ನಗರ ಪ್ರದೇಶಗಳಲ್ಲಿ ಮಲ್ಟಿಪ್ಲೆಕ್ಸ್, ಮಾಲ್ ಸಂಸ್ಕೃತಿ ಬಂದು ಜನಸಾಮಾನ್ಯ ಸಿನೆಮಾ ನೋಡಿ ಮನೋರಂಜನೆ ಪಡೆಯುವುದೇ ದುಸ್ಥರ ಎನಿಸಿದೆ. ಸಿನೆಮಾ ನೋಡಲು ನೂರಾರು ರೂಪಾಯಿ ಖರ್ಚು ಮಾಡಿದರೆ, ಅಲ್ಲಿ ಇಂಟರ್ವಲ್ ಸಮಯದಲ್ಲಿ ಸ್ನ್ಯಾಕ್ಸ್ ತಿನ್ನಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆಯನ್ನು ಈ ಮಲ್ಟಿಪ್ಲೆಕ್ಸ್ ಎಂಬ ಬಹುರಾಷ್ಟ್ರೀಯ ಸಂಸ್ಕೃತಿಯ ಕಂಪನಿಗಳು ತಂದಿಟ್ಟಿವೆ.
ಅಂದರೆ, ಮಾಮೂಲಿ ಸಿನೆಮಾ ಟೆಂಟ್ ಗಳು ಮತ್ತು ಚಿತ್ರಮಂದಿರಗಳ ರೀತಿಯಲ್ಲಿ ಈ ಮಲ್ಟಿಪ್ಲೆಕ್ಸ್ ಎಂಬ ಹವಾನಿಯಂತ್ರಿತ ಸಿನೆಮಾ ಮಂದಿರದೊಳಗೆ ತಿಂಡಿತಿನಿಸುಗಳನ್ನು ಒಳಗೆ ಬಿಡುವುದೇ ಇಲ್ಲ. ಈ ಚಿತ್ರಮಂದಿರಗಳೇ ಒತ್ತಾಯಪೂರ್ವಕವಾಗಿ ದುಬಾರಿ ಬೆಲೆಯ ಸ್ನ್ಯಾಕ್ಸ್ ಅನ್ನು ತಿನ್ನುವಂತೆ ಮಾಡುತ್ತವೆ. ಏಕೆಂದರೆ, ಅಲ್ಲೂ ಸ್ನ್ಯಾಕ್ಸ್ ಅಂಗಡಿ ಇಟ್ಟವನಿಂದ ದುಪ್ಪಟ್ಟು ಹಣ ಕಮೀಷನ್ ಬರುತ್ತದೆ.
ಅದಕ್ಕೇ ಹೇಳಿದ್ದು, ಸಿನೆಮಾ ನೋಡಲು ಒಂದು ಟಿಕೆಟ್ ಬೆಲೆ ಸುಮಾರು 200 ರೂಪಾಯಿ ಇರುತ್ತದೆ. ಆದರೆ, ಅಲ್ಲಿ ಪಾಪ್ ಕಾರ್ನ್ ಮತ್ತು ಇತರೆ ಯಾವುದೇ ಆಹಾರ ಪದಾರ್ಥವನ್ನು ಖರೀದಿಸಿದರೂ ಟಿಕೆಟ್ ಬೆಲೆಗಿಂತ ಎರಡು ಪಟ್ಟು ಬೆಲೆ ಇರುತ್ತದೆ.
ಮಲ್ಟಿಪ್ಲೆಕ್ಸ್ ಗಳ ಅಂಗಡಿಯವನು ಇಲ್ಲಿ 200 ರೂಪಾಯಿಗೆ ಕೊಡುವ ಇದೇ ಪಾಪ್ ಕಾರ್ನ್ ಅನ್ನು ಹೊರಗಡೆ 20-40 ರೂಪಾಯಿಗೆ ಕೊಡುತ್ತಾರೆ. ಅಂದರೆ, ಇಲ್ಲಿ ಗ್ರಾಹಕನ ಶೋಷಣೆ ಎಗ್ಗಿಲ್ಲದೇ ಸಾಗಿದೆ. ಇನ್ನು ಚಿಕ್ಕಮಕ್ಕಳಿಗೆ ತಿನಿಸಲೆಂದೇ ಏನಾದರೂ ಆಹಾರ ಪದಾರ್ಥಗಳನ್ನು ಬ್ಯಾಗಿನೊಳಗೆ ಇಟ್ಟುಕೊಂಡು ಹೋದರೆ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ಅದನ್ನು ಬಿಡುವುದಿಲ್ಲ ಎಂದು ವರಾತ ಶುರುವಿಟ್ಟುಕೊಳ್ಳುತ್ತಾರೆ.
