ಅಧಿಕಾರಸ್ಥರ ನಡೆ, ನುಡಿ ಹಾಗೂ ನಿಲುವುಗಳನ್ನು ಸಮರ್ಥಿಸುವವರಿಗೆ ಪ್ರತಿಷ್ಠಿತ ಸ್ಥಾನಮಾನ ಸಿಗುವುದು ಸಾಮಾನ್ಯ. ಇದಕ್ಕೆ ನರೇಂದ್ರ ಮೋದಿ ಸರ್ಕಾರವೂ ಹೊರತಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ಮಾಡುತ್ತಿರುವ “ವಿದ್ಯಾರ್ಥಿಗಳು ದಾಂದಲೆ ಸೃಷ್ಟಿಸುತ್ತಿದ್ದು, ಅವರನ್ನು ಮುನ್ನಡೆಸುತ್ತಿರುವವರು ನಾಯಕರಲ್ಲ” ಎಂಬರ್ಥದ ವಿರೋಧ ಪಕ್ಷಗಳನ್ನು ಟೀಕಿಸುವ ಹೇಳಿಕೆ ನೀಡುವ ಮೂಲಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಮೋದಿ ಸರ್ಕಾರವು ಭೂ, ವಾಯು ಹಾಗೂ ನೌಕಾ ಸೇನೆಯನ್ನೊಳಗೊಂಡ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಹುದ್ದೆ ಕಲ್ಪಿಸಿದೆ.
ನರೇಂದ್ರ ಮೋದಿ ಸರ್ಕಾರಕ್ಕೆ ತಮ್ಮ ನಿಷ್ಠೆ ಶರಣಾಗಿಸಿದ್ದ ಭೂಸೇನೆಯ 27ನೇ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಆಗಿ ನೇಮಕವಾಗಿದ್ದಾರೆ. ಈ ಮೂಲಕ ಸ್ವಾಮಿನಿಷ್ಠೆಗೆ ದೊಡ್ಡ ಉಡುಗೊರೆಯನ್ನೇ ಪಡೆದಿದ್ದಾರೆ. 15 ಲಕ್ಷ ಸಿಬ್ಬಂದಿಯನ್ನೊಳಗೊಂಡಿರುವ ಭೂಸೇನೆಯ ಮುಖ್ಯಸ್ಥರಾದ ರಾವತ್ ಅವರು ಮಂಗಳವಾರ (ಡಿಸೆಂಬರ್ 31) ನಿವೃತ್ತರಾಗುತ್ತಿದ್ದಾರೆ. ಅಂದೇ ಭೂ, ವಾಯು ಹಾಗೂ ನೌಕಾ ಪಡೆಗಳ ಉಸ್ತುವಾರಿ ವಹಿಸಲಿರುವ ಸಿಡಿಎಸ್ ಆಗಿ ಉತ್ತರಾಖಂಡದ ರಾವತ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಸೇನೆಯ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಮೋದಿ ಸರ್ಕಾರವು ರಾವತ್ ಗೆ ಹೊಸ ವರ್ಷದ ಉಡುಗೊರೆಯನ್ನು ಒಂದು ದಿನ ಮುಂಚಿತವಾಗಿ ನೀಡಿದೆ.
ಪಾಕಿಸ್ತಾನ ವಿರುದ್ಧದ 1999ರಲ್ಲಿ ನಡೆದಿದ್ದ ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಭಾರತೀಯ ಸೇನೆಯ ಭೂ, ವಾಯು ಹಾಗೂ ನೌಕಾ ಪಡೆಗಳ ಸಮನ್ವಯದ ಕೊರತೆಯಿಂದ ಸಾಕಷ್ಟು ನಷ್ಟವಾಗಿತ್ತು. ಆ ಸಂದರ್ಭದಲ್ಲಿ ತ್ರಿವಳಿ ಪಡೆಗಳ ಮುಖ್ಯಸ್ಥರೊಬ್ಬರು ಇದ್ದರೆ ಸಾಕಷ್ಟು ಅನಾಹುತ ತಪ್ಪಿಸಬಹುದಿತ್ತು ಎಂಬ ಅಂಶ ಚರ್ಚೆಗೆ ಒಳಗಾಗಿತ್ತು. ಅಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಭಿನ್ನ ಸೇನಾ ಪಡೆಗಳಿಗೆ ಒಬ್ಬರೇ ಮುಖ್ಯಸ್ಥರಿದ್ದು, ಭಾರತದಲ್ಲೂ ಸಿಡಿಎಸ್ ಅಗತ್ಯವಿದೆ ಎಂದು ಹೇಳಲಾಗಿತ್ತು. ಅಂದಿನ ವಾಜಪೇಯಿ ಸರ್ಕಾರದ ಅವಧಿಯಿಂದ ನನೆಗುದಿಗೆ ಬಿದ್ದಿದ್ದ ಸಿಡಿಎಸ್ ಹುದ್ದೆ ಸೃಷ್ಟಿಸುವ ತೀರ್ಮಾನವನ್ನು ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದರು. ಅಂತೆಯೇ ಆ ಹುದ್ದೆ ಸೃಷ್ಟಿಸಿ, ತಮ್ಮ ಬೆಂಬಲಿಗನನ್ನು ಆ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಸೇನೆ ಹಾಗೂ ರಾಜಕಾರಣದ ನಡುವಿನ ಸೂಕ್ಷ್ಮ ಗೆರೆಯನ್ನು ಮೋದಿ ಅಳಿಸಿ ಹಾಕಿದ್ದಾರೆ.
