ಮಂಗಳೂರಿನಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಸಾವನಪ್ಪಿಸಿ, ಆರು ಮಂದಿ ಗುಂಡೇಟಿನೊಂದಿಗೆ ಆಸ್ಪತ್ರೆ ಸೇರಿ ಹತ್ತು ದಿನಗಳಾಯಿತು. ಭಾರತೀಯ ಜನತಾ ಪಾರ್ಟಿ ಆಡಳಿತದ ರಾಜ್ಯ ಸರಕಾರದ ಸತ್ತವರಿಗೆ ಪರಿಹಾರ ಧನ ಘೋಷಣೆ ಮಾಡಿ ಅನಂತರ ಪರಿಹಾರ ನೀಡಲು ನಿರಾಕರಿಸಿದೆ. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲಾ 5 ಲಕ್ಷ ರೂಪಾಯಿ ಚೆಕ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಲಾ ಹತ್ತು ಲಕ್ಷ ರೂಪಾಯಿ ಚೆಕ್, ಮುಹಮ್ಮದ್ ನಲಪಾಡ್ ಅವರು 50 ಲಕ್ಷ ರೂಪಾಯಿ ನಗದು ಹಾಗೂ ಹಲವಾರು ಮಂದಿ ದಾನಿಗಳು ಪೊಲೀಸ್ ಗುಂಡೇಟಿಗೆ ಸಾವನ್ನಪ್ಪಿದ ಕುಟುಂಬಕ್ಕೆ ಸಹಾಯಹಸ್ತ ನೀಡಿದ್ದಾರೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಲ್ಲೆ ಸಹಜಸ್ಥಿತಿಯಲ್ಲಿದೆ. ಮೇಲ್ನೋಟಕ್ಕೆ ಎಲ್ಲವೂ ಸಹಜವಾಗಿ ಸಾಗುತ್ತಿದೆ. ಮಂಗಳೂರು ಬಂದ್ ಆದಾಗ ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮಂಗಳೂರಿನಿಂದ ಇವೆರೆಡು ನಗರಗಳಿಗೆ ಪ್ರತಿ ಎರಡು ನಿಮಿಷಕ್ಕೊಂದು ಬಸ್ ಸರ್ವೀಸ್ ಇದೆ. ಮಂಗಳೂರು ಗಲಭೆಯಿಂದ ಇವೆರಡು ಜಿಲ್ಲೆಗಳ ಆರ್ಥಿಕ, ವಾಣಿಜ್ಯ, ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.
ನಿಯಮನುಸಾರ ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟ್ರೀಯಲ್ ತನಿಖೆಗೆ ಚಾಲನೆ ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಆಗಿರುವ ಜಗದೀಶ್ ಮ್ಯಾಜಿಸ್ಟ್ರೀಯಲ್ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ರಾಜ್ಯ ಸರಕಾರ ಘೋಷಿಸಿದಂತೆ ಸಿಐಡಿ ಎಸ್ಪಿ ರಾಹುಲ್ ನೇತೃತ್ವದಲ್ಲಿ ಸಿಐಡಿ ತನಿಖೆ ಆರಂಭವಾಗಿದೆ.
ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಸೇರಿದಂತೆ ಪ್ರತಿಯೊಬ್ಬ ರಾಜಕೀಯ ಮುಖಂಡರು, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಮಂಗಳೂರು ಗೋಲಿಬಾರ್ ಪ್ರಕರಣದ ವಿಚಾರಣೆ ನಡೆಸಲು ಒತ್ತಾಯಿಸಿದ್ದರು.
