ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿದ್ದ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ವರ್ಗಾವಣೆ ವಿಚಾರವಾಗಿ ಅಧಿಕೃತವಾಗಿ ಆದೇಶ ಬಂದಿದೆ. ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಬೆಂಗಳೂರು ನಗರದ ನೂತನ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಈವರೆಗೆ, ಗುಪ್ತಚರ ಇಲಾಖೆಯ ಹೆಚ್ಚುವರಿ ಡಿಜಿಪಿಯಾಗಿದ್ದ ಕಮಲ್ ಪಂತ್ ಅವರನ್ನು ಬೆಂಗಳೂರು ನಗರದ ನೂತನ ಆಯುಕ್ತರಾಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಭಾಸ್ಕರ್ ರಾವ್ ಅವರನ್ನು ಆಂತರಿಕ ಭಧ್ರತಾ ವಿಭಾಗದ ಹೆಚ್ಚುವರಿ ಡಿಜಿಪಿಯಾಗಿ ನೇಮಕಗೊಳಿಸಲಾಗಿದೆ.
ಈವರೆಗೆ ಅಪರಾಧ ತನಿಖಾ ದಳ ಮತ್ತು ಎಕಾನಾಮಿಕ್ ಆಫೆನ್ಸ್ ವಿಭಾಗದಲ್ಲಿ ಹೆಚ್ಚುವರಿ ಡಿಜಿಪಿಯಾಗಿದ್ದ ಬಿ ದಯಾನಂದ್ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಹೆಚ್ಚುವರಿ ಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಭಾಸ್ಕರ್ ರಾವ್ ಅವರ ನಡುವೆ ಸಭೆಯೊಂದರಲ್ಲಿ ಮಾತಿನ ಜಟಾಪಟಿ ನಡೆದ ನಂತರ ಭಾಸ್ಕರ್ ರಾವ್ ಅವರನ್ನು ವರ್ಗಾವಣೆಗೊಳಿಸುವ ಕುರಿತು ಮಾತುಗಳು ಕೇಳಿ ಬಂದಿದ್ದವು. ಲಾಕ್ಡೌನ್ ಅನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕಮಿಷನರ್ ಎಡವಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಈಗ ವರ್ಗಾವಣೆ ಆದೇಶ ಅಧಿಕೃತವಾಗಿ ಹೊರಬಿದ್ದಿದ್ದು, ಕಮಲ್ ಪಂತ್ ಅವರು ಬೆಂಗಳೂರು ನಗರ ಪೊಲೀಸ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಶಿವಮೊಗ್ಗ ಸೇರಿದಂತೆ ಇತರ ಜಿಲ್ಲೆಯಲ್ಲಿ ಎಸ್ಪಿ ಆಗಿ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಮತ್ತು ವಿವಿಧ ವಿಭಾಗಗಳಲ್ಲಿ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ ಅನುಭವ ಕಮಲ್ ಪಂತ್ ಅವರಿಗಿದೆ.