ಇತ್ತೀಚಿನ ದಿನಗಳಲ್ಲಿ ಕೋಮು ಸೌಹಾರ್ದತೆ ಕದಡುವಂತಹ, ಜಾತಿ – ಧರ್ಮಗಳ, ಮಂದಿರ ಮಸೀದಿಗಳ ವಿಚಾರವಾಗಿ ಗಲಾಟೆಯಾಗುವ ಸಾಕಷ್ಟು ಗಲಭೆಗಳು ನಡೆಯುತ್ತಿದ್ದು, ಇದಕ್ಕೆ ವಿರುದ್ಧ ಎನ್ನುವಂತೆ ಗದಗ್ ನಲ್ಲಿ ಒಂದು ಅಪರೂಪದ ಪೂಜೆ ನಡೆದಿದೆ. ಇಲ್ಲಿ ನಿಮಗೆ ಮಸೀದಿಯಲ್ಲಿ ಘಂಟಾನಾದ ಮೊಳಗುವ ಸದ್ದು ಕೇಳಿತು. ಅಲ್ಲಿ ನೂರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕುಳಿತಿದ್ದರು. ಹಿರಿಯ ಸ್ವಾಮಿಗಳಾದ ಟಿ ಎನ್ ಗುರುಸ್ವಾಮಿಯವರು ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಇದು ನಡೆದಿದ್ದು ಗದುಗಿನ ಖಾನತೋಟ ಪ್ರದೇಶದ ಇಮಾಮ್ ಖಾಸಿಮ್ ಪಂಜದ್ ಮಸೀದಿಯಲ್ಲಿ.
ಅಂದಹಾಗೆ ಈ ಪೂಜೆ ನಡೆದದಿದ್ದು 4 ಘಂಟೆಗಳ ಕಾಲ. ಬೆಳಿಗ್ಗೆ 6-00 ಗಂಟೆಗೆ ಗಂಗಾಪೂರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳನ್ನು ಮತ್ತು ಗುರುಸ್ವಾಮಿಗಳನ್ನು ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಖಾನತೋಟ ಇಮಾಮಕಾಸೀಮ ಪಂಜದ ಮಸೂತಿಗೆ ಬರಮಾಡಿಕೊಳ್ಳಲಾಯಿತು. ಇಲ್ಲಿ ಅಯ್ಯಪ್ಪನಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಭಜನೆಯೊಂದಿಗೆ ವಿಧಿ, ವಿಧಾನಗಳಂತೆ ಮಹಾಪೂಜೆ ನೆರವೇರಿಸುವುದರೊಂದಿಗೆ ಗೋಡೆಗಳಿಗೆ ಅಂಟಿಸಿದ ವಿವಿಧ ಪಂಜದ ಮಸೂತಿಗಳ ಭಾವಚಿತ್ರಗಳಿಗೂ ಆರತಿ ಬೆಳಗಿ ಭಕ್ತಿಯಿಂದ ನೆರವೇರಿಸಲಾಯಿತು. ಅಲ್ಲಿ ಗುರುಸ್ವಾಮಿಗಳ ಜೊತೆಗೆ ಪೂಜೆಯನ್ನು ಆರಂಭಿಸಿದವರು ಅಬ್ದುಲ್ ಮುನಾಫ್ ಮುಲ್ಲಾ. ಈ ಪೂಜೆ ನಡೆದಿದ್ದು ಜನವರಿ ಮೊದಲನೇಯ ವಾರದಲ್ಲಿ. ನಂತರ ಅಯ್ಯಪ್ಪ ಮಾಲಾಧಾರಿಗಳಿಗೆ ಶಬರಿ ಮಲೈ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಲು ಬಿಳ್ಕೊಡುವ ಸಮಾರಂಭ ನಡೆಯಿತು.

ಈ ಬಗ್ಗೆ ಅಬ್ದುಲ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ, “ಜಾತಿ, ಮತ, ಎಲ್ಲಾ ದೇವರನ್ನು ಒಂದೇ ಎಂದು ನಂಬಿದ್ದೇನೆ. ಉಪಜೀವನಕ್ಕೆ ಸೆಂಟ್ರಿಂಗ್ ಪ್ಲೇಟ್ಸ್ ಭಾಡಿಗೆ ಕೊಡುತ್ತೇನೆ. ಅದರಂತೆ ನಮ್ಮ ಇಮಾಮ ಕಾಸೀಮ ಪಂಜದ ಮಸೂತಿಯಲ್ಲೇ ಅಯ್ಯಪ್ಪ ಸ್ವಾಮಿ ಮಹಾಪೂಜೆ ನೆರವೇರಿಸಬೇಕು ಎಂಬ ನನ್ನ ಇಂಗಿತಕ್ಕೆ ಮನೆಯವರು, ಬಳಗದವರು ಒಪ್ಪಿದರು”.