ನ್ಯಾಯಾಂಗ ತನಿಖೆಗೆ ಒತ್ತಾಯಿಸಲು ಕಾರಣಗಳು ಹಲವಿದ್ದವು. ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಾವಣೆ ವಿರುದ್ಧ ಪ್ರತಿಭಟನೆ ನಡೆದಿರುವುದು ಮಂಗಳೂರಲ್ಲಿ ಇದೇ ಮೊದಲಲ್ಲ. ಈ ತಿಂಗಳಲ್ಲಿ ಕೇಂದ್ರ ಸರಕಾರ ಕಾಯಿದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದ ಅನಂತರ ಹಲವು ಪ್ರತಿಭಟನೆಗಳು ನಡೆದಿದ್ದವು. ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳು, ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ನಡೆಯುತ್ತಿರುವುದು ಮಂಗಳೂರಲ್ಲಿ ಮಾತ್ರವಲ್ಲ. ಇಡೀ ದೇಶದಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಕಲಬುರ್ಗಿಯಲ್ಲಿ ಮಂಗಳೂರಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು. ಬೆಂಗಳೂರಲ್ಲೂ ಪ್ರತಿಭಟನೆ ನಡೆದಿತ್ತು. ಡಿಸೆಂಬರ್ 18ರಂದು ಯಾವುದೇ ಸಂಘಟನೆಯ ಬ್ಯಾನರೇ ಇಲ್ಲದೆ ವಿದ್ಯಾರ್ಥಿಗಳ ಬಹುದೊಡ್ಡ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಆಜಾದಿ ಘೋಷಣೆಗಳನ್ನು ಕೂಡ ಕೂಗಾಲಾಯಿತು. ಇದಾದ ಅನಂತರ ರಾಜ್ಯದಾದ್ಯಂತ ಸೆಕ್ಷನ್ 144 ಪ್ರಕಾರ ನಿಷೇದಾಜ್ಞೆ ಹೇರಲಾಯಿತು. ನಿಷೇದಾಜ್ಞೆ ಜಾರಿ ಇದ್ದಾಗಲೇ ರಾಜ್ಯ ಮತ್ತು ದೇಶದಾದ್ಯಂತ ನಡೆದಿದೆ.
ಮಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಿಲ್ಲ. ಪ್ರತಿಭಟನೆಗೆ ಅನುಮತಿ ಪಡೆದುಕೊಂಡಿದ್ದ ವಿದ್ಯಾರ್ಥಿಯ ಸಂಘಟನೆ ಕೂಡ ಪ್ರತಿಭಟನೆಯನ್ನು ಹಿಂತೆಗಿದುಕೊಂಡಿತ್ತು. ಡಿಸೆಂಬರ್ 19ರ ವೇಳೆಗೆ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆ ಜನಾಂದೋಲನದ ಸ್ವರೂಪ ಪಡೆಯತೊಡಗಿತ್ತು. ಸಾಮಾನ್ಯವಾಗಿ ಪ್ರತಿಭಟನೆ ನಡೆಯುವ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಜಮಾವಣೆಗೊಂಡಿದ್ದರು. ಇದೇ ವೃತ್ತದ ಸುತ್ತಮುತ್ತಲು ಸಿಟಿ ಮತ್ತು ಖಾಸಗಿ ಬಸ್ ಸ್ಟೇಂಡ್, ವಾಣಿಜ್ಯ ಚಟುವಟಿಕೆಗಳು ಕೇಂದ್ರೀಕೃತವಾಗಿವೆ. ಯಾವಾಗಲು ಜನದಟ್ಟಣೆ ಇರುವ ಜಾಗವಾಗಿದೆ.
ಪ್ರತಿಭಟನೆಗೆ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರನ್ನು ಚದುರಿಸುವಾಗ ಉಂಟಾದ ಗೊಂದಲದಲ್ಲಿ ಅಮಾಯಕ ನಾಗರಿಕರು ಕೂಡ ಪೊಲೀಸ್ ಲಾಠಿ ಏಟು ತಿನ್ನ ಬೇಕಾಯಿತು. ಪೊಲೀಸರು ಎಲ್ಲ ರೀತಿಯಿಂದ ಸನ್ನದ್ಧರಾಗಿಲಿಲ್ಲ. ಅವರಲ್ಲಿ ನಾಯಕತ್ವ ಕೊರತೆಯೂ ಇತ್ತು, ಯೋಜನೆಯ ಕೊರತೆಯೂ ಇತ್ತು. ಇದರ ಉಪಯೋಗ ಪಡೆದುಕೊಂಡ ಪ್ರತಿಭಟನಾಕಾರರು ಇನ್ನಷ್ಟು ಜಮಾವಣೆಗೊಂಡು ಪರಸ್ಪರ ಕಲ್ಲು ತೂರಾಟದ ಕಾಳಗ ಪೊಲೀಸ್ ಗೋಲಿಬಾರಿನಲ್ಲಿ ಪರ್ಯಾವಸಾಣಗೊಂಡಿತ್ತು.
