ಗೋವಾ, ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿರಲಿಲ್ಲ. ಆದರೂ ಪ್ರತಿಪಕ್ಷಗಳನ್ನು ಒಡೆದು ಸರ್ಕಾರ ರಚಿಸಿದ ಬಿಜೆಪಿ ಮಹಾರಾಷ್ಟ್ರದಲ್ಲಿ ಜನಾದೇಶ ತನ್ನ ಪರವಾಗಿತ್ತೆಂದು ಹೇಳಿಕೊಳ್ಳುವ ನೈತಿಕ ದನಿಯನ್ನು ಕಳೆದುಕೊಂಡಿದೆ. ಜೊತೆಗೆ ದೇಶದ ದೊಡ್ಡ ರಾಜ್ಯವೊಂದರ ಅಧಿಕಾರವೂ ಅದರ ಕೈ ತಪ್ಪಿದೆ.
ನೆರೆಯ ರಾಜ್ಯದ ಈ ಪ್ರಕರಣದಲ್ಲಿ ಪ್ರಧಾನಿ, ಬಿಜೆಪಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಿಗೆ ಗುಣಪಾಠ ಪಾಠಗಳಿವೆ. ಕಲಿಯುವುದು ಬಿಡುವುದು ಅವರವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ.
ಈ ಇಡೀ ರಾಜಕೀಯ ಹಲ್ಲಾಹಲ್ಲಿಯಲ್ಲಿ ಸಾಂವಿಧಾನಿಕ ಸಂಪ್ರದಾಯಗಳನ್ನು ಗಾಳಿಗೆ ತೂರಲಾಯಿತು. ಚುನಾವಣೆಯಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಿ ಜನಾದೇಶ ಕೋರಿದ್ದ ಶಿವಸೇನೆ ಮತ್ತು ಕಾಂಗ್ರೆಸ್-ಎನ್.ಸಿ.ಪಿ. ಸರ್ಕಾರ ರಚಿಸಲು ಕೈ ಕಲೆಸಿ ಮತದಾರರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಾಗ, ಸರ್ಕಾರ ರಚಿಸುವಂತೆ ಬಿಜೆಪಿ ಮತ್ತು ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ.ಯನ್ನು ಆಹ್ವಾನಿಸಿದಾಗ ಕಾಲಾವಕಾಶ ನೀಡಿಕೆಯಲ್ಲ್ಲಿ ರಾಜ್ಯಪಾಲರು ತಾರತಮ್ಯ ತೋರಿದಾಗ, ಪ್ರಧಾನಿಯವರು ಸಂಪುಟ ಸಭೆಯನ್ನು ಕರೆಯದೆ ತುರ್ತುಪರಿಸ್ಥಿತಿಗಳಲ್ಲಿ ಮಾತ್ರ ಪ್ರಯೋಗಿಸಬಹುದಾದ ಅಧಿಕಾರ ಬಳಸಿ ಮಹಾರಾಷ್ಟ್ರದ ಮೇಲೆ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ತಾವೇ ರಾತ್ರೋರಾತ್ರಿ ವಾಪಸು ಪಡೆದಾಗ, ಅಪರಾತ್ರಿಯಲ್ಲೇ ಅದಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದಾಗ, ಈ ಆದೇಶ ಕುರಿತು ಗೃಹಮಂತ್ರಾಲಯ ಬೆಳಗಿನ ರಾತ್ರಿಯೇ ಗೆಜೆಟ್ ಪ್ರಕಟಣೆ ಹೊರಡಿಸಿದಾಗ, ಈ ವಾಪಸಾತಿಯನ್ನು ರಾಜ್ಯಪಾಲರು ಬೆಳಗಿನ ಜಾವ 5.47ಕ್ಕೆ ಘೋಷಿಸಿದಾಗ ಸಾಂವಿಧಾನಿಕ ಸತ್ಸಂಪ್ರದಾಯಗಳು ಮಣ್ಣುಪಾಲಾದವು.
