ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾನೊಬ್ಬ ದೇಶದ ಪ್ರಧಾನಿ, ಉನ್ನತ ಸ್ಥಾನದಲ್ಲಿದ್ದೇನೆ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಮರೆಯತೊಡಗಿದ್ದಾರೆ. ಅವರಿಗೆ ತಮ್ಮ ಭಾರತೀಯ ಪಕ್ಷದ ಸಭೆಯೂ ಒಂದೇ, ರಾಮಕೃಷ್ಣ ಆಶ್ರಮದ ಸಭೆಯೂ ಒಂದೇ. ಬಿಜೆಪಿ ಸಂಸ್ಥಾಪಕರ ಜನ್ಮ ದಿನವೂ ಒಂದೇ, ವಿಶ್ವ ಕಂಡ ದಾರ್ಶನಿಕ ಸ್ವಾಮಿ ವಿವೇಕಾನಂದರ ಜನ್ಮ ದಿನವೂ ಒಂದೇ ಎಂಬಂತೆ ಕಾಣುತ್ತಿದೆ. ಎಲ್ಲಿ ಹೋದರೂ ಸರ್ಕಾರದ ಸಾಧನೆಗಳು ಅಥವಾ ದೇಶದ ಪ್ರಗತಿಯ ವಿಚಾರಗಳನ್ನು ಬಿಟ್ಟು ರಾಜಕೀಯ ಭಾಷಣಗಳ ಮೂಲಕ ಪ್ರತಿಪಕ್ಷಗಳನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಈ ಮೂಲಕ ರಾಜಕೀಯೇತರ ಸಭೆ ಸಮಾರಂಭಗಳ ವೇದಿಕೆಗಳನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವೇದಿಕೆಗಳನ್ನಾಗಿಸಿಕೊಂಡಿದ್ದಾರೆ. ಈ ಮೂಲಕ ಸಮಾಜದ ವಿವಿಧ ವರ್ಗಗಳಿಂದ ಟೀಕೆಗಳಿಗೂ ಗುರಿಯಾಗತೊಡಗಿದ್ದಾರೆ. ಆದರೆ, ಆ ಟೀಕೆಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಆ ಸಮಾರಂಭದ ರಾಜಕೀಯೇತರ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಳ್ಳುವ ಮೂಲಕ ಪ್ರಧಾನಿ ಹುದ್ದೆಯ ಘನತೆಗೆ ಕಪ್ಪು ಚುಕ್ಕೆ ಇಟ್ಟರು.
ಇಲ್ಲಿ ದೇಶದ ಉನ್ನತ ಸ್ಥಾನದಲ್ಲಿರುವ ಮೋದಿ ದೇಶದ ಯುವಜನತೆಯ ಭವಿಷ್ಯದ ಉನ್ನತಿ ಬಗ್ಗೆ ಮಾತನಾಡಬಹುದಿತ್ತು, ಅವರು ಉತ್ತಮ ಮಾರ್ಗದಲ್ಲಿ ನಡೆದರೆ ಭವಿಷ್ಯ ಉಜ್ವಲವಾಗುತ್ತದೆ ಎಂಬ ಸಂದೇಶ ನೀಡಬಹುದಿತ್ತು ಅಥವಾ ಯುವ ಜನರ ಶ್ರೇಯೋಭಿವೃದ್ಧಿಗೆ ತಮ್ಮ ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ? ಯಾವೆಲ್ಲಾ ಯೋಜನೆಗಳನ್ನು ಜಾರಿಗೆ ತರಲಿದೆ? ಎಂಬ ನೀಲನಕ್ಷೆಯನ್ನು ಅನಾವರಣಗೊಳಿಸಬಹುದಿತ್ತು.
