ಮರಿದೇವಯ್ಯ…ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್‍ಡಿ ಅಧ್ಯಯನ ನಡೆಸುತ್ತಿರುವ ದಲಿತ ಯುವಕ. ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರೂ ಹೌದು. ಮೈಸೂರಿನಲ್ಲಿ ನಡೆಯುವ ಯಾವುದೇ ಸಾಮಾಜಿಕ ಪ್ರತಿಭಟನೆಗಳಿರಲಿ ಇವರು ಅಲ್ಲಿ ಹಾಜರ್. ಸಾಮಾಜಿಕ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಇವರು ಇದೀಗ ರಾಷ್ಟ್ರದ್ರೋಹದ ಆರೋಪ ಎದುರಿಸುತ್ತಿದ್ದಾರೆ. ನವದೆಹಲಿಯ ಜೆಎನ್‍ಯುನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿರುದ್ಧ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಹೋರಾಟದ ಸಮಯದಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಘೋಷಣೆಯ ಫಲಕ ಹಿಡಿದ ಘಟನೆಗೆ ಸಂಬಂಧಿಸಿ, ಮರಿದೇವಯ್ಯ ಮೇಲೆ ರಾಜದ್ರೋಹದ ಕಾನೂನಿನ ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಇವೆಲ್ಲದರ ನಡುವೆ ಈ ಯುವತಿ ಸಿಎಎ ವಿರುದ್ಧ-ಜೆಎನ್‍ಯು ಪರ ಹೋರಾಟದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸುವ ಮೂಲಕ ಎಬಿವಿಪಿಗೆ ಪರೋಕ್ಷವಾಗಿ ಕ್ಯಾಂಪಸ್‍ನಲ್ಲಿ ತಳವೂರಲು ನೆರವಾಗಿದ್ದಾರೆ ಎಂಬ ಆರೋಪ ಪ್ರಗತಿಪರ ವಿದ್ಯಾರ್ಥಿಗಳಿಂದಲೇ ಕೇಳಿ ಬಂದಿದೆ.
“ನಮ್ಮ ಹೋರಾಟವೇನಿದ್ದರೂ, ಜೆಎನ್‍ಯು ಆಡಳಿತದ ವಿರುದ್ಧವಾಗಿತ್ತು. ಅಲ್ಲಿನ ಉಪಕುಲಪತಿ ರಾಜೀನಾಮೆಗೆ ಒತ್ತಾಯ, ವಿದ್ಯಾರ್ಥಿಗಳಿಗೆ ರಕ್ಷಣೆ, ಗಲಭೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾವು ಐದು ಸಂಘಟನೆಗಳ ಜತೆ ಸೇರಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಈ ಪ್ರತಿಭಟನೆಗೂ, ಇಡೀ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ,” ಎನ್ನುತ್ತಾರೆ ಮರಿದೇವಯ್ಯ.
“ನಾವ್ಯಾಕೆ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಲಿ? ನಮಗೆ ಇಡೀ ಈ ಫ್ರೀ ಕಾಶ್ಮೀರದ ಫಲಕ ಹಿಡಿದ ಯುವತಿ ಯಾರೆಂದೇ ತಿಳಿದಿಲ್ಲ. ನಮಗೂ ಆಕೆಗೂ ಸಂಬಂಧವಿಲ್ಲ. ಆಕೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಅಲ್ಲ,” ಎನ್ನುತ್ತಾರೆ ಮರಿದೇವಯ್ಯ.
“ನಮ್ಮ ಪ್ರತಿಭಟನೆ ಏನಿದ್ದರೂ ಜೆಎನ್‍ಯು ವಿದ್ಯಾರ್ಥಿಗಳಿಗೆ ನೀಡುವುದಾಗಿತ್ತು. ನಮಗೂ ಕಾಶ್ಮೀರ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ ಮರಿದೇವಯ್ಯ.
ಅಷ್ಟಕ್ಕೂ ಪೊಲೀಸರು ರಾಜದ್ರೋಹದ ಆರೋಪ ಹೊರಿಸಿದ್ದೇಕೆ? ಇದೊಂದು ಆಸಕ್ತಿದಾಯಕ ಸಂಗತಿ. ಪೊಲೀಸರು ಇಡೀ ಘಟನೆಗೆ ಸಂಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿರುವುದು ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ನೀಡಿರುವ ದೂರನ್ನು ಆಧರಿಸಿ. ಈ ಕಾನ್‍ಸ್ಟೇಬಲ್ ಅವರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಬೀಟ್ ಪೊಲೀಸ್. ಅವರು ತಮ್ಮ ದೂರಿನಲ್ಲಿ ಫ್ರೀ ಕಾಶ್ಮೀರ ಎಂಬ ಫಲಕ ಹಿಡಿಯುವ ಮೂಲಕ ಈ ಹೋರಾಟಗಾರರು ದೇಶದ್ರೋಹದ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ದೂರನ್ನು ಆಧಾರವಾಗಿಟ್ಟುಕೊಂಡು ಪೊಲೀಸರ ರಾಜದ್ರೋಹದ ಆರೋಪವನ್ನು ಮರಿದೇವಯ್ಯ ಮತ್ತಿತರರ ವಿರುದ್ಧ ದಾಖಲಿಸಿಕೊಂಡಿದ್ದಾರೆ. ಆದರೆ ಯಾರೋ ಮಾಡಿದ ತಪ್ಪಿಗೆ ಹೋರಾಟಗಾರರ ಮೇಲೆ ಇಷ್ಟು ಕಠಿಣವಾದ ಮೊಕದ್ದಮೆ ದಾಖಲಿಸಬೇಕಿತ್ತೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ.