ರಾವತ್ ರಾಜಕೀಯ ಹೇಳಿಕೆ ಹಾಗೂ ಆನಂತರದ ಬೆಳವಣಿಗೆಗಳ ಬಗ್ಗೆ ಸೇನೆಯ ಮಾಜಿ ಅಧಿಕಾರಿಗಳು ಹಾಗೂ ಸಂವಿಧಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲಿ ಸೇನೆಯ ದಬ್ಬಾಳಿಕೆ ನೆನಪಿಸುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅಗತ್ಯವನ್ನು ಮೋದಿ ಸರ್ಕಾರಕ್ಕೆ ಒತ್ತಿ ಹೇಳಿದ್ದಾರೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮಾನವ ಬಾಂಬ್ ಅಳವಡಿಸಿಕೊಂಡಿದ್ದ ಭಯೋತ್ಪಾದಕನೊಬ್ಬ ಕೇಂದ್ರೀಯ ಮೀಸಲು ಪಡೆ ಪೊಲೀಸರನ್ನು ಒತ್ತೊಯ್ಯುತ್ತಿದ್ದ ವಾಹನಕ್ಕೆ ತನ್ನ ವಾಹನವನ್ನು ಡಿಕ್ಕಿ ಹೊಡೆಸಿ 40ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದ. ಇದಕ್ಕೆ ಪ್ರತೀಕಾರವಾಗಿ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಾಲಾಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ ಸೇನೆಯ ಶ್ರಮವನ್ನು ತನ್ನ ಸಾಧನೆ ಹಾಗೂ ದೇಶದ ಭದ್ರತೆಗೆ ಬಿಜೆಪಿ ಅಗತ್ಯ ಎಂದು ಹೇಳುವ ಮೂಲಕ ಸೇನಾ ಪಡೆಗಳನ್ನು ಮಧ್ಯವಿಟ್ಟು ರಾಷ್ಟ್ರೀಯತೆಯ ಉನ್ಮಾದದ ಮೂಲಕ ಮೋದಿಯವರು ಚುನಾವಣೆ ಗೆದ್ದಿದ್ದು ಎಲ್ಲರಿಗೂ ತಿಳಿದಿದೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಭಾರತೀಯ ಸೇನೆಯನ್ನು ಮೋದಿ ಸೇನೆ” ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದನ್ನು ನೆನೆಪಿಸಿಕೊಳ್ಳಬಹುದಾಗಿದೆ. ಸೇನೆಯನ್ನು ರಾಜಕೀಯಗೊಳಿಸುವ ಕೆಲಸವನ್ನು ಮೋದಿಯವರು ಬಹುಹಿಂದೆಯೇ ಮಾಡಿದ್ದಾರೆ. ಈಗಿನ ಬೆಳವಣಿಗಗಳು ಅವುಗಳ ಮುಂದುವರಿದ ಭಾಗವಷ್ಟೆ ಎನ್ನುವ ಆರೋಪವನ್ನು ಸುಲಭಕ್ಕೆ ತಳ್ಳಿಹಾಕಲಾಗದು.