ಅಷ್ಟಕ್ಕೂ ವಾಸ್ತವವಾಗಿ ಸಿನೆಮಾ ಮಂದಿರ ಅಥವಾ ಈ ಮಲ್ಟಿಪ್ಲೆಕ್ಸ್ ಗಳೊಳಗೆ ಆಹಾರ ಪದಾರ್ಧಗಳನ್ನು ಬಿಡಬಾರದು ಎಂಬ ಕಾನೂನಿದೆಯೇ? ಇರುವುದಾದರೆ, ಮಲ್ಟಿಪ್ಲೆಕ್ಸ್ ಆವರಣದಲ್ಲಿ ಖರೀದಿ ಮಾಡುವ ಆಹಾರ ಪದಾರ್ಥಗಳನ್ನು ಮಾತ್ರ ಮಂದಿರದೊಳಗೆ ಏಕೆ ಬಿಡಲಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಎದುರಾಗುತ್ತವೆ.
ಆಹಾರ ಪದಾರ್ಥಗಳನ್ನು ಒಳಗೆ ನಿಷೇಧಿಸುವ ಕಾನೂನು ಎಲ್ಲಿಯೂ ಇಲ್ಲ. ಪ್ರೇಕ್ಷಕರು ಮುಕ್ತವಾಗಿ ಆಹಾರ ಪದಾರ್ಥಗಳನ್ನು ಸಿನೆಮಾ ಮಂದಿರದೊಳಗೆ ತೆಗೆದುಕೊಂಡು ಹೋಗಬಹುದು. ಇದನ್ನು ಯಾರೂ ತಡೆಯುವಂತಿಲ್ಲ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಸಿನೆಮಾ ನಿಯಂತ್ರಣ ಕಾಯ್ದೆ 1955 ರಲ್ಲಿ ದುರ್ಬೀನು ಹಾಕಿಕೊಂಡು ನೋಡಿದರೂ ಎಲ್ಲಿಯೂ ಸಿನೆಮಾ ಮಂದಿರದೊಳಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಉಲ್ಲೇಖಿಸಿರುವುದು ಸಿಗುವುದೇ ಇಲ್ಲ.
ಆದರೆ, ನಮ್ಮ ದೇಶದಲ್ಲಿ ಸಿನೆಮಾ ಮಂದಿರಗಳ ಲಾಬಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ಕಾನೂನಿನಲ್ಲಿ ನಿಷೇಧ ಇಲ್ಲದಿದ್ದರೂ ಅಲಿಖಿತವಾಗಿ ತಾನೇ ಕಾನೂನು ರೂಪಿಸಿ ಆಹಾರ ಪದಾರ್ಥಗಳನ್ನು ಸಿನೆಮಾ ಮಂದಿರದೊಳಗೆ ನಿಷೇಧ ಮಾಡಿವೆ.
ಏಕೆಂದರೆ, ಈ ರೀತಿ ನಿಷೇಧ ಹೇರಿದರೆ ಚಿತ್ರಮಂದಿರದ ಆವರಣದೊಳಗೆ ಅವರೇ ಸ್ಥಾಪಿಸುವ ಅಥವಾ ಗುತ್ತಿಗೆ ನೀಡುವ ಅಂಗಡಿಗಳಲ್ಲಿ ಹತ್ತಾರು ಪಟ್ಟು ಬೆಲೆ ನಿಗದಿ ಮಾಡಿ ಪ್ರೇಕ್ಷಕರನ್ನು ವಂಚಿಸಿ ದುಪ್ಪಟ್ಟು ಹಣ ಮಾಡಿಕೊಳ್ಳುವ ಸಂಚು ಇದು ಎಂಬುದು ಸ್ಪಷ್ಟವಾಗುತ್ತದೆ.
