ಜನರಲ್ಲಿ ದೇಶಭಕ್ತಿಯನ್ನು ಉದ್ದೀಪಿಸುತ್ತಾ ಆರ್ಥಿಕ ಹಿಂಜರಿತದತ್ತ ದೇಶ ಸಾಗುತ್ತಿರುವುದನ್ನು ಮರೆಮಾಚಲು ಯತ್ನಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ನಿಜಕ್ಕೂ ಯುದ್ಧ ಮಾಡಬೇಕಿರುವುದು ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಎಂಬ ಮೂಲಭೂತ ಪ್ರಶ್ನೆ ಉದ್ಭವಿಸಿದೆ. 2019ರ ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರಮೋದಿ ಪರೋಕ್ಷವಾಗಿ ಪ್ರಸ್ತಾಪಿಸಿದ ಪಾಕಿಸ್ತಾನ ವಿರುದ್ಧದ ಯುದ್ದೋನ್ಮಾದದ ಮಾತುಗಳು ಈಗ ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮತ್ತೆ ಅನುರಣಿಸುತ್ತಿವೆ. ಅದಕ್ಕೆ ರಫಾಲ್ ಯುದ್ಧ ವಿಮಾನ ಖರೀದಿಸಿದ ಹುಮ್ಮಸ್ಸಿನ ಬಿಸಿಗಾಳಿಯನ್ನು ತುಂಬಿ ಮತ್ತಷ್ಟು ಉದ್ದೀಪಿಸುವ ವ್ಯರ್ಥಪ್ರಯತ್ನ ನಡೆದಿದೆ.
ಇವೆಲ್ಲದರ ನಡುವೆಯೂ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ನಮ್ಮದೇ ಕೇಂದ್ರೀಯ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಜಿಡಿಪಿ ಅಭಿವೃದ್ಧಿ ಮುನ್ನೋಟ ದರವನ್ನು ತೀವ್ರ ಪ್ರಮಾಣದಲ್ಲಿ ತಗ್ಗಿಸಿವೆ. ಈಗಷ್ಟೇ ನೊಬೆಲ್ ಪ್ರಶಸ್ತಿ ಪಡೆದಿರುವ ಭಾರತೀಯ ಸಂಜಾತ ಅಮೆರಿಕದ ಅಭಿಜಿತ್ ಬ್ಯಾನರ್ಜಿ ಭಾರತದ ಆರ್ಥಿಕ ಸ್ಥಿತಿ ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿರುವುದು ಗಮನಾರ್ಹ. ಈ ಎಲ್ಲಾ ಅನಪೇಕ್ಷಿತ ಆತಂಕಗಳನ್ನು ಮೋದಿ ಸರ್ಕಾರ ಅರಗಿಸಿಕೊಳ್ಳುವ ಮುನ್ನವೇ ಈಗಷ್ಟೇ ಪ್ರಕಟವಾಗಿರುವ ಜಾಗತಿಕ ಹಸಿವಿನ ಸೂಚ್ಯಂಕವು ಭಾರತದ ಹಸಿವಿನ ಹಸಿ ಹಸಿ ವಸ್ತುಸ್ಥಿತಿಯನ್ನು ಬಿಚ್ಚಿಟ್ಟಿದೆ.
ಪ್ರಕಟಿತ ಅಂಶಗಳು ಭಾರತದ ಸ್ಥಿತಿ ಎಷ್ಟು ದಯನೀಯವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿವೆ. ಯಾವ ದೇಶದ ಮೇಲೆ ಯುದ್ಧೋನ್ಮಾದದ ಮಾತುಗಳ ಮೂಲಕ ವಾಸ್ತವಿಕ ಸ್ಥಿತಿಯನ್ನು ಮರೆಮಾಚಲು ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆಯೋ ಆ ದೇಶಕ್ಕಿಂತ ಅರ್ಥಾತ್ ಪಾಕಿಸ್ಥಾನಕ್ಕಿಂತ ಕನಿಷ್ಠಮಟ್ಟಕ್ಕೆ ನಾವು ಕುಸಿದಿದ್ದೇವೆ. ಖಂಡ, ದೇಶ ಯಾವುದೇ ಇರಲಿ ಹಸಿವು ಮಾನವಕುಲಕ್ಕೆ ಕಳಂಕ. ಹಸಿವನ್ನು ನೀಗಿಸದ ದೇಶಕ್ಕೆ ಭವಿಷ್ಯವಿಲ್ಲ. ಹಸಿವನ್ನು ನೀಗಿಸದ ದೇಶ ಯುದ್ಧ ಗೆದ್ದರೂ, ಶ್ರೀಮಂತಿಕೆ ಮೆರೆದರೂ ಅದು ಹುಸಿತನದ್ದು. ಈಗ ಭಾರತದ ಹಸಿವಿನ ಸ್ಥಿತಿ ಅಷ್ಟು ಹೀನಾಯವಾಗಿದೆ.
