ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಜಾರಿ ಮಾಡಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕೇರಳ, ರಾಜಸ್ಥಾನ, ಪಂಜಾಬ್ ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ. ತೆಲಂಗಾಣ ಸರ್ಕಾರ ಕೂಡ ನಿರ್ಣಯ ಅಂಗೀಕಾರ ಮಾಡಲು ಮುಂದಾಗಿದೆ.
ಈ ನಡುವೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ಮಾಡುವವರಿಗೆ ಚಾಟಿ ಬೀಸಿದ್ದು, ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದ್ದಾರೆ. ದೆಹಲಿಯಲ್ಲಿ ನಿನ್ನೆ ಎನ್‌ಸಿಸಿ ಪರೇಡ್ ನಲ್ಲಿ ಭಾಗಿಯಾಗಿದ್ದ ಪ್ರಧಾನಿ, ನೆರೆಹೊರೆಯ ದೇಶಗಳ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ. ವಿರೋಧ ಪಕ್ಷಗಳು ಮತ ಬ್ಯಾಂಕ್‌ಗಾಗಿ ವಿರೋಧ ಮಾಡ್ತಿವೆ ಎಂದಿದ್ದಾರೆ.
ಈ ನಡುವೆ ಪ್ರಚೋದನೆ ಆರೋಪದಲ್ಲಿ ಜವಾಹರಲಾಲ್ ಯೂನಿವರ್ಸಿಟಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆದ್ರೆ ಹೋರಾಟಗಾರರನ್ನೇ ಬೆದರಿಸುವ ಕೆಲಸ ನಡೀತೀದ್ಯ ಅನ್ನೋ ಅನುಮಾನ ಕೂಡ ಕೇಂದ್ರ ಸರ್ಕಾರದ ಮೇಲೆ ಮೂಡಿದೆ.
ದೆಹಲಿಯ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶರ್ಜೀಲ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಈಶಾನ್ಯ ರಾಜ್ಯಗಳನ್ನೇ ಗುರಿಯಾಗಿಸಿ ಕೇಂದ್ರ ಸರ್ಕಾರ ಎನ್‌ಆರ್‌ಸಿ, ಎನ್‌ಸಿಆರ್, ಸಿಎಎ ಜಾರಿ ಮಾಡುತ್ತಿದೆ. ಇದನ್ನು ನೋಡಿದ್ರೆ ಈಶಾನ್ಯ ರಾಜ್ಯಗಳನ್ನೇ ಭಾರತದಿಂದ ಪ್ರತ್ಯೇಕ ಮಾಡಿಬಿಡಬೇಕು ಎನ್ನುವ ಅರ್ಥದಲ್ಲಿ ಭಾಷಣ ಮಾಡಿದ್ದ ವಿಡೀಯೋ ವೈರಲ್ ಆಗಿದೆ.
ಸತ್ಯ ದೇಶವನ್ನು ಹೊಡೆಯುವ ಮಾತನ್ನೂ ಯಾರೂ ಹೇಳಬಾರದು. ಇದು ತಪ್ಪು. ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದ ಆರೋಪದಲ್ಲಿ ಬಂಧನ ಮಾಡಲಾಗುತ್ತದೆ. ಆದ್ರೆ 40 ನಿಮಿಷ 46 ಸೆಕಂಡ್ ಮಾತನಾಡಿರುವ ಶರ್ಜೀಲ್, ದೇಶದಲ್ಲಿ ಮುಸಲ್ಮಾನರನ್ನು ಬಳಸಿಕೊಂಡು ಯಾರೆಲ್ಲಾ ರಾಜಕಾರಣ ಮಾಡ್ತಿದ್ದಾರೆ ಎನ್ನುವ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದಾರೆ.

ಇದರಲ್ಲಿ ಕಾಂಗ್ರೆಸ್ ಪಕ್ಷ, ಕನ್ಹಯ್ಯ ಕುಮಾರ್, ಎಡಪಕ್ಷಗಳು, ಪಶ್ಚಿಮ ಬಂಗಾಳ ರಾಜಕೀಯ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮ ರಾಜಕೀಯಕ್ಕಾಗಿ ಹಿಂದೂ ಮುಸಲ್ಮಾನರನ್ನು ಹೇಗೆ ಬಳಸಿಕೊಳ್ಳುತ್ತಿವೆ ಎಂಬುದನ್ನು ಬಿಡಿಸಿ ಹೇಳಿದ್ದಾರೆ. ಈ ರಾಜಕೀಯದಲ್ಲಿ ಮುಸಲ್ಮಾನರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ. ಜೊತೆಗೆ ಸಂವಿಧಾನ ನಮ್ಮ ದೇಶಕ್ಕೆ ಹೇಗೆ ಬಂತು, 20ನೇ ಶತಮಾನದಲ್ಲಿ ಮಹಾತ್ಮಾ ಗಾಂಧಿಯವರೇ ತನ್ನನು ಪ್ಯಾಸಿಸ್ಟ್ ಎಂದು ಕರೆದುಕೊಂಡಿದ್ದರು ಎಂಬುದನ್ನೂ ನೆನಪಿಸಿಕೊಂಡಿದ್ದಾರೆ.
