ದೆಹಲಿ ಗಲಭೆಯ ಕುರಿತು ಪ್ರಚೋದನಾತ್ಮಕವಾಗಿ ವರದಿ ಮಾಡಿದ್ದಾರೆಂದು ಆರೋಪಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಮಲಯಾಳಂ ಬಾಷೆಯ ಎರಡು ಟಿವಿ ಚಾನೆಲ್‌ಗಳ ಪ್ರಸಾರವನ್ನು 48ಘಂಟೆಗಳ ಕಾಲ ನಿಷೇಧ ಹೇರಿತ್ತು. ಆದರೆ ಕೆಲವೇ ತಾಸುಗಳಲ್ಲಿ ತನ್ನ ನಿರ್ಧಾರದಿಂದ ಯೂಟರ್ನ್ ಕೂಡಾ ಹೊಡೆದಿದೆ. ಕೋಮು ಗಲಭೆಯ ವಿಚಾರದಲ್ಲಿ ನೀಡಿದ ವರದಿ ಹಾಗೂ RSSಅನ್ನು ಕೇಂದ್ರವಾಗಿಟ್ಟುಕೊಂಡು ಮಾಡಿದ ವರದಿಗಳ ವಿರುದ್ದ ಈ ನಿರ್ಧಾರ ಕೈಗೊಳ್ಳಲಾಗಿತ್ತೆಂದು ಸರ್ಕಾರ ಹೇಳಿದೆ. ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲಿನ ನಿರ್ಬಂಧವನ್ನು ಶನಿವಾರ ಬೆಳಗ್ಗಿನ ಜಾವ 1.30ಕ್ಕೆ ಹಾಗೂ ಮೀಡಿಯಾ ಒನ್ ಮೇಲಿನ ನಿರ್ಬಂಧವನ್ನು 9.30ಕ್ಕೆ ಹಿಂಪಡೆಯಲಾಗಿದೆ.
ದೆಹಲಿ ಗಲಭೆ ಬಗ್ಗೆ ಎಲ್ಲಾ ಮಾಧ್ಯಮಗಳ ಮೇಲೆ ದೃಷ್ಟಿ ಇಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಮೊದಲಿಗೆ ದೆಹಲಿ ಗಲಭೆ ಬಗ್ಗೆ ವರದಿ ಮಾಡಿದ್ದ ಎರಡು ಮಲಯಾಳಂ ನ್ಯೂಸ್ ಚಾನೆಲ್‌ಗಳನ್ನು ಶಿಕ್ಷೆಗೆ ಗುರಿ ಪಡಿಸಲಾಗಿತ್ತು. ಏಷ್ಯಾನೆಟ್ ನ್ಯೂಸ್ ಚಾನೆಲ್‌ನಲ್ಲಿ 18:58:34 ಅಂದರೆ ಸಂಜೆ 6:58ಕ್ಕೆ ನ್ಯೂಸ್ ಶುರುವಾಗಿದ್ದು, 19:09:19 ಅಂದ್ರೆ ಸಂಜೆ 7 ಗಂಟೆ 9 ನಿಮಿಷ, ಒಟ್ಟು 10 ನಿಮಿಷಗಳ ಕಾಲ ದೆಹಲಿ ಗಲಭೆ ಸುದ್ದಿ ಪ್ರಸಾರ ಮಾಡಿದ್ದು, ಎರಡು ಕೋಮುಗಳ ನಡುವೆ ಪ್ರಚೋದನೆ ಮಾಡುವಂತಿತ್ತು ಎನ್ನುವ ನಿರ್ಧಾರಕ್ಕೆ ಇನ್ಫಾರ್ಮೇಷನ್ ಅಂಡ್ ಬ್ರಾಡ್‌ಕಾಸ್ಟಿಂಗ್ ಡಿಪಾರ್ಟ್‌ಮೆಂಟ್ ಬಂದಿತ್ತು. ಹೀಗಾಗಿ ನಿನ್ನೆ ಸಂಜೆ 7.30ರಿಂದ ಭಾನುವಾರ ಸಂಜೆ 7.30ರ ತನಕ ಯಾವುದೇ ರೀತಿಯಲ್ಲೂ ಯಾವುದೇ ಸುದ್ದಿಯನ್ನು ಬಿತ್ತರ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಇದೇ ರೀತಿ ಮಲಯಾಳಂನ ಮತ್ತೊಂದು ಸುದ್ದಿಸಂಸ್ಥೆ ಮೀಡಿಯಾ ಒನ್ ಸಂಸ್ಥೆಯಲ್ಲಿ 25 ಫೆಬ್ರವರಿ 6:10:02 ರಿಂದ 6:47:07 