ಈ ವರ್ಷದ ಜಾಗತಿಕ ಹಸಿವು ಸೂಚ್ಯಂಕದ (Global Hunger Index- ಜಿಹೆಚ್‌ಐ) ಪ್ರಕಾರ ಭಾರತವನ್ನು ‘ಗಂಭೀರ’ ಮಟ್ಟದ ಹಸಿವು ಹೊಂದಿರುವ ದೇಶವೆಂದು ವರ್ಗೀಕರಿಸಲಾಗಿದೆ. 2010 ರಲ್ಲಿ 95 ನೇ ಸ್ಥಾನದಿಂದ 2019 ರಲ್ಲಿ 102 ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ, ಪ್ರತಿವರ್ಷ ಸರಾಸರಿ ಹಸಿವಿನ ಸೂಚ್ಯಂಕದಲ್ಲಿ ಒಂದು ಶ್ರೇಣಿ ಕನಿಷ್ಠಮಟ್ಟಕ್ಕೆ ಇಳಿದಿದೆ. ಮೋದಿ ಸರ್ಕಾರ ಪ್ರಕಟಿಸುತ್ತಿರುವ ಮತ್ತು ಘೋಷಿಸಿಕೊಳ್ಳುತ್ತಿರುವ ಅಂಕಿ ಅಂಶಗಳ ಪ್ರಕಾರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಸಾರಾತ್ಮಕವಾಗಿ ಉನ್ನತಿ ಸಾಧಿಸಬೇಕಿತ್ತು. ಆದರೆ ಹಾಗಾಗಿಲ್ಲ. ಹಸಿವಿನ ತೀವ್ರ ಸಮಸ್ಯೆ ಇರುವ ದೇಶ ಆಫ್ರಿಕನ್ ಗಣರಾಜ್ಯವಾಗಿದ್ದು 117 ನೇ ಸ್ಥಾನದಲ್ಲಿದೆ. ಭಾರತಕ್ಕೂ ಅತಿ ತೀವ್ರ ಹಸಿವಿನ ಆಫ್ರಿಕನ್ ಗಣರಾಜ್ಯಕ್ಕೂ ಇರುವ ಅಂತರ ಕೇವಲ 15 ಶ್ರೇಣಿಗಳು ಮಾತ್ರ.
ಜಿಎಚ್ಐ ವಿಶ್ವಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯ ಮಟ್ಟವನ್ನು ಲೆಕ್ಕಾಚಾರ ಮಾಡುತ್ತದೆ. ಮಕ್ಕಳ ಅಪೌಷ್ಟಿಕತೆ, ಮಕ್ಕಳ ಕುಂಠಿತ, ಮಕ್ಕಳ ತೂಕಕೊರತೆ (ವಯಸ್ಸಿಗೆ ತೂಕ) ಮತ್ತು ಶಿಶು ಮರಣ ಈ ನಾಲ್ಕು ಸೂಚಕಗಳನ್ನಾಧರಿಸಿ ಆಯಾ ದೇಶಗಳ ಹಸಿವಿನ ಸೂಚ್ಯಂಕವನ್ನು ನಿರ್ಧರಿಸುತ್ತದೆ. ಸೂಚ್ಯಂಕದ ವ್ಯಾಪ್ತಿಯಲ್ಲಿರುವ 117 ದೇಶಗಳ ಪೈಕಿ 47 ದೇಶಗಳು ‘ಗಂಭೀರ’ ಮತ್ತು ‘ಆತಂಕಕಾರಿ’ ಹಸಿವಿನ ಮಟ್ಟದಲ್ಲಿವೆ ಮತ್ತು ಒಂದು ದೇಶದ ಸ್ಥಿತಿ ‘ತೀವ್ರ ಆತಂಕಕಾರಿಯಾಗಿದೆ’ ಎಂದು ಜಿಎಚ್ಐ ವಾರ್ಷಿಕ ವರದಿ ತಿಳಿಸಿದೆ.
