ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಹೈದ್ರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಭೀಕರ ಕೊಲೆ, ಅತ್ಯಾಚಾರಕ್ಕೊಳಗಾಗಿದ್ದ ಉನ್ನಾವೊ ಮಹಿಳೆಯನ್ನು ಜೀವಂತ ಸುಟ್ಟು ಹಾಕಿದ್ದು, ಡಾನ್ಸರ್ ಒಬ್ಬಳನ್ನು ಗುಂಡಿಕ್ಕಿ ಹತ್ಯೆ ಮಾಡಿದಂತಹ ಘಟನೆಗಳಿಂದ ಇಡೀ ದೇಶವೇ ತಲ್ಲಣಗೊಂಡಿದೆ.
ಪಶುವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. ಇದು ನಾಗರಿಕರು ಆ ಕ್ಷಣದ ಪ್ರತಿಕ್ರಿಯೆ ಎಂಬಂತೆ ಶ್ಲಾಘನೆಗೆ ಪಾತ್ರವಾಗಿದೆ. ಆದರೂ ಕಾನೂನಿನಡಿಯಲ್ಲಿ ಇದು ಸ್ವಾಗತಾರ್ಹವಾದ ಕ್ರಮವಲ್ಲ. ಈ ಕಾರಣದಿಂದಲೇ ಇಂತಹ ಘೋರ ಕೃತ್ಯಗಳಾದಾಗ ನಾಗರಿಕರು, ಸಂಘ ಸಂಸ್ಥೆಗಳು ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು, ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂಬ ಒತ್ತಾಯಗಳು ಕೇಳಿ ಬರುತ್ತಲೇ ಇರುತ್ತವೆ.
ಹೈದ್ರಾಬಾದ್ ಎನ್ ಕೌಂಟರ್ ಆದ ಸಂದರ್ಭದಲ್ಲಿ ಸ್ವತಃ ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರೇ ನ್ಯಾಯಕ್ಕಾಗಿ ಪ್ರತೀಕಾರ ಮಾಡುವುದು ತರವಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಇಂತಹ ಅಹಿತಕರ ಘಟನೆಗಳು ನಡೆದಾಗಲೆಲ್ಲಾ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತವೆ, ಆಕ್ರೋಶಗಳು ಭುಗಿಲೇಳುತ್ತವೆ, ಒತ್ತಾಯಗಳು ಕೇಳಿ ಬರುತ್ತವೆ. ಆದರೆ, ಕೆಲವೇ ದಿನಗಳಲ್ಲಿ ಇದನ್ನು ಮರೆತು ಮತ್ತೆ ತಮ್ಮ ದೈನಂದಿನ ಚಟುವಟಿಕೆಗಳತ್ತ ಗಮನಹರಿಸುತ್ತಾರೆ. ಮತ್ತೆ ಇಂತಹ ಘಟನೆಗಳು ಮರುಕಳಿಸಿದಾಗಲೇ ಆಕ್ರೋಶದ ನೆನಪಾಗುವಂತಹ ಪರಿಸ್ಥಿತಿ ಬಂದಿದೆ. ಇದೇ ರೀತಿ ನಮ್ಮ ನೀತಿ ನಿರೂಪಕರೂ ಸಹ ತಲೆ ಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿ.

ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ಆತಂಕ ಉಂಟಾಗುತ್ತದೆ. 2017 ಕ್ಕೆ ಹೋಲಿಸಿದರೆ ಕಳೆದ ವರ್ಷ ಅಂದರೆ 2018ರಲ್ಲಿ ಈ ದೌರ್ಜನ್ಯ ಪ್ರಕರಣಗಳಲ್ಲಿ ಶೇ.6 ರಷ್ಟು ಹೆಚ್ಚಳವಾಗಿದೆ. ಒಟ್ಟು 33,658 ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ.
ಇಂಡಿಯಾ ಜಸ್ಟೀಸ್ ರಿಪೋರ್ಟ್ ಪ್ರಕಾರ ನ್ಯಾಯಾಂಗ ಉಪವಿಭಾಗಗಳು ಎನಿಸಿರುವ ಪೊಲೀಸ್, ಬಂಧಿಖಾನೆ, ನ್ಯಾಯಾಂಗ, ಕಾನೂನು ವಿಭಾಗಗಳಲ್ಲಿ ಮಾನವ ಸಂಪನ್ಮೂಲ, ಅನುದಾನ ಮತ್ತು ಮೂಲಸೌಕರ್ಯಗಳ ಕೊರತೆ ಗಂಭೀರವಾಗಿದೆ.
ಇನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯ ವಿಚಾರಕ್ಕೆ ಬಂದಾಗ ತೆಲಂಗಾಣ ಮತ್ತು ಉತ್ತರ ಪ್ರದೇಶದ ಅಂಕಿಅಂಶಗಳನ್ನು ಗಮನಿಸಿದರೆ ವ್ಯಥೆಯಾಗುತ್ತದೆ. ಏಕೆಂದರೆ, ಈ ರಾಜ್ಯಗಳ ಪೊಲೀಸ್, ಬಂಧಿಖಾನೆ ಮತ್ತು ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಮಾಣ ತೀರಾ ಇಳಿಮುಖದಲ್ಲಿದೆ. ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಕೇವಲ ಶೇ,.2.5 ರಷ್ಟು ಮಹಿಳಾ ಸಿಬ್ಬಂದಿ ಇದ್ದರೆ, ಉತ್ತರಪ್ರದೇಶದಲ್ಲಿ ಶೇ.4 ರಷ್ಟಿದ್ದಾರೆ. ಇದು ದೇಶದಲ್ಲಿ ಅತ್ಯಂತ ಕಡಿಮೆ ಶೇಕಡಾವಾರು ಪ್ರಮಾಣವಾಗಿದೆ.
ಇನ್ನು ಜಾತಿ ಆಧಾರಿತ ಉದ್ಯೋಗವನ್ನು ಗಮನಿಸುವುದಾದರೆ ಈ ಆಧಾರದ ಕೋಟಾಗಳನ್ನು ಪೂರೈಕೆ ಮಾಡಿರುವ ದೇಶದ ಏಕೈಕ ರಾಜ್ಯವೆಂದರೆ ಕರ್ನಾಟಕವಾಗಿದೆ.
ದೇಶದಲ್ಲಿ ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಕೇವಲ ಶೇ.7 ರಷ್ಟು, ಬಂಧೀಖಾನೆಯಲ್ಲಿ ಶೇ.10 ಮತ್ತು ಹೈಕೋರ್ಟ್ ಹಾಗೂ ಕೆಳಸ್ತರದ ನ್ಯಾಯಾಲಯಗಳಲ್ಲಿ ಶೇ.26.5 ರಷ್ಟು ಮಹಿಳೆಯರು ಉದ್ಯೋಗವನ್ನು ಪಡೆದಿದ್ದಾರೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿಯಡಿ ಉದ್ಯೋಗ ಒದಗಿಸಲು ರಾಜ್ಯಗಳು ಇನ್ನೂ ಒದ್ದಾಡುತ್ತಿವೆ.
ಮತ್ತೊಂದಡೆ, ದೇಶಾದ್ಯಂತ ಶೇ.55 ರಷ್ಟು ವಿಚಾರಣಾಧೀನ ಕೈದಿಗಳು ಇದ್ದಾರೆ. ಇವರಲ್ಲಿ ಮುಸ್ಲಿಮರು, ದಲಿತರು ಅಥವಾ ಬುಡಕಟ್ಟು ಜನಾಂಗದವರಿದ್ದಾರೆ. ಇವರಲ್ಲಿ ಶೇ.39 ರಷ್ಟು ಮಂದಿಯನ್ನು ಪಕ್ಷಪಾತದಿಂದ ಬಂಧನದಲ್ಲಿಡಲಾಗಿದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮಾನವ ಹಕ್ಕುಗಳ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದರಲ್ಲೂ ಪ್ರಮುಖವಾಗಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪಾರದರ್ಶಕತೆ, ಬದ್ಧತೆ ಮತ್ತು ಜವಾಬ್ದಾರಿಯುತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯಗಳು ನಮ್ಮ ನಾಗರಿಕ ಸಮಾಜ, ಆಡಳಿತ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಒಂದು ಎಚ್ಚರಿಕೆ ಗಂಟೆಯಾಗಿದೆ. ಈ ದಿಸೆಯಲ್ಲಿ ನೀತಿ ನಿರೂಪಕರು, ನ್ಯಾಯದಾನ ಮಾಡುವವರು ಗಂಭೀರ ಯೋಚನೆ ಮಾಡಬೇಕಿದೆ.
ಇದಲ್ಲದೇ, ಇಂತಹ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ತ್ವರಿತವಾಗಿ ನ್ಯಾಯ ಸಿಗುವಂತೆ ಮಾಡುವುದು ಜರೂರಾಗಬೇಕಿದೆ. ಮತ್ತೊಂದೆಡೆ, ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ನ್ಯಾಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ.