ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರೈಸ್ತರ ಮೇಲೆ 1400ಕ್ಕೂ ಹೆಚ್ಚು ದೌರ್ಜನ್ಯದ ಘಟನೆಗಳು ನಡೆದಿವೆ ಎಂದು ವಾಷಿಂಗ್ಟನ್ ಮೂಲದ “ಕ್ರಿಶ್ಚಿಯನ್ ಪೋಸ್ಟ್” ಪತ್ರಿಕೆ ವರದಿ ಮಾಡಿದೆ. ಪತ್ರಿಕೆಯು ಜನವರಿ 14ರಂದು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿರುವ ವರದಿಯಲ್ಲಿ ವರದಿಗಾರ ಸ್ಯಾಮ್ಯುವೆಲ್ ಸ್ಮಿತ್ ಈ ಕುರಿತ ವಿವರಗಳನ್ನು ನೀಡಿದ್ದಾರೆ.
ಮಾನವಹಕ್ಕುಗಳ ಕುರಿತ ‘ಎಡಿಎಫ್ ಇಂಟರ್ನ್ಯಾಷನಲ್’ ಅಂಗವಾಗಿರುವ ‘ಎಡಿಎಫ್ ಇಂಡಿಯಾ’, ಈ ಅಂಕಿಅಂಶಗಳನ್ನು ನೀಡಿದೆ. ‘ಇಂಟರ್ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್’ (ಐಸಿಸಿ) ಎಂಬ ದೌರ್ಜನ್ಯ ಕುರಿತ ಕಣ್ಗಾವಲು ಸಂಸ್ಥೆಯು ವಾಷಿಂಗ್ಟನ್‌ನ ಕ್ಯಾಪಿಟಲ್ ಹಿಲ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಯುಎಸ್‌ಎಯ ಕಾಂಗ್ರೆಷನಲ್ ಕಮಿಟಿಯ ಅಧಿಕಾರಿಗಳಿಗೆ ಮಾನವಹಕ್ಕುಗಳ ವಕೀಲರು ಭಾರತದಲ್ಲಿ ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಕಿರುಕುಳಗಳ ವಿವರ ನೀಡಿದರು.
ವಾಷಿಂಗ್ಟನ್ ಹೊರವಲಯದಲ್ಲಿ ನೆಲೆಯನ್ನು ಹೊಂದಿರುವ ಐಸಿಸಿಯು ಹಿಂದೂತ್ವವಾದಿಗಳಿಂದ ಕ್ರೈಸ್ತರ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ಕೋಮು ಹಿಂಸಾಚಾರ, ಬಲವಂತದ ಮತಾಂತರದ ಆರೋಪ ಇತ್ಯಾದಿಗಳ ಕುರಿತು ವರದಿಗಳನ್ನು ಸಂಗ್ರಹಿಸುತ್ತದೆ.
“ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಮಾಡುತ್ತಿರುವ ಪ್ರಚೋದನಕಾರಿ ಭಾಷಣಗಳ ಪರಿಣಾಮವಾಗಿ ಭಾರತದಲ್ಲಿ ಇಂತಹಾ ಪ್ರಕರಣಗಳು ನಡೆಯುತ್ತಿದ್ದು, ಈಗ ಸಾಮಾನ್ಯ ಎಂಬಂತಾಗಿದೆ” ಎಂದು ಐಸಿಸಿಯ ಅಡ್ವೊಕೆಸಿ ಡೈರೆಕ್ಟರ್ ಮಥಾಯಸ್ ಪರ್ಟುಲಾ ಸಭೆಗೆ ತಿಳಿಸಿದರು. “ಧಾರ್ಮಿಕ ಸ್ವಾತಂತ್ರ್ಯ ಮೊಟಕುಗೊಂಡು, ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರಿಗೆ ಕಿರುಕುಳದಲ್ಲಿ ಹೆಚ್ಚಳವಾಗುತ್ತಿರುವ ಸ್ಪಷ್ಟ ಸೂಚನೆಗಳು ಕಂಡುಬರುತ್ತವೆ” ಎಂದವರು ಹೇಳಿದ್ದಾರೆ.
