದ ಎಚ್ಚೆತ್ತುಕೊಂಡಿದ್ವಿ..!
ಜೂನ್ 18ರಂದು ಪಿಯು ಪರೀಕ್ಷೆ ಮಾಡಿದ್ವಿ. ಅಲ್ಲಿ ಕೆಲವು ಕೊರತೆಯನ್ನ ಕಂಡಿದ್ದೆವು. ಸಾಮಾಜಿಕ ಅಂತರವಿಲ್ಲದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಹಾಗಾಗಿ SSLC ಪರೀಕ್ಷೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಯ್ತು. ಗೃಹ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಹಾಗೂ ಕಂದಾಯ ಇಲಾಖೆಗಳೂ ಕೂಡ ಸಹಕಾರ ನೀಡಿವೆ. ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕಿ ದಿಟ್ಟ ಮಹಿಳೆ. ಆಕೆ ಪರೀಕ್ಷೆಯನ್ನು ನಿಭಾಯಿಸಿದ ರೀತಿ ಮೆಚ್ಚುವಂಥದ್ದು ಎನ್ನುವ ಮೂಲಕ ವಿ ಸುಮಂಗಲ ಅವರ ಕೆಲಸಕ್ಕೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.
SSLC & PUC ಫಲಿತಾಂಶ ಯಾವಾಗ..?
ಜುಲೈ 13 ರಿಂದ ಮೌಲ್ಯಮಾಪನ ಶುರುವಾಗಲಿದ್ದು, ಆಗಸ್ಟ್ ಮೊದಲನೇ ವಾರದಲ್ಲಿ SSLC ಫಲಿತಾಂಶ ಪ್ರಕಟ ಮಾಡಲಿದ್ದೇವೆ. ಅದಕ್ಕೂ ಮೊದಲೇ ಜುಲೈ ಮೂರನೇ ವಾರದ ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ. ಸಕಾರಣದಿಂದ ಎಸ್‌ಎಎಸ್‌ಎಲ್‌ಸಿ ಪರೀಕ್ಷೆ ಗೈರು ಹಾಜರಾದವರು ಭಯ ಪಡುವ ಅಗತ್ಯವಿಲ್ಲ. ಪೂರಕ ಪರೀಕ್ಷೆಗೆ ಅವಕಾಶ ನೀಡುತ್ತೇವೆ. ಅಂದು ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಫ್ರೆಶ್ ಕ್ಯಾಂಡಿಡೇಟ್ ಎಂದು ಪರಿಗಣನೆ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ಎಸ್‌ಎಸ್‌ಎಲ್‌ಸಿ 75 ಲಕ್ಷ ರೂಪಾಯಿ ಸ್ಯಾನಿಟೈಸ್ ವ್ಯವಸ್ಥೆ ಮಾಡಿದ್ದೇವೆ. ಎಂಬೆಸಿ ಸೇರಿದಂತೆ ಹಲವು ಕಂಪನಿಗಳು ಸಹಾಯ ಮಾಡಿದೆ. ಶಿಕ್ಷಣ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಸರ್‌ಗೆ ಯಾವುದೇ ಹಣ ಖರ್ಚು ಮಾಡಿಲ್ಲ. ಕೇವಲ ಖಾಸಗಿ ಶಾಲಾ ವಾಹನ ಹಾಗೂ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಗೆ ಮಾತ್ರ ಹಣ ಖರ್ಚಾಗಿದೆ ಎಂದಿದ್ದಾರೆ.
ಮುಂದಿನ ವಾರ ಬರಲಿದೆ ಸಚಿವರ ಫಲಿತಾಂಶ..?
