ದೆಹಲಿಯ ಪ್ರಸಿದ್ಧ ಶಾಪಿಂಗ್ ತಾಣಗಳಲ್ಲಿ ಒಂದಾದ ಕನಾಟ್ ಪ್ಲೇಸ್ ನಲ್ಲಿ ನಡೆಯುತ್ತಿದ್ದ ಆ ಯುವಕನ ಫೋನಿನ ಛಾರ್ಜ್ ಮುಗಿದು ಹೋಗಿತ್ತು. ಸನಿಹದಲ್ಲೇ ಪತ್ತೆಯಾದ ಉಚಿತ ಯು.ಎಸ್.ಬಿ. ಪವರ್ ಛಾರ್ಜಿಂಗ್ ಸೌಲಭ್ಯ ಬಳಸಿ ಛಾರ್ಜ್ ಮಾಡಿಕೊಂಡ. ತುಸು ಹೊತ್ತಿನಲ್ಲೇ ಆತನ ಬಂದ ಮೆಸೇಜ್ ನೋಡಿ ಗಾಬರಿಯಾದ. ಆತನ ಬ್ಯಾಂಕ್ ಖಾತೆಯಿಂದ 50 ಸಾವಿರ ರುಪಾಯಿಯನ್ನು ತೆಗೆಯಲಾಗಿತ್ತು. ಆದರೆ ಅಂತಹ ಯಾವುದೇ ವ್ಯವಹಾರವನ್ನು ಆತ ಮಾಡಿರಲಿಲ್ಲ.
ಆಕೆ ವಿದ್ಯಾರ್ಥಿನಿ. ದೆಹಲಿಯ ಸೌತ್ ಎಕ್ಸ್ ಶಾಪಿಂಗ್ ಪ್ರದೇಶದಲ್ಲಿ ಇದೇ ರೀತಿ ಮೊಬೈಲ್ ಛಾರ್ಜ್ ಮಾಡಿಕೊಂಡಳು. ಕೆಲ ಹೊತ್ತಿನಲ್ಲಿ ಆಕೆಯ ಸಾಮಾಜಿಕ ಜಾಲತಾಣ ಅಕೌಂಟಿನಿಂದ ಅಶ್ಲೀಲ ವಿಡಿಯೋವೊಂದು ಆಕೆಯ ಹೆಸರಿನಲ್ಲಿ ಆಪ್ಲೋಡ್ ಆಗಿತ್ತು. ವಾಸ್ತವದಲ್ಲಿ ಆಕೆ ಅಂತಹ ಯಾವ ವಿಡಿಯೋವನ್ನೂ ಅಪ್ಲೋಡ್ ಮಾಡಿರಲಿಲ್ಲ.
ಸಾರ್ವಜನಿಕ ಸ್ಥಳಗಳ ಉಚಿತ ಛಾರ್ಜಿಂಗ್ ಸೌಲಭ್ಯ ಬಳಸಿದ ಇವರಿಬ್ಬರ ಫೋನುಗಳನ್ನು ಹ್ಯಾಕ್ ಮಾಡಲಾಗಿದೆ ಎಂದಿದೆ ದೆಹಲಿ ಪೊಲೀಸರ ಸೈಬರ್ ಅಪರಾಧ ನಿಗ್ರಹ ವಿಭಾಗ.
ಸಾರ್ವಜನಿಕ ಸ್ಥಳಗಳಲ್ಲಿನ ಯು.ಎಸ್.ಬಿ. ಪವರ್ ಛಾರ್ಜಿಂಗ್ ಉಚಿತ ಸೌಲಭ್ಯದ ಉಪಯೋಗ- ದುರುಪಯೋಗದ ಮೇಲೆ ಯಾರೂ ನಿಗಾ ಇಟ್ಟಿರುವುದಿಲ್ಲ. ಹ್ಯಾಕ್ ಮಾಡುವ ಪಾತಕಿಗಳು ಈ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಛಾರ್ಜ್ ಮಾಡಲು ಅಮಾಯಕರು ಇಡುವ ಮೊಬೈಲ್ ಫೋನುಗಳಿಂದ ಅವುಗಳಲ್ಲಿನ ಮಾಹಿತಿಯನ್ನು (ಡೇಟಾ) ಕದಿಯುತ್ತಾರೆ. ಯು.ಎಸ್.ಬಿ. ಪೋರ್ಟ್ ಗಳಲ್ಲಿ ಮಾಹಿತಿ ಕದಿಯುವ ‘ಚಿಪ್’ ಗಳನ್ನು ಅಡಗಿಸಿಡುತ್ತಾರೆ. ಯು.ಎಸ್.ಬಿ. ಕಾರ್ಡ್ ಗಳು ಸಾಮಾನ್ಯ ಛಾರ್ಜರ್ ಗಳಂತಲ್ಲ. ಡೇಟಾವನ್ನು ಫೋನಿನಿಂದ ಫೋನಿಗೆ, ಇಲ್ಲವೇ ಫೋನಿನಿಂದ ಕಂಪ್ಯೂಟರಿಗೆ, ಕಂಪ್ಯೂಟರಿಂದ ಫೋನಿಗೆ ವರ್ಗಾಯಿಸಲೂ ಯು.ಎಸ್.ಬಿ.ಕಾರ್ಡ್ ಗಳ ಬಳಕೆಯಾಗುತ್ತದೆ ಎಂಬುದನ್ನು ಗಮನಿಸಬೇಕು ಎನ್ನುತ್ತಾರೆ ದೆಹಲಿ ಪೊಲೀಸರು.
ಮೇಲ್ದರ್ಜೆಯ ಶಾಪಿಂಗ್ ತಾಣಗಳು ಮತ್ತು ವಿಮಾನನಿಲ್ದಾಣಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಸೈಬರ್ ಮಾಹಿತಿ ಚೋರರು ಸಕ್ರಿಯವಾಗಿರುತ್ತಾರೆ. ಮೊಬೈಲಿನೊಳಗಿನ ಬ್ಯಾಂಕಿಂಗ್ ಮತ್ತು ಇತರೆ ಸೂಕ್ಷ್ಮ ಮಾಹಿತಿಗಳನ್ನು ಕದಿಯುತ್ತಾರೆ. ಇವರು ಪೋರ್ಟ್ ಗಳಲ್ಲಿ ಅಡಗಿಸಿಡುವ ಚೋರ ಸಾಧನವು ಪ್ರತಿ ಐದು ಸೆಕೆಂಡುಗಳಿಗೆ ಒಮ್ಮೆ ಫೋನಿನ ಸ್ಕ್ರೀನ್ ಶಾಟ್ ಗಳನ್ನು ತೆಗೆದು ರವಾನಿಸುತ್ತದೆ. ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಮತ್ತು ಹೆಣ್ಣುಮಕ್ಕಳಿಗೆ ಕಿರುಕುಳ ನೀಡಲು ಹಾಗೂ ಬ್ಲ್ಯಾಕ್ ಮೇಲ್ ಮಾಡಲು ಈ ಮಾಹಿತಿಯನ್ನು ಅವರು ಬಳಸುತ್ತಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ನಿಮ್ಮ ಮಾಮೂಲು ಮೊಬೈಲ್ ಛಾರ್ಜರ್ ಜೊತೆಗೆ ಒಯ್ಯಿರಿ. ಗೋಡೆಯಲ್ಲಿನ ಪ್ಲಗ್ ಗಳಿಗೆ ಸಿಕ್ಕಿಸಿ ಛಾರ್ಜ್ ಮಾಡಿರಿ. ಇಲ್ಲವೇ ಪವರ್ ಬ್ಯಾಂಕ್ ಬಳಸಿ. ಯು.ಎಸ್.ಬಿ. ಪೋರ್ಟ್ ಕೇಬಲ್ ಗಳನ್ನು ಬಳಸಬೇಡಿ ಎಂಬುದು ಅವರ ಕಿವಿಮಾತು.
ಜ್ಯೂಸ್ ಜಾಕಿಂಗ್ ಎಂದು ಕರೆಯಲಾಗುವ ಈ ಸೈಬರ್ ಚೌರ್ಯ ಕೇವಲ ದೆಹಲಿಗೆ ಸೀಮಿತವಲ್ಲ. ವಿಶ್ವದ ಬಹುತೇಕ ದೊಡ್ಡ ನಗರಗಳಿಂದ ಇಂತಹ ಕಳ್ಳತನಗಳು ವರದಿಯಾಗಿವೆ. ಬೆಂಗಳೂರು ಕೂಡ ಈ ಮಾತಿಗೆ ಹೊರತಲ್ಲ.