ಗ್ರಾಮ ಪಂಚಾಯಿತಿಯಿಂದ ಪ್ಲಾಸ್ಟಿಕ್ ಮುಕ್ತ ಆಂದೋಲನ: ಹಳೇ ಬಟ್ಟೆಯಿಂದ ಕೈ ಚೀಲ ತಯಾರಿಸಿ ಮಾರಾಟ
ಎಲ್ಲೆಡೆ ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಭಾಷಣಗಳು, ಬ್ಯಾನರ್ ಗಳು, ಘೋಷಣೆಗಳನ್ನು ಕೇಳುತ್ತಿರುತ್ತೇವೆ. ಆದರೆ ಈ ಗ್ರಾಮದಲ್ಲಿ ಸದ್ದಿಲ್ಲದೆ ಎರಡು ತಿಂಗಳಿನಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ತಯಾರಿ ನಡೆದಿದೆ. ಇದು ಗದಗ್ ಜಿಲ್ಲೆಯ ಅಬ್ಬಿಗೇರಿ ಗ್ರಾಮ. ಎಲ್ಲರಂತೆ ಇವರೂ ಘೋಷಣೆ ಮಾಡಿದರು, ಜನರಿಗೆ ತಿಳಿವಳಿಕೆ ಮೂಡಿಸಿದರು. ಆದರೂ ಪ್ಲಾಸ್ಟಿಕ್ ಹಾವಳಿ ನಿಲ್ಲಲಿಲ್ಲ. ಗ್ರಾಮ ಪಂಚಾಯಿತಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದವರೆಲ್ಲ ಸಭೆ ಸೇರಿಸಿ ಒಂದು ತೀರ್ಮಾನಕ್ಕೆ ಬಂದರು.
ಏನದು ತೀರ್ಮಾನ?
ಗ್ರಾಮದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಹಳೆಯ ಹಾಗೂ ನಿರುಪಯುಕ್ತ ಬಟ್ಟೆಗಳನ್ನು ಕಳೆದ ಎರಡು ತಿಂಗಳಿನಿಂದ ಸಂಗ್ರಹಿಸಿದರು. ನಂತರ ಆ ಬಟ್ಟೆಗಳನ್ನು ಗ್ರಾಮದ ಬಣ್ಣ ಹಾಕುವವರಿಗೆ ನೀಡಲಾಯಿತು. ಅಕ್ಟೋಬರ್ ತಿಂಗಳಿನಲ್ಲಿ 10, 600 ಚೀಲಗಳು ತಯಾರಾದವು. ಪ್ರತಿ ಚೀಲಗಳ ಮೇಲೆ ‘ಪ್ಲಾಸ್ಟಿಕ್ ನಿಷೇಧಿಸಿ ಜೀವ ಸಂಕುಲ ಉಳಿಸಿ’ ಎಂಬ ಘೋಷವಾಕ್ಯವಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮದ ನವ ಚಿಂತನೆಗೆ ಸುತ್ತಮುತ್ತಲಿನ ಗ್ರಾಮದ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಹ ತಮ್ಮ ಟ್ವೀಟರ್ ಖಾತೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಹೇಗೆ ಮಾಡಿದ್ದು?
ಪ್ರತಿ ಮನೆಯಿಂದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ ಅವುಗಳನ್ನು ಸ್ವಚ್ಛವಾಗಿ ತೊಳೆದು ನಂತರ ಅವುಗಳಿಗೆ ಬಣ್ಣ ಹಾಕಲಾಗುತ್ತದೆ. ಬಟ್ಟೆಗಳನ್ನು ಒಣಗಿಸಿ ಅವುಗಳ ಮೇಲೆ ಅಕ್ಷರ ಹಾಗೂ ಚಿಹ್ನೆಗಳನ್ನು ಮೂಡಿಸಿ ಒಣಗಿಸಲಾಗುತ್ತದೆ. ನಂತರ ಬಟ್ಟೆಗಳನ್ನು ಬೇಕಾದ ಆಕಾರದಲ್ಲಿ ಚೀಲ ರೂಪದಲ್ಲಿ ಹೊಲೆಯಲಾಗುತ್ತದೆ.