‘ಎಡಿಎಫ್ ಇಂಟರ್ನ್ಯಾಷನಲ್’ನ ಜಾಗತಿಕ ಧಾರ್ಮಿಕ ಸ್ವಾತಂತ್ರ್ಯ ಕುರಿತ ವಕೀಲ ಶಾನ್ ನೆಲ್ಸನ್ ಮೋದಿ ಆಡಳಿತದ ಆರಂಭದಿಂದ ಕಳೆದ ಆಗಸ್ಟ್ ತಿಂಗಳ ತನಕದ ಆತಂಕಕಾರಿ ಅಂಕಿಅಂಶಗಳನ್ನು ಮುಂದಿಟ್ಟರು. ಭಾರತದ 16 ರಾಜ್ಯಗಳಲ್ಲಿ ಕ್ರೈಸ್ತರ ಮೇಲೆ ನಿಯಮಿತವಾಗಿ ದಾಳಿಗಳು ನಡೆದಿವೆ ಎಂದು ಹೇಳಿರುವ ಅವರು, ಇದು ಕೇವಲ ಕ್ರೈಸ್ತರ ಮೇಲಿನ ದೌರ್ಜನ್ಯದ ಅಂಕಿಅಂಶಗಳಾಗಿದ್ದು, ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರ ಮೇಲೆ ಬೇರೆಯೇ ಮಟ್ಟದ ದೌರ್ಜನ್ಯಗಳು ನಡೆಯುತ್ತಿವೆ ಎಂದಿದ್ದಾರೆ.
2018ಕ್ಕೆ ಹೋಲಿಸಿದರೆ, 2019ರಲ್ಲಿ ಪ್ರತೀ ತಿಂಗಳೂ ಕ್ರೈಸ್ತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿರುವ ಅವರು ಉದಾಹರಣೆ ನೀಡಿ, 2018ರ ಆಗಸ್ಟ್‌ನಲ್ಲಿ 14 ಪ್ರಕರಣಗಳು ನಡೆದಿದ್ದರೆ, 2019ರ ಆಗಸ್ಟ್‌ನಲ್ಲಿ 33 ಆಗಿದೆ ಮತ್ತು ಪ್ರತೀ ತಿಂಗಳೂ ಇದೇ ಮುಂದುವರಿದಿದೆ ಎಂದು ಹೇಳಿದ್ದಾರೆ. MapViolence.In ಎಂಬ ಡಾಟಾಬೇಸ್‌ನಲ್ಲಿ ವಿವರಗಳು ಲಭ್ಯವಿವೆ. ಇದರಲ್ಲಿ 2019ರ ಆಗಸ್ಟ್ ತನಕದ ಮಾಹಿತಿ ಮಾತ್ರ ನೀಡಲಾಗಿದ್ದು, ಆ ವರ್ಷದಲ್ಲಿ ಆ ತನಕ 219 ದಾಳಿಗಳು ನಡೆದಿದ್ದವು. 2018ರಲ್ಲಿ ಅದೇ ಅವಧಿಯಲ್ಲಿ 156 ದಾಳಿಗಳು ನಡೆದಿದ್ದವು. ಡಾಟಾಬೇಸ್‌ನಲ್ಲಿ 2014ರಿಂದ 2019ರ ಆಗಸ್ಟ್ ತನಕ 1,457 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಧರ್ಮಗುರುಗಳ, ಅಥವಾ ಭಕ್ತರ ಮೇಲೆ ಹಲ್ಲೆ, ಪ್ರಾರ್ಥನಾ ಸ್ಥಳಗಳನ್ನು ಅಪವಿತ್ರಗೊಳಿಸುವುದು ಅಥವಾ ಧ್ವಂಸ, ಪ್ರಾರ್ಥನಾ ಸ್ಥಳಗಳಿಗೆ ಅನುಮತಿ ನಿರಾಕರಿಸಿ ತೆರವುಗೊಳಿಸಿರುವುದು ಇತ್ಯಾದಿ ಸೇರಿವೆ. 2018ರಲ್ಲಿ ಹಿಂದೂ ಮೂಲಭೂತವಾದಿಗಳು100 ಚರ್ಚ್‌ಗಳನ್ನು, ಅವುಗಳ ಮೇಲೆ ದಾಳಿ ನಡೆಸಿ, ಅಥವಾ ಪೊಲೀಸರಿಗೆ ದೂರು ನೀಡಿ ಮುಚ್ಚಿಸಿದ್ದರು.