ಅಂದರೆ ಸುಮಾರು 30 ನಿಮಿಷ ಕಾಲ ದೆಹಲಿ ಘರ್ಷಣೆ ಬಗ್ಗೆ ಆಕ್ಷೇಪಾರ್ಹ ಮಾಹಿತಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಎರಡು ಸುದ್ದಿ ಚಾನೆಲ್‌ಗಳನ್ನು ನಿಷೇಧಿಸುವ ಮುನ್ನ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳು ಶೋಕಾಸ್ ನೋಟಿಸ್ ಕೊಟ್ಟಿತ್ತು. 28.02.2020 ರಂದು ಕೊಟ್ಟಿದ್ದ ಶೋಕಾಸ್ ನೋಟಿಸ್‌ನಲ್ಲಿ ಹಲವಾರು ಪ್ರಶ್ನೆಗಳನ್ನು ಎತ್ತಲಾಗಿದೆ.
- ಸಾವಿನ ಸಂಖ್ಯೆ 10ಕ್ಕೆ ಏರಿಕೆ ಆಗಿದೆ ಎಂದು ಹೇಳಿದ್ದೀರಿ
- ಶಸ್ತ್ರಾಸ್ತ್ರ ಹಿಡಿದ ದಂಗೆಕೋರರು ಧರ್ಮವನ್ನು ಕೇಳಿ ದಾಳಿ ಮಾಡುತ್ತಿದ್ದಾರೆ ಎಂದಿದ್ದೀರಿ
- ನೂರಾರು ಅಂಗಡಿ, ಮನೆ, ವಾಹನಗಳು ಭಸ್ಮವಾಗಿವೆ ಎಂದು ವರದಿ ಮಾಡಿದ್ದೀರಿ
- ಗಲಭೆಗೋರರು ದಾಳಿ ಮಾಡುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದಿದ್ದೀರಿ
- ಮಸೀದಿಗೆ ಬೆಂಕಿ ಹಚ್ಚಿದ ನಂತರ 2 ಗಂಟೆಗಳ ಬಳಿಕ ಅಗ್ನಿಶಾಮಕ ವಾಹನ ಬಂತು ಎಂದು ವರದಿ ಮಾಡಿದ್ದೀರಿ
- ಹಿಂದೂಗಳು ವಾಸವಾಗಿರುವ ಪ್ರದೇಶದಲ್ಲಿ ಮುಸ್ಲಿಂ ಕುಟುಂಬಗಳ ಮೇಲೆ ದಾಳಿ ನಡೆದಿದೆ ಎಂದಿದ್ದೀರಿ
- ಹಿಂದೂಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರೆ, ಮುಸ್ಲಿಮರು ಆಜಾದಿ ಘೋಷಣೆ ಕೂಗುತ್ತಿದ್ದರು ಎಂದಿದ್ದೀರಿ
- ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ್ದಾರೆ, 3 ದಿನಗಳಿಂದಲೂ ಹೊತ್ತಿ ಉರಿಯುತ್ತಿದ್ದರೂ ಕೇಂದ್ರ ಕ್ರಮಕೈಗೊಂಡಿಲ್ಲ ಎಂದಿದ್ದೀರಿ
- ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಸಭೆ ಬಳಿಕ ತಡವಾಗಿ ಕೇಂದ್ರ ಭದ್ರತಾ ಪಡೆಗಳು ಬಂದವು ಎಂದಿದ್ದೀರಿ
- 1984ರ ಸಿಖ್ ಗಲಭೆ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆದ ಘರ್ಷಣೆಗೆ ದೆಹಲಿ ಸಾಕ್ಷಿಯಾಗಿದೆ ಎಂದಿದ್ದೀರಿ
ಈ ಎಲ್ಲಾ ಅಂಶಗಳು 1994ರ ಕೇಬಲ್ ಟೆಲಿವಿಷನ್ ರೂಲ್ಸ್‌ನ ಉಲ್ಲಂಘನೆಯಾಗಿದೆ.