2 ರೂಪಾಯಿಗೊಂದು ಕೈ ಚೀಲ
ಬಟ್ಟೆ ಬಣ್ಣ ಹಾಕಿದವರಿಗೆ ಹಾಗೂ ಹೊಲೆಯುವವರಿಗೆ ತಗಲುವ ವೆಚ್ಚವನ್ನು ಸರಿ ತೂಗಿಸಲು ಹಾಗೂ ಪ್ರತಿ ಅಂಗಡಿಗಳಲ್ಲಿ ಹಾಗೂ ತರಕಾರಿ ಗೂಡಂಗಡಿಗಳಲ್ಲಿ ಮಾರಾಟ ಮಾಡಲು ರೂ. 2 ಅನ್ನು ನಿಗದಿ ಮಾಡಲಾಗಿದೆ. ಎಲ್ಲ ಅಂಗಡಿಗಳಲ್ಲಿ ಬಟ್ಟೆ ಚೀಲಗಳನ್ನು ಇಟ್ಟು, ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲಾಗಿದೆ.
ಈ ವಿನೂತನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವದ ದಿನದಂದು ಆರಂಭಿಸಲಾಗಿದ್ದು, ನಂತರ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಚೀಲಗಳನ್ನೇ ಬಳಸುತ್ತಿದ್ದಾರೆ. ಇವರನ್ನು ನೋಡಿ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಇದೇ ರೀತಿ ಪ್ಲಾಸ್ಟಿಕ್ ಆಂದೋಲನ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂಬುದು ಸಂತಸದ ಸಂಗತಿ.
ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕಳಕಪ್ಪ ಬಿಲ್ಲ ಅವರ ಪ್ರಕಾರ, “ನಾವು ಪ್ಲಾಸ್ಟಿಕ್ ಮುಕ್ತ ವೆಂದರೂ ಅದು ಅಷ್ಟು ಸುಲಭವಲ್ಲ ಎಂದು ಗೊತ್ತಿತ್ತು. ಅದಕ್ಕೆಂದೇ ಸಭೆ ನಡೆಸಿ ಮಹಿಳಾ ಒಕ್ಕೂಟದ ಸಹಾಯದಿಂದ ಹಾಗೂ ಮುಖ್ಯವಾಗಿ ಗ್ರಾಮಸ್ಥರ ಸಹಕಾರದಿಂದ ಇಂದು ಅಬ್ಬಿಗೇರಿ ಪ್ಲಾಸ್ಟಿಕ್ ಮುಕ್ತವಾಗಿದೆ, ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಬಳಸಿದರೆ ಪರಿಸರಕ್ಕೂ ಅನುಕೂಲ ಹಾಗೂ ಉತ್ತಮ ಆರೋಗ್ಯವೂ ಲಭಿಸುತ್ತದೆ”.
ಸಿಕಂದರ ಅರಿ, ಬರಹಗಾರರು ಹಾಗೂ ಪತ್ರಕರ್ತರ ಪ್ರಕಾರ, “ನಾವೂ ಈಗಲೇ ಪ್ಲಾಸ್ಟಿಕ್ ಮುಕ್ತ ಮಾಡುವುದು ಎಂದರೆ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯನ್ನು ಕೊಟ್ಟಂತೆ. ಈಗಾಗಲೇ ಭೂಮಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತಹತಹಿಸುತ್ತಿದ್ದು, ಇನ್ನಾದರೂ ನಾವು ಆಂದೋಲನ ಮಾಡಲೇ ಬೇಕಿದೆ. ಈ ನಿಟ್ಟಿನಲ್ಲಿ ಅಬ್ಬಿಗೇರಿ ಗ್ರಾಮ ಪಂಚಾಯಿತಿ ಹಾಗೂ ಅಶ್ವಿನಿ ಮಹಿಳಾಕೂಟದ ಎಲ್ಲರೂ ಅಭಿನಂದನಾರ್ಹರು.
