ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ನಡೆಸಿ ಇಬ್ಬರು ಯುವಕರನ್ನು ಹತ್ಯೆ ಮಾಡಿದ ಪ್ರಕರಣದ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಧರ್ಮವನ್ನು ಮಧ್ಯೆ ತೂರಿಸಿ ರಾಜಕೀಯ ಮಾಡುತ್ತಿದ್ದರೆ, ಮತ್ತೊಂದೆಡೆ ವಕೀಲರು ಮತ್ತು ಸಾಮಾಜಿಕ ಹೋರಾಟಗಾರರ ನಿಯೋಗವೊಂದು ಅಮಾಯಕರನ್ನು ಬಲಿ ತೆಗೆದುಕೊಂಡ ಪೊಲೀಸರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮಾನವ ಹಕ್ಕುಗಳ ಆಯೋಗದ ಕಟಕಟೆ ಏರಿದೆ.
ಈ ಪ್ರಕರಣದಲ್ಲಿ ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಹರ್ಷ ಮತ್ತು ಇತರೆ ಪೊಲೀಸ್ ಅಧಿಕಾರಿಗಳನ್ನು ಪಾರ್ಟಿ ಮಾಡಲಾಗಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಡಿಎಚ್ ವಘೇಲಾ ಅವರನ್ನು ಭೇಟಿ ಮಾಡಿರುವ ನಿಯೋಗವು, ಪೊಲೀಸ್ ಕಮೀಷನರ್ ಮತ್ತು ಇತರೆ ಪೊಲೀಸ್ ಅಧಿಕಾರಿಗಳೇ ಈ ಪ್ರಕರಣದ ನೇರ ಹೊಣೆಗಾರರಾಗಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ವೇಳೆ ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೊಲೀಸರಿಗೆ ಸೂಚನೆ ನೀಡಿದ್ದರು. ಅಲ್ಲದೇ, ಪರಿಸ್ಥಿತಿ ಬಿಗಡಾಯಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಎಂತಹ ಪರಿಸ್ಥಿತಿ ಇದ್ದರೂ ಗೋಲಿಬಾರ್ ಮಾಡಬೇಡಿ ಎಂದೂ ನಿರ್ದೇಶನ ನೀಡಿದ್ದರು.
ಆದರೆ, ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಮೊದಲು ಲಾಠಿಚಾರ್ಜ್ ಮಾಡಿಲ್ಲ ಅಥವಾ ಇನ್ನಾವುದೇ ಬೆದರಿಕೆ ತಂತ್ರಗಳನ್ನು ಉಪಯೋಗಿಸದೇ ನೇರವಾಗಿ ಪ್ರತಿಭಟನಾಕಾರರನ್ನು ಗುರಿಯಾಗಿರಿಸಿ ಗುಂಡು ಹಾರಿಸಿದ್ದಾರೆ. ಈ ಮೂಲಕ ಇಬ್ಬರು ಯುವಕರಾದ ಅಬ್ದುಲ್ ಜಲೀಲ್ ಮತ್ತು ನೌಶೀನ್ ಅವರ ಕೊಲೆಗೆ ಕಾರಣರಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ನಿಯೋಗ ತನ್ನ ದೂರಿನಲ್ಲಿ ಆರೋಪಿಸಿದೆ.
ಈ ನಿಯೋಗದಲ್ಲಿ ಬೆಂಗಳೂರಿನ ವಕೀಲ ರಕ್ಷಿತ್ ಶಿವರಾಮ್, ಸಾಮಾಜಿಕ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್, ಬಂಟ್ವಾಳ ಪುರಸಭೆ ಸದಸ್ಯರಾದ ಲುಕ್ಮಾನ್ ಬಂಟ್ವಾಳ ಮತ್ತು ಮೂನಿಶ ಅಲಿ ಅಹ್ಮದ್ ಇದ್ದರು.
ಯುವಕರ ಕೊಲೆಗೆ ಕಾರಣರಾಗಿರುವ ಪೊಲೀಸರ ವಿರುದ್ಧ ಸ್ವಯಂಪ್ರೇರಿತ ಕ್ರಮವನ್ನು ಜರುಗಿಸಬೇಕು ಮತ್ತು ಆತಂಕದಲ್ಲಿರುವ ರಾಜ್ಯದ ಜನತೆಯಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಇದಲ್ಲದೇ, ಜಿಲ್ಲಾ ಪೊಲೀಸ್ ಮುಖ್ಯಸ್ಥರಾಗಿರುವ ಪೊಲೀಸ್ ಆಯುಕ್ತ ಹರ್ಷ ಮತ್ತು ಸಾರ್ವಜನಿಕ ಸ್ಥಳದಲ್ಲಿ ಜನರ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.