ಅವರು ತಮ್ಮ ಮುಲ್ಲಾ ಕುಟಂಬದವರಿಂದ ಅಲಾಯಿ ದೇವರ ಸನ್ನಿಧಿಯಲ್ಲಿ ಅಯ್ಯಪ್ಪನ ಆರಾಧನೆ ಅನ್ನಸಂತರ್ಪಣೆ ಹಾಗೂ ಸನ್ಮಾನ, ಧಾರ್ಮಿಕ ಸೌಹಾರ್ದ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ ಕಳೆದ ವರ್ಷದಂತೆ ಈ ಸಲ ಎರಡನೇಯ ವರ್ಷದ ಅಯ್ಯಪ್ಪನ ಮಹಾಪೂಜೆಗೆ ಅಗತ್ಯ ಪೂಜಾ ಸಾಮಗ್ರಿಗಳನ್ನು ನೀಡಿ ಮಹಾಪೂಜೆ ನೆರವೇರಿಸಿದ್ದು ಖುಷಿ ಮತ್ತು ನೆಮ್ಮದಿ ತಂದಿದೆ ಎಂದರು.
ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿದ ಶಿವರೆಡ್ಡಿ (ಟಿ.ಎನ್) ಗುರುಸ್ವಾಮಿಗಳು, “ವಿವಿಧ ಸಂಘಟನೆಗಳು ಸೇರಿದಂತೆ ಮುಸ್ಲಿಂ ಸಂಘಟನೆಯಿಂದ ಸಾರ್ವಜನಿಕ ಅಯ್ಯಪ್ಪ ಪೂಜೆ ಏರ್ಪಡಿಸಲಾಗುತ್ತದೆ. ಆದರೆ ಇಮಾಮ ಕಾಸೀಂ ಪಂಜದ ಮಸೂತಿಯಲ್ಲಿ ಅಯ್ಯಪ್ಪ ಪೂಜೆ ನೇರವೇರಿಸಿರುವುದು ಎರಡನೇ ಸಲ ಇಂತಹ ಆಚರಣೆಗಳಿಂದ ಜನರಲ್ಲಿನ ಧಾರ್ಮಿಕ ವೈರುಧ್ಯ ಭಾವನೆಗಳು ಬದಲಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅತೀವ ಸಂತಸವೆನಿಸುತ್ತದೆ”. ಎಂದರು.

ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಮೈಲಾರಪ್ಪ ಬೆಳಧಡಿಯವರ ಪ್ರಕಾರ, “ನಗರದ ಜುಮ್ಮಾ ಮಸೂತಿ (ಮಸೀದಿ), ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನಗಳಿಗೆ ಇಂದಿಗೂ ಒಂದೇ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಸೌಹಾರ್ದ ದೇಶಕ್ಕೆ ಮಾದರಿ ಅದರಂತೆ ಇಲ್ಲಿನ ಖಾನತೋಟದ ಇಮಾಮಕಾಸೀಮ ಪಂಜದ ಮಸೂತಿಯಲ್ಲಿ ಸ್ವಾಮಿ ಅಯ್ಯಪ್ಪನ ಮಹಾಪೂಜೆ ನೆರವೇರಿಸಿ ಸಾವಿರಾರು ಭಕ್ತರಿಗೆ ಅನ್ನದಾಸೋಹ ನೀಡಿ ಗುರುಸ್ವಾಮಿಗಳಿಗೆ ಮತ್ತು ದೀಕ್ಷೆ ತೆಗೆದುಕೊಂಡ ಗುರುಸ್ವಾಮಿಗಳಿಗೆ ಸತ್ಕರಿಸಿ ಕಾಣಿಕೆ ನೀಡಿ ನೂರಾರು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕರಿಸುವ ಮೂಲಕ ಇಮಾಮಕಾಸೀಮ ಪಂಜದ ಮಸೂತಿಯ ಹೊಣೆ ಹೊತ್ತಿರುವ ಅಬ್ದುಲ ಮುನಾಫ ಮುಲ್ಲಾರವರ ಕುಟುಂಬ ಸೌರ್ಹಾದತೆ ಸಾರಿದೆ”.
ಈ ಪೂಜೆಯ ಕುರಿತು ಹರ್ಷ ವ್ಯಕ್ತಪಡಿಸಿದ ನಾಗರೀಕರು ಇಂತಹ ಕೋಮು ಸೌಹಾರ್ದತಾ ಕಾರ್ಯಗಳು ನಡೆದು ಎಲ್ಲರೂ ದ್ವೇಷ ಬಿಟ್ಟು ಪ್ರೀತಿಯಿಂದ ಸಹಬಾಳ್ವೆ ನಡೆಸಬೇಕು. ಅಂದಿಗೆ ನಾವೊಂದು ಸುಂದರ ದೇಶವನ್ನು ಕಾಣಬಹುದು. ಈ ಕಾರ್ಯ ನಡೆಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.
ಅಬ್ದುಲ್ ಮುನಾಫ್ ಅವರ ಕುಟುಂಬ ಹಾಗೂ ಮಸೀದಿಯ ಎಲ್ಲ ಸದಸ್ಯರು ಮುಂದೆ ಬಂದಿ ಇಂತಹ ಕಾರ್ಯಗಳು ಇತರರಿಗು ಮಾದರಿಯಾಗಲಿ…ಅಲ್ಲವೇ….?