ರೂಲ್ 6(1)(c) ಪ್ರಕಾರ ಯಾವುದೇ ಒಂದು ಧರ್ಮದ ಜನರ ಮೇಲೆ ದಾಳಿ ಮಾಡುವುದನ್ನು ತೋರಿಸುವಂತಿಲ್ಲ. ದೃಶ್ಯವನ್ನು ತೋರಿಸುವಂತಿಲ್ಲ, ಅಕ್ಷರಗಳಲ್ಲೂ ಅದರ ಬಗ್ಗೆ ಹಾಕುವಂತಿಲ್ಲ. ನೀವು ಬಳಸುವ ಅಕ್ಷರಗಳು ಕೋಮು ಘರ್ಷಣೆಗೆ ಅನುವು ಮಾಡಿಕೊಡುತ್ತದೆ.
ರೂಲ್ 6(1)(e) ಪ್ರಕಾರ ಮಾಧ್ಯಮಗಳು ಬಳಸುವ ದೃಶ್ಯ, ಭಾಷೆ, ಪದಗಳು ಕೋಮು ಹಿಂಸೆಯನ್ನು ಹೆಚ್ಚಿಸುವಂತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಇರುವಂತಿಲ್ಲ ಅಥವಾ ರಾಷ್ಟ್ರ ವಿರೋಧಿ ಕೆಲಸ ಮಾಡಲು ಉತ್ತೇಜನ ಕೊಟ್ಟಂತೆ ಇರಬಾರದು.
ಇಷ್ಟೆಲ್ಲಾ ಉಲ್ಲಂಘನೆ ಮಾಡಿರುವ ನಿಮ್ಮ ಮೇಲೆ ಕಾನೂನು ರೀತ್ಯಾ ಸೆಕ್ಷನ್ 20ರ ಆಧಾರದ ಮೇಲೆ ಯಾಕೆ ಕ್ರಮಕೈಗೊಳ್ಳಬಾರದು ಎಂದು ಶೋಕಾಸ್ ನೋಟಿಸ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಶೋಕಾಸ್ ನೋಟಿಸ್ ಪಡೆದ ಏಷ್ಯನ್‌ನೆಟ್ ನ್ಯೂಸ್ ಚಾನೆಲ್, ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿತ್ತು.
- ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ, ಕೋಮು ಭಾವನೆ ಕೆರಳಿಸಿಲ್ಲ. ಅಧಿಕೃತ ಮಾಹಿತಿಯನ್ನೇ ಪ್ರಸಾರ ಮಾಡಿದ್ದೇವೆ
- ಒಂದು ಧರ್ಮವನ್ನು ಗುರಿಯಾಗಿಸಿ ನಾವು ವರದಿ ಮಾಡಿಲ್ಲ, ವಾಯುವ್ಯ ದೆಹಲಿಯ ಹಿಂಸಾಚಾರದ ವರದಿಗಳು ನಿಷ್ಪಕ್ಷಪಾತ ಆಗಿದ್ದವು.
- ನಮ್ಮ ವರದಿಗಾರರು ಮತ್ತು ಸಿಬ್ಬಂದಿ ಸ್ಥಳದಿಂದಲೇ ಅಹಿತಕರ ಘಟನೆಗಳ ನೈಜ ವರದಿಗಳನ್ನು ಕೊಟ್ಟಿದ್ದಾರೆ.
- ಸಮುದಾಯ ಅಥವಾ ಧರ್ಮ, ಹಿಂಸಾಚಾರದ ಬಗ್ಗೆ ನಮ್ಮನ್ನೂ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರ ಆಗಿದೆ.