ಮೂವತ್ತು ವರ್ಷಗಳ ಕಾಲದ ಮಿತ್ರಪಕ್ಷ ಶಿವಸೇನೆ ಚುನಾವಣೆಯ ನಂತರ ತನ್ನಿಂದ ದೂರವಾದಾಗ ಅಗತ್ಯ ಶಾಸಕ ಬಲ (145) ತನ್ನ ಬಳಿ ಇಲ್ಲವೆಂದು ಬಿಜೆಪಿ ಸರ್ಕಾರ ರಚನೆಯಿಂದ ಹಿಂದಕ್ಕೆ ಸರಿಯಿತು. ಅದು ಘನತೆಯ ಮತ್ತು ನೈತಿಕ ನಡೆಯೇ ಆಗಿತ್ತು. ಅತಿ ಹೆಚ್ಚು ಶಾಸಕ ಬಲ ಹೊಂದಿದ ಪಕ್ಷ ತಾನೆಂದೂ, ತನ್ನ ಚುನಾವಣಾಪೂರ್ವ ಮಿತ್ರ ಪಕ್ಷ ಶಿವಸೇನೆ ಜನಾದೇಶಕ್ಕೆ ವಿಶ್ವಾಸದ್ರೋಹ ಬಗೆಯಿತೆಂದೂ ದೂರುವ ನೈತಿಕ ಬಲ ಅದಕ್ಕೆ ದಕ್ಕಿತ್ತು. ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ. ಒಂದಾಗಿ ಸರ್ಕಾರ ರಚಿಸುವ ಸಾಧ್ಯತೆಗಳು ದಟ್ಟವಾಗತೊಡಗಿದಂತೆ ಬಿಜೆಪಿ ಸಂಯಮ ಕಳೆದುಕೊಂಡಿತು. ಅಂದು ರಾತ್ರಿಯಿಡಿ ಬಿಜೆಪಿ ಗುಪ್ತ ‘ಕತ್ತಲ ಕಾರ್ಯಾಚರಣೆ. ನಡೆಸಿತು. ಎನ್ಶ್.ಸಿ.ಪಿ. ನಾಯಕ ಅಜಿತ್ ಪವಾರ್ ಅವರನ್ನು ಸೆಳೆದುಕೊಂಡಿತು. ಆ ಪಕ್ಷದ ಶಾಸಕರು ಅಜಿತ್ ಜೊತೆಗಿದ್ದಾರೆಂದೂ, ತಾನು ಸರ್ಕಾರ ರಚಿಸಲು ಬೆಂಬಲಿ ನೀಡಿದ್ದಾರೆಂದೂ ನಂಬಿತ್ತು. ಇದೇ ಅಜಿತ್ ಪವಾರ್ ಮಹಾರಾಷ್ಠ್ರದ ನೀರಾವರಿ ಸಚಿವರಾಗಿದ್ದಾಗ 70-90 ಸಾವಿರ ಕೋಟಿ ರುಪಾಯಿಗಳ ಹಗರಣಗಳನ್ನು ನಡೆಸಿದ್ದಾರೆಂದು ಅಂದು ಪ್ರತಿಪಕ್ಷದಲ್ಲಿದ್ದ ದೇವೇಂದ್ರ ಫಡಣವೀಸ್ ದೊಡ್ಡ ದನಿಯಲ್ಲಿ ಆಪಾದಿಸಿದ್ದರು. ಚುನಾವಣೆ ವಿಷಯವನ್ನಾಗಿಯೂ ಪ್ರಚಾರ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಅಜಿತ್ ಪವಾರ್ ಮುಂಬಯಿಯ ಆರ್ಥರ್ ರೋಡ್ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಭಾಷಣ ಮಾಡಿದ್ದರು. ಭ್ರಷ್ಟ ಮತ್ತು ಕಳಂಕಿತ ಎಂದು ತಾವು ಯಾರನ್ನು ಬಣ್ಣಿಸಿ ಬೀಳುಗಳೆದಿದ್ದರೋ, ಅವರೊಂದಿಗೆ ಸರ್ಕಾರ ರಚನೆಗೆ ಮುಂದಾದರು. ತಾವು ಮುಖ್ಯಮಂತ್ರಿಯಾಗಿಯೂ, ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಕೂಡ ಸ್ವೀಕರಿಸಿದರು. ಕತ್ತಲ ಕಾರ್ಯಾಚರಣೆಯ ನಂತರ ಮುಂಬಯಿಯ ರಾಜಭವನದಲ್ಲಿ ಜರುಗಿದ ಈ ಪ್ರಮಾಣವಚನ ಬಿಜೆಪಿಯ ನೈತಿಕಶಕ್ತಿಯನ್ನು ನಾಶಗೊಳಿಸಿತ್ತು. ಅಜಿತ್ ಅವರ ಹಿಂದೆ ಅವರ ಪಕ್ಷದ ಶಾಸಕರಿಲ್ಲ ಎಂದು