ಭಾರತದ ಶ್ರೇಣಿ ಕುಸಿಯಲು ಕಾರಣವೇನು?
2010ರಲ್ಲಿ 95ನೇ ಶ್ರೇಣಿಯಲ್ಲಿದ್ದ ಭಾರತ ಈಗ 102ಕ್ಕೆ ಕುಸಿಯಲು ಕಾರಣ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆ ಬಗ್ಗೆ ವಹಿಸಿರುವ ದಿವ್ಯ ನಿರ್ಲಕ್ಷ್ಯ. ಜಿಎಚ್ಐ ಸೂಚ್ಯಂಕದ ವರದಿ ಪ್ರಕಾರ- ಹಸಿವಿನ ಬಗ್ಗೆ ಭಾರತದ ನೀರಸ ಕಾರ್ಯಕ್ಷಮತೆಯು ಮಕ್ಕಳ ಅಪೌಷ್ಟಿಕತೆ ತೀವ್ರವಾಗಿ ಹೆಚ್ಚಾಗಿರುವುದಕ್ಕೂ ನೇರವಾಗಿ ಸಂಬಂಧಿಸಿದೆ. ನೆರೆಯ ರಾಷ್ಟ್ರಗಳಾದ ನೇಪಾಳ (73 ನೇ ಸ್ಥಾನ), ಶ್ರೀಲಂಕಾ (66 ನೇ ಸ್ಥಾನ), ಬಾಂಗ್ಲಾದೇಶ (88 ನೇ ಸ್ಥಾನ), ಮ್ಯಾನ್ಮಾರ್ (69 ನೇ ಸ್ಥಾನ) ಮತ್ತು ಪಾಕಿಸ್ತಾನ 94 ನೇ ಸ್ಥಾನದಲ್ಲಿವೆ. ಆದರೂ ‘ಗಂಭೀರ’ ಹಸಿವಿನ ವಿಭಾಗದಲ್ಲಿರುವ ಈ ಎಲ್ಲಾ ದೇಶಗಳೂ ಭಾರತಕ್ಕಿಂತ ತನ್ನ ನಾಗರಿಕರಿಗೆ ಆಹಾರ ಒದಗಿಸುವಲ್ಲಿ ಉತ್ತಮಮಟ್ಟದಲ್ಲಿವೆ. ಚೀನಾ (25 ನೇ ಸ್ಥಾನ) ‘ಕಡಿಮೆ’ ತೀವ್ರತೆಯ ವರ್ಗಕ್ಕೆ ಸೇರಿದ್ದರೆ ಶ್ರೀಲಂಕಾವು ‘ಮಧ್ಯಮ’ ತೀವ್ರತೆಯ ವರ್ಗದಲ್ಲಿದೆ.
ಮತ್ತೊಂದು ಆಘಾತಕಾರಿ ಅಂಕಿ ಅಂಶವೆಂದರೆ, 6 ರಿಂದ 23 ತಿಂಗಳ ವಯಸ್ಸಿನ ಶಿಶುಗಳ ವಿಷಯಕ್ಕೆ ಬಂದಾಗ, ಭಾರತದಲ್ಲಿ ಕೇವಲ 9.6 ಪ್ರತಿಶತದಷ್ಟು ಮಕ್ಕಳಿಗೆ ಮಾತ್ರ “ಕನಿಷ್ಠ ಸ್ವೀಕಾರಾರ್ಹ ಆಹಾರ” ಲಭ್ಯವಾಗುತ್ತಿದೆ. ಅಂದರೆ ಭಾರತದಲ್ಲಿ ಶೇಕಡಾ 10 ಕ್ಕಿಂತ ಕಡಿಮೆ ಶಿಶುಗಳಿಗೆ ಮಾತ್ರ ಸರಿಯಾಗಿ ಆಹಾರವನ್ನು ನೀಡಲಾಗುತ್ತದೆ. ಉಳಿದ ಶೇ. 90ರಷ್ಟು ಮಕ್ಕಳಿಗೆ ಆ ಸೌಲಭ್ಯವಿಲ್ಲ. ಭಾರತದಲ್ಲಿ ಮಕ್ಕಳ ತೂಕದ ಪ್ರಮಾಣವು ಶೇಕಡಾ 20.8 ರಷ್ಟಿದೆ, ಇದು ಸೂಚ್ಯಂಕದ ಪ್ರಕಾರ, ಜಿಹೆಚ್ಐ ಅಧ್ಯಯನ ಮಾಡಿದ ಯಾವುದೇ ದೇಶದ ಅತ್ಯಧಿಕ ತೂಕದ ಕೊರತೆ ಪ್ರಮಾಣವಾಗಿದೆ. ಮಕ್ಕಳ ಸರಾಸರಿ ಎತ್ತರ ಕೊರತೆ ದರವು (ಸ್ಟಂಟಿಂಗ್) ಶೇ. 37.9 ರಷ್ಟಿದೆ. ಇದೂ ಸಹ ಅಧ್ಯಯನ ವ್ಯಾಪ್ತಿಗೆ ಒಳಪಟ್ಟ ದೇಶಗಳ ಪೈಕಿ ಅತಿ ಹೆಚ್ಚು.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಕಾರ್ಯಕ್ರಮದ ಬಗ್ಗೆಯೂ ಉಲ್ಲೇಖಿಸಿರುವ ವರದಿ ಹೊಸ ಶೌಚಾಲಯಗಳ ನಿರ್ಮಾಣದ ಹೊರತಾಗಿಯೂ ಬಯಲು ಮಲವಿಸರ್ಜನೆ ಮುಂದುವರೆದಿದೆ. ಇದು ಜನರ ಮುಖ್ಯವಾಗಿ ಮಕ್ಕಳ ಆರೋಗ್ಯವನ್ನು ಹೆಚ್ಚು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಿದೆ. “ಹೊಸ ಶೌಚಾಲಯಗಳು ಗರಿಷ್ಠ ಪ್ರಮಾಣದಲ್ಲಿ ನಿರ್ಮಾಣವಾಗಿದ್ದರೂ ಸಹ ಬಯಲು ಮಲವಿಸರ್ಜನೆ ನಿವಾರಿಸಲು ಸಾಧ್ಯವಾಗಿಲ್ಲ, ಈ ಪರಿಸ್ಥಿತಿಯು ಜನರ ಆರೋಗ್ಯಕ್ಕೆ ಧಕ್ಕೆ ತರುತ್ತದೆ, ಇದರ ಪರಿಣಾಮವಾಗಿ, ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವು ಕುಸಿಯುತ್ತಿರುವುದರಿಂದ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದೆ ”ಎಂದು ವರದಿ ಹೇಳಿದೆ. ಸಮಾಧಾನದ ಸಂಗತಿ ಎಂದರೆ- 5 ವರ್ಷದೊಳಗಿನ ಮರಣ ಪ್ರಮಾಣ, ಮಕ್ಕಳ ಬೆಳವಣಿಗೆ ಕುಂಠಿತ ಮತ್ತು ಆಹಾರದ ಕೊರತೆಯಿಂದಾಗಿ ಅಪೌಷ್ಟಿಕತೆಯ ಹರಡುವಿಕೆ ಮುಂತಾದ ಇತರ ಸೂಚಕಗಳಲ್ಲಿ ದೇಶವು ಕೊಂಚ ಸುಧಾರಣೆ ಕಂಡಿದೆ.
ಏನಿದು ಹಸಿವಿನ ಸೂಚ್ಯಂಕ?
ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು (ಐಎಫ್‌ಪಿಆರ್‌ಐ) ಹಸಿವು ಸೂಚ್ಯಂಕವನ್ನು ರೂಪಿಸಿದ್ದು, ಜಾಗತಿಕ ಹಸಿವಿನ ವಿರುದ್ಧ ಹೋರಾಟಕ್ಕೆ ನೆರವು ನೀಡುತ್ತಿದೆ. ಐಎಫ್‌ಪಿಆರ್‌ಐ ತನ್ನ ಹಸಿವು ಸೂಚ್ಯಂಕ ಕುರಿತಂತೆ ವೆಬ್ ಸೈಟ್ ನಲ್ಲಿ ಹೀಗೆ ಹೇಳಿಕೊಂಡಿದೆ: “ಜಾಗತಿಕ ಹಸಿವು ಸೂಚ್ಯಂಕ (ಜಿಹೆಚ್‌ಐ) ಎನ್ನುವುದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರಗಳ ಮಟ್ಟದಲ್ಲಿ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯಲು ಮತ್ತು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಸಾಧನವಾಗಿದೆ. ಹಸಿವನ್ನು ಎದುರಿಸುವಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ಪ್ರತಿವರ್ಷ ಜಿಹೆಚ್‌ಐ ಶ್ರೇಣಿಗಳ ಪ್ರಗತಿ ಅಥವಾ ಅದರ ಕೊರತೆಯನ್ನು ನಿರ್ಣಯಿಸಲು ಲೆಕ್ಕಾಚಾರ ಮಾಡುತ್ತದೆ.
ಹಸಿವಿನ ವಿರುದ್ಧದ ಹೋರಾಟದ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆಯನ್ನು ಮೂಡಿಸಲು ಜಿಹೆಚ್‌ಐ ವಿನ್ಯಾಸಗೊಳಿಸಲಾಗಿದೆ. ಈ ಕುರಿತಾಗಿ ಸಮಗ್ರ ಅಧ್ಯಯನ ಮಾಡಿ ತಯಾರಿಸುವ ಈ ವರದಿಯು ವಿಶ್ವಾದ್ಯಂತ ಹಸಿವನ್ನು ಕೊನೆಗೊಳಿಸಲು ಮೀಸಲಾಗಿರುವ ಬದ್ಧತೆ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ಡಿಜಿಗಳು) – ಗುರಿ 2 ಸೇರಿದಂತೆ, ಹಸಿವನ್ನು ಕೊನೆಗೊಳಿಸುವುದು, ಆಹಾರ ಸುರಕ್ಷತೆ ಮತ್ತು ಸುಧಾರಿತ ಪೋಷಣೆಯನ್ನು ಸಾಧಿಸುವುದು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು 2030 ರ ವೇಳೆಗೆ ಸಾಧಿಸಬೇಕು. ‘ಕಾಂಪ್ಯಾಕ್ಟ್ 2025’ ರಂತಹ ಇತರ ಜಾಗತಿಕ ಉಪಕ್ರಮಗಳು 2025ರ ವೇಳೆಗೆ ವಿಶ್ವದಾದ್ಯಂತ ಹಸಿವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿವೆ. ಆದರೂ ಹೆಚ್ಚಿನ ಶ್ರಮ ಮತ್ತು ಸಂಪನ್ಮೂಲಗಳ ಕ್ರೋಢೀಕರಣವಿಲ್ಲದೇ ಇದನ್ನು ಸಾಧಿಸಲಾಗುವುದಿಲ್ಲ. “ಅಳೆಯುವುದು ಮುಗಿಯುತ್ತದೆ” ಎಂಬ ಗಾದೆಗೆ ಸತ್ಯವಿದೆ ಎಂದು ನಾವು ನಂಬುತ್ತೇವೆ; ಹೀಗಾಗಿ, ಜಾಗತಿಕ ಹಸಿವನ್ನು ತ್ವರಿತವಾಗಿ ಮತ್ತು ಆಮೂಲಾಗ್ರವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಅಳೆಯಲು ಉದ್ದೇಶಿಸಿದ್ದೇವೆ”.