- ಪ್ರಜಾಪ್ರಭುತ್ವ ರಕ್ಷಣೆಗೆ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯುತ ಮತ್ತು ಅನುಭವಿ ಮಾಧ್ಯಮ ಸಂಸ್ಥೆಯಾಗಿದೆ
- ನಾವು ಕೇರಳದಲ್ಲಿ ಅತೀ ಹೆಚ್ಚು ವೀಕ್ಷರನ್ನು ಹೊಂದಿದ್ದೇವೆ
- ಈ ಹಿಂದೆ ಯಾವುದೇ ನಿಯಮ ಅಥವಾ ಸಂಹಿತೆ ಉಲ್ಲಂಘನೆ ಆರೋಪ ನಮ್ಮ ಮೇಲಿಲ್ಲ
- ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮ 1994ರ ಅನುಸಾರವಾಗಿಯೇ ಎಚ್ಚರಿಕೆಯಿಂದ ಕೆಲಸ ಮಾಡಿದ್ದೇವೆ
- 24 ರಂದು ಇಬ್ಬರು 25 ರಂದು ಮೂವರು ವರದಿಗಾರರು ಪ್ರತ್ಯಕ್ಷ ವರದಿ ಮಾಡಿಒದ್ದಾರೆ. ಸಮಜಾದ ಶಾಂತಿ ಕಾಪಾಡಲು ಯತ್ನಿಸಿದ್ದಾರೆ.
ಇಷ್ಟೆಲ್ಲಾ ಸಮರ್ಥನೆ ಜೊತೆಗೆ ಕಾನೂನು 6 (1) (c) ಮತ್ತು 6 (1) (e) ಕಂಡಿಷನ್ಸ್ ಉಲ್ಲಂಘಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಭಾವಿಸಿದರೆ, ನಮ್ಮದು ತಪ್ಪು ಎಂದು ಭಾವಿಸಿದರೆ ನಾವು ಬೇಷರತ್ ಕ್ಷಮೆ ಮತ್ತು ವಿಷಾದ ವ್ಯಕ್ತಪಡಿಸುತ್ತೇವೆ ಎಂದಿದ್ದರು. ಆದರೂ ಚಾನಲ್‌ನ ನಿರೂಪಕ/ವರದಿಗಾರರು ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಸೈನ್ಯವನ್ನು ನಿಯೋಜಿಸಬಹುದು. ಆದರೆ ಅಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ. ಕೇಂದ್ರ ಪಡೆಗಳನ್ನು ನಿಯೋಜಿಸಲಾಗುವುದು ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಗೃಹ ಸಚಿವರು ಘೋಷಿಸಿದರು. ಆದರೆ ಗಲಭೆ ಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟರೂ ರಕ್ಷಣಾ ಪಡೆಯನ್ನು ನಿಯೋಜಿಸಿಲ್ಲ ಎಂದು ವರದಿಯಾಗಿದೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಂತ್ರಣ ಕಾಯ್ದೆ 1995 ರ ಸೆಕ್ಷನ್ 20 ರ ಸಬ್ ಸೆಕ್ಷನ್ 3ರಂತೆ ಚಾನಲ್‌ನ ಮಾಹಿತಿ ಸರಿಯಾಗಿಲ್ಲ. ಹೀಗಾಗಿ ಏಷ್ಯಾನೆಟ್ ನ್ಯೂಸ್ ಟಿವಿ ಚಾನೆಲ್ ಅನ್ನು ಭಾರತದ ದೇಶಾದ್ಯಂತ 48 ಗಂಟೆಗಳ ಕಾಲ ಯಾವುದೇ ವೇದಿಕೆಯಲ್ಲಿ ಪ್ರಸಾರ ಅಥವಾ ಮರು ಪ್ರಸಾರ ಮಾಡುವುದನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ದೆಹಲಿ ಗಲಭೆಯನ್ನು ವರದಿ ಮಾಡಲು ಕೇಂದ್ರ ಸರ್ಕಾರ ನಿಯಮಗಳನ್ನು ಕೂಡಾ ರೂಪಿಸಿತ್ತು.

ಇದೇ ರೀತಿ ಮೀಡಿಯಾ ಒನ್ ಟಿವಿ ಚಾನೆಲ್‌ಗೂ ಕೂಡ ಹೇಳಲಾಗಿದೆ.