ತಿಳಿಯುತ್ತಲೇ ಶಾಸಕರ ಖರೀದಿಯ ಪ್ರಯತ್ನ ನಡೆಯಿತು. ಆದರೆ ಮಂಗಳವಾರ ಮುಂಜಾನೆ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು ಬಿಜೆಪಿಯ ಆಟವನ್ನು ಅಂತ್ಯಗೊಳಿಸಿತ್ತು. ಬುಧವಾರ ಸಂಜೆ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು, ಯಾರು ಯಾರನ್ನು ಬೆಂಬಲಿಸಿದರೆಂದು ನಿಚ್ಚಳವಾಗಿ ತಿಳಿಯುವಂತೆ ಬಹಿರಂಗ ಮತದಾನ ನಡೆಯಬೇಕು ಹಾಗೂ ಈ ಕಲಾಪದ ನೇರ ಟಿವಿ ಪ್ರಸಾರ ಆಗಬೇಕೆಂಬುದಾಗಿ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಕೆಲವೇ ತಾಸುಗಳ ಅಂತರದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ನಂತರ ಬಿಜೆಪಿಯ ಮೂವರು ಮಹಾರಥಿಗಳಾದ ನರೇಂದ್ರ ಮೋದಿ- ಅಮಿತ್ ಶಾ- ಜೆ.ಪಿ.ನಡ್ಡಾ ಸಮಾಲೋಚನೆ ನಡೆಸಿ ಶರಣಾಗತಿಯಲ್ಲದೆ ಬೇರೆ ದಾರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದರು. ಅವರ ಸೂಚನೆಯಂತೆ ಅಪರಾಹ್ಣದ ಹೊತ್ತಿಗೆ ಫಡಣವೀಸ್ ರಾಜೀನಾಮೆ ನೀಡಿದರು.
ಹೀಗೆ ಬಿಜೆಪಿ ತನ್ನ ಹಲ್ಲನ್ನು ತಾನೇ ಮುರಿದುಕೊಂಡಿತು. ತನ್ನ ಮುಖಕ್ಕೆತಾನೇ ಮಸಿ ಬಳಿದುಕೊಂಡಿತು. ಅಧಿಕಾರದ ಹಪಾಹಪಿಗೆ ಬಲಿಯಾಗಿ ನೈತಿಕತೆಗೆ ಎಳ್ಳು ನೀರು ಬಿಟ್ಟಿತು. ಅಜಿತ್ ಪವಾರ್ ತಮ್ಮ ಮುಖಕ್ಕೆ ಮೆತ್ತಿದ್ದ ಮಸಿಯನ್ನು ಬಿಜೆಪಿಗೆ ಬಳಿದು ಮಂಗಳವಾರ ಸಂಜೆಯೇ ತಮ್ಮ ಪಕ್ಷಕ್ಕೆ ವಾಪಸಾದರು. ನೂರು ಈರುಳ್ಳಿ ಇಲ್ಲವೇ ನೂರು ಛಡಿ ಏಟು ತಿನ್ನುವ ಶಿಕ್ಷೆಯ ಕತೆಯಲ್ಲಿ ಕಡೆಗೆ ಎರಡನ್ನೂ ತಿನ್ನುವ ಅವಿವೇಕಿಯಂತಾಯಿತು ಬಿಜೆಪಿ. ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ ನಂತರ ಅವರ ಮೇಲಿನ ಹಗರಣಗಳ ಆಪಾದನೆಯನ್ನು ತಾನೇ ತೊಳೆದಂತಾಯಿತಲ್ಲವೇ? ಸದ್ಯಕ್ಕೆ ಈ ಆಪಾದನೆಗಳನ್ನು ಪುನಃ ಅವರ ಮೇಲೆ ಹೇರಿ ಹೀಗಳೆಯುವ ನೈತಿಕ ಅಧಿಕಾರವನ್ನು ಕಳೆದುಕೊಂಡಿತು. ಖುದ್ದು ಫಡಣವೀಸ್ ಅವರ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಿದೆ. ಪಕ್ಷದೊಳಗಿನ ಅವರ ಪ್ರತಿಸ್ಫರ್ಧಿಗಳಿಗೆ ಹೆಚ್ಚಿನ ಬಲ ದೊರೆತಂತಾಗಿದೆ.