ಗೋಲಿಬಾರು ಘಟನೆ ನಡೆದ ಅನಂತರ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪನವರು ಮಂಗಳೂರಿಗೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಪೊಲೀಸ್ ಗೋಲಿಬಾರಿನಲ್ಲಿ ಸತ್ತ ಕುಟುಂಬದ ಸದಸ್ಯರನ್ನು ಅತಿಥಿ ಗೃಹಕ್ಕೆ ಆಹ್ವಾನಿಸಿ ಸಾಂತ್ವನದ ಮಾತು ಹೇಳಿದ್ದರು. ಅನಂತರ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಸಾವನ್ನಪ್ಪಿದವರು ಬಡವರು, ಸ್ವಂತ ಗುಡಿಸಲು ಕೂಡ ಹೊಂದಿಲ್ಲ. ಮನೆ ಕೂಡ ಕೊಡಿಸಲಾಗವುದು ಎಂದಿದ್ದರು. ಮುಖ್ಯಮಂತ್ರಿಗಳ ಈ ಮಾತಿಗೆ ಗೃಹ ಸಚಿವ ಬಸವರಾಜ ಬೊಮ್ಮಯಿ, ಸಂಸದೆ ಶೋಭಾ ಕರಂದ್ಲಾಜೆ ಸಾಕ್ಷಿ.
ಇದಕ್ಕೂ ಮುನ್ನ ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಅವರು ಮಂಗಳೂರು ನಗರ ಪ್ರವೇಶಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಪಿ.ಎಸ್.ಹರ್ಷ ನೊಟೀಸ್ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿಯವರಿಗೆ ಪ್ರಚಾರ ದೊರೆಯುವಂತಾಯಿತು. ಇದೇ ಪ್ರತಿಪಕ್ಷ ಮುಖಂಡರು ಮುಖ್ಯಮಂತ್ರಿ ಆಗಿದ್ದಾಗ ಇದೇ ಐಪಿಎಸ್ ಅಧಿಕಾರಿ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದರು ಎಂಬುದು ಕಾಕತಾಳೀಯ.
ವಾರ್ತಾ ಇಲಾಖೆಯಲ್ಲಿದ್ದಾಗ ಮಾಡಿರುವ ಕಾರ್ಯ ಶೈಲಿಗೆ ಸ್ವತಃ ವಾರ್ತಾ ಇಲಾಖೆಯ ಖಾಯಂ ಅಧಿಕಾರಿಗಳು ಇಂದಿಗೂ ಆಶ್ಚರ್ಯ ಪಡುತ್ತಾರೆ.
ಅಂತೂ ಇಂತೂ ಮಂಗಳೂರಿನ ಪೊಲೀಸ್ ಅಧಿಕಾರಿಗಳು ಗೋಲಿಬಾರ್ ಅನಂತರ ಟೀಕೆ ಟಿಪ್ಪಣಿಗೆ ಗುರಿಯಾದರು. ಫೈರ್ ಮಾಡಿ ಸಾಯಿಸುವುದಕ್ಕೆ ಸಂಬಂಧಿಸಿ ಡಿಸಿಪಿ ಮಟ್ಟದ ಅಧಿಕಾರಿ ಸೂಚನೆಯನ್ನು ಧಿಕ್ಕರಿಸಿದ ಪೊಲೀಸ್ ಪೇದೆಗಳ ಮಾತು ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರ ಆಣಿಮುತ್ತುಗಳ ವಿಡಿಯೊ ವೈರಲ್ ಆಗಿರುವುದು ಪೊಲೀಸರಿಗೆ ದೊಡ್ಡ ಮಟ್ಟದ ಹಿನ್ನಡೆ ಆಗಿತ್ತು.
ಪೊಲೀಸ್ ಠಾಣೆ ಮುತ್ತಿಗೆ ಹಾಕಲು ಬಂದ್ರೂ, ಬಂದೂಕು ಮತ್ತು ಮದ್ದು ಗುಂಡುಗಳ ಅಂಗಡಿಗೆ ದಾಳಿ ನಡೆಸಿದರು ಎಂಬಿತ್ಯಾದಿ ಹೇಳಿಕೆಗಳು ಬಂದಿವೆ. ಗಲಭೆಯನ್ನು ನಿಯಂತ್ರಿಸುವಾಗ ಕಲ್ಲೇಟಿಗೆ ಪೊಲೀಸರಿಗೆ ಗಾಯಗೊಂಡಿದೆ ಎಂಬುದು ಪ್ರಚಾರ ಆಗುತ್ತಿದೆ. ಅದೇ ರೀತಿ ಪೊಲೀಸರ ಮೇಲೆ ಕಲ್ಲು ಬಿಸಾಡಿರುವುದು ಸರಿಯೇ ಎಂಬುದು ವ್ಯಾಪಕ ಚರ್ಚೆ ಆಗುತ್ತಿರುವ ವಿಷಯ. ಗಲಭೆಯ ವೇಳೆ ಪತ್ರಕರ್ತರು ಪೊಲೀಸರ ಲಾಠಿ ತಿಂದಿದ್ದಾರೆ, ಪ್ರತಿಭಟನಾಕಾರರ ಕಲ್ಲೇಟು ತಿಂದಿದ್ದಾರೆ. ಈ ಬಗ್ಗೆ ಯಾರು ಕೂಡ ಇದುವರೆಗೆ ಚಕಾರ ಎತ್ತಿಲ್ಲ.
ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆ ಮೂಲಗಳ ಪ್ರಕಾರ ಗಾಯಗೊಂಡಿದ್ದಾರೆ ಎನ್ನಲಾದ 66 ಪೊಲೀಸರಲ್ಲಿ 64 ಮಂದಿ ಆಗಲೇ ಪಸ್ಟ್ ಏಯ್ಡ್ ಪಡೆದುಕೊಂಡು ಹೋಗಿದ್ದಾರೆ. ಇನ್ನುಳಿದ ಇಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಪೊಲೀಸರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣೆಗಳಲ್ಲಿ ಎಂಟಕ್ಕಿಂತಲೂ ಹೆಚ್ಚು ಎಫ್ ಐ ಆರ್ ದಾಖಲಿಸಿದ್ದಾರೆ. ಪೊಲೀಸರು ಹೇಳಿಕೆ ನೀಡಿದಂತೆ ಗುಂಡೇಟು ತಗಲಿದವರಲ್ಲಿ, ಪ್ರಕರಣ ದಾಖಲಿಸಿಕೊಂಡವರಲ್ಲಿ ಯಾರೂ ಕೂಡ ಕೇರಳದವವರು ಇಲ್ಲ. ಒಂದೆರಡು ಎಫ್ ಐ ಆರ್ ಕಾಪಿಗಳು ಕಾಪಿ ಪೇಸ್ಟ್ ತರ ಇದೆ. ಕೇವಲ ಪಿರ್ಯಾದುದಾರರು ಮಾತ್ರ ಬೇರೆ ಬೇರೆ.
ಗೋಲಿಬಾರ್ ಅನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ಹೆಚ್ಚಾಗಿವೆ. ರಾಜಿನಾಮೆ ನೀಡಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿಟ್ಲದಲ್ಲಿ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ್ದಾರೆ. ಜಿಲ್ಲೆಯ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಜನವರಿ ಮೊದಲ ವಾರದಿಂದ ಮತ್ತೆ ಪ್ರತಿಭಟನೆಗಳು ನಡೆಯಲಿವೆ.