ಆದರೆ, ಆ ವಿಚಾರಗಳನ್ನೆಲ್ಲಾ ಬಿಟ್ಟು ಮತ್ತದೇ ವಿವಾದಿತ ಪೌರತ್ವ ತಿದ್ದುಪಡಿ ಕಾನೂನು ವಿಚಾರವನ್ನು ಪ್ರಸ್ತಾಪ ಮಾಡಿ ನಗೆಪಾಟಲಿಗೆ ಈಡಾಗಿದ್ದಾರೆ. ಹೇಳಿಕೇಳಿ ಪಶ್ಚಿಮ ಬಂಗಾಳದಲ್ಲಿ ಬಹುತೇಕ ಮಂದಿ ಈ ಪೌರತ್ವ ತಿದ್ದುಪಡಿ ಕಾನೂನಿಗೆ ವಿರುದ್ಧವಾಗಿ ಸೆಟೆದೆದ್ದು ನಿಂತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಆಶ್ರಮವೊಂದರ ರಾಜಕೀಯೇತರ ಸಮಾರಂಭದಲ್ಲಿ ಈ ವಿವಾದಿತ ಕಾಯ್ದೆಯ ಬಗ್ಗೆ ಪ್ರಸ್ತಾಪ ಮಾಡಿ ಉರಿಯುವ ಗಾಯಕ್ಕೆ ಉಪ್ಪು ಸವರಿದಂತೆ ಮಾತನಾಡಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ದೇಶದ ಭವಿಷ್ಯವಾಗಿರುವ ಯುವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾನೂನನ್ನು ವಿರೋಧಿಸುವವರು ರಾಜಕೀಯ ಆಟವಾಡುತ್ತಿದ್ದಾರೆ ಮತ್ತು ಯುವ ಪೀಳಿಗೆಯ ತಲೆಯಲ್ಲಿ ಈ ಕಾನೂನಿನ ಬಗ್ಗೆ ಇಲ್ಲಸಲ್ಲದ ತಪ್ಪುಕಲ್ಪನೆಯನ್ನು ತುಂಬುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಕಾಯ್ದೆಯಲ್ಲೇನಿದೆ? ಈ ಕಾಯ್ದೆಯ ಅಗತ್ಯವೇನಿದೆ? ಎಂಬುದರ ಬಗ್ಗೆ ಯುವ ಸಮುದಾಯದ ಬಹುತೇಕ ಮಂದಿ ತಿಳಿದುಕೊಂಡಿದ್ದಾರೆ. ಆದರೆ, ಇನ್ನೂ ಕೆಲವರಿಗೆ ತಪ್ಪುಕಲ್ಪನೆ ಮತ್ತು ವದಂತಿಗಳು ತಲೆ ಹೊಕ್ಕಿವೆ. ಈ ಹಿನ್ನೆಲೆಯಲ್ಲಿ ತಪ್ಪುಕಲ್ಪನೆಯನ್ನು ತೊಡೆದುಹಾಕುವ ರೀತಿಯಲ್ಲಿ ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮದಾಗಿದೆ ಎಂದೂ ಮೋದಿ ಹೇಳಿದ್ದರು.
ಸನ್ಯಾಸಿಗಳ ಅತೃಪ್ತಿ
ಪ್ರಧಾನಿ ಮೋದಿ ಅವರು ಇಡೀ ದೇಶವೇ ಕಿವಿ ಅಗಲಿಸಿ ಕೇಳುವ ರೀತಿಯಲ್ಲಿ ಒಂದು ಮಾರ್ಗದರ್ಶಿ ಭಾಷಣವನ್ನು ಮಾಡುತ್ತಾರೆ ಎಂದು ಬೇಲೂರು ಮಠದ ಸನ್ಯಾಸಿಗಳೆಲ್ಲರೂ ಬೆರಗುಗಣ್ಣಿನಿಂದ ಕಾದು ಕುಳಿತ್ತಿದ್ದರು. ಆದರೆ, ಮೋದಿ ಭಾಷಣ ಮಾಡಿದ ನಂತರ ಎಲ್ಲಾ ನಿರೀಕ್ಷೆಗಳು ತಲೆ ಕೆಳಗಾದವು. ತಮ್ಮ ಇಡೀ ಭಾಷಣದ ಬಹುಪಾಲನ್ನು ರಾಜಕೀಯ ವಿಚಾರ ಪ್ರಸ್ತಾಪ ಮಾಡಲೆಂದೇ ಬಳಸಿಕೊಂಡದ್ದು ವಿಪರ್ಯಾಸವೇ ಸರಿ.
ರಾಮಕೃಷ್ಣ ಮಿಷನ್ ನಂತಹ ಒಂದು ರಾಜಕೀಯೇತರ ಸಂಸ್ಥೆಯ ಸಮಾರಂಭದಲ್ಲಿ ಮೋದಿ ಅವರು ರಾಜಕೀಯ ಸ್ವರೂಪದ ಭಾಷಣ ಮಾಡಿರುವುದು ನಮಗೆಲ್ಲಾ ನೋವುಂಟು ಮಾಡಿದೆ. ಅದರಲ್ಲಿಯೂ ವಿವಾದಿತ ವಿಚಾರವನ್ನು ಪ್ರಸ್ತಾಪಿಸಿ ರಾಜಕೀಯ ಸಂದೇಶವನ್ನು ಭಾಷಣದ ಮೂಲಕ ಕೊಟ್ಟದ್ದು ಮಾತ್ರ ಅತ್ಯಂತ ದುರದೃಷ್ಟಕರ ಮತ್ತು ದುಃಖದ ವಿಚಾರವಾಗಿದೆ ಎಂದು ಮಿಷನ್ ನ ಸದಸ್ಯರಲ್ಲಿ ಒಬ್ಬರಾಗಿರುವ ಗೌತಮ್ ರಾಯ್ ಅವರು ಆಂಗ್ಲ ಪತ್ರಿಕೆ ದಿ ಹಿಂದೂಗೆ ಹೇಳಿಕೆ ನೀಡಿದ್ದಾರೆ.