ಕರೋನಾ ನಡುವೆ ಹಠವಿಡಿದು ಪರೀಕ್ಷೆ ನಡೆಸಿದ ಸುರೇಶ್ ಕುಮಾರ್ ಯುದ್ಧವನ್ನೇ ಗೆದ್ದಿದ್ದೇನೆ ಎನ್ನುವ ಸಂಭ್ರಮದಲ್ಲಿ ಇದ್ದಾರೆ. ಯಾವುದೇ ಸಮಸ್ಯೆ ಆಗದೆ ಪರೀಕ್ಷೆ ಮುಗಿದಿರುವುದು ಎಲ್ಲರಿಗೂ ಸಂತೋಷದ ವಿಚಾರವೇ ಸರಿ. ಆದರೂ ನಾವು ತುಂಬಾ ಯಶಸ್ವಿಯಾಗಿ ಪರೀಕ್ಷೆಯನ್ನು ಮುಗಿಸಿದ್ದೇವೆ ಎಂದು ಬೀಗುವುದಕ್ಕೆ ಕನಿಷ್ಟ ಒಂದು ವಾರವಾದರೂ ಸಮಯದ ಅವಶ್ಯಕತೆ ಇದೆ ಎಂದೆನಿಸುತ್ತದೆ. ಕಾರಣವೆಂದರೆ ಈಗಾಗಲೇ ವಿವಿಧ ಮೂಲಗಳಿಂದ 25ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಎಂದು ಸ್ವತಃ ಸುರೇಶ್ ಕುಮಾರ್ ಅವರೇ ಮಾಹಿತಿ ನೀಡಿದ್ದಾರೆ. ಆ 25 ವಿದ್ಯಾರ್ಥಿಗಳಿಂದ ಬೇರೆ ಯಾರಿಗೆಲ್ಲಾ ಸೋಂಕು ಬಂದಿದೆ ಎನ್ನುವುದು ಗೊತ್ತಾಗಲು ಕನಿಷ್ಟ ನಾಲ್ಕೈದು ದಿನಗಳಾದರೂ ಬೇಕಾಗಿದೆ.
ಸರ್ಕಾರದ್ದು ಯಾವಾಗಲೂ ಆತುರದ ಬುದ್ಧಿ..!
ಹಾಸನದಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸ್ವತಃ ಡಿಡಿಪಿಐ ಪರೀಕ್ಷಾ ಕೇಂದ್ರಕ್ಕೆ ಬಂದು ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಆ ಬಳಿಕ ಅದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 18 ವಿದ್ಯರ್ಥಿಗಳು ಹಾಗೂ ಓರ್ವ ಕೊಠಡಿ ಇನ್‌ಚಾರ್ಜ್‌ಗೆ ಅಂದು ಸಂಜೆಯೇ ಪರೀಕ್ಷೆ ನಡೆಸಿ ಮರುದಿನ ಬೆಳಗ್ಗೆ ಫಲಿತಾಂಶ ಕೊಡಲಾಗಿತ್ತು. ಪರೀಕ್ಷೆ ವರದಿ ನೆಗೆಟೀವ್ ಬಂದ ಕಾರಣ ಮುಂದಿನ ಪರೀಕ್ಷೆಗಳನ್ನು ಬರೆಯಲು ಅಡ್ಡಿಯಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಓರ್ವ ಸೋಂಕಿತನಿಂದ ವೈರಸ್ ಹರಡಿದ್ದರೆ..? ಅದು ತನ್ನ ಪ್ರಭಾವ ಶುರು ಮಾಡಲು ಕನಿಷ್ಠ ಪಕ್ಷ ಒಂದೆರಡು ದಿನಗಳಾದರೂ ಬೇಡವೇ..? ಇಂದು ಬೆಳಗ್ಗೆ ಜೊತೆಗೆ ಪರೀಕ್ಷೆ ಬರೆದವನ ಪಕ್ಕದಲ್ಲಿ ಕುಳಿವನಿಗೆ ಸಂಜೆ ಟೆಸ್ಟ್ ಮಾಡಿ ಸೋಂಕು ಇಲ್ಲ ಎನ್ನುವುದು ಮೂರ್ಖತನ ಆಗುವುದಿಲ್ಲವೆ..? ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದೇ ರೀತಿ ಶಿಕ್ಷಣ ಸಚಿವರೂ ಕೂಡ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದೇವೆ. ಯಾರಿಗೂ ಸೋಂಕು ಹರಡುವುದಕ್ಕೆ ಬಿಟ್ಟಿಲ್ಲ ಎಂದು ಎದೆಯುಬ್ಬಿಸಿ ಹೇಳುವುದಕ್ಕೆ ಕನಿಷ್ಠ ವಾರವಾದರೂ ಬೇಕು ಅಲ್ಲವೇ..?