ಶಿವಸೇನೆ ಮತ್ತು ಕಾಂಗ್ರೆಸ್-ಎನ್.ಸಿ.ಪಿ. ಗಳು ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ಧೃವಗಳ ಪಕ್ಷಗಳು. ಬಿಜೆಪಿಯೆಡೆಗಿನ ವಿರೋಧ ಮತ್ತು ರಾಜ್ಯಾಧಿಕಾರ ಈ ಪಕ್ಷಗಳನ್ನುಹತ್ತಿರ ತಂದಿದೆ. ಅವಕಾಶವಾದದ ತಳಪಾಯದ ಮೇಲೆ ನಿಂತಿರುವ ಈ ಮೈತ್ರಿ ತೆಳುವಾದದ್ದು. ಅಂತರ್ವಿರೋಧಗಳು ಮೇಲೆ ತೇಲಿದರೆ ಅವಸಾನ ಖಚಿತ. ಇಂತಹ ಸಾಧ್ಯತೆಗಾಗಿ ಕಾದು ಪ್ರತಿಪಕ್ಷದ ಸಾಲಿನಲ್ಲಿ ಕುಳಿತು ಜವಾಬ್ದಾರಿ ನಿಭಾಯಿಸುವ ವಿವೇಕವನ್ನು ಬಿಜೆಪಿ ತೋರಬೇಕಿತ್ತು. ತನ್ನ ಆತುರ- ಅವಿವೇಕದಿಂದಾಗಿ ತನ್ನ ವಿರೋಧಿ ಮೈತ್ರಿಕೂಟವನ್ನು ಇನ್ನಷ್ಟು ಬಲಪಡಿಸಿದೆ. ಹೌದು, ಬಿಜೆಪಿ ನೀಡಿದ ಅನಿರೀಕ್ಷಿತ ಆಘಾತದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ ಈ ಪಕ್ಷಗಳಲ್ಲಿ ಪರಸ್ಪರ ವಿಶ್ವಾಸ ಹೆಚ್ಚಿದೆ.
ನೆನಪಿದೆಯೇ…ಮೈತ್ರಿಕೂಟದ ಮಾತುಕತೆಗಳು ವಾರಗಟ್ಟಲೆ ಹಿಗ್ಗಿದ್ದವು. ಪರಸ್ಪರ ಅಪನಂಬಿಕೆಯೇ ಈ ವಿಳಂಬದ ಮೂಲವಾಗಿತ್ತು. ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸಲು ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ವಾರ ಹಿಡಿದಿತ್ತು. ಆದರೆ ಬಿಜೆಪಿಯ ಕತ್ತಲ ಕಾರ್ಯಾಚರಣೆ ಈ ಸ್ಥಿತಿಯನ್ನು ಸದ್ಯಕ್ಕಾದರೂ ಸುಧಾರಿಸಿಬಿಟ್ಟಿದೆ. ಐದು ವರ್ಷಗಳ ಅವಧಿಯನ್ನು ಪೂರೈಸುವ ಮೈತ್ರಿ ಕೂಟದ ಸಂಕಲ್ಪವನ್ನು ಗಟ್ಟಿಗೊಳಿಸಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಕತ್ತಲ ಕಾರ್ಯಾಚರಣೆಯ ದೆಹಲಿ ಸೂತ್ರಧಾರರ ಅಹಮಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ. ರಾಜಕಾರಣದ ಓಣಿಗಳು, ಕಿರುದಾರಿಗಳು, ಅಡ್ಡದಾರಿಗಳು, ಹೆದ್ದಾರಿಗಳಲ್ಲಿ ಅಡ್ಡಾಡಿದ ಆರು ದಶಕಗಳ ಅನುಭವವಿರುವ ಹಿರಿಯ ಹುದ್ದರಿ ಶರದ್ ಪವಾರ್ ತಮಗೆ ಸುಲಭದ ತುತ್ತು ಎಂದು ಬಗೆದದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಸಂಖ್ಯಾಬಲ ಇಲ್ಲದಿದ್ದರೂ, ಹಣದ ಥೈಲಿಗಳು, ಆದಾಯತೆರಿಗೆ ಇಲಾಖೆ- ಜಾರಿ ನಿರ್ದೇಶನಾಲಯ- ಸಿಬಿಐ ಅಸ್ತ್ರಗಳನ್ನು ಝಳಪಿಸಿ ಲೀಲಾಜಾಲವಾಗಿ ಬಿಜೆಪಿ ಸರ್ಕಾರಗಳನ್ನು ರಚಿಸಿ ತಮ್ಮ ಪ್ರಶಂಸಕರಿಂದ ‘ಚಾಣಕ್ಯ’ ಎಂಬ ಬಿರುದಾಂಕಿತರಾಗಿದ್ದವರು ಬಿಜೆಪಿ ಅಧ್ಯಕ್ಷ ಮತ್ತು ಗೃಹಮಂತ್ರಿ ಅಮಿತ್ ಶಾ. ಆದರೆ ಮಹಾರಾಷ್ಟ್ರದಲ್ಲಿ ಹೇಗೆ ಸರ್ಕಾರ ರಚಿಸುತ್ತಾರೋ ನೋಡಿಯೇ ಬಿಡುತ್ತೇನೆ ಎಂದು ಸವಾಲೆಸೆದಿದ್ದರು ಶರದ್ ಪವಾರ್. ನರೇಂದ್ರ ಮೋದಿ- ಅಮಿತ್ ಶಾ ಜೋಡಿಯ ಆಟ ನಡೆಯದಂತೆ ತಿರುಗೇಟು ನೀಡಿದ್ದಾರೆ.