ಗ್ರಾಮ ಪಂಚಾಯಿತಿಯ ಪಿಡಿಓ ಶಿವನಗೌಡ ಮೆಣಸಗಿ ಹೇಳಿದ್ದು ಹೀಗೆ, “ನಮ್ಮ ಈ ಪ್ಲಾಸ್ಟಿಕ್ ಮುಕ್ತದ ನೂತನ ಆಂದೋಲನ ಬಹು ಮೆಚ್ಚುಗೆ ಪಡೆದಿದೆ. ನಮ್ಮ ಈ ಆಂದೋಲನ ನಿರಂತರವಾಗಿರಲಿದೆ. ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದ ಅವಶ್ಯಕತೆಯಿದೆ. ಎಲ್ಲರ ಸಹಕಾರದಿಂದ ನಮ್ಮ ಕಾರ್ಯ ಈಡೆರಿದೆ. ನಮ್ಮ ಗ್ರಾಮಕ್ಕೆ ಇನ್ನು ಪ್ಲಾಸ್ಟಿಕ್ ಕಾಲಿಡಬಾರದು ಹಾಗೂ ಇದು ಎಲ್ಲರಿಗೂ ಮಾದರಿಯಾಗಬೇಕು ಎಂಬುದೇ ನಮ್ಮ ಸದಿಚ್ಛೆ”.
ಮುಖ್ಯಮಂತ್ರಿಗಳು ಏನು ಹೇಳಿದರು?
ಟ್ವಿಟರ್ ನಲ್ಲಿ ಮುಖ್ಯಮಂತ್ರಿಗಳು ಹೇಳಿದ್ದು ಹೀಗೆ:
“ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಪ್ಲಾಸ್ಟಿಕ್ ಮುಕ್ತ ಭಾರತದ ಕನಸು ಮಾಡುವ ನಿಟ್ಟಿನಲ್ಲಿ ಅಬ್ಬಿಗೆರೆ ಗ್ರಾಮ ಪಂಚಾಯಿತಿ ರೂಪಿಸಿರುವ ಯೋಜನೆ ಶ್ಲಾಘನೀಯ. ಹಳೇ ಬಟ್ಟೆಯಿಂದ ಹೊಸ ಕೈಚೀಲ ತಯಾರಿಸಿ, ಕಡಿಮೆ ದರದಲ್ಲಿ ಪ್ರತಿ ಮನೆಗಳಿಗೆ ತಲುಪಿಸುವ ಪ್ರಯತ್ನ ಅನುಕರಣೀಯ.
ಸುತ್ತಮುತ್ತಲಿನ ಗ್ರಾಮದ ಜನರಿಂದ ಅಭಿನಂದನೆ:
ಪ್ಲಾಸ್ಟಿಕ್ ಮುಕ್ತ ನೂತನ ಆಂದೋಲನದ ಯಶಸ್ಸಿಗೆ ಸುತ್ತಮುತ್ತಲಿನ ಗ್ರಾಮದ ಜನರು ಅಭಿನಂದಿಸಿದ್ದಾರೆ. ಪ್ರತಿ ಗ್ರಾಮದಲ್ಲೂ ಈ ರೀತಿ ಹಳೆ ಬಟ್ಟೆಗಳಿಗೆ ಹೊಸ ರೂಪ ಕೊಟ್ಟು, ನಿರುಪಯುಕ್ತ ವಸ್ತುಗಳನ್ನು ಬಳಸುವುದರಿಂದ ಪರಿಸರ ಉಳಿಸಿದಂತಾಗುತ್ತದೆ. ಪ್ರತಿ ಗ್ರಾಮದವರು ಈ ರೀತಿ ಮಾಡಿದರೆ ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಮಾಡಬಹುದು ಎಂದು ಎಲ್ಲರೂ ಅಭಿನಂದಿಸಿದ್ದಾರೆ.