ರಾಮಕೃಷ್ಣ ಮಿಷನ್ ಒಂದು ಪಾವಿತ್ರ್ಯವಾದ ಸಂಸ್ಥೆ. ಆದರೆ, ಮೋದಿ ಅವರಿಗೆ ಇಲ್ಲ. ಮೋದಿ ಅವರನ್ನು ರಾಜಕೀಯ ಹೇಳಿಕೆಗಳನ್ನು ನೀಡಲೆಂದು ಇಲ್ಲಿಗೆ ಆಹ್ವಾನಿಸಿರಲಿಲ್ಲ. ನನ್ನ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ರಾಮಕೃಷ್ಣ ಮಿಷನ್ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಏಕೆಂದರೆ, ಈ ಮಿಷನ್ ಗೆ ನೇಮಕವಾಗುತ್ತಿರುವ ಆಧ್ಯಾತ್ಮಿಕ ನಾಯಕರಲ್ಲಿ ಬಹುತೇಕ ಮಂದಿ ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ದೊಂದಿಗೆ ಒಡನಾಟ ಇದ್ದವರೇ ಆಗಿದ್ದಾರೆ ಎಂದು ಗೌತಮ್ ರಾಯ್ ಟೀಕಿಸಿರುವುದು ಇಲ್ಲಿ ಗಮನಾರ್ಹವಾಗಿದೆ.
ಕೆಲವು ಹಿರಿಯ ಸನ್ಯಾಸಿಗಳು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸಭೆಗೆ ಹಾಜರಾಗಿರಲಿಲ್ಲ. ಪೂರ್ವನಿಗದಿತ ಸಭೆಗಳಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಅವರು ಸಭೆಗೆ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಮತ್ತೊಂದು ಮೂಲದ ಪ್ರಕಾರ, ಮೋದಿ ಬರುತ್ತಿರುವುದರಿಂದ ಅಸಮಾಧಾನಗೊಂಡೇ ಈ ಸನ್ಯಾಸಿಗಳು ಸಭೆಗೆ ಬಂದಿರಲಿಲ್ಲ.
ಇನ್ನೂ ಕೆಲವರು, ಬೇಲೂರು ಮಠಕ್ಕೆ ಪತ್ರ ಬರೆದು ದಯಮಾಡಿ ಪ್ರಧಾನಿ ಭೇಟಿಯನ್ನು ರದ್ದು ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ವಿದ್ಯಾರ್ಥಿಯೊಬ್ಬರು ಮೋದಿ ಅವರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ನಾನೊಬ್ಬ ರಾಮಕೃಷ್ಣ ಮಿಷನ್ ನ ವಿದ್ಯಾರ್ಥಿಯಾಗಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಬೇಲೂರು ಮಠಕ್ಕೆ ಮನವಿ ಮಾಡುತ್ತಿದ್ದೇನೆ ಎಂದು ಪತ್ರ ಬರೆದಿದ್ದರು.
ಅವರು ತಮ್ಮ ಈ ಆಕ್ರೋಶಕ್ಕೆ ಸಮಜಾಯಿಷಿ ಕೊಟ್ಟಿರುವುದು ಹೀಗೆ:- ಮೋದಿ ಎಂದರೆ ಹಿಂಸಾಚಾರ. ರಾಮಕೃಷ್ಣ, ಶಾರದಾ ಮತ್ತು ಸ್ವಾಮಿ ವಿವೇಕಾನಂದರ ಜಾಗದಲ್ಲಿ ಇಂತಹ ಹಿಂಸಾವಾದಿ ಮೋದಿಯನ್ನು ನೋಡಲು ಇಷ್ಟವಿಲ್ಲ. ದೇಶದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವ ಮೋದಿಯನ್ನು ಸಮಾರಂಭಕ್ಕೆ ಆಹ್ವಾನಿಸಬಾರದು.