ಈ ವೇಳೆ ಈಶಾನ್ಯ ರಾಜ್ಯಗಳನ್ನು ಕಟ್ ಮಾಡಲಿ ಎಂದಿರುವ ಹೇಳಿಕೆ ಶಾರ್ಜೀಲ್‌ಗೆ ಸಂಕಷ್ಟ ತಂದೊಡ್ಡಿದೆ. ಮುಂಬೈನ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದು ಜೆಎನ್‌ಯುವಿನ್ನಲ್ಲಿ ಇತಿಹಾಸ ವಿಚಾರದಲ್ಲಿ ಪಿಹೆಚ್‌ಡಿ ಮಾಡ್ತಿರೋ ಶಾರ್ಜೀಲ್, ಇತಿಹಾಸವನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅದರ ನಡುವೆ ಹೇಳಿರುವ ಒಂದು ವಾಕ್ಯದಿಂದ ಬಂಧನಕ್ಕೆ ಒಳಗಾಗಿದ್ದಾರೆ.
ಶಾರ್ಜೀಲ್ ಇಮಾಮ್ ಬಂಧನದ ಬಳಿಕ ಮಾತನಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಯಾರೂ ದೇಶವನ್ನೊ ಒಡೆಯುವ ಮಾತನಾಡಬಾರದು. ಶಾರ್ಜೀಲ್ ವಿಚಾರದಲ್ಲಿ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಇದೀಗ ಪ್ರಚೋದನೆ ಆರೋಪದಲ್ಲಿ ಬಂಧನವಾಗಿದೆ. ಆದ್ರೆ, ಬಿಜೆಪಿ ನಾಯಕರು ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಬಂಧಿಸುವ ವಿಚಾರ ಸೈಡಿಗಿರಲಿ, ದೂರು ದಾಖಲಿಸುವ ಕೆಲಸವು ನಡೆಯುತ್ತಿಲ್ಲ. ಇದು ಕೇಂದ್ರ ಸರ್ಕಾರದ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತಿದೆ. ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿ ಆಗಿರುವ ಸುರೇಶ್ ಅಂಗಡಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದಿದ್ದರು.
ಇನ್ನು ಬಿಜೆಪಿ ನಾಯಕರ ಪ್ರತಿ ಭಾಷಣದಲ್ಲೂ ವಿರೋಧಿಗಳನ್ನು ಪಾಕಿಸ್ತಾನೆಕ್ಕೆ ಓಡಿಸಬೇಕು ಎನ್ನುವ ಮಾತುಗಳು ಕಾಯಕ ಆಗಿ ಸ್ಥಾನ ಪಡೆದಿರುವೆ. ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಇಂಡೋ – ಪಾಕ್ ನಡುವಿನ ಹೋರಾಟ ಎಂಬಂತೆ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ರು ಮಾಡಿದ್ರು. ಬಳಿಕ ಸಮರ್ಥನೆಯನ್ನೂ ಮಾಡಿಕೊಂಡಿದ್ರು.
ಆದ್ರೆ ಅವರನ್ನು ಇಲ್ಲೀವರೆಗೂ ಬಂಧಿಸುವ ಕೆಲಸ ಮಾಡಲಿಲ್ಲ. ಕೇವಲ ಚುನಾವಣಾ ಆಯೋಗ 48 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ಮಾಡಿತ್ತು. ಆ ಬಳಿಕ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಅಷ್ಟೆ. ಇದರ ಜೊತೆಗೆ ಕೇಂದ್ರದ ಮತ್ತೋರ್ವ ಸಚಿವ ಅನುರಾಗ್ ಠಾಕೂರ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ಚುನಾವಣಾ ಪ್ರಚಾರದ ವೇಳೆ ಬಹಿರಂಗ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ.