ಆಹಾರದ ಮೇಲೆ ನಿಷೇಧ ಹೇರದಿರುವ ವಿಚಾರ ಹೈದ್ರಾಬಾದ್ ನಲ್ಲಿ ಇತ್ತೀಚೆಗೆ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ವಿಜಯ ಗೋಪಾಲ ಎಂಬುವರು ಅಲ್ಲಿನ ಪೊಲೀಸ್ ಇಲಾಖೆಗೆ ಪತ್ರ ಬರೆದು ಮಲ್ಟಿಪ್ಲೆಕ್ಸ್ ನಂತಹ ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳನ್ನು ನಿಷೇಧಿಸಿರುವ ಬಗ್ಗೆ ಮಾಹಿತಿ ಕೇಳಿದ್ದರು.
ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಪೊಲೀಸ್ ಅಧಿಕಾರಿಗಳು, ಇಂತಹ ಯಾವುದೇ ನಿಷೇಧ ಹೇರುವ ಕಾನೂನು ಜಾರಿಯಲ್ಲಿಲ್ಲ. ಪ್ರೇಕ್ಷಕರು ಆಹಾರ ಪದಾರ್ಥಗಳನ್ನು ಚಿತ್ರಮಂದಿರದೊಳಗೆ ಕೊಂಡೊಯ್ಯಲು ನಿರ್ಬಂಧಿಸುವಂತಿಲ್ಲ. ಅದಕ್ಕೆ ಅವರು ಮುಕ್ತರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಈ ಬಗ್ಗೆ ಚಿತ್ರಮಂದಿರಗಳ ಮಾಲೀಕರು ಚಿತ್ರಮಂದಿರಗಳ ಲಾಬಿಯಲ್ಲಿ ಆಹಾರ ಪದಾರ್ಥಗಳನ್ನು ನಿಷೇಧಿಸಿ ಸಾಕಷ್ಟು ವರ್ಷಗಳೇ ಆಗಿವೆ ಎಂದು ಹೇಳುತ್ತಾರಾದರೂ ಈ ಬಗ್ಗೆ ಕಾನೂನಿರುವ ಆದೇಶದ ಪ್ರತಿಯನ್ನು ಕೊಡುವಂತೆ ಕೇಳಿದರೆ ಹಿಂದೆ ಸರಿಯುತ್ತಾರೆ. ಅಂದರೆ, ಈ ಬಗ್ಗೆ ಯಾವುದೇ ಕಾನೂನು ಇಲ್ಲದಿದ್ದರೂ ತಾವೇ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿರುವ ಕಾನೂನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇಲ್ಲೊಂದು ಆಘಾತಕಾರಿ ವಿಚಾರವಿದೆ. ಅದೆಂದರೆ, ಮಲ್ಟಿಪ್ಲೆಕ್ಸ್ ಗಳ ಲಾಬಿಗಳಲ್ಲಿ ಇಟ್ಟಿರುವ ಅಂಗಡಿಗಳು ಆಹಾರ ಉತ್ಪನ್ನಗಳನ್ನು ಶೇ.200 ರಿಂದ 300 ರಷ್ಟು ಹೆಚ್ಚು ಲಾಭದಲ್ಲಿ ಮಾರಾಟ ಮಾಡುತ್ತವೆ. ಆದರೆ, ಈ ಬಗ್ಗೆ ಪ್ರಶ್ನಿಸುವವರಿಲ್ಲ. ಒಂದು ವೇಳೆ ಪ್ರಶ್ನಿಸಿದರೂ ಅಲ್ಲಿ ಮಾರಾಟ ಮಾಡುವ ಬಹುತೇಕ ಉತ್ಪನ್ನಗಳಿಗೆ ಗರಿಷ್ಠ ಮಾರಾಟ ದರವೇ ಇರುವುದಿಲ್ಲ!
ಸಾರ್ವಜನಿಕರಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಚಿತ್ರಮಂದಿರದೊಳಗೆ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಚಿತ್ರಮಂದಿರಗಳ ಆಟಾಟೋಪಕ್ಕೆ ಕಡಿವಾಣ ಹಾಕಿ ಚಿತ್ರಮಂದಿರದೊಳಗೆ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಅವಕಾಶ ನೀಡುವುದು ಒಳಿತು.