ಆದರೆ ಈ ಮುಖಭಂಗವನ್ನು ನುಂಗಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಈ ಜೋಡಿ. ಹೊಂಚು ಹಾಕಿ ಮತ್ತೆ ಎದುರಾಳಿಯ ಮೇಲೆ ಎರಗಿ ಕೆಡುವ ಪ್ರಯತ್ನವನ್ನು ಕೈ ಬಿಡುವುದಿಲ್ಲ. ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಿಗದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಬಿ.ಎಸ್. ಯಡಿಯೂರಪ್ಪ. ಸುಪ್ರೀಮ್ ಕೋರ್ಟ್ ಮಧ್ಯಪ್ರವೇಶದ ನಂತರ ಕುದುರೆ ವ್ಯಾಪಾರವೂ ಕೈಗೂಡದೆ ಹೋಗಿತ್ತು. ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಗೆ ಮುನ್ನವೇ ರಾಜೀನಾಮೆ ನೀಡಬೇಕಾಯಿತು. ಕಾಂಗ್ರೆಸ್- ಜಾತ್ಯತೀತ ದಳದ ಸರ್ಕಾರವನ್ನು ಹಲವು ವಿಫಲ ಪ್ರಯತ್ನಗಳ ನಂತರ ಕಡೆಗೂ ಕೆಡವಲಾಯಿತು. ಕಾಂಗ್ರೆಸ್ ಮತ್ತು ದಳದ ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸಿ, ಸದನದ ಸಂಖ್ಯಾಬಲವನ್ನು ಕುಗ್ದಿಸಿ, ಅದಕ್ಕೆ ಅನುಗುಣವಾಗಿ ತಗ್ಗಿದ ಸಂಖ್ಯಾಬಲವನ್ನು ರುಜುವಾತು ಮಾಡಿ ವಿಶ್ವಾಸಮತ ಗೆಲ್ಲಲಾಯಿತು. ಈ ಕಾರ್ಯಾಚರಣೆಯ ಹಿಂದೆ ಅಮಿತ್ ಶಾ ಅವರ ಕಾರ್ಯತಂತ್ರವಿತ್ತು ಎಂಬುದು ನಿರ್ವಿವಾದದ ಸಂಗತಿ.
ಕರ್ನಾಟಕದ ಈ ಯಶಸ್ವೀ ಪ್ರಯೋಗ ಮಹಾರಾಷ್ಟ್ರದಲ್ಲಿ ಜಾರಿಯಾಗುವ ದಟ್ಟ ಸಾಧ್ಯತೆಗಳಿವೆ. ಶರದ್ ಪವಾರ್ ಎಂಬ ಗುರಾಣಿ ಆಗಲೂ ಅಡ್ಡ ಬರಲಿದೆಯೇ ಕಾದು ನೋಡಬೇಕಿದೆ.
ಒಂದು ಮಾತನ್ನು ಹೇಳಲೇಬೇಕಿದೆ. ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ನಡೆದ ನಿರ್ಲಜ್ಜ ನಗ್ನ ಕುಣಿತದಲ್ಲಿ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಬೆತ್ತಲಾಗಿವೆ. ಸಂಸದೀಯ ಜನತಾಂತ್ರಿಕ ವ್ಯವಸ್ಥೆಯ ಬಲವನ್ನು ಇನ್ನಷ್ಟು ಕುಂದಿಸಿವೆ. ಈ ಕೃತ್ಯದಲ್ಲಿ ಬಿಜೆಪಿಯದು ಸಿಂಹಪಾಲು.