“ಇಂತಹ ಮೊಕದ್ದಮೆಗಳಿಂದ ಹೊರಬರುವುದು ಸುಲಭದ ಸಂಗತಿಯಲ್ಲ. ಪೊಲೀಸರು ಮರಿದೇವಯ್ಯನನ್ನು ಬಂಧಿಸದಿರಬಹುದು. ಆದರೆ ಮೊಕದ್ದಮೆ ಇನ್ನೂ 2-3 ವರ್ಷಗಳ ಕಾಲ ಮುಂದುವರಿಯುತ್ತದೆ. ಆತನ ಭವಿಷ್ಯ ಏನು? ಆತನ ಜತೆ ಇನ್ನೊಂದಿಷ್ಟು ಹುಡುಗರ ಮೇಲೂ ಪೊಲೀಸರು ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ. ಅವರೆಲ್ಲರ ಭವಿಷ್ಯ ಮುಸುಕಾದಂತೆಯೆ,” ಎನ್ನುತ್ತಾರೆ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕರೊಬ್ಬರು.
ಈ ಎಲ್ಲದರ ನಡುವೆ, ಫ್ರೀ ಕಾಶ್ಮೀರ ಎಂಬ ಫಲಕ ಹಿಡಿದ ಯುವತಿಯ ಮೇಲೂ ವಿದ್ಯಾರ್ಥಿಗಳ ಸಿಟ್ಟು ತಿರುಗಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲ ವಿದ್ಯಾರ್ಥಿಗಳ ಪ್ರಕಾರ, ಈ ಜೆಎನ್‍ಯು ಪರ ಹೋರಾಟಕ್ಕೆ ಕಾಶ್ಮೀರ ವಿವಾದವನ್ನು ಎಳೆಯುವ ಮೂಲಕ, ಬಲಪಂಥೀಯರು ಪ್ರಬಲವಾಗುವಂತೆ ಮಾಡಲಾಗಿದೆ. “ಜೆಎನ್‍ಯು, ಸಿಎಎ ವಿರುದ್ಧ ದೊಡ್ಡ ಮಟ್ಟದಲ್ಲಿ ಮೈಸೂರು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ಕಾಶ್ಮೀರ ವಿವಾದಕ್ಕೂ ಇವಕ್ಕೂ ಏನೆನು ಸಂಬಂಧವಿಲ್ಲ. ಈಗ ಸಿಎಎ ವಿರೋಧಿಗಳು, ಜೆಎನ್‍ಯು ಪರವಿರುವವರು ದೇಶದ್ರೋಹಿಗಳು ಎಂದು ಅಪಪ್ರಚಾರ ಮಾಡಲು ಎಬಿವಿಪಿಗೆ ಅವಕಾಶ ಸಿಕ್ಕಿದೆ. ಇದೆಲ್ಲಾ ಬೇಕಿರಲಿಲ್ಲ. ನಮ್ಮ ದಾರಿ ನಮಗೆ ಸ್ಪಷ್ಟವಾಗಿರಬೇಕಿದೆ,” ಎನ್ನುತ್ತಾರೆ ಓರ್ವ ವಿದ್ಯಾರ್ಥಿ.
“ಇದು ಕೇರಳ-ತಮಿಳುನಾಡಲ್ಲ. ಇಲ್ಲಿ ಬಲಪಂಥೀಯ ವಿದ್ಯಾರ್ಥಿಗಳ ಜತೆಗೆ ಗುದ್ದಾಡುವುದು ಸುಲಭದ ಸಂಗತಿಯಲ್ಲ. ಇದೀಗ ಶೂದ್ರ ಸಮುದಾಯದ ವಿದ್ಯಾರ್ಥಿಗಳನ್ನು ನಮ್ಮ ವಿರೋಧಿಗಳನ್ನಾಗಿಸಲು ಈ ನಾಮಫಲಕ ವಿವಾದವೊಂದೇ ಸಾಕು,” ಎನ್ನುತ್ತಾರೆ ಅವರು.