ಆದರೆ ದೆಹಲಿಯಲ್ಲಿ ಮೇಲೆ ಹೇಳಿರುವುದು, ತೋರಿಸಿರುವುದು ನಡೆದಿದ್ಯಾ? ನಡೆದಿಲ್ವಾ ಎನ್ನುವುದನ್ನು ಸರ್ಕಾರದ ಪರವಾಗಿ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಒಂದು ವೇಳೆ ಎರಡು ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಅದು ತಪ್ಪು. ಆದರೆ ಗಲಾಟೆ ನಡೆಯುತ್ತಿದೆ, ಧರ್ಮದ ಹೆಸರು ಕೇಳಿ ಹಲ್ಲೆ ಮಾಡುವ ಘಟನೆಗಳು ನಡೆಯುತ್ತಿವೆ ಎನ್ನುವುದನ್ನು ಕಣ್ಣಾರೆ ಕಂಡರೂ ಮುಚ್ಚಿಡಬೇಕು ಎನ್ನುವ ಉದ್ದೇಶ ಈ ನಿರ್ಧಾರದ ಹಿಂದೆ ಇದೆಯಾ? ಎನ್ನುವ ಅನುಮಾನ ಮೂಡಿಸುತ್ತದೆ. ಒಂದು ವೇಳೆ ಇದೇ ಘಟನೆ ಯಾವುದಾದರೂ ಮುಸ್ಲಿಂ ರಾಷ್ಟ್ರದಲ್ಲಿ ನಡೆದು, ಅಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲೆ ಮುಸ್ಲಿಂ ಸಮುದಾಯ ದಾಳಿ ಮಾಡುತ್ತಿದೆ ಎಂದು ಹೇಳುವುದು ತಪ್ಪು ಎನ್ನುವುದಾದರೆ ಹಿಂದೂಗಳಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ?
ಕಂಡಿದನ್ನ ಕಂಡಂತೆ ದೇಶದ ಜನರಿಗೆ ತಿಳಿಸುವುದು ಮಾಧ್ಯಮಗಳ ಕರ್ತವ್ಯ ಅಲ್ಲವೇ. ಸುದ್ದಿಯನ್ನು ತಿರುಚಿ ವರದಿ ಮಾಡಿದರೆ ಕ್ರಮ ಕೈಗೊಳಬೇಕಾದ ಕರ್ತವ್ಯ ಸರ್ಕಾರ ಮೇಲಿದೆ. ಕಾನೂನು ಸುವ್ಯಸ್ಥೆ ಹಾಳು ಮಾಡುವ ಉದ್ದೇಶದಿಂದ ವರದಿ ಮಾಡಿದ್ದರೂ ಶಿಕ್ಷಾರ್ಹ ಅಪರಾಧ. ಆದರೆ ಈ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ ಎನ್ನುವುದು, ಕಾನೂನು ಸುವಸ್ಥೆ ಹಾಳಾಗಲಿ ಎಂದಲ್ಲ, ಬದಲಿಗೆ ಅಲ್ಲಿಗೆ ಸರ್ಕಾರದ ಸಂಸ್ಥೆಗಳು ಧಾವಿಸಿ ರಕ್ಷಣಾ ಕಾರ್ಯಕೈಗೊಳ್ಳಲಿ ಎನ್ನುವ ಕಾರಣಕ್ಕೆ ಎನ್ನುವುದು ಕೇಂದ್ರ ಸರ್ಕಾರಕ್ಕೆ ಅರ್ಥವಾದೆ ಇರುವುದು ವಿಪರ್ಯಾಸ. ಅಥವಾ ಕೇಂದ್ರ ಸರ್ಕಾರಕ್ಕೆ ಎಲ್ಲವೂ ಅರ್ಥವಾಗಿದ್ದು, ಮಾಧ್ಯಮಗಳ ಬಾಯಿ ಮುಚ್ಚಿಸಲು ಇಂತಹ ಅಸ್ತ್ರ ಬಳಕೆ ಮಾಡಿತ್ತಾ ಇದೆಯೇ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ ಈ ಘಟನೆ.