ಸ್ವಾತಂತ್ರ್ಯ ನಂತರ ಸೇನೆಯನ್ನು ನಾಗರಿಕ ಆಡಳಿತದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವ ಕಟ್ಟುನಿಟ್ಟಿನ ನೀತಿಯನ್ನು ಭಾರತ ಅನುಸರಿಸಿಕೊಂಡು ಬಂದಿದೆ. ಆದರೆ, ಮೋದಿಯವರು ತಮ್ಮ ಅವಧಿಯಲ್ಲಿ ತಟಸ್ಥ ಹಾಗೂ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಬೇಕಾದ ಸಂಸ್ಥೆಗಳ ನಡುವಿನ ಅಂತರವನ್ನು ತೆಗೆದು ಹಾಕುವ ಹಾದಿ ಹಿಡಿಯುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸಲು ನಾಂದಿಯಾಗಬಹುದು. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳ ಮುಖ್ಯಸ್ಥರು ಅಧಿಕಾರಸ್ಥರ ಪರವಾಗಿ ಬಹಿರಂಗವಾಗಿ ಮಾತನಾಡುವುದು. ಅದಕ್ಕೆ ಪ್ರತಿರೂಪವಾಗಿ ಮಹತ್ವದ ಹುದ್ದೆ ಪಡೆಯುವುದು ಏನನ್ನು ಸೂಚಿಸುತ್ತದೆ? ಮುಂದೊಮ್ಮೆ ಇದೇ ಪರಂಪರೆ ಮುಂದುವರೆದು ನಾಗರಿಕ ಸರ್ಕಾರವನ್ನು ತನ್ನ ವಶಕ್ಕೆ ಪಡೆಯುವ ಹಂತಕ್ಕೆ ಸೇನೆ ಬಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಎಲ್ಲಿರುತ್ತದೆ? ಇದು ನೆರೆಯ ಪಾಕಿಸ್ತಾನದ ಮಾದರಿಗೆ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಪಾಕ್ ನಲ್ಲಿ ಸೇನೆಯ ಬೆಂಬಲವಿಲ್ಲದೇ ಚುನಾಯಿತ ಸರ್ಕಾರ ಕೆಲಸ ಮಾಡುವ ಪರಿಸ್ಥಿತಿಯಿಲ್ಲ. ಇಂದಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಂದೊಂದು ದಿನ ಸೇನೆಯು ತನಗೆ ಬೇಕಾದ ಪಕ್ಷವನ್ನು ಅಧಿಕಾರಕ್ಕೆ ತರುವ ವ್ಯವಸ್ಥೆ ಭಾರತದಲ್ಲಿ ವಾಸ್ತವವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಜನರ ಸೇವೆಗಷ್ಟೇ ಸೀಮಿತವಾದ ಸೇನೆಯನ್ನು ರಾಜಕಾರಣ ಮುಕ್ತವಾಗಿರುವಂತೆ ನೋಡಿಕೊಳ್ಳುವುದು ಎಲ್ಲಾ ಪಕ್ಷಗಳ ಕರ್ತವ್ಯವಾಗಬೇಕು ಎಂಬುದು ತಜ್ಞರ ಸಲಹೆ.
ಇನ್ನು, ರಾವತ್ ವಿವಾದಗಳಿಗೆ ಮರಳುವುದಾದರೆ ಅವರಷ್ಟು ರಾಜಕೀಯ ಹೇಳಿಕೆಗಳನ್ನು ನೀಡಿದ ಪ್ರಚಾರಪ್ರಿಯ ಸೇನಾ ಮುಖ್ಯಸ್ಥ ಇರಲಾರರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಕಲ್ಲಿನೇಟು ತಪ್ಪಿಸಿಕೊಳ್ಳಲು ಕಾಶ್ಮೀರಿ ಯುವಕನನ್ನು ಸೇನಾ ಜೀಪ್ ನ ಮುಂಭಾಗಕ್ಕೆ ಕಟ್ಟಿ ‘ಮಾನವ ಗುರಾಣಿ’ಯಾಗಿಸಿ ಸುತ್ತಿದ್ದ ಮೇಜರ್ ಲೀತುಲ್ ಗೊಗೊಯ್ ಅವರನ್ನು ಸಮರ್ಥಿಸುವ ಮೂಲಕ ರಾವತ್ ಅವರು ಮಾನವ ಹಕ್ಕುಗಳ ಸಂಘಟನೆಗಳ ಟೀಕೆಗೆ ಗುರಿಯಾಗಿದ್ದರು. ರಾವತ್ ನಡೆಯನ್ನು ಕಟುವಾಗಿ ಟೀಕಿಸಿದ್ದ ಶಿಕ್ಷಣ ತಜ್ಞ ಪಾರ್ಥಾ ಚಟರ್ಜಿ ಅವರು ತಮ್ಮ ಲೇಖನವೊಂದರಲ್ಲಿ ಜಲಿಯನ್ ವಾಲಾಬಾಗ್ ಘಟನೆ ಸಮರ್ಥಿಸಿದ್ದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಗೆ ಜನರಲ್ ರಾವತ್ ಹೋಲಿಸಿದ್ದನ್ನು ಸ್ಮರಿಸಬಹುದಾಗಿದೆ. 1919ರಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ನಿಶ್ಯಸ್ತ್ರರಾದ 350ಕ್ಕೂ ಹೆಚ್ಚು ಮಂದಿಗೆ ಗುಂಡಿಟ್ಟುಕೊಲ್ಲುವ ಆದೇಶ ಹೊರೆಡಿಸಿದ್ದ ಜನರಲ್ ಡಯರ್, ಮಾನವ ಕುಲ ಬೆಚ್ಚಿಬೀಳುವ ರಕ್ತಪಾತಕ್ಕೆ ಕಾರಣವಾಗಿದ್ದನು.