ಆದ್ರೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಕೊಟ್ಟು ಪ್ರತಿಕ್ರಿಯೆ ಕೇಳಿದೆ. ಗುರುವಾರ ಮಧ್ಯಾಹ್ನ 12ರೊಳಗಾಗಿ ಪ್ರತಿಕ್ರಿಯೆ ನೀಡದಿದ್ದರೆ, ಚುನಾವಣಾ ಆಯೋಗ ಏಕಪಕ್ಷೀಯವಾಗಿ ತನ್ನ ನಿರ್ಧಾರ ಪ್ರಕಟಿಸುವ ಸೂಚನೆ ಕೊಟ್ಟಿದೆ.
ಆದ್ರೆ ವಿಚಾರ ಅದಲ್ಲ. ಓರ್ವ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ, ದೆಹಲಿಒಂದು ಚುನಾವಣೆಯನ್ನು ಭಾರತ – ಪಾಕಿಸ್ತಾನ ಯುದ್ಧಕ್ಕೆ ಹೋಲಿಕೆ ಮಾಡ್ತಾರೆ. ಮತ್ತೋರ್ವ ಸಚಿವ ಅನುರಾಗ್ ಠಾಕೂರ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಎಂದು ನೆರೆದಿದ್ದ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಡ್ತಾರೆ. ಹಾಗಿದ್ರೆ ಈ ಹೇಳಿಕೆಗಳೆಲ್ಲವೂ ದೇಶದ್ರೋಹ ಅಥವಾ ಪ್ರಚೋದನೆ ರೀತಿ ಕಾಣಿಸುವುದಿಲ್ಲವೇ..? ಕೇವಲ ಮೂರನೇ ವ್ಯಕ್ತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕೇಸ್ ಬುಕ್ ಮಾಡುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮಾಡುತ್ತಿದ್ಯಾ ಅನ್ನೋ ಅನುಮಾನ ಕೂಡ ವ್ಯಕ್ತವಾಗ್ತಿದೆ.
ಜೆಎನ್‌ಯು ಸಂಶೋಧನಾ ವಿದ್ಯರ್ಥಿ ಶಾರ್ಜೀಲ್ ಇಮಾಮ್ ಹೇಳಿಕೆ ಪ್ರಚೋದನೆ ಮಾಡಿದ್ದಾರೆ ಎಂದು ಅರೆಸ್ಟ್ ಮಾಡುವ ಪೊಲೀಸರು ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮೇಲೆ ಯಾಕೆ ಪ್ರಕರಣ ದಾಖಲಿಸಿ ಬಂಧನ ಮಾಡುವ ತಾಕತ್ತು ತೋರಿಸುತ್ತಿಲ್ಲ ಎನ್ನುವ ಪ್ರಶ್ನೆ ಸಾಮಾನ್ಯ ನಾಗರಿಕರಲ್ಲಿ ಮನೆ ಮಾಡಿದೆ. ಈ ಪ್ರಕರಣದಲ್ಲಿ ಶಾರ್ಜೀಲ್ ಬೆಂಬಲಕ್ಕೆ ಯಾವುದೇ ರಾಜಕೀಯ ಪಕ್ಷವು ಬರುವುದಿಲ್ಲ. ಕಾರಣ ಎಂದರೆ ಆತ ಎಲ್ಲಾ ರಾಜಕೀಯ ಪಕ್ಷಗಳನ್ನೂ ಟೀಕಿಸಿದ್ದಾನೆ.
ಇದೆಲ್ಲವನ್ನೂ ನೋಡಿದಾಗ ಕೊನೆಯಲ್ಲಿ ಎದುರಾಗುವ ಪ್ರಶ್ನೆ ಅಂದ್ರೆ ದೇಶದ್ರೋಹ ಅಂದ್ರೇನು..? ಪ್ರಚೋದನೆ ಯಾವುದು..? ಬಿಜೆಪಿ ನಾಯಕರನ್ನು ಪ್ರಚೋದನೆಯಲ್ಲ, ಬೇರೆಯವರು ಮಾಡಿದ್ರೆ ಪ್ರಚೋದನೆ ಹೇಗಾಗುತ್ತೆ ಎನ್ನುವ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಕೇಂದ್ರ ಸರ್ಕಾರ ಧಮನಕಾರಿ ನೀತಿಯಿಂದ ಹತ್ತಿಕ್ಕುವ ಕೆಲಸ ಮಾಡ್ತಿದ್ಯಾ ಅನ್ನೋ ಸಣ್ಣ ಅನುಮಾನ ಸುಳಿದಾಡುತ್ತದೆ.