ಡಿಸೆಂಬರ್ 19 ರಂದು ಪ್ರತಿಭಟನೆ ನಡೆಸುವಾಗ ಪರಿಸ್ಥಿತಿ ವಿಕೋಪಕ್ಕೆ ಹೋಗದಿದ್ದರೂ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಮತ್ತು ಗೋಲಿಬಾರ್ ಮಾಡಿದ್ದಾರೆ. ಇಷ್ಟೇ ಅಲ್ಲದೇ, ಹೈಲ್ಯಾಂಡ್ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಿಬ್ಬಂದಿ ಘಾಸಿಗೊಳಗಾಗಿದ್ದಾರೆ. ಪೊಲೀಸರು ದಾಂಧಲೆ ನಡೆಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಮೂಲಕ ಪೊಲೀಸರು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಬ್ಯಾರಿ ಭಾಷೆ ಮಾತನ್ನಾಡುವವರನ್ನೇ ಗುರಿಯಾಗಿಸಿಕೊಂಡು ಲಾಠಿ ಪ್ರಹಾರ ಮಾಡಿದ್ದಲ್ಲದೇ, ಕೈಗೆ ಸಿಕ್ಕವರನ್ನೆಲ್ಲಾ ಹಿಗ್ಗಾಮುಗ್ಗ ಥಳಿಸಿದ್ದಾರೆ. ಮೇಲಿನ ಅಧಿಕಾರಿಗಳನ್ನೂ ಸಂಪರ್ಕಿಸದೇ, ಅವರ ಆದೇಶವನ್ನೂ ಪಡೆಯದೇ ನಗರದಲ್ಲಿ ನಿಷೇಧಾಜ್ಞೆಯನ್ನು ಜಾರಿಗೆ ತಂದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದರು. ಆದರೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಯೋಗ ನಡೆಸಿದ್ದಲ್ಲದೇ, ಏಕಾಏಕಿ ಗುಂಡು ಹಾರಿಸಿದ್ದಾರೆ. ಇದರಿಂದ ಇಬ್ಬರು ಹತ್ಯೆಯಾದರೆ ಗಾಯಗೊಂಡ ಮತ್ತಿಬ್ಬರನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಗೂ ನುಗ್ಗಿದ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಇದಿಷ್ಟೇ ಅಲ್ಲ. ಪೊಲೀಸರು ಹೇಗೆ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದರೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಮಹಿಳೆಯರು ಮತ್ತು ಶಾಲಾ ಮಕ್ಕಳು ಮನೆಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ರಕ್ಷಣೆ ನೀಡುವ ಬದಲು ಪೊಲೀಸರು ಅದೇ ಸಂದರ್ಭದಲ್ಲಿ ಲಾಠಿ ಬೀಸಿದ ಪರಿಣಾಮ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದರು. ಇದರಿಂದ ಆತಂಕಕ್ಕೀಡಾದ ಮಹಿಳೆಯರು ಮತ್ತು ಮಕ್ಕಳು ಸಹ ಗಾಯಗೊಂಡಿದ್ದಾರೆ.
ಇನ್ನೂ ಹಲವಾರು ನಾಗರಿಕರು ತಮ್ಮ ಸ್ಥಳಗಳಿಗೆ ಹೋಗಲು ಬಸ್ ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಪೊಲೀಸರು ಅವರ ಮೇಲೆಯೂ ಲಾಠಿ ಪ್ರಹಾರ ಮಾಡಿ ಗಾಯಗೊಳಿಸುವ ಮೂಲಕ ರಾಕ್ಷಸಿ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ.

ಇನ್ನು ವರದಿಗೆಂದು ಬಂದಿದ್ದ ಪತ್ರಕರ್ತರ ಮೇಲೆಯೂ ಹಲ್ಲೆ ಮಾಡಿರುವ ಪೊಲೀಸರು ಇಡೀ ಪ್ರಕರಣದಲ್ಲಿ ಮಾನವಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಇನ್ನೊಂದು ವಿಚಿತ್ರ ಸಂಗತಿಯೆಂದರೆ ರಾಜ್ಯ ಸರ್ಕಾರ ಮೃತ ಯುವಕರ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.
ಆದ್ದರಿಂದ ನಿಯಮ ಉಲ್ಲಂಘಿಸಿ ಗೋಲಿಬಾರ್ ನಡೆಸಿರುವ ಪೋಲಿಸ್ ಆಯುಕ್ತರಾದ ಹಾಗೂ ಇತರ ಪೋಲಿಸ್ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಅರ್ಜಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ವಘೇಲಾ ಅವರು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 31 ರಂದು ಮಧ್ಯಾಹ್ನ ನಡೆಸುವುದಾಗಿ ತಿಳಿಸಿದ್ದಾರೆ.