ಎಚ್ಚರಿಕೆ ಹೆಜ್ಜೆ ಇಟ್ಟ ರಾಮಕೃಷ್ಣ ಮಿಷನ್
ಪ್ರಧಾನಿಯವರ ರಾಜಕೀಯ ಭಾಷಣದ ಬಗ್ಗೆ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ರಾಮಕೃಷ್ಣ ಮಿಷನ್ ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸುವಿರಾನನಂದ ಅವರು ಸುದ್ದಿಗೋಷ್ಠಿ ನಡೆಸಿ, ನಮ್ಮದು ರಾಜಕೀಯೇತರ ಸಂಸ್ಥೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಎಎ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಮಠ ಮತ್ತು ಮಿಷನ್ ಎರಡೂ ಸಮಾನ ಅಂತರ ಕಾಯ್ದುಕೊಳ್ಳುತ್ತವೆ. ಈ ವಿಚಾರಕ್ಕೂ ನಮಗೂ ಸಂಬಂಧವಿಲ್ಲ. ಮೋದಿ ಅವರು ಸಮಾರಂಭದ ಅತಿಥಿಯಾಗಿದ್ದರು. ಅವರು ಮಠದಲ್ಲಿ ಮಾಡಿದ ಭಾಷಣ ಅವರ ಸ್ವಂತದ್ದಾಗಿತ್ತು. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಠ ಅಥವಾ ಮಿಷನ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ದೇವೋಭವ ಎನ್ನುತ್ತೇವೆ. ಹೀಗಾಗಿ ಸಭೆಗೆ ಬರುವ ಎಲ್ಲಾ ಅತಿಥಿಗಳನ್ನು ಸತ್ಕರಿಸುವುದು ಆಯೋಜಕರ ಕರ್ತವ್ಯವಾಗಿರುತ್ತದೆ. ನೋಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜಕಾರಣಿಗಳಲ್ಲ. ಅವರಿಬ್ಬರೂ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು. ಅವರಿಬ್ಬರು ಭಾರತ ಸಂವಿಧಾನದ ಪ್ರತಿನಿಧಿಗಳಾಗಿದ್ದು, ಒಂದು ಶಾಸನಬದ್ಧ ಹುದ್ದೆಗಳಲ್ಲಿರುವವರು. ಮಮತಾ ಬ್ಯಾನರ್ಜಿಯವರು ಪಶ್ಚಿಮಬಂಗಾಳದ ನಾಯಕಿಯಾಗಿದ್ದರೆ, ಮೋದಿ ಇಡೀ ಭಾರತದ ನಾಯಕರಾಗಿದ್ದಾರೆ ಎಂದು ಹೇಳುವ ಮೂಲಕ ಸ್ವಾಮಿ ಸುವಿರಾನನಂದ ಅವರು, ಪ್ರಧಾನಿ ಮೋದಿ ತಮ್ಮ ಸಾಂವಿಧಾನಿಕ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡಬೇಕಿತ್ತು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಮರೆಗುಳಿ ನರೇಂದ್ರ ಮೋದಿ
ಇನ್ನು ರಾಜಕೀಯ ಪಕ್ಷಗಳು ಮೋದಿ ಅವರ ಬೇಲೂರು ಮಠದ ಭಾಷಣವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಮೋದಿ ಅವರು ಆಧ್ಯಾತ್ಮಿಕ ಕ್ಷೇತ್ರ ಯಾವುದು? ರಾಜಕೀಯ ರ್ಯಾಲಿ ಯಾವುದು? ಎಂಬುದನ್ನೇ ಮರೆತ್ತಿದ್ದಾರೆ. ದೇಶವನ್ನು ವಿಭಜನೆ ಮಾಡುವ ಹೊಸ ಕಾನೂನು ತರುವ ವಿಚಾರದಲ್ಲಿ ಹತಾಶೆಗೆ ಒಳಗಾಗಿ ತಾವು ಯಾವ ಸಭೆಯಲ್ಲಿದ್ದೀನಿ ಎಂಬುದನ್ನೇ ಮರೆತು ಈ ರೀತಿಯ ರಾಜಕೀಯ ಭಾಷಣ ಮಾಡುತ್ತಿದ್ದಾರೆ ಎಂದು ತಿವಿದಿವೆ ವಿರೋಧ ಪಕ್ಷಗಳು.
ಮೋದಿಯವರು ತಮ್ಮ ವಿಭಜಕ ರಾಜಕೀಯವನ್ನು ಬಿಟ್ಟು ಬೇಲೂರು ಮಠದ ಪಾವಿತ್ರ್ಯತೆಯನ್ನು ಅರಿತು ಭಾಷಣ ಮಾಡಬೇಕಿತ್ತು ಎಂದು ಟಿಎಂಸಿ, ಸಿಪಿಐ(ಎಂ), ಕಾಂಗ್ರೆಸ್ ವಾಗ್ದಾಳಿ ನಡೆಸಿವೆ.
ಕೃಪೆ:ದಿ ವೈರ್