ಐಸಿಸಿ 2019ರಲ್ಲಿ 10 ರಾಜ್ಯಗಳ 1000ಕ್ಕೂ ಹೆಚ್ಚು ಕ್ರೈಸ್ತರ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಸುರಕ್ಷಿತತೆಯ ಆತಂಕಕ್ಕೆ ಅನುಗುಣವಾಗಿ ಒಂದರಿಂದ ಐದರ ತನಕ ಅಂಕಗಳನ್ನು ನೀಡುವಂತೆ ಹೇಳಲಾಗಿತ್ತು. ಒಂದು ಎಂದರೆ ಕಡಿಮೆ ಆತಂಕ; ಐದು ಎಂದರೆ ಅತ್ಯಂತ ಹೆಚ್ಚು ಆತಂಕ. ಅದರಲ್ಲಿ 68.8 ಶೇಕಡಾ ಮಂದಿ ಐದಂಕ ನೀಡಿದ್ದರು. 13.55 ಮಂದಿ ನಾಲ್ಕಂಕ ನೀಡಿದ್ದರು. ಅಂದರೆ, ಒಟ್ಟಿನಲ್ಲಿ 82.14 ಶೇಕಡಾ ಕ್ರೈಸ್ತರು ಮೋದಿ ಸರಕಾರದಲ್ಲಿ ತಮ್ಮ ಸುರಕ್ಷಿತತೆಯ ಕುರಿತು ಗಂಭೀರ ಆತಂಕ ಹೊಂದಿದ್ದಾರೆ. ಜೊತೆ ‘ಓಪನ್ ಡೋರ್ ಯುಎಸ್‌ಎ- ವರ್ಲ್ಡ್ ವಾಚ್ ಲಿಸ್ಟ್ 2019’ರಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯದ ವಿಷಯದಲ್ಲಿ ಭಾತವು ಜಗತ್ತಿನಲ್ಲಿಯೇ 10ನೇ ಕೆಟ್ಟ ದೇಶವಾಗಿ ಸ್ಥಾನ ಪಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಕನಕಪುರದ ‘ಕಪಾಲಿ ಬೆಟ್ಟ’ದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಯ ಕುರಿತು ಸಂಘಪರಿವಾರ ಎಬ್ಬಿಸಿರುವ ವಿವಾದ, ಅಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಪ್ರಚೋದನಕಾರಿ ಭಾಷಣ, ಆರೋಗ್ಯ, ಶಿಕ್ಷಣ ಮತ್ತು ಸಾಹಿತ್ಯ-ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಕ್ರೈಸ್ತರು ನೀಡಿದ ಅಪಾರ ಕೊಡುಗೆಗಳ ಹೊರತಾಗಿಯೂ, ಭಾರತದಲ್ಲಿ ಕ್ರೈಸ್ತರು, ಏಸು ಮತ್ತು ಮೇರಿ ಮಾತೆ ಏನು ಮಾಡಿದ್ದಾರೆ ಎಂದು ಹಿಂದೂ ಮೂಲಭೂತವಾದಿಗಳು ಪ್ರಶ್ನಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ವರದಿಯನ್ನು